ಕನ್ನಡ ಸುದ್ದಿ  /  Karnataka  /  Davanagere News Tulabhavana Stepping Towards World Record Limca Book Of Records Chamarajapete Kannada News Rst

Davanagere News: ವಿಶ್ವದಾಖಲೆಯತ್ತ ಹೆಜ್ಜೆಹಾಕುತ್ತಿದೆ ಬೆಣ್ಣೆನಗರಿಯ ತುಲಾಭವನ; ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಕ್ಕಿತ್ತು ಸ್ಥಾನ

Tulabhavana: ದಾವಣಗೆರೆಯ ಕೆ.ಆರ್. ಮಾರುಕಟ್ಟೆಯ ಬಳಿಯಿರುವ ಚಾಮರಾಜಪೇಟೆಯಲ್ಲಿ ಸುಮಾರು 5,000ಕ್ಕೂ ಹೆಚ್ಚು ತೂಕ ಮತ್ತು ಆಳತೆಯ ಪರಿಕರಗಳ ಸಂಗ್ರಹವಿದೆ. ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ತುಲಾಭವನ ಈಗ ವಿಶ್ವದಾಖಲೆಯತ್ತ ಹೆಜ್ಜೆ ಹಾಕುತ್ತಿದೆ.

ತುಲಾಭವನದಲ್ಲಿರುವ ತೂಕ ಮತ್ತು ಆಳತೆಯ ಪರಿಕರಗಳು(ಎಡಚಿತ್ರ) ಬಸವರಾಜ್ ಯಳಮಲ್ಲಿ (ಬಲಚಿತ್ರ)
ತುಲಾಭವನದಲ್ಲಿರುವ ತೂಕ ಮತ್ತು ಆಳತೆಯ ಪರಿಕರಗಳು(ಎಡಚಿತ್ರ) ಬಸವರಾಜ್ ಯಳಮಲ್ಲಿ (ಬಲಚಿತ್ರ)

ದಾವಣಗೆರೆ: ಹಿಂದಿನ ಶತಮಾನಗಳಲ್ಲಿ ಬಳಸುತ್ತಿದ್ದ ತೂಕ ಮತ್ತು ಆಳತೆಯ ಪರಿಕರಗಳನ್ನು ಹೊಂದಿರುವ ದೇಶದ ಏಕೈಕ ತುಲಾಭವನ (Tulabhavana) ಇರುವುದು ಬೆಣ್ಣೆನಗರಿ ದಾವಣಗೆರೆ(Davanagere) ಯಲ್ಲಿ. ಈ ತುಲಾಭವನದಲ್ಲಿ ಸುಮಾರು 5,000ಕ್ಕೂ ಹೆಚ್ಚು ಪರಿಕರಗಳ ಸಂಗ್ರಹವಿದೆ. ಈಗಾಗಲೇ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ (Limca Book of Records)ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ತುಲಾಭವನ ಈಗ ವಿಶ್ವದಾಖಲೆಯತ್ತ ಹೆಜ್ಜೆ ಹಾಕುತ್ತಿರುವುದು ಬೆಣ್ಣೆನಗರಿಯ ಗರಿಮೆಯನ್ನು ಹೆಚ್ಚಿಸಿದೆ.

ದಾವಣಗೆರೆಯ ಕೆ.ಆರ್. ಮಾರುಕಟ್ಟೆಯ ಬಳಿಯಿರುವ ಚಾಮರಾಜಪೇಟೆಯಲ್ಲಿ ಈ ತುಲಾಭವನವಿದೆ. ನಾಲ್ಕು ದಶಕಗಳಿಂದ ತೂಕ-ಅಳತೆಯ ಸಾಮಗ್ರಿಗಳ ವ್ಯಾಪಾರ ನಡೆಸಿಕೊಂಡು ಬಂದಿರುವ ಬಸವರಾಜ್ ಯಳಮಲ್ಲಿ ಈ ತುಲಾಭವನದ ರೂವಾರಿ.

ವಿದೇಶಿ ತೂಕದ ವಸ್ತುಗಳು ಇಲ್ಲುಂಟು

15ನೇ ಶತಮಾನದ ಮೊಘಲರ ಆಳ್ವಿಕೆಯಲ್ಲಿ ಉಪಯೋಗಿಸುತ್ತಿದ್ದ ತೂಕ-ಅಳತೆಯ ಪರಿಕರಗಳಿಂದ ಹಿಡಿದು, ವಿಜಯಪುರ, ಕಲಬುರ್ಗಿ, ಬೀದರ್ ಸೇರಿದಂತೆ ಈ ಭಾಗದಲ್ಲಿ ಆಳ್ವಿಕೆ ನಡೆಸಿದ ಸುಲ್ತಾನರು, ಮೈಸೂರು ಮಹಾರಾಜರು, ವಿಜಯನಗರ ಸಾಮ್ರಾಜ್ಯದ ರಾಜ ಮಹಾರಾಜರು, ನವಾಬರು, ಬ್ರಿಟಿಷರ ಕಾಲದ ಹಾಗೂ ಅಮೆರಿಕ, ಜರ್ಮನಿ, ಇಂಗ್ಲೆಂಡ್‌ ಹೀಗೆ ಹಲವು ದೇಶಗಳಲ್ಲಿ ಉಪಯೋಗಿಸುತ್ತಿದ್ದ ತೂಕ ಅಳತೆಯ ಸಾಮಗ್ರಿಗಳನ್ನು ಹೆಕ್ಕಿ ತಂದಿರುವ ಬಸವರಾಜ್ ಯಳಮಲ್ಲಿ ದಾವಣಗೆರೆಯಲ್ಲಿ ಕಳೆದ 2015ರ ಆಗಸ್ಟ್‌ನಲ್ಲಿ ತುಲಾಭವನ ಹೆಸರಿನಡಿ ತೂಕ ಅಳತೆಯ ಸಂಗ್ರಹಾಲಯ ಉದ್ಘಾಟಿಸಿ, ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಿದ್ದಾರೆ.

90 ವರ್ಷ ಹಳೆಯ ಗಡಿಯಾರವು ಇದೆ

ಚಿನ್ನ, ಬೆಳ್ಳಿ ತೂಗುವ ಸೂಕ್ಷ್ಮ ತೂಕಗಳು, ಅಂಚೆ ಪತ್ರಗಳನ್ನು ತೂಗುವ ತಕ್ಕಡಿಗಳಿಂದ ಹಿಡಿದು ಟ್ರ್ಯಾಕ್ಟರ್‌ಗಳನ್ನು ತೂಗಲು ಬಳಸುತ್ತಿರುವ ತೂಕಗಳು ಇಲ್ಲುಂಟು. ಹೀಗೆ ಮೊಘಲರ ಕಾಲದಿಂದ ಇಲ್ಲಿಯವರೆಗೆ ಬಳಸುತ್ತಿರುವ ತೂಕ, ತಾಮ್ರ, ಹಿತ್ತಾಳೆಯ ಸೇರು, ಪಾವು, ಚಟಾಕುಗಳ ಸಾಮಗ್ರಿಗಳನ್ನು ಇಲ್ಲಿ ಕಾಣಬಹುದು. ಇದಷ್ಟೇ ಅಲ್ಲದೇ ಸುಮಾರು 80-90 ವರ್ಷಗಳ ಹಿಂದಿನ ಗಡಿಯಾರಗಳು, ನಾಣ್ಯಗಳ ತೂಕಕ್ಕೆ ಬಳಸುತ್ತಿದ್ದ ಕಲ್ಲು, ವಿದ್ಯುತ್ ಮೀಟರ್‌ಗಳು, ಸಂಗ್ರಹವೂ ಇಲ್ಲಿ ಕಾಣಸಿಗುತ್ತವೆ.

ಬಸವರಾಜ್ ಯಳಮಲ್ಲಿ ಅವರ ಕುರಿತು

ಬಸವರಾಜ್ ಯಳಮಲ್ಲಿ ಮೂಲತಃ ಸ್ಟ್ಯಾಂಪ್‌ ಮತ್ತು ನಾಣ್ಯಗಳ ಹವ್ಯಾಸಿ ಸಂಗ್ರಹಕಾರರಾಗಿದ್ದರು. ರಾಷ್ಟ್ರಮಟ್ಟದ ಅಂಚೆ ಚೀಟಿ ಪ್ರದರ್ಶನದಲ್ಲಿ ಕಂಚಿನ ಪದಕ ಪಡೆದಿರುವ ಕೀರ್ತಿ ಯಳಮಲ್ಲಿ ಅವರದ್ದು. ಯಳಮಲ್ಲಿ ಅವರ ಸಾಧನೆ ಗುರುತಿಸಿ ಅಂಚೆ ಇಲಾಖೆ 2017ರ ಜನವರಿ 21ರಂದು ತುಲಾಭವನದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುವ ಮುಖೇನ ಯಳಮಲ್ಲಿ ಅವರ ಸಾಧನೆಗೆ ಗೌರವ ನೀಡಿದೆ. ಅಲ್ಲದೇ, ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿರುವ ಕೀರ್ತಿ ಇಲ್ಲಿನ ತುಲಾಭವನಕ್ಕಿದೆ.

ತುಲಾಭವನದಲ್ಲಿರುವ ತೂಕ ಮತ್ತು ಆಳತೆಯ ಪರಿಕರಗಳ ನೋಟ
ತುಲಾಭವನದಲ್ಲಿರುವ ತೂಕ ಮತ್ತು ಆಳತೆಯ ಪರಿಕರಗಳ ನೋಟ

ಅಂತರರಾಷ್ಟ್ರೀಯ ಮಟ್ಟದಲ್ಲೂ ತುಲಾಭವನದ ಪ್ರಚಾರ

ಲಕ್ಕಿ ವಿಲ್ಸಮ್ ಎಂಬುವರು 2019ರಲ್ಲಿ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಇಲ್ಲಿನ ತುಲಾಭವನದ ಬಗ್ಗೆ ಪ್ರಕಟಿಸಿದ್ದು, ಈಗ ಬರೆಯುತ್ತಿರುವ ಮೊಘಲ್ ಇಂಡಿಯಾ ವೇಟ್ಸ್ ಎಂಬ ಪುಸ್ತಕದಲ್ಲಿ ತೂಕ ಅಳತೆಯ ಸಾಮಗ್ರಿಗಳ ಫೋಟೊ ಬಳಸಿಕೊಂಡಿದ್ದಾರೆ ಎನ್ನುತ್ತಾರೆ ಬಸವರಾಜ್ ಯಳಮಲ್ಲಿ.

ಆದರೆ, ಶತಮಾನಗಳಷ್ಟು ಹಿಂದಿನ ತೂಕ ಅಳತೆಯ ಪರಿಕರಗಳನ್ನು ಸಂಗ್ರಹ ಮಾಡುವುದು ಕಡಿಮೆ ಸಾಧನೆಯಲ್ಲ. ಅದರಲ್ಲೂ 5 ಸಾವಿರ ತೂಕ, ಅಳತೆ ಪರಿಕರ ಸಂಗ್ರಹಿಸಿದ್ದರೂ ಕೂಡ ಇಲ್ಲಿನ ಜಿಲ್ಲಾಡಳಿತ ಭವನವಾಗಲೀ ರಾಜ್ಯ ಸರ್ಕಾರವಾಗಲೀ ಗಮನಿಸಿ ಪ್ರತ್ಯೇಕ ಸ್ಥಳ ನೀಡುವ ಮೂಲಕ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿಕೊಡುವ ಜವಾಬ್ದಾರಿ ತೆಗೆದುಕೊಳ್ಳದೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಮೂಲಕ ಬಸವರಾಜ್ ಯಳಮಲ್ಲಿ ಅವರ ಉತ್ಸಾಹ, ಸಾಧನೆ ಕಡೆಗೆ ನಿರ್ಲಕ್ಷ್ಯ ವಹಿಸಿರುವುದು ವಿಷಾದನೀಯ. ಇನ್ನಾದರೂ ಸರ್ಕಾರ ಇತ್ತಕಡೆ ಗಮನ ನೀಡಿ ಯಳಮಲ್ಲಿ ಅವರ ಉತ್ಸಾಹಕ್ಕೆ ಕಾಯಕಲ್ಪ ನೀಡುವ ಮೂಲಕ ಬೆಂಬಲಿಸುವ ಕೆಲಸ ಮಾಡಬೇಕಿದೆ.

IPL_Entry_Point

ವಿಭಾಗ