ಕನ್ನಡ ಸುದ್ದಿ  /  ಕರ್ನಾಟಕ  /  Attack On Mangli Car: ತೆಲುಗು ಗಾಯಕಿ ಮಂಗ್ಲಿ ಕಾರಿನ ಮೇಲೆ ದಾಳಿ; ನಿಜವಾ ಸುಳ್ಳಾ? ಮಂಗ್ಲಿ ಏನು ಹೇಳಿದ್ರು? ಎಸ್‌ಪಿ ಸ್ಪಷ್ಟೀಕರಣ ಏನು?

Attack On Mangli Car: ತೆಲುಗು ಗಾಯಕಿ ಮಂಗ್ಲಿ ಕಾರಿನ ಮೇಲೆ ದಾಳಿ; ನಿಜವಾ ಸುಳ್ಳಾ? ಮಂಗ್ಲಿ ಏನು ಹೇಳಿದ್ರು? ಎಸ್‌ಪಿ ಸ್ಪಷ್ಟೀಕರಣ ಏನು?

Attack On Mangli Car: ಈ ಬಗ್ಗೆ ಗಾಯಕಿ ಮಂಗ್ಲಿ ಟ್ವೀಟ್‌ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡ ಮಾಧ್ಯಮಗಳ ಜತೆಗೆ ಮಾತನಾಡಿದ್ದಾರೆ. ಅವರು ಹೇಳಿರುವುದೇನು? ಘಟನೆ ನಡೆದಿರುವುದೇನು?

ಗಾಯಕಿ ಮಂಗ್ಲಿ
ಗಾಯಕಿ ಮಂಗ್ಲಿ

ಬೆಂಗಳೂರು: ಬಳ್ಳಾರಿ ಉತ್ಸವದ ಸಂಗೀತ ಕಾರ್ಯಕ್ರಮಕ್ಕೆ ಬಂದ ತೆಲುಗು ಗಾಯಕಿ ಮಂಗ್ಲಿ ಕಾರಿನ ಮೇಲೆ ದಾಳಿ ನಡೆದಿದೆ. ಕಲ್ಲುತೂರಾಟ ಆಗಿದ್ದರಿಂದ ಕಾರಿನ ಗಾಜು ಒಡೆದಿದೆ. ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ ಎಂಬಿತ್ಯಾದಿ ಸುದ್ದಿ ಹರಡಿತ್ತು. ಆದರೆ, ಈ ಬಗ್ಗೆ ಗಾಯಕಿ ಮಂಗ್ಲಿ ಟ್ವೀಟ್‌ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡ ಮಾಧ್ಯಮಗಳ ಜತೆಗೆ ಮಾತನಾಡಿದ್ದಾರೆ. ಅವರು ಹೇಳಿರುವುದೇನು? ಘಟನೆ ನಡೆದಿರುವುದೇನು?

ಬಳ್ಳಾರಿ ಉತ್ಸವ 2023ಕ್ಕೆ ಶನಿವಾರ ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಿದ್ದ ತೆಲುಗು ಗಾಯಕಿ ಮಂಗ್ಲಿ ಅವರು ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದರಿಂದ ಒಂದಷ್ಟು ಜನ ಅಸಮಾಧಾನಗೊಂಡಿದ್ದರು. ಮೇಕಪ್‌ ರೂಮ್‌ಗೆ ತೆರಳಿ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಪೊಲೀಸರು ಅವರನ್ನು ಚದುರಿಸಲು ಲಾಠಿ ಚಾರ್ಜ್‌ ಮಾಡಿದ್ದರು. ಇದಾದ ಬಳಿಕ ಮಂಗ್ಲಿ ಅವರು ಪ್ರಯಾಣಿಸಿದ ಕಾರಿನ ಮೇಲೆ ಕಲ್ಲು ತೂರಾಟಾವಾಗಿದೆ ಎಂದು ಮಾಧ್ಯಮಗಳು ವರದಿಮಾಡಿದ್ದವು.

ಈ ಕುರಿತು ಸ್ಪಷ್ಟೀಕರಣ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರ, ಕಾರಿನ ಮೇಲೆ ಯಾವುದೇ ವಸ್ತು ಬಿದ್ದು ಮುಂಭಾಗದ ಗಾಜು ಒಡೆದಿದೆಯೇ ಹೊರತು ಕಲ್ಲು ತೂರಾಟ ಆಗಿಲ್ಲ. ಪುನೀತ್‌ ಪುತ್ಥಳಿ ಅನಾವರಣಗೊಳಿಸುವ ಕಾರ್ಯಕ್ರಮ ವಿಳಂಬವಾಗಿತ್ತು. ಜನಸಂದಣಿ ಹೆಚ್ಚಿತ್ತು. ಹೆಚ್ಚು ಜನದಟ್ಟಣೆ ಇದ್ದ ಕಾರಣ ಸ್ವಲ್ಪ ಸಮಸ್ಯೆ ಆಗಿದೆ. ಅಷ್ಟು ಬಿಟ್ಟರೆ ಪೊಲೀಸರು ಲಾಠಿ ಚಾರ್ಜ್‌ ಕೂಡ ಮಾಡಿಲ್ಲ. ಮಂಗ್ಲಿ ಅವರ ಕಾರಿನ ಮೇಲೆ ದಾಳಿಯೂ ಆಗಿಲ್ಲ ಎಂದು ವಿವರಿಸಿದ್ದಾರೆ.

ಇದೇ ವೇಳೆ ಗಾಯಕಿ ಮಂಗ್ಲಿ ಟ್ವೀಟ್‌ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ. ಅಲ್ಲದೆ, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಕುರಿತಾಗಿ ಕೆಲವು ಸೋಷಿಯಲ್‌ ಮೀಡಿಯಾ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ದಯವಿಟ್ಟು ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸ್ಪಷ್ಟೀಕರಣದ ಇಮೇಜ್‌ ಅನ್ನು ಟ್ವೀಟ್‌ ಮಾಡಿದ್ದಾರೆ.

ಗಾಯಕಿ ಮಂಗ್ಲಿ ನಿನ್ನೆ ರಾತ್ರಿ 8.59ಕ್ಕೆ ಈ ಸ್ಪಷ್ಟೀಕರಣ ಟ್ವೀಟ್‌ ಮಾಡಿದ್ದಾರೆ. ನಿನ್ನೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಕೆಲವು ಸೋಷಿಯಲ್‌ ಮೀಡಿಯಾ ಗ್ರೂಪ್‌ಗಳಲ್ಲಿ ಸುದ್ದಿ ಹರಡಿದೆ. ಈ ಸುಳ್ಳು ಸುದ್ದಿಯನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ನೀವು ಕಾರ್ಯಕ್ರಮದ ವಿಡಿಯೋ ಮತ್ತು ಫೋಟೋಗಳನ್ನು ಗಮನಿಸಿರುತ್ತೀರಿ. ಕಾರ್ಯಕ್ರಮ ಭಾರಿ ಯಶಸ್ಸನ್ನು ಕಂಡಿದೆ. ಇದು ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದು. ನನ್ನ ಮೇಲೆ ಕನ್ನಡಿಗರು ತೋರಿರುವ ಪ್ರೀತಿ ಮತ್ತು ಬೆಂಬಲ ಅಗಾಧವಾದುದು. ಅಧಿಕಾರಿಗಳು ಮತ್ತು ಸ್ಥಳೀಯಾಡಳಿತ ನನ್ನ ಬಗ್ಗೆ ಬಹಳ ಕಾಳಜಿ ವಹಿಸಿದರು. ಇದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನನ್ನ ಇಮೇಜ್‌ ಹಾಳು ಮಾಡುವ ಸಲುವಾಗಿಯೇ ಇದನ್ನು ಮಾಡಲಾಗಿದೆ. ಈ ರೀತಿ ಸುಳ್ಳು ಸುದ್ದಿ ಹರಡುವುದನ್ನು ನಾನು ಖಂಡಿಸುತ್ತೇನೆ ಎಂಬ ಒಕ್ಕಣೆ ಆ ಇಮೇಜ್‌ನಲ್ಲಿದೆ.

IPL_Entry_Point