Anita Kumaraswamy: ಮಳೆಯಿಂದ ಬೆಂ-ಮೈ ಎಕ್ಸ್ ಪ್ರೆಸ್ ವೇ ಜಲಾವೃತ; ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ ಎಂದ ಅನಿತಾ ಕುಮಾರಸ್ವಾಮಿ
ಸರ್ವಿಸ್ ರಸ್ತೆಯೂ ಸೇರಿದಂತೆ ಬೆಂ-ಮೈ ಹೆದ್ದಾರಿಯ ಎಲ್ಲಾ ಬಾಕಿ ಇರುವ ಕಾಮಗಾರಿಗಳನ್ನ ಪೂರ್ಣಗೊಳಿಸಬೇಕು. ಅದುವರೆಗೂ ಟೋಲ್ ಸಂಗ್ರಹ ನಿಲ್ಲಿಸಬೇಕು. ಈ ರಸ್ತೆಗಾಗಿ ಭೂಮಿ ಕಳೆದುಕೊಂಡಿರುವ ರಾಮನಗರ, ಮಂಡ್ಯ ಸೇರಿ ಆ ಭಾಗದ ಎಲ್ಲ ಜನರು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಜಲಾವೃತವಾಗಿರುವುದು ವಾಹನ ಸವಾರರು ಹಾಗೂ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಾರ್ಚ್ 12 ರಂದು ಈ ಹೆದ್ದಾರಿಯನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಿದ್ದರು.
ಟ್ರೆಂಡಿಂಗ್ ಸುದ್ದಿ
ಇದೇ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳು, ಈ ರಸ್ತೆ ನಮ್ಮ ಹೆಮ್ಮೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ. ಬೆಳಗಿನಜಾವ ಸುರಿದ ಒಂದು ಸಣ್ಣಮಳೆಗೇ ಅದು ಕೆರೆಯಾಗಿ, ಚರಂಡಿಯಾಗಿ ಉಕ್ಕಿ ಹರಿದಿದೆ ಎಂದಿದ್ದಾರೆ.
ಕಳೆದ ವರ್ಷ ಅಬ್ಬರಿಸಿದ ಮಹಾಮಳೆಗೆ ಈ ಎಕ್ಸ್ ಪ್ರೆಸ್ ಹೆದ್ದಾರಿ ತತ್ತರಿಸಿತ್ತು. ಕಾಮಗಾರಿಗಳು ಮುಗಿದಿರಲಿಲ್ಲ ಎಂದು ಹೇಳಿ ಗುತ್ತಿಗೆದಾರರು ಆಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಈಗ ವರ್ಷ ಮುಗಿಯುವ ಮೊದಲೇ ಮತ್ತೆ ಬಂದ ಸಣ್ಣಮಳೆಗೆ ಸಾವಿರಾರು ಕೋಟಿ ವೆಚ್ಚದ ಈ ಹೆದ್ದಾರಿ ವಾಹನ ಸವಾರರ ಪಾಲಿಗೆ ಸಾವಿನಮಾರಿಯಾಗಿ ಮಾರ್ಪಟ್ಟಿದೆ.
ಅವೈಜ್ಞಾನಿಕವಾದ ಈ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದೆಯೇ, ತರಾತುರಿಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸಿದ ಈ ' ಚುನಾವಣಾ ಗಿಮಕ್ ' ಬಗ್ಗೆ ಜನರು ಹಾದಿಬೀದಿಯಲ್ಲಿ ಆಡಿಕೊಳ್ಳುತ್ತಿದ್ದಾರೆ. ವಾಹನ ಸವಾರರು ಶಪಿಸುತ್ತಿದ್ದಾರೆ. ಇದಕ್ಕೆ ಉತ್ತರದಾಯಿಗಳು ಯಾರು ಎಂದು ಪ್ರಶ್ನಿಸಿದ್ದಾರೆ.
ಬೆಳಗಿನಜಾವ ಸುರಿದ ಮಳೆಯಿಂದ ಹೆದ್ದಾರಿಯಲ್ಲಿ ನೀರು ಆಳೆತ್ತರ ನಿಂತಿದೆ. ವಾಹನಗಳು ಅಪಘಾತಕ್ಕೀಡಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. 270 ರೂ. ಟೋಲ್ ಕಟ್ಟಿ ಹೆದ್ದಾರಿಗೆ ಬಂದ ವಾಹನ ಸವಾರರು ಮಳೆ ಚಳಿಯಲ್ಲಿ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ನರಳಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ವಾಹನದಲ್ಲಿದ್ದ ದಂಪತಿಯ ಹಣ, ಚಿನ್ನಾಭರಣವನ್ನು ದೋಚಿದ್ದ ಪ್ರಕರಣ ವರದಿಯಾಗಿತ್ತು. ಜತೆಗೆ, ನಿರಂತರ ಅಪಘಾತಗಳಿಂದ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಾಗಾದರೆ, ಈ ಹೆದ್ದಾರಿಯ ಭದ್ರತೆ, ಸುರಕ್ಷತೆ ಪಾಡೇನು? ಟೋಲ್ ಸಂಗ್ರಹ ಮಾಡಿದರೆ ಸಾಕೇ ಎಂದು ಪ್ರಶ್ನಿಸಿದ್ದಾರೆ.
ನನ್ನ ಒತ್ತಾಯ ಇಷ್ಟೇ. ಸರ್ವಿಸ್ ರಸ್ತೆಯೂ ಸೇರಿದಂತೆ ಈ ಹೆದ್ದಾರಿಯ ಎಲ್ಲಾ ಬಾಕಿಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅದುವರೆಗೂ ಟೋಲ್ ಸಂಗ್ರಹ ನಿಲ್ಲಿಸಬೇಕು. ಈ ರಸ್ತೆಗಾಗಿ ಭೂಮಿ ಕಳೆದುಕೊಂಡಿರುವ ರಾಮನಗರ, ಮಂಡ್ಯ ಸೇರಿ ಆ ಭಾಗದ ಎಲ್ಲ ಜನರು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ಆರು ದಿನಗಳ ಹಿಂದೆ ಉದ್ಘಾಟಿಸಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿ, ಭಾರಿ ಮಳೆಗೆ ಜಲಾವೃತಗೊಂಡಿದೆ. ರಾಮನಗರದ ಬಳಿಯ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಹೆದ್ದಾರಿಯ ಕೆಳಸೇತುವೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ.
ರಾಮನಗರ ತಾಲೂಕಿನ ಸಂಗಬಸವನದೊಡ್ಡಿಯ ಬಳಿ ಬರುವ ಹೆದ್ದಾರಿಯ ಕೆಳಸೇತುವೆ, ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದಾಗಿ ವಾಹನಗಳು ಸರತಿ ಸಾಲಿನಲ್ಲಿ ಚಲಿಸುತ್ತಿದ್ದು, ಟ್ರಾಫಿಕ್ ಜಾಮ್ ಹಾಗೂ ಸರಣಿ ಅಪಘಾತಗಳು ಸಂಭವಿಸಿವೆ.
ರಸ್ತೆ ಮೇಲೆ ನೀರು ಸಂಗ್ರಹವಾಗಿರುವುದರಿಂದ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಇದರಿಂದ ಸಂಚಾರ ದಟ್ಟಣೆಯುಂಟಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ.ರಸ್ತೆ ಮೇಲೆ ಸುಮಾರು ಒಂದರಿಂದ ಎರಡು ಅಡಿಗಳಷ್ಟು ನೀರು ನಿಂತಿದ್ದು, ವಾಹನಗಳ ಎಂಜಿನ್‌ಗೆ ನೀರು ನುಗ್ಗುತ್ತಿದೆ. ಇದರಿಂದ ಅಲ್ಲಲ್ಲಿ ವಾಹನಗಳು ಕೆಟ್ಟು ನಿಂತಿವೆ. ವಾಹನ ಸವಾರರ ಪರದಾಟ ಹೇಳತೀರದಾಗಿದೆ.