ಕನ್ನಡ ಸುದ್ದಿ  /  Karnataka  /  Karnataka Assembly Elections 40 Kg Gold Seized From Tarikere Constituency Rupees 240 Crore Seized In The State Mgb

Karnataka Assembly Elections: ತರೀಕೆರೆ ಕ್ಷೇತ್ರದಲ್ಲಿ 40 ಕೆಜಿ ಚಿನ್ನಾಭರಣ ಜಪ್ತಿ, ರಾಜ್ಯಾದ್ಯಂತ 240 ಕೋಟಿ ರೂ. ವಶ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ (Tarikere constituency) 23.51 ಕೋಟಿ ರೂಪಾಯಿ ಮೌಲ್ಯದ 40 ಕಿಲೋ ಗ್ರಾಂಗಳಷ್ಟು ಚಿನ್ನ ಮತ್ತು 20 ಕೆಜಿಗಿಂತ ಹೆಚ್ಚು ಬೆಳ್ಳಿಯನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತರೀಕೆರೆ (ಚಿಕ್ಕಮಗಳೂರು): ರಾಜ್ಯದಲ್ಲಿ ವಿಧಾನಸಭಾ ಚುನಾವಣಾ (Karnataka Assembly Elections) ಕಣ ರಂಗೇರಿದೆ. ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ (Election Commission) ಹದ್ದಿನ ಕಣ್ಣಿಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ (Tarikere constituency) 23.51 ಕೋಟಿ ರೂಪಾಯಿ ಮೌಲ್ಯದ 40 ಕಿಲೋ ಗ್ರಾಂಗಳಷ್ಟು ಚಿನ್ನ ಮತ್ತು 20 ಕೆಜಿಗಿಂತ ಹೆಚ್ಚು ಬೆಳ್ಳಿಯನ್ನು ವಶಪಡಿಸಿಕೊಂಡಿದೆ.

ಚುನಾವಣಾ ಆಯೋಗದ ಣ್ಗಾವಲು ತಂಡಗಳು ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೂಕ್ತ ದಾಖಲೆಯಿಲ್ಲದ 40.59 ಕೆಜಿ ಚಿನ್ನ ಮತ್ತು 20.7 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ಅಂದರೆ ಮಾರ್ಚ್ 29 ರಿಂದ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈವರೆಗೆ ನಗದು ಸೇರಿದಂತೆ ಒಟ್ಟು 240 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ 80 ಕೋಟಿ ರೂ. ನಗದು, 48 ಕೋಟಿ ರೂ. ಮೌಲ್ಯದ ಮದ್ಯ, 78 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ, 16 ಕೋಟಿ ರೂ. ಮೌಲ್ಯದ ಡ್ರಗ್ಸ್ / ಮಾದಕ ದ್ರವ್ಯಗಳು ಸೇರಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಇವುಗಳನ್ನು ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,714 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ಮಾರ್ಚ್ 9 ರಿಂದ ಮಾರ್ಚ್ 27 ರ ಅವಧಿಯಲ್ಲಿ 58 ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು. ಚುನಾವಣೆ ಘೋಷಣೆಯಾದ 10 ದಿನಗಳಲ್ಲೇ ಒಟ್ಟು 100 ಕೋಟಿ ರೂ. ಮೌಲ್ಯದ ಸೂಕ್ತ ದಾಖಲೆಗಳಿಲ್ಲದ ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ, ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಕ್ರಮ ಹಣದ ವಹಿವಾಟನ್ನು ತಪ್ಪಿಸಲು ಈಗಾಗಲೇ ರಾಜ್ಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿರುವ ಚುನಾವಣಾ ಆಯೋಗ, ವಾಹನಗಳ ತಪಾಸಣೆ ಪ್ರಕ್ರಿಯೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.

ಯಾರ ಪಾಲಾಗತ್ತೆ ತರೀಕೆರೆ ಕ್ಷೇತ್ರ?

ತರೀಕೆರೆ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಶಾಸಕ ಡಿ.ಎಸ್‌.ಸುರೇಶ್‌ಗೆ ಈ ಬಾರಿಯೂ ಬಿಜೆಪಿ ಟಿಕೆಟ್​ ನೀಡಿದ್ದು, ಈಗಾಗಲೇ ಅವರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಮಾಜಿ ಶಾಸಕ ಶ್ರೀನಿವಾಸ್​ಗೆ ಕಾಂಗ್ರೆಸ್​ ಟಿಕೆಟ್ ನೀಡಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಗೋಪಿಕೃಷ್ಣ ಅವರು ಬಂಡಾಯ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಈ ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ತರೀಕೆರೆಯಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದು ಬೀಗಿತ್ತು. ಈ ಬಾರಿ ಈ ಕ್ಷೇತ್ರ ಯಾರ ಪಾಲಾಗಲಿದೆ ಕಾದು ನೋಡಬೇಕಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗವು ಮಾರ್ಚ್ 29ರಂದು ಘೋಷಿಸಿತ್ತು. ನಿನ್ನೆ (ಏ 20) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 3,632 ಅಭ್ಯರ್ಥಿಗಳಿಂದ 5,102 ನಾಮಪತ್ರ ಸಲ್ಲಿಕೆಯಾಗಿದದೆ. ಇಂದು (ಏ 21) ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ. 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

IPL_Entry_Point