ಕನ್ನಡ ಸುದ್ದಿ  /  Karnataka  /  Kannada Sahitya Sammelana: From Bhuvanagiri Kannada Ratha Drive Tomorrow

Kannada Sahitya Sammelana: ಇತಿಹಾಸದಲ್ಲಿಯೇ ಮೊದಲ ಬಾರಿ ಭುವನಗಿರಿಯಿಂದ ನಾಳೆ ಕನ್ನಡ ರಥಕ್ಕೆ ಚಾಲನೆ

ರಾಜ್ಯದ ಆಯ್ದ ಭಾಗಗಳಲ್ಲಿ ಜ್ಯೋತಿ ಹೊತ್ತ ಕನ್ನಡ ರಥ ಸಂಚರಿಸಿ ಜನವರಿ 6ರಂದು ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತಲುಪಲಿದೆ.

ಭುವನಗಿರಿಯಿಂದ ನಾಳೆ ಕನ್ನಡ ರಥಕ್ಕೆ ಚಾಲನೆ
ಭುವನಗಿರಿಯಿಂದ ನಾಳೆ ಕನ್ನಡ ರಥಕ್ಕೆ ಚಾಲನೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ ನಾಳೆ ಕನ್ನಡ ರಥಕ್ಕೆ ಚಾಲನೆ ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಜ್ಯೋತಿ ಹೊತ್ತ ಕನ್ನಡ ರಥಕ್ಕೆ ಚಾಲನೆ ನೀಡಲಾಗುತ್ತದೆ.

ರಾಜ್ಯದ ಆಯ್ದ ಭಾಗಗಳಲ್ಲಿ ಜ್ಯೋತಿ ಹೊತ್ತ ಕನ್ನಡ ರಥ ಸಂಚರಿಸಿ ಜನವರಿ 6ರಂದು ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತಲುಪಲಿದೆ. ಇದೇ ಜ್ಯೋತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಡಾ. ಮಹೇಶ್‌ ಜೋಶಿ ಹೇಳಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಜನವರಿ 6, 7 ಮತ್ತು 8 ರಂದು ಮೂರು ದಿನಗಳ ಕಾಲ ನಡೆಯಲಿದೆ.

ನಾಳೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಕನ್ನಡ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ಲಾಸ್ಟಿಕ್‌ ರಹಿತವಾಗಿ ನಡೆಸಲು ಉದ್ದೇಶಿಸಲಾಗಿದೆ. ಜತೆಗೆ, ಸಮ್ಮೇಳನವನ್ನು ಧೂಳು ಮುಕ್ತವಾಗಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 300 ಪುಸ್ತಕ ಮಳಿಗೆಗಳು ಇರುತ್ತವೆ. ನೂರೈವತ್ತು ವಾಣಿಜ್ಯ ಮಳಿಗೆಗಳಿಗೂ ಅವಕಾಶ ನೀಡಲಾಗುತ್ತದೆ. ಆಪ್‌ ಮೂಲಕವೇ ಮಳಿಗೆಗಳಿಗೆ ಜನರು ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಬಾರಿ ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಕವಿ ಡಾ. ದೊಡ್ಡರಂಗೇಗೌಡರು ಅಧ್ಯಕ್ಷರಾಗಿರಲಿದ್ದಾರೆ. ಕ.ಸಾ.ಪ. ಸದಸ್ಯತ್ವ ಪಡೆದ 20 ಸಾವಿರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವ ಪಡೆಯದವರು ಆಪ್‌ ಮೂಲಕ ಸದಸ್ಯತ್ವ ಪಡೆಯಬಹುದು. ಪ್ರತಿನಿಧಿ ಶುಲ್ಕ 500 ರೂಪಾಯಿ ನೀಡಿ ಸದಸ್ಯತ್ವ ಪಡೆಯಬಹುದು.

ಈ ವರ್ಷ ಕನ್ನಡ ಸಾಹಿತ್ಯ ಪರಿಷತ್‌ನ ಲಾಂಛನ ಬಿಡುಗಡೆ ಮಾಡಲಾಗಿದೆ. ಮಧ್ಯದಲ್ಲಿ ಕನ್ನಡದ ಭುವನೇಶ್ವರಿ ತಾಯಿ, ಮೇಳ್ಬಾಗದಲ್ಲಿ ಸಾಹಿತ್ಯ ಸಮ್ಮೇಳನದ ಅಕ್ಷರಗಳು, ತುದಿಯಲ್ಲಿ ಕೆಂಪು ಛತ್ರಿ, ಕೆಳಭಾಗದಲ್ಲಿ 86 ಎಂಬ ಸಂಖ್ಯೆ ಇದ್ದು, ಇದು ಈ ಬಾರಿಯ ೮೬ನೇ ಸಾಹಿತ್ಯ ಸಮ್ಮೇಳನವನ್ನು ಪ್ರತಿಬಿಂಬಿಸುತ್ತದೆ. ಸಾಹಿತ್ಯ ಸಮ್ಮೇಳನದ ಲೊಗೊಗಳನ್ನು ಎರಡೂ ಕಡೆಗಳಲ್ಲಿ ಹಾಕಲಾಗಿದೆ. ಕನ್ನಡ ಪರಿಷತ್‌ನ ಕಟ್ಟಡವನ್ನೂ ಸಾಹಿತ್ಯ ಪರಿಷತ್‌ನ ಲೊಗೊದಲ್ಲಿ ಕಾಣಬಹುದಾಗಿದೆ. ಹಾವೇರಿಯನ್ನು ಸಂಕೇತಿಸುವ ಕೆಂಪು ಮೆಣಸಿನ ಕಾಯಿಯ ಚಿತ್ರವೂ ಇದೆ. ಹೊನ್ನ ಬಿತ್ತೇವು ಹೊಲಕೆಲ್ಲ ಎಂಬ ನುಡಿಗಟ್ಟು ಇದೆ.

ಸಮ್ಮೇಳನಕ್ಕೆ ಎಂಟರಿಂದ ಹತ್ತು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, 30 ಸಾವಿರ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ದಿ‌ನ 2.50 ಲಕ್ಷ ಜನರಿಗೆ ಊಟೋಪಚಾರ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕೆಲಸ ಕಾರ್ಯಗಳಿಗೆ ರಚಿಸಲಾದ 16 ಸಮಿತಿಗಳನ್ನು ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಭಾನುವಾರ ಪ್ರಕಟಿಸಿದ್ದರು.

ಸಮನ್ವಯ ಸಮಿತಿಯ ಗೌರವಾಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸವರಾಜ್ ಹೊರಟ್ಟಿ, ವಿಧಾನಸಭಾ ಮಾಜಿ ಸಭಾಪತಿ ಕೆ.ಬಿ ಕೋಳಿವಾಡ, ಅಧ್ಯಕ್ಷರಾಗಿ ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ಸುನೀಲ್ ಕುಮಾರ್, ಉಪಾಧ್ಯಕ್ಷರಾಗಿ ಮಾಜಿ ಶಾಸಕ ಬಿ.ಎಸ್ ಬನ್ನಿಕೋಡ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

ಸಮ್ಮೇಳನದ ಸಿದ್ಧತೆ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿಗೆ ಗೌರವಾಧ್ಯಕ್ಷರಾಗಿ ಸಂಸದ ಶಿವಕುಮಾರ್ ಉದಾಸಿ, ಅಧ್ಯಕ್ಷರಾಗಿ ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ಸುರೇಶ್ ಗೌಡ ಬಿ ಪಾಟೀಲ್, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

IPL_Entry_Point