ಕನ್ನಡ ಸುದ್ದಿ  /  Karnataka  /  Cm Basavaraj Bommai Assures Of Mysore Tourism Circuit

Basavaraj Bommai: ‘ಮೈಸೂರು ಹಂಪಿ ಟೂರಿಸಂ ಸರ್ಕಿಟ್, ದೀಪಾಲಂಕಾರ ಹತ್ತು ದಿನ ವಿಸ್ತರಣೆ’

ಉತ್ತರ ಕರ್ನಾಟಕದಲ್ಲಿ ಹಂಪಿ, ದಕ್ಷಿಣದಲ್ಲಿ ಮೈಸೂರನ್ನು ಟೂರಿಸ್ಟ್‌ ಸರ್ಕಿಟ್ ಆಗಿ ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ. ಇದಕ್ಕೆ ಸೂಕ್ತ ರೂಪುರೇಷೆಗಳನ್ನು ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ (Twitter)

ಮೈಸೂರು : ಪ್ರವಾಸೋದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಿದ್ದು, ಮೈಸೂರು ಪ್ರವಾಸೋದ್ಯಮ ಸರ್ಕಿಟ್ ಶೀಘ್ರವೇ ಕಾರ್ಯರಂಭವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಹಂಪಿ, ದಕ್ಷಿಣದಲ್ಲಿ ಮೈಸೂರನ್ನು ಟೂರಿಸ್ಟ್‌ ಸರ್ಕಿಟ್ ಆಗಿ ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ. ಇದಕ್ಕೆ ಸೂಕ್ತ ರೂಪುರೇಷೆಗಳನ್ನು ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಮೈಸೂರು, ಹಳೇಬೀಡು, ಬೇಲೂರು, ಸೋಮನಾಥಪುರ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಇದು ಒಳಗೊಂಡಿದೆ. ವೆಬ್‌ಸೈಟ್‌ನಲ್ಲಿ ಬುಕ್ ಮಾಡುವ ಸೌಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ದಸರಾದ ಎಲ್ಲಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿವೆ. ನಂದಿ ಪೂಜೆ, ಜಂಬೂ ಸವಾರಿ, ದೇವಿಯನ್ನು ಅರಮನೆಗೆ ತೆಗೆದುಕೊಂಡು ಹೋಗಿರುವುದು ಎಲ್ಲವೂ ಈ ವರ್ಷ ಅರ್ಥಪೂರ್ಣವಾಗಿ, ಉತ್ಸಾಹದಿಂದ ನಡೆದಿದೆ. ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ರಾಜ್ಯ, ದೇಶ ಹಾಗೂ ವಿದೇಶದಿಂದ ಲಕ್ಷಾಂತರ ಜನರು ಪಾಲ್ಗೊಂಡಿದ್ದಾರೆ. ಮಹಾಜನತೆ ಕಾರ್ಯಕ್ರಮವನ್ನು ಶಾಂತಿಯಿಂದ ನಡೆಸಿಕೊಟ್ಟಿದ್ದಕ್ಕಾಗಿ ಅಭಿನಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಮೊದಲಿನ ದಸರಾ ಸಂಭ್ರಮದ ಕಳೆ ಮೂಡಿದೆ. ಮತ್ತೊಮ್ಮೆ ಪಾರಂಪರಿಕವಾದ ವೈಭವ ನೋಡಲು ಸಾಧ್ಯವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರು, ಸಂಸರು, ಆಡಳಿತ ವರ್ಗದವರು ಸಹಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಮೈಸೂರಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ನಾಡಹಬ್ಬ ಹಾಗೂ ದೇವಿ ಆರಾಧನೆಯ ಈ ಪರಂಪರೆಯ ಮುಂದಿನ ದಿನಗಳಲ್ಲಿಯೂ ವಿಜ್ರೃಂಭಣೆಯಿಂದ ನಡೆಯಲಿ ಎಂದರು.

ದೀಪಾಲಂಕಾರ ಹತ್ತುದಿನಗಳ ಕಾಲ ವಿಸ್ತರಣೆ

ಬಹುಜನರ ಬೇಡಿಕೆಯ ಮೇರೆಗೆ ದಸರಾ ದೀಪಾಲಂಕಾರವನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ನಮ್ಮಲ್ಲಿರುವ ತಾಮಸ ಗುಣಗಳ ವಧೆ ಮಾಡಬೇಕು

ಈ ದಿನ ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಮೇಲೆ ಸುದೀರ್ಘ ಯುದ್ಧ ಮಾಡಿ ವಿಜಯ ಸಾಧಿಸಿದ ದಿನ. ಇದರ ಅರ್ಥ ರಾಕ್ಷಸೀ ಶಕ್ತಿಗಳ ಮೇಲೆ ಶಿಷ್ಟರ ವಿಜಯ ಎಂದಿದೆ. ಇದನ್ನು ಅರ್ಥಮಾಡಿಕೊಂಡು ನಮ್ಮ ಬದುಕಿನಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ನಮ್ಮಲ್ಲಿರುವ ತಾಮಸ ಗುಣಗಳನ್ನು ಸಂಪೂರ್ಣವಾಗಿ ವಧೆ ಮಾಡಿ ಶ್ರೇಷ್ಠ ವಾದ, ಪರೋಪಕಾರಿ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಮನುಕುಲ ಉದ್ದಾರವಾಗುತ್ತದೆ. ಇಂಥ ಶಕ್ತಿ ದೇವಿ ನೀಡಲಿ. ರೈತರ ಮಳೆ ಬೆಳೆ ಉತ್ತಮವಾಗಿ ಆಗಲಿ. ಸಕಲ ಕನ್ನಡ ನಾಡಿಗೆ, ಜನತೆಗೆ ಮಂಗಳ ಉಂಟಾಗಲಿ, ಸುಭಿಕ್ಷವಾಗಲಿ. ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಇಂದು ಸಂಜೆ ವೇಳೆ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿಯಾಗಿ ನೆರವೇರಿತು. ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36ರಿಂದ 2.50ರವರೆಗೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿ ಧ್ವಜ ಪೂಜೆ ನೆರವೇರಿಸಿದರು. ಬಳಿಕ ಸಂಜೆ 5.38ರ ವೇಳೆಗೆ ಅಂಬಾರಿಗೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.

ಚಾಮುಂಡೇಶ್ವರಿ ತಾಯಿಯನ್ನು ಅಂಬಾರಿಯಲ್ಲಿ ಹೊತ್ತ ಅಭಿಮನ್ಯು ಆನೆ ರಾಜಗಾಭೀರ್ಯದಿಂದ ವೇದಿಕೆ ಮುಂಭಾಗಕ್ಕೆ ಬಂದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸೇರಿದಂತೆ ವಿವಿಧ ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನೊಳಗೊಂಡ ಸ್ವರ್ಣ ಅಂಬಾರಿಯನ್ನು ಹೊತ್ತ ಆನೆ ಅಭಿಮನ್ಯು ರಾಜಗಾಂಭೀರ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿದನು.

IPL_Entry_Point