ಕೆಕೆಆರ್ ಆಲ್ರೌಂಡ್ ಆಟಕ್ಕೆ ನೆಲಕಚ್ಚಿದ ಡೆಲ್ಲಿ ಕ್ಯಾಪಿಟಲ್ಸ್; ತವರಿನಲ್ಲಿ ಶ್ರೇಯಸ್ ಪಡೆಗೆ ಸುಲಭ ಗೆಲುವು
DC vs KKR Result : 17ನೇ ಆವೃತ್ತಿಯ ಐಪಿಎಲ್ನ 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ಗಳ ಸುಲಭ ಗೆಲುವು ಸಾಧಿಸಿತು.

ಕಳೆದ ಐದು ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ ಪ್ಲೇಆಫ್ ಹಾದಿಯನ್ನು ಸುಗಮ ಮಾಡಿಕೊಳ್ಳುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ಈಗ ಆಘಾತಕಾರಿ ಸೋಲು ಕಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ 7 ವಿಕೆಟ್ಗಳ ಪರಾಜಯ ಅನುಭವಿಸಿದೆ. 154 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಶ್ರೇಯಸ್ ಅಯ್ಯರ್ (Shreyas Iyer) ಪಡೆ, 16.3 ಓವರ್ಗಳಲ್ಲಿ ಗೆಲುವಿನ ಗೆರೆ ದಾಟಿತು. ಇದರೊಂದಿಗೆ ಪ್ಲೇಆಫ್ ಸನಿಹಕ್ಕೂ ಬಂದು ನಿಂತಿತು. ಆದರೆ ಡೆಲ್ಲಿ ಪ್ಲೇಆಫ್ ರೇಸ್ನಲ್ಲಿ ಸಂಕಷ್ಟಕ್ಕೆ ಸಿಲುಕಿತು.
ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ಐಪಿಎಲ್ನ 47ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಪಿನ್ನರ್ ಕುಲ್ದೀಪ್ ಯಾದವ್ ಅಜೇಯ 35 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿದೆ. ಕೆಕೆಆರ್ ಬೌಲರ್ಗಳ ದಾಳಿಗೆ ಬೆದರಿದ ಡಿಸಿ, 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತು.
ಉಳಿದಂತೆ ಪೃಥ್ವಿ ಶಾ (13), ಜೇಕ್ ಫ್ರೇಸರ್ ಮೆಕ್ಗುರ್ಕ್ (12), ಅಭಿಷೇಕ್ ಪೊರೆಲ್ (18), ಶಾಯ್ ಹೋಪ್ (6), ರಿಷಭ್ ಪಂತ್ (27), ಅಕ್ಷರ್ ಪಟೇಲ್ (15), ಟ್ರಿಸ್ಟಾನ್ ಸ್ಟಬ್ಸ್ (4), ಕುಮಾರ್ ಕುಶಾಗ್ರಾ (1), ರಸಿಕ್ ದಾರ್ (8) ತೀವ್ರ ನಿರಾಸೆ ಮೂಡಿಸಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ ಮೂರು ವಿಕೆಟ್ ಪಡೆದರೆ, ವೈಭವ್ ಆರೋರಾ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಸುನಿಲ್ ನರೇನ್ ಮತ್ತು ಮಿಚೆಲ್ ಸ್ಟಾರ್ಕ್ ಒಂದು ವಿಕೆಟ್ ಮಾತ್ರ ಪಡೆದರು.
ಸಾಧಾರಣ ಗುರಿ ಹಿಂಬಾಲಿಸಿದ ಕೋಲ್ಕತ್ತಾ ತಂಡ, ಪವರ್ಪ್ಲೇನಲ್ಲೇ 79 ರನ್ ಕಲೆ ಹಾಕಿತು. ಪವರ್ಪ್ಲೇ ಮುಗಿದ ಮೊದಲ ಓವರ್ನಲ್ಲೇ ಸುನಿಲ್ ನರೇನ್ ವಿಕೆಟ್ ಒಪ್ಪಿಸಿದರು. ಆದರೆ, ಫಿಲ್ ಸಾಲ್ಟ್, ಡೆಲ್ಲಿ ಬೌಲರ್ಗಳಿಗೆ ಬೆಂಡೆತ್ತಿದರು. 33 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಿತ 68 ರನ್ ಬಾರಿಸಿದರು. ಅಬ್ಬರದ ಬ್ಯಾಟಿಂಗ್ ಮೂಲಕ ಡೆಲ್ಲಿಯ ಗೆಲುವಿನ ಕನಸನ್ನು ಕಸಿದುಕೊಂಡರು. 10 ಓವರ್ಗಳಲ್ಲಿ 100 ರನ್ ಗಳಿಸಿದ ಕೊಲ್ಕತ್ತಾ, 16.3 ಓವರ್ಗಳಲ್ಲಿ ಗೆಲುವಿನ ಗೆರೆ ದಾಟಿತು. ಶ್ರೇಯಸ್ ಅಯ್ಯರ್ 33 ಮತ್ತು ವೆಂಕಟೇಶ್ ಅಯ್ಯರ್ 26 ರನ್ಗಳ ಕಾಣಿಕೆ ನೀಡಿ ಅಜೇಯರಾಗಿ ಉಳಿದರು.
ಅಂಕಪಟ್ಟಿಯಲ್ಲಿ ಉಭಯ ತಂಡಗಳು ಯಾವ ಸ್ಥಾನದಲ್ಲಿವೆ?
ಐಪಿಎಲ್ ದ್ವಿತಿಯಾರ್ಧದ ಬಳಿಕ ಹಲವು ತಂಡಗಳ ನಡುವೆ ಪ್ಲೇಆಫ್ ರೇಸ್ಗೆ ಪೈಪೋಟಿ ನಡೆಯುತ್ತಿದೆ. ಡೆಲ್ಲಿ ವಿರುದ್ಧ ಕೆಕೆಆರ್, ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ, 3ರಲ್ಲಿ ಸೋತಿದೆ. 12 ಅಂಕ ಪಡೆದು ಎರಡನೇ (+1.096) ಸ್ಥಾನದಲ್ಲಿದೆ. ಪ್ಲೇಆಫ್ ಸಮೀಪಕ್ಕೆ ಬಂದು ನಿಂತಿದೆ. ಮತ್ತೊಂದೆಡೆ ಸೋತ ಡೆಲ್ಲಿ 11 ಪಂದ್ಯಗಳಲ್ಲಿ 6 ಸೋಲು ಕಂಡಿದೆ. 5 ರಲ್ಲಿ ಗೆದ್ದಿದ್ದು, 10 ಅಂಕ ಪಡೆದು 6ನೇ (-0.442) ಸ್ಥಾನದಲ್ಲಿದೆ. ಉಳಿದ ಮೂರು ಪಂದ್ಯಗಳಲ್ಲೂ ಗೆದ್ದರೆ ಪ್ಲೇಆಫ್ಗೆ ಪ್ರವೇಶಿಸುವ ಸಾಧ್ಯತೆ ಇದೆ. ಆದರೆ ಇದು ಉಳಿದ ತಂಡಗಳ ಫಲಿತಾಂಶದ ಮೇಲೂ ನಿರ್ಧಾರವಾಗುತ್ತದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
