ಕನ್ನಡ ಸುದ್ದಿ  /  Karnataka  /  Siddaramaiah Accuses Bjp Doing Rowdy Politics To Win Election

Siddaramaiah: ಸೋಲಿನ ಭೀತಿಯಲ್ಲಿ ಬಿಜೆಪಿ ರೌಡಿ ಪಡೆ ಕಟ್ಟಿಕೊಂಡಿದೆ: ಸಿದ್ದರಾಮಯ್ಯ ವಾಗ್ದಾಳಿ!

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೌಡಿ ಶೀಟರ್‌ಗಳಿಗೆ ಬಿಜೆಪಿ ಟಿಕೆಟ್‌ ನೀಡುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ರೌಡಿ ಶೀಟರ್‌ಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಆರ್‌ಎಸ್‌ಎಸ್‌ ಮೌನವನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ) (Verified Twitter)

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೌಡಿ ಶೀಟರ್‌ಗಳಿಗೆ ಬಿಜೆಪಿ ಟಿಕೆಟ್‌ ನೀಡುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಬಿಜೆಪಿ ತನ್ನ ಕಾರ್ಯಕರ್ತರನ್ನು ಬದಿಗಿರಿಸಿ ರೌಡಿ ಶೀಟರ್‌ಗಳಿಗೆ ಮನ್ನಣೆ ನೀಡುತ್ತಿದೆ ಎಂಬ ಕಾಂಗ್ರೆಸ್‌ ಆರೋಪ, ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರೌಡಿ ಶೀಟರ್‌ಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

''ಸೋಲಿನ ಭೀತಿಯಲ್ಲಿರುವ ರಾಜ್ಯ ಬಿಜೆಪಿ ಬೀದಿ ರೌಡಿಗಳನ್ನು ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿರುವುದು, ಧರ್ಮ,ಸಂಸ್ಕೃತಿ ಬಗ್ಗೆ ಬೊಗಳೆ ಬಿಡುವ ಸಂಘ ಪರಿವಾರದ ನೈತಿಕ‌ ಅಧ:ಪತನವಲ್ಲದೆ ಮತ್ತೇನು..?'' ಎಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

''ಗಣಿಲೂಟಿಕೋರ ರೌಡಿಗಳನ್ನು ಕಟ್ಟಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿಯ ಮುಖ್ಯಮಂತ್ರಿಗಳು, ಕೊನೆಗೆ ಜೈಲು ಪಾಲಾಗಬೇಕಾಯಿತು. ಈಗ ಹೊಸ ರೌಡಿಪಡೆ ಕಟ್ಟುತ್ತಿರುವುದು ಯಾರನ್ನು ಜೈಲಿಗೆ ಕಳಿಸಲು..?'' ಎಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

''ಬಾಯಿ ಬಿಟ್ಟರೆ ಸಂಸ್ಕೃತಿ, ಆಚಾರ, ವಿಚಾರದ‌ ಮಂತ್ರ‌ ಉದುರಿಸುವ ಆರ್‌ಎಸ್‌ಎಸ್‌ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕರೆಸಿ‌ಕೊಂಡದ್ದು ರೌಡಿಮೋರ್ಚಾ ಕಟ್ಟಲು ಸಲಹೆ ನೀಡಲಿಕ್ಕಾಗಿಯೇ? ಆರ್‌ಎಸ್‌ಎಸ್‌ ಮೌನ ಸಮ್ಮತಿ ಲಕ್ಷಣವೇ..?'' ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳಿಲ್ಲದೇ ಪರದಾಡುತ್ತಿರುವ ರಾಜ್ಯ ಬಿಜೆಪಿ, ರೌಡಿ ಶೀಟರ್‌ಗಳನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಪ್ರಜಾಪ್ರಭುತ್ವ ವಿರೋಧಿಯದ ಬಿಜೆಪಿ, ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲೆಂದೇ ರೌಡಿ ರಾಜಕೀಯ ಮಾಡುತ್ತಿದೆ ಎಂಧು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ರೌಡಿಗಳ ರಾಜಕೀಯ ವಿವಾದ ಗಮನಸೆಳೆಯುತ್ತಿದ್ದು, ಈ ನಡುವೆ ಬಿಜೆಪಿಗೆ ಕೌಂಟರ್‌ ನೀಡಲು ಕಮಲ ಅಭ್ಯರ್ಥಿಗಳ ಪಟ್ಟಿ ಸೋರಿಕೆ ಮಾಡುವ ಮೂಲಕ ಕಾಂಗ್ರೆಸ್ ವಿಭಿನ್ನ ಅಭಿಯಾನವನ್ನು ನಡೆಸುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮಾಡುತ್ತಿರುವ ಈ ಗಂಭೀರ ಆರೋಪಗಳಿಗೆ ಸೂಕ್ತ ಪ್ರತ್ಯುತ್ತರ ಕೊಡಲಾಗದೇ ಬಿಜೆಪಿ ಪರಿತಪಿಸುತ್ತಿದೆ. ಆದರೆ ಕಾಂಗ್ರೆಸ್‌ ನಾಯಕರು ರೌಡಿ ಶೀಟರ್‌ಗಳೊಂದಿಗೆ ಹೊಂದಿದ್ದಾರೆ ಎನ್ನಲಾದ ಸಂಬಂಧದ ಕುರಿತು ಬಿಜೆಪಿ ಇದೀಗ ಪ್ರಶ್ನೆ ಕೇಳಲಾರಂಭಿಸಿದೆ.

ಕಾಂಗ್ರೆಸ್‌ ನಾಯಕರೈ ಹಲವು ರೌಡಿ ಶೀಟರ್‌ಗಳೊಂದಿಗೆ ಸಂಬಂಧ ಹೊಂದಿದ್ದು, ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ನಮ್ಮ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಸುಳ್ಳು ಎಂದೂ ಬಿಜೆಪಿ ಪ್ರತಿಪಾದಿಸಿದೆ.

ವಿಲ್ಸನ್ ಗಾರ್ಡನ್‌ ನಾಗ ಆಲಿಯಾಸ್ ರೌಡಿ ನಾಗ ಎಂಬ ರೌಡಿ ಶೀಟರ್‌ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಫೋಟೋವೊಂದನ್ನು ಬಿಡುಗಡೆ ಮಾಡಿರುವ ಬಿಜೆಪಿ, ಕಾಂಗ್ರೆಸ್‌ ನಾಯಕರು ಮತ್ತು ರೌಡಿ ಶೀಟರ್‌ಗಳೊಂದಿಗಿನ ಸಂಬಂಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದೆ.

ಆದರೆ ಈ ಆರೋಪವನ್ನು ಅಲ್ಲಗಳೆದಿರುವ ರಾಮಲಿಂಗಾ ರೆಡ್ಡಿ, ಈ ಫೋಟೋವನ್ನು ಬಿಜೆಪಿ ಎಡಿಟ್‌ ಮಾಡಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ನನಗೆ ರೌಡಿ ನಾಗ ಎಂಬ ವ್ಯಕ್ತೊಯ ಪರಿಚಯವಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ರೌಡಿ ರಾಜಕೀಯ ಜೋರಾಗಿದ್ದು, ರೌಡಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು, ಉಭಯ ಪಕ್ಷಗಳ ನಾಯಕರು ಪರಸ್ಪರರ ಮೇಲೆ ಆರೋಪ ಮಾಡುತ್ತಿದ್ದಾರೆ.

IPL_Entry_Point