ಕನ್ನಡ ಸುದ್ದಿ  /  Karnataka  /  Vriksha Ayurvedic Treatment For Coconut Tree Disease Good Yield Results In Three To Six Months

Vriksha Ayurvedic Treatment: ತೆಂಗಿನ ಮರ ರೋಗಕ್ಕೆ ವೃಕ್ಷ ಆಯುರ್ವೇದ ಚಿಕಿತ್ಸೆ; ಮೂರರಿಂದ ಆರೇ ತಿಂಗಳಿಗೆ ಉತ್ತಮ ಇಳುವರಿಯ ಫಲಿತಾಂಶ!

ತೆಂಗು ಬೆಳೆಯುವ ರಾಜ್ಯಗಳ ಪೈಕಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಇಳುವರಿ ಕಡಿಮೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ತೆಂಗಿನ ಮರಗಳಲ್ಲಿ ಕಾಣಿಸುತ್ತಿರುವ ರೋಗಗಳು. ರೈತರು ಇದರಿಂದ ಪಾರಾಗಲು ವೃಕ್ಷ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗ್ತಿದ್ದಾರೆ. ಇದರ ಮಾಹಿತಿ ಇಲ್ಲಿದೆ.

ತೆಂಗಿನ ಮರಗಳಿಗೆ ತಗಲುವ ರೋಗಗಳಿಗೆ ವೃಕ್ಷ ಆಯುರ್ವೇದ ಚಿಕಿತ್ಸೆಯನ್ನು ಆರಂಭಿಸಲಾಗಿದೆ.
ತೆಂಗಿನ ಮರಗಳಿಗೆ ತಗಲುವ ರೋಗಗಳಿಗೆ ವೃಕ್ಷ ಆಯುರ್ವೇದ ಚಿಕಿತ್ಸೆಯನ್ನು ಆರಂಭಿಸಲಾಗಿದೆ.

ಬೆಂಗಳೂರು: ಕಲ್ಪತರು ನಾಡು ತುಮಕೂರು (Tumkur) ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಬಹುಉಪಯೋಗಿ ಹಾಗೂ ವಾಣಿಜ್ಯ ಬೆಳೆಯಾದ (Commercial Crop) ತೆಂಗು (Coconut) ರೈತ (Farmers) ವರ್ಗಗಕ್ಕೆ ಲಾಭದಾಯಕ. ಆದರೆ ತೆಂಗು ಬೆಳೆಗೆ (Coconut crop) ಕಾಣಿಸಿಕೊಳ್ಳುವ ರೋಗಗಳು ಫಸಲಿಗೆ ಪೆಟ್ಟು ನೀಡುತ್ತಿರುವುದು ಅನ್ನದಾತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.

ದೇಶದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕ (Karnataka) ಎರಡನೇ ಸ್ಥಾನದಲ್ಲಿದೆ. (ಕೇರಳ ಮೊದಲ ಸ್ಥಾನದಲ್ಲಿದೆ) ದಶಕಗಳಿಂದ ಈ ಬೆಳೆಯನ್ನು ಬೆಳೆಯುತ್ತಿದ್ದರೂ ಸಂಪೂರ್ಣವಾಗಿ ಕೀಟ ಹಾಗೂ ರೋಗಗಳನ್ನು (Insect and Disease) ತಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಇಳುವರಿ ಕಡಿಮೆಯಾಗುತ್ತಿರುವುದರಿಂದ ರೈತರಿಗೆ ಸಿಗಬೇಕಾದ ಸೂಕ್ತ ಲಾಭ ಸಿಗುತ್ತಿಲ್ಲ.

ತುಮಕೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಲವು ಬಾರಿ ಖುದ್ದು ತೋಟಗಳಿಗೆ ಭೇಟಿ ಕೊಟ್ಟು ರೋಗಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬೆಳೆ ನಿರ್ವಹಣೆ ಸರಿಯಾಗಿ ಮಾಡದಿದ್ದರೂ ತೆಂಗಿನ ಬೆಳೆಗಳನ್ನು ರೋಗ ಬಾಧಿಸುತ್ತದೆ ಎನ್ನುತ್ತಾರೆ.

ರೈನಾಸಿರಸ್ ದುಂಬಿ, ಕೆಂಪು ಮೂತಿ ಹುಳ, ಕಪ್ಪು ತಲೆ ಹುಳ ಹಾಗೂ ನುಸಿ ತೆಂಗಿನ ಬೆಲೆಯನ್ನು ಕಾಡುತ್ತದೆ. ಕಾಂಡ ಸೋರುವ ರೋಗ, ಅಣಬೆ ರೋಗ, ಸುಳಿ ಕೊಳೆ ರೋಗ, ಎಲೆ ಚುಕ್ಕೆ ರೋಗ ತೆಂಗಿನ ಬೆಳೆಯನ್ನು ಇನ್ನಿಲ್ಲದಂತೆ ಕಾಡುತ್ತದೆ. ಇವುಗಳ ತಡೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕೆಲವೆಡೆ ರೈತರು ತೆಂಗಿನ ಬೆಳೆಗೆ ತಗಲುವ ರೋಗ ನಿಯಂತ್ರಣಕ್ಕೆ ಆರ್ಯುವೇದ ಹಾಗೂ ಸಾವಯವ ಚಿಕಿತ್ಸೆಗಳನ್ನು ಕಂಡು ಕೊಂಡುಕೊಳ್ಳುತ್ತಿದ್ದಾರೆ. ತುಮಕೂರು ಸಮೀಪ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಕೃಷಿಯ ತರಬೇತಿಗಳು ಹಾಗೂ ಸರ್ಕಾರದ ತಿರ್ಮಾನಗಳ ಬಗ್ಗೆ ಸಂವಾದಗಳು ನಡೆಯುತ್ತಿರುತ್ತವೆ. ಈ ಸಹಜ ಆಶ್ರಮದಲ್ಲಿ ತೆಂಗಿನ ಮರವೊಂದಕ್ಕೆ ಸುತ್ತಿದ್ದ ಸೀರೆ ಗಮನ ಸಳೆದಿದೆ. ಇದು ವೃಕ್ಷ ಆಯುರ್ವೇದ ಚಿಕಿತ್ಸಾ ಪದ್ಧತಿ.

ಏನಿದು ವೃಕ್ಷ ಆಯುರ್ವೇದ ಚಿಕಿತ್ಸೆ?

ತೆಂಗಿನ ಮರಕ್ಕೆ ಸೀರೆ ಸುತ್ತಿದ್ದ ಬಗ್ಗೆ ಕುತೂಹಲ ಉಂಟಾಗದ ಕಾರಣ ತೋಟದ ಮಾಲೀಕ ರವೀಶ್ ಅವರನ್ನು ಹೆಚ್ ಟಿ ಕನ್ನಡ ಸಂಪರ್ಕಿಸಿದಾಗ ತೆಂಗಿನ ಮರಕ್ಕೆ ಸೀರೆ ಸುತ್ತಿರುವ ಬಗ್ಗೆ ವಿವರಿಸಿದ್ದಾರೆ.

ಔಷಧಿಗುಣದ ಸಸಿಗಳು, ಎಲೆಗಳು ಹಾಗೂ ಗಿಡ ಮೂಲಿಕೆಗಳನ್ನು ಮಿಶ್ರಣ ಮಾಡಿ ಮರದ ಕಾಂಡಕ್ಕೆ ಹಾಕಿ ಸೀರೆ ಸುತ್ತಿದ್ದೇವೆ. ವಾರಕ್ಕೆ ಒಂದು ಸಲ ಬೇವಿನ ಎಣ್ಣೆ ಬಳಿಯುತ್ತೇವೆ ಎಂದು ಹೇಳಿದರು.

ಈ ಕ್ರಮದಿಂದ ತೆಂಗಿನ ಮರಕ್ಕೆ ಬರುವ 6 ರೋಗಗಳು ಕಡಿಮೆಯಾಗುತ್ತವೆ. ಇಂತಹ ಪ್ರಯೋಗದಲ್ಲಿ ತಮಿಳುನಾಡು ರೈತರು ಉತ್ತಮ ಫಲಿತಾಂಶ ಪಡೆದಿದ್ದಾರೆ. ನಾವು ಈ ರೀತಿಯ ಹೊಸ ಪ್ರಯತ್ನವನ್ನು ಮಾಡಿ ಒಂದು ತಿಂಗಳಾಗಿದೆ ಎಂದಿದ್ದಾರೆ.

ಇದು ಹೊಸದೇನಲ್ಲ, ಬೇರೆ ಬೇರೆ ಕಡೆಗಳಲ್ಲಿ ರೈತರು ಇದರಲ್ಲಿ ಯಶಸ್ಸು ಪಡೆದಿದ್ದಾರೆ. ಯಾವ ರೋಗಕ್ಕೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದನ್ನು ಅರಿತುಕೊಂಡು ತೆಂಗಿನ ಮರದ ಬುಡ, ಕಾಂಡ, ಗರಿಗಳಿಗೆ ಬೇರೆ ಬೇರೆ ರೀತಿಯ ನಮ್ಮಲ್ಲೇ ಸಿಗುವಂತಹ ಗಿಡ ಮೂಲಿಕೆಗಳಿಂದ ಮಿಶ್ರಣ ಮಾಡಿದ ಔಷಧಿಯನ್ನು ನೀಡುತ್ತೇವೆ ಅಂತ ತಿಳಿಸಿದ್ದಾರೆ.

ತೆಂಗಿನ ಮರ ಮಾತ್ರವಲ್ಲದೆ, ನಿಂಬೆ ಗಿಡ, ಮಾವು ಹೀಗೆ ಎಲ್ಲಾ ರೀತಿಯ ತೋಟಗಾರಿಕೆ ಬೆಳೆಗಳಿಗೂ ಅತಿ ಕಡಿಮೆ ವೆಚ್ಚದಲ್ಲಿ ನಾವೇ ಔಷಧವನ್ನು ತಯಾರಿಸಿಕೊಳ್ಳುತ್ತೇವೆ. ನಾಲ್ಕೈದು ವರ್ಷಗಳಿಂದ ಸಂಪೂರ್ಣವಾಗಿ ಈ ಪದ್ಧತಿಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಬದಲಾಗುವ ಹವಾಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ರೋಗಗಳನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ. ಆ ನಿಟ್ಟಿನಲ್ಲಿ ಈವೊಂದು ಪದ್ಧತಿಯನ್ನು ಮಾಡಿದ್ದೇವೆ ಎಂದು ಡಾ ಮಂಜುನಾಥ ಎಂಬುವರ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಬಗ್ಗೆ ವಿವರಿಸಿದ್ದಾರೆ.

ಗಾಂಧೀಜಿ ಸಹಜ ಬೇಸಾಯ ಆಶ್ರಮದ ಡಾ ಮಂಜುನಾಥ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತುಮಕೂರ ಹಾಗೂ ಎಲ್ಲಾ ಕರಾವಳಿ ಪ್ರದೇಶಗಳಲ್ಲಿ ತಂಜಾವೂರ್ ವಿಲ್ಟ್ ಎಂಬ ರೋಗ ಕಾಣಿಸಿಕೊಳ್ಳುತ್ತದೆ. ತೆಂಗಿನ ಮರದ ಕಾಂಡ ಸಣ್ಣದಾಗಿ ಒಡೆದು ಕಣ್ಣೀರು ಬರುವ ರೀತಿಯಲ್ಲಿ ಸೋರುತ್ತೆ. ಆಗ ತೆಂಗಿನ ಮರ ಸುಳಿ ಒಣಗುತ್ತೆ. ಇದಕ್ಕೆ ಮೂಲಭೂತವಾಗಿ ಕಾರಣ ಏನು ಎಂಬುದನ್ನು ನೋಡಿದಾಗ ಇದು ಸಾಮಾನ್ಯ ರೋಗವಾಗಿದೆ. ಸಾವಯವ ಅಂಶ ಇಲ್ಲದ, ಕಳೆ ಇರುವಂತಹ ಕೆರೆ ಮಣ್ಣು ತೋಟಕ್ಕೆ ಹಾಕಿದ್ದಾಗ ಈ ರೋಗ ಬರುತ್ತದೆ. ಜೊತೆಗೆ ಹವಾಮಾನ ವೈಪರೀತ್ಯದಿಂದ ಭೂಮಿ ಗಡಸಾಗುತ್ತೆ. ಭೂಮಿಯನ್ನ ಆಳಕ್ಕೆ ಅಗೆದು ಕೆಮಿಕಲ್ಸ್ ಹಾಗೂ ಔಷಧಿಗಳ ಮಿಶ್ರಣದಿಂದ ಇಂತಹ ರೋಗಗಳು ಬರುತ್ತವೆ ಎಂದಿದ್ದಾರೆ.

ತಂಜಾವೂರ್ ವಿಲ್ಟ್ ರೋಗ ತಡೆಗಟ್ಟುವುದು ಹೇಗೆ?

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಕೂಡ ರೋಗದ ಬಗ್ಗೆ ಸಂಶೋಧನೆ ಮಾಡುತ್ತಿದೆ. ಆದರೆ ಸಾವಯವಾಗಿ ಇದನ್ನು ತಡೆಗಟ್ಟಬಹುದು. ಮೊದಲು ತೆಂಗಿನ ಗಿಡಕ್ಕೆ ಇರುವ ಇನ್ ಫೆಕ್ಷನ್ ಕಡಿಮೆ ಮಾಡಬೇಕು. ಬುಡಕ್ಕೆ, ಮರಕ್ಕೂ ಬೇರೆ ಚಿಕಿತ್ಸೆ ನೀಡಬೇಕು. ಮರದ ಸುತ್ತ ಒಂದೂವರೆಗೆ ಅಡಿ ಅಗೆದು, ಬೇವು, ಹೊಂಗೆ ಎಲೆಗಳನ್ನು ತುಂಬುತ್ತೇವೆ. ಇದು ಇನ್ ಫೆಕ್ಷನ್ ಕಡಿಮೆ ಮಾಡುತ್ತದೆ. ನಾಲ್ಕು ಬುಟ್ಟಿ ಕುರಿ ಪಿಚಿಕೆ, ಟ್ರೈಕೋಡರ್ಮಾ, ಸುಡೋಮೊನಾಸ್ 200 ಗ್ರಾಂ ಮಿಕ್ಸ್ ಮಾಡಿ ಬುಡಕ್ಕೆ ಹಾಕುತ್ತೇವೆ.

ಹೀಗೆ ಮಾಡಿದಾಗ ಬುಡದಲ್ಲಿ ಇನ್ ಫೆಕ್ಷನ್ ತಡೆಯುತ್ತೆ. ಮಳೆಗಾಲಕ್ಕೂ ಮುಂಚೆ ಮತ್ತು ನಂತರ ಒಟ್ಟು ಎರಡು ಬಾರಿ ಹೀಗೆ ಮಾಡುತ್ತೇವೆ. ನಾಟಿ ಹಸುವಿನ ಸಗಣಿ 10 ಕೆಜಿಯಷ್ಟು ಅಥವಾ ಕುರಿ ಪಿಚಿಕೆ 10 ಕೆಜಿಯನ್ನು ಗಂಜಲ ಜೊತೆ ಮಿಕ್ಸ್ ಮಾಡಿ 8 ರಿಂದ 10 ಅಡಿಗಳಷ್ಟು ಮರಕ್ಕೆ ಲೇಪ ಮಾಡುತ್ತೇವೆ.

ವಾರಕ್ಕೊಮ್ಮೆ ಹೊಂಗೆ ಅಥವಾ ಬೇವಿನ ಎಣ್ಣೆ, ಟ್ರೈಕೋಡರ್ಮಾ, ಸುಡೋಮೊನಾಸ್ ಹಾಕಿದಾಗ ಇನ್ ಫೆಕ್ಷನ್ ನಿಲ್ಲುತ್ತದೆ. ಹೀಗೆ ಆರು ತಿಂಗಳು ಮಾಡಿದಾಗ ತಂಗಿನ ಇಳುವರಿ ಬಂದಿದೆ. ಕೆಲವೆಡೆ ಮೂರೇ ತಿಂಗಳಿಗೂ ಇಳುವರಿ ಬಂದಿರುವ ನಿದರ್ಶನಗಳು ಇವೆ. ಹವಾಮಾನ ಬದಲಾವಣೆಯಿಂದ ಮರಗಳಿಗೂ ಸುಸ್ತಾಗುತ್ತದೆ. ಅವುಗಳ ದೇಹಕ್ಕೆ ತಂಪು ನೀಡುವ ಪದ್ದತಿ ಇದಾಗಿದೆ. ಫಲಿತಾಂಶ ಬೇಗ ಬರಲು ಈ ರೀತಿಯ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಒಟ್ಟಾರೆ ರವೀಶ್ ಹಾಗೂ ಡಾ ಮಂಜುನಾಥ್ ಅವರ ಈ ಪ್ರಯತ್ನದಲ್ಲಿ ಉತ್ತಮವಾದ ಫಲಿತಾಂಶ ಸಿಕ್ಕರೆ ಇವರ ತೆಂಗಿನ ತೋಟ ಗಾಂಧೀಜಿ ಸಹಜ ಬೇಸಾಯ ಆಶ್ರಮ ರೈತರುಗಳಿಗೆ ನೆಮ್ಮದಿ ನೀಡುವ ಯಾತ್ರಾ ಸ್ಥಳವಾಗುವುದರಲ್ಲಿ ಎರಡು ಮಾತಿಲ್ಲ. ಇದು ಇತರೆ ರೈತರಿಗೂ ಮಾದರಿಯಾಗಲಿದೆ.

ವಿಭಾಗ