ಕನ್ನಡ ಸುದ್ದಿ  /  Karnataka  /  How To Grow Deng Jackfruit If Made As A Brand Farmers Will Get Income Here Are The Key Points Rmy

Deng Surya Jackfruit: ನೋಡೋಕೆ ಅಂದ, ತಿನ್ನೋಕೆ ಚೆಂದ ಡೆಂಗ್ ಸೂರ್ಯ ಹಲಸು; ಬ್ರಾಂಡ್ ಆಗಿ ಮಾಡಿದ್ರೆ ರೈತರಿಗೆ ಸಿಗುತ್ತೆ ಆದಾಯ

ಡೆಂಗ್ ಸೂರ್ಯ ಹಲಸಿನ ಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಕೆಲ ವರ್ಷಗಳಿಂದ ಈ ಹಲಸು ಇದ್ದರೂ ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾಗಿ ಬೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಹಲಸಿನ ಬಗ್ಗೆ ಉಡುಪಿ ಜಿಲ್ಲೆಯ ಪೆರಡೂರಿನಲ್ಲಿ ವನಶ್ರೀ ಪ್ಲಾಂಟ್ ಕೇರ್ ನ ಕಸಿ ತಜ್ಞರಾದ ಗುರುರಾಜ ಬಾಳ್ತಿಲ್ಲಾಯ ಅವರು ಮಾತನಾಡಿದ್ದಾರೆ.

ಡೆಂಗ್ ಸೂರ್ಯ ಹಲಸು
ಡೆಂಗ್ ಸೂರ್ಯ ಹಲಸು

ಬೆಂಗಳೂರು: ತೋಟಗಾರಿಕೆ ಬೆಳೆಯಾಗಿರುವ (Horticulture crop) ಹಲಸಿನ ಹಣ್ಣು (Jackfruit) ಯಾರಿಗೆ ತಾನೇ ಇಷ್ಟ ಆಗೋದಿಲ್ಲ. ಆರೋಗ್ಯ (Health) ಸಮಸ್ಯೆಗಳಿಗೆ ರಾಮಬಾಣದಂತಿರುವ ಹಲಸಿನ ಹಣ್ಣಿಗಳಲ್ಲಿ ತುಂಬಾ ವೆರೈಟಿಯಲ್ಲಿ ಸಿಗುತ್ತದೆ. ಆದರಲ್ಲೂ ಡೆಂಗ್ ಸೂರ್ಯ ಹಲಸಿನ (Deng Surya Jackfruit) ಬಗ್ಗೆ ಸಾಕಷ್ಟು ಮಂದಿಗೆ ಗೊತ್ತಿರುವುದಿಲ್ಲ.

ಭಾರತದಲ್ಲಿ (India) ಕರ್ನಾಟಕವನ್ನು (Karnataka) ಹೊರತುಪಡಿಸಿದರೆ ಬೇರೆಲ್ಲೂ ಡೆಂಗ್ ಸೂರ್ಯ ಹಲಸನ್ನು ಅಷ್ಟಾಗಿ ಬೆಳೆಯುವುದು ಕಂಡು ಬರುವುದಿಲ್ಲ. ಮಳೆಯ ಪ್ರಮಾಣ ಕಡಿಮೆ ಇರುವ ರಾಜ್ಯದ ಬಯಲು ಸೀಮೆಗೆ (Bayalu Seeme) ಇದು ಹೇಳಿ ಮಾಡಿಸಿದಂತಹ ಬೆಳೆಯಾಗಿದೆ.

ಬಣ್ಣದಲ್ಲಿ ಕೆಂಪು, ಮಾರುಕಟ್ಟೆಗೆ ಆಕರ್ಷಿತವಾಗಿರುವ ಹಲಸಿನ ಹಣ್ಣು ಬೇಕೆಂದರೆ ಡೆಂಗ್ ಸೂರ್ಯ ಹಲಸು ಬೆಸ್ಟ್ ಅಂತ ಉಡುಪಿ ಜಿಲ್ಲೆಯ ಪೆರಡೂರಿನಲ್ಲಿ ವನಶ್ರೀ ಪ್ಲಾಂಟ್ ಕೇರ್ (ನರ್ಸರಿ) ನಡೆಸುತ್ತಿರುವ ಕಸಿ ತಜ್ಞರಾದ ಗುರುರಾಜ ಬಾಳ್ತಿಲ್ಲಾಯ ಅವರು ಹೇಳಿದ್ದು, ಡೆಂಗ್ ಸೂರ್ಯ ಹಲಸನ್ನು ರಾಜ್ಯದಲ್ಲಿ ಹೇಗೆ ಅಭಿವೃದ್ಧಿ ಮಾಡಿದ್ರು ಎಂಬುದರ ಬಗ್ಗೆ ಹೆಚ್ ಟಿ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.

ಥಾಯ್ಲೆಂಡ್ ರೆಡ್ (Thailand Red Jackfruit) ಎಂಬ ಹೆಸರಿನ ಡೆಂಗ್ ಸೂರ್ಯ ಹಲಸಿನ ಗಿಡಗಳನ್ನು ಕಸಿ ಮಾಡುತ್ತಿದ್ದು, ಇದರ ಜೊತೆಗೆ ಅಳಿವಿನ ಹಂಚಿನಲ್ಲಿರುವ ಹಲಸನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ವರ್ಷಕ್ಕೆ 2 ಸಾವಿರದಷ್ಟು ಈ ತಳಿಯ ಸಸಿಗಳನ್ನು ಕಸಿ ಮಾಡುತ್ತಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡವುದಾಗಿ ಹೇಳಿದ್ದಾರೆ.

ಕೆಂಪು ಹಲಸಿನ ಹೆಸರು ಹೇಗೆ ಬಂತು?

ಡೆಂಗ್ ಹಲಸು ಅಥವಾ ಕೆಂಪು ಹಲಸನ್ನು ಮಲೇಷಿಯಾ ರೆಡ್ ಹಲಸು ಹಾಗೂ ಥೈಲ್ಯಾಂಡ್ ರೆಡ್ ಹಲಸು ಅಂತಲೂ ಕರೆಯುತ್ತಾರೆ. ಸೂರ್ಯ ಉದಯಿಸುವ ಸಮಯದಲ್ಲಿನ ಬಣ್ಣದ ರೀತಿಯಲ್ಲಿ ಈ ಹಲಸಿನ ಬಣ್ಣ ಇರುತ್ತದೆ. ಹೀಗಾಗಿಯೇ ಇದಕ್ಕೆ ಡೆಂಗ್ ಸೂರ್ಯ ಹಲಸು ಎಂದು ಕರೆಯುತ್ತಾರೆ. ಇಷ್ಟೇ ಹಲ್ಲದೆ ಇನ್ನೂ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಮಲೇಷ್ಯಾ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Malaysian Agricultural Research and Development nstitute (MARDI) ಈ ಡೆಂಗ್ ಸೂರ್ಯ ಹಲಸನ್ನು ಮೊದಲ ಬಾರಿಗೆ ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಥೈಲ್ಯಾಂಡ್ ನಲ್ಲೂ ದೊಡ್ಡ ಪ್ರಮಾಣದಲ್ಲಿ ಇದನ್ನು ಅಭಿವೃದ್ದಿ ಮಾಡಲಾಗುತ್ತಿದೆ.

ಮಲೇಷ್ಯಾದಿಂದ ಬಂದ ಸಾಫ್ಟ ವೇರ್ ಇಂಜಿನಿಯರ್ ಸುಧೀರ್ ಎಂಬುವರು ಡೆಂಗ್ ಸೂರ್ಯ ಹಲಸಿನ ಗಿಡದ ಕಡ್ಡಿಯೊಂದನ್ನು ಮೊದಲು ನನಗೆ ತಂದು ಕೊಟ್ಟರು. ನಮ್ಮ ನರ್ಸರಿಯಲ್ಲಿ ಇದನ್ನು ಮಲ್ಟಿಫೈ ಮಾಡಿದೆ. ಮೊದಲಿಗೆ ಒಂದೆರಡು ಸಸಿಗಳನ್ನು ಮಾಡಿದ ನಂತರ ಹೆಚ್ಚಿನ ಪ್ರಯಾಣದಲ್ಲಿ ಬೆಳೆಸಲಾಗುತ್ತಿದೆ.

ಕರಾವಳಿ ಪ್ರದೇಶಕ್ಕಿಂತ ಬಯಲು ಸೀಮೆಯಲ್ಲಿ ಡೆಂಗ್ ಸೂರ್ಯ ಹಲಸು ಹೆಚ್ಚು ರುಚಿಕರವಾಗಿರುತ್ತದೆ. ಇದಕ್ಕೆ ಕಡಿಮೆ ನೀರು ಬೇಕಾಗಿರುವುದರಿಂದ ಬಯಲು ಸೀಮೆ ಸೂಕ್ತವಾಗಿರುತ್ತದೆ. ಕೋಸ್ಟಲ್ ಪ್ರದೇಶದಲ್ಲಿ ಚೆನ್ನಾಗಿಯೇ ಬೆಳೆಯಬಹುದು. ಆದರೆ ಹೆಚ್ಚಿನ ಮಳೆ ಬಂದಾಗ ಹಣ್ಣಿನ ರುಚಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಹಳದಿ ಬಣ್ಣದ ಹಲಸಿಗೆ ಹೋಲಿಸಿಕೊಂಡರೆ ಕೆಂಪು ಹಲಸು ಹೆಚ್ಚಿನ ರುಚಿ ನೀಡುವುದರಲ್ಲಿ ಅನುಮಾನವೇ ಇಲ್ಲ ಅಂತಾರೆ ಹಲಸು ಕಸಿ ತಜ್ಞ ಗುರುರಾಜ ಅವರು.

ಡೆಂಗ್ ಸೂರ್ಯ ಹಲಸನ್ನು ಬೆಳೆಯುವ ಪ್ರದೇಶದ ಮೇಲೆ ಇದರ ರುಚಿ ನಿರ್ಣಯವಾಗುತ್ತದೆ. ಸಿಪ್ಪೆ ದಪ್ಪಾ ಇರಲಿದ್ದು, ತೊಳೆ(ಸೊಳೆ) ಕೂಡ ಸಿಹಿಯ ಜೊತೆಗೆ ಒಳ್ಳೆಯ ಗುಣವೂ ಇರುತ್ತದೆ. ಕೆಲವು ಕಡೆಗಳಲ್ಲಿ ಸಿಹಿ ಬರುವುದಿಲ್ಲ. ಮಣ್ಣ ಮತ್ತು ಹವಾಮಾನದ ಆಧಾರದ ಮೇಲೆ ರುಚಿ ನಿರ್ಧಾರವಾಗುತ್ತದೆ. ಮಳೆ ಹೆಚ್ಚಾದಾಗ ಹಣ್ಣಿನ ರುಚಿ ಸ್ವಲ್ಪ ಕಡಿಮೆಯಾಗುತ್ತದೆ ಎಂಬುದು ಸೇರಿದಂತೆ ಸಣ್ಣ ಸಣ್ಣ ಸಮಸ್ಯೆಗಳಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲಾಗುವುದು ಅಂತಿ ತಿಳಿಸಿದ್ದಾರೆ.

ಈ ಹಲಸಿನ ಹಣ್ಣು 15 ಕೆಜಿ ಬರಲಿದ್ದು, ಒಂದು ಹಣ್ಣಿನಲ್ಲಿ 35 ರಷ್ಟು ತಿನ್ನಲು ಸಿಗುತ್ತದೆ. ಗಿಡ ಮಾಡಿ ಒಬ್ಬರಿಗೆ ಕೊಟ್ಟಿದ್ದೆ. ಅದರಲ್ಲಿ 27 ಟಿಎಸ್ಎಸ್ ಸಿಹಿ ಬಂದಿದೆ. ಡಾರ್ಕ್ ಕೆಂಪು ಸಹ ಬಂದಿದೆ. ಅದು ಸಣ್ಣ ಹಣ್ಣಾಗಿತ್ತು. ತೆಕಟ್ಟೆ ರಮೇಶ್ ಎಂಬುವರು ಬೆಳೆದ ಮರದಲ್ಲಿ 25 ಟಿಎಸ್ಎಸ್ ಸಿಹಿ ಬಂದಿದೆ. ಕೆಲವು ಕಡೆ ಹಣ್ಣಿನ ರುಚಿ ಕಡಿಮೆ, ಕೆಲವೊಂದು ಕಡೆ ಜಾಸ್ತಿ ಬಂದಿರಬಹದು. ಮರಕ್ಕೆ ನೀರು ಕಡಿಮೆ ಸಿಕ್ಕಿದ್ದಷ್ಟು ಸಿಹಿ ಜಾಸ್ತಿ, ಹೆಚ್ಚು ನೀರು ಸಿಕ್ಕರೆ ಸಿಹಿ ಕಡಿಮೆಯಾಗಿರುವ ಉದಾಹರಣೆಗಳು ಇವೆ.

ತುಮಕೂರು ಮತ್ತು ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ-(ಐಐಹೆಚ್ ಆರ್)ಯವರೊಂದಿಗೆ ಸಿದ್ದು ಮತ್ತು ಶಂಕರ ಎಂಬ ಹೆಸರಿನ ಹಲಸಿನ ಸಸಿ ಮಾಡಿಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಸಿದ್ದು ಹಲಸು ತುಂಬಾ ಜನಪ್ರಿಯಾ. ಶಂಕರ ಹಲಸು ಪರ್ವಾಗಿಲ್ಲ. ಈ ಎರಡು ವೆರೈಟಿ ಬಿಡುಗಡೆ ಮಾಡಿದ್ದು, ಮಲ್ಟಿಪಲ್ ಮಾಡಲು ನನಗೆ ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾರೆ.

ಹೆಚ್ಚಿನ ತಳಿಗಳನ್ನು ಕಸಿ ಮಾಡಲು ನಮ್ಮ ಬಳಿ ಸ್ಥಳದ ಅಭಾವದ ಕಾರಣ ನಶಿಸಿ ಹೋಗುತ್ತಿರುವಂತಹ ಹಲಸನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಉದಾಹರಣಗೆ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯ ಅಪರೂದ ಹಲಸಿನ ಮರವನ್ನು ಕಡಿದಾಗ, ಮಳೆ ಗಾಳಿಗೆ ಬಿದ್ದಾಗ ಆ ಹಲಸು ಉತ್ತಮ ಎನಿಸಿದರೆ ಉಳಿಸುತ್ತೇನೆ. ಬೀಜದಲ್ಲಿ ಸಸಿ ಮಾಡಿದರೆ ಬಹುತೇಕ ಸಂದರ್ಭದಲ್ಲಿ ಅದರ ರುಚಿ ಮತ್ತು ಬಣ್ಣ ಬದಲಾಗುತ್ತದೆ. ಹೀಗಾಗಿಯೇ ಸಸಿಯ ಕಡ್ಡಿಗಳಿಂದ ಕಸಿ ಮಾಡುವ ಪ್ರಯತ್ನ ನಮ್ಮದು ಎಂದಿದ್ದಾರೆ.

ಮಳೆಯ ಕಾರಣ ಕೋಸ್ಟಲ್ ಪ್ರದೇಶದಲ್ಲಿ ಮರಕ್ಕೆ ರೋಗ ಬರುತ್ತದೆ. ಬಯಲು ಸೀಮೆಯಲ್ಲಿ ತುಂಬಾ ಚೆನ್ನಾಗಿ ಇಳುವರಿ ಬರುತ್ತದೆ. ಅತ್ಯಂತ ಸಿಹಿಯಾದ ಹಲಸು ಎಂದರೆ ಜೆ33. ಇದನ್ನು ಟೆಕಾಮಿಯಲ್ ಹಾಗೂ ನಂಕಮಡು (ನಂಕ ಎಂದರೆ ಜೇನು, ಮಡು ಅಂದ್ರೆ ಹಲಸು-ಜೇನು ಹಲಸು) ಅಂತಲೂ ಕರೆಯುತ್ತಾರೆ. ಜೆ33 ಸಸಿಗಳನ್ನೂ ನಾವು ಮಾಡುತ್ತೇವೆ.

ಮೂಡು ಬಿದರೆಯಲ್ಲಿ ರೈತರೊಬ್ಬರು 10 ಎಕರೆಯಲ್ಲಿ ಹಲಸಿನ ತೋಟ ಮಾಡಿದ್ದಾರೆ. ಇದರಲ್ಲಿ ಜೆ33 ಹೆಸರಿನ 50 ಮರಗಳು ಇದ್ದವು. ಆದರೆ ಹಲವು ಮರಗಳು ಹಾಳಾಗಿವೆ.

ಮಳೆ ಹೆಚ್ಚಾದ ಸಂದರ್ಭದಲ್ಲಿ ಔಷಧಿ ಸಿಂಪಡಣೆ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ರೋಗ ನಿರೋಧಕ ಶಕ್ತಿ ಕಡಿಮೆ. ಆದರೆ ಡೆಂಗ್ ಸೂರ್ಯಕ್ಕೆ ರೋಗ ಬರುವುದಿಲ್ಲ. ಇತರೆ ಹಲಸಿನ ಬೆಳೆಗೆ ಹೋಲಿಸಿಕೊಂಡರೆ ಕೋಸ್ಟಲ್ ನಲ್ಲಿ ಡೆಂಗ್ ಸೂರ್ಯ ಬೆಸ್ಟ್ ಅಂತ ಹೇಳಿದ್ದಾರೆ. ಸರ್ಕಾರಿ ಸೌಲಭ್ಯ ಪಡೆಯಬೇಕಾರೆ ಕನಿಷ್ಠ 2.5 ಎಕರೆಯಲ್ಲಿ ನರ್ಸರಿ ಮಾಡಬೇಕು. ಆದರೆ ನಮ್ಮಲ್ಲಿ ಕಡಿಮೆ ಭೂಮಿ ಕಾರಣ ಇರುವ ಜಾಗದಲ್ಲೇ ಸಸಿಗಳನ್ನು ಉಳಿಸುವ ಕೆಲಸ ಮಾಡುತ್ತಿರುವುದಾಗಿ ಕಸಿ ತಜ್ಞ ಗುರುರಾಜ ಅವರು ವಿವರಿಸಿದ್ದಾರೆ.

ಒಟ್ಟಿನಲ್ಲಿ ವರ್ಷಕ್ಕೆ ಎರಡು ಬಾರಿ ಫಸಲು ಬಿಡುವ ರುಚಿಕರ ಹಾಗೂ ನೋಡಲು ತುಂಬಾ ಆಕರ್ಷಿಕವಾಗಿರುವ ಡೆಂಗ್ ಸೂರ್ಯ ಹಲಸನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಒಂದು ಬ್ರಾಂಡ್ ಆಗಿ ಮಾಡಿದರೆ ಇದನ್ನು ಬೆಳೆಯುವಂತಹ ರೈತರಿಗೆ ಹೆಚ್ಚಿನ ಆದಾಯ ತಂದುಕೊಡುವುದರಲ್ಲಿ ಅನುಮಾನವೇ ಇಲ್ಲ. ಡೆಂಗ್ ಸೂರ್ಯ ಹಲಸಿನ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಕಸಿ ತಜ್ಞ ಗುರುರಾಜ ಬೆಳ್ತಿಲ್ಲಾಯ ಅವರನ್ನು (8762622030) (ರಾತ್ರಿ 8 ರಿಂದ 9 ಗಂಟೆ ಮಾತ್ರ) ಸಂಪರ್ಕಿಸಬಹುದು.

IPL_Entry_Point

ವಿಭಾಗ