ಕನ್ನಡ ಸುದ್ದಿ  /  Lifestyle  /  Abnormal Mental Development: Warning Signs Of Abnormal Mental Development In Children

abnormal mental development: ಮಕ್ಕಳ ಅಸಹಜ ಮಾನಸಿಕ ಬೆಳವಣಿಗೆಯ ಸಂಕೇತಗಳಿವು: ಆರಂಭಿಕ ಹಂತದಲ್ಲೇ ಎಚ್ಚರ ವಹಿಸಿ

Abnormal mental development: ಪುಟ್ಟ ಕಂದಮ್ಮಗಳು, ಮಕ್ಕಳು ಹಾಗೂ ಹದಿಹರೆಯದವರಲ್ಲಿ ಕೆಲವು ಅಸಹಜ ನಡವಳಿಕೆಗಳಿರುತ್ತವೆ. ಆದರೆ ಕೆಲವೊಮ್ಮೆ ಈ ಅಸಹಜ ನಡವಳಿಕೆಗಳು ಅಸಹಜ ಮಾನಸಿಕ ಬೆಳವಣಿಗೆಗಳನ್ನು ಸೂಚಿಸುವ ಎಚ್ಚರಿಕೆಯ ಸಂಜ್ಞೆಯೂ ಆಗಿರಬಹುದು ಎಚ್ಚರವಿರಲಿ.

ಅಸಹಜ ಮಾನಸಿಕ ಬೆಳವಣಿಗೆ
ಅಸಹಜ ಮಾನಸಿಕ ಬೆಳವಣಿಗೆ

ಮಕ್ಕಳಲ್ಲಿ ಅಸಹಜ ವರ್ತನೆಗಳಿರುವುದು ಸಾಮಾನ್ಯ, ಕೆಲವೊಮ್ಮೆ ಇದು ಮಕ್ಕಳಾಟಿಕೆಯ ಭಾಗವೂ ಆಗಿರಬಹುದು. ವಯಸ್ಸಿಗೆ ಅನುಗುಣವಾಗಿ ವರ್ತನೆಗಳು ಬದಲಾಗಬಹುದು. ಆದರೆ ಈ ಅಸಹಜ ವರ್ತನೆಗಳು ಮುಂದುವರಿದರೆ ಅದರ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.

ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಅಸಹಜ ಮಾನಸಿಕ ಬೆಳವಣಿಗೆಗಳು ಬೇರೆ ಬೇರೆ ಹಂತಕ್ಕೆ ತಿರುಗುತ್ತವೆ. ಇದು ವ್ಯಕ್ತಿ ಅನುಭವಿಸುತ್ತಿರುವ ನಿರ್ದಿಷ್ಟ ಸ್ಥಿತಿಯ ಮೇಲೆ ಅವಲಂಬಿಸಿದೆ. ಮಾತ್ರವಲ್ಲ ಇದನ್ನು ಅವರು ಬೇರೆ ಬೇರೆ ರೀತಿಯಲ್ಲಿ ಪ್ರಕಟಿಸಬಹುದು.

ದಿ ಏಬಲ್‌ ಮೈಂಡ್‌ನ ಸಂಸ್ಥಾಪಕಿ, ಮನೋಶಾಸ್ತ್ರಜ್ಞೆ ರೋಹಿಣಿ ರಾಜೀವ್‌ ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ʼಮಕ್ಕಳ ಮಾನಸಿಕ ಬೆಳವಣಿಗೆಯ ಮೈಲುಗಳನ್ನು ಪೋಷಕರು ಒಪ್ಪಿಕೊಳ್ಳುವುದು ಹಾಗೂ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಬೆಳವಣಿಗೆಯ ಹಂತಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಸಣ್ಣ ಪುಟ್ಟ ಅಸಹಜ ನಡವಳಿಕೆಗಳು ಎಚ್ಚರಿಕೆಗೆ ಕಾರಣವಾಗದೇ ಇರಬಹುದು. ಆದರೆ ಆಗಾಗ್ಗೆ, ಹಲವು ಬಾರಿ ಗಮನಾರ್ಹ ಬದಲಾವಣೆಗಳು ಕಾಣಿಸಿಕೊಂಡ ಮೇಲೂ ತಡ ಮಾಡಿದರೆ ಖಂಡಿತ ಅಪಾಯವನ್ನು ಎದುರಿಸಬೇಕಾಗಬಹುದು. ತಮ್ಮ ಮಗುವಿನಲ್ಲಿ ಈ ರೀತಿಯ ಅಸಹಜ ವರ್ತನೆಯನ್ನು ಗಮನಿಸುವುದು ಷೋಷಕರ ಅಸಮಾಧಾನ ಹಾಗೂ ಸವಾಲಿಗೂ ಕಾರಣವಾಗಬಹುದುʼ ಎನ್ನುತ್ತಾರೆ.

ಅವರ ಪ್ರಕಾರ ಈ ಕೆಳಗಿನ ಕೆಲವು ಸಂಕೇತಗಳನ್ನು ಗುರುತಿಸುವುದು ಅವಶ್ಯವಾಗುತ್ತದೆ. ಇದರಿಂದ ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಗುರುತಿಸಿದರೆ ಪರಿಹಾರ ಕಂಡುಕೊಳ್ಳಬಹುದು. ವಿಶೇಷವಾಗಿ ನರಗಳ ಬೆಳವಣಿಗೆಯ ವಿಳಂಬದ ಸಂದರ್ಭದಲ್ಲಿ ಮಗುವಿಗೆ ಬೆಂಬಲ ನೀಡಬಹುದು ಹಾಗೂ ಅದಕ್ಕೆ ಸೂಕ್ತ ಮಾರ್ಗದರ್ಶನ ಸಿಗುವಂತೆ ಮಾಡಬಹುದು.

ಚಿಕ್ಕ ಮಕ್ಕಳಲ್ಲಿ

* ಇದ್ದಕ್ಕಿದ್ದಂತೆ ಹಾಗೂ ನಿರಂತರ ವರ್ತನೆಯಲ್ಲಿ ಬದಲಾವಣೆ

* ನೀವು ಕರೆದಾಗ ಪ್ರತಿಕ್ರಿಯೆ ನೀಡದೇ ಇರುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡಲು ಹಿಂಜರಿಯುವುದು

* ಮುಖ ಭಾವದ ಕೊರತೆ ಹಾಗೂ ನಕಾರಾತ್ಮಕ ಸಂಕೋಚದ ಭಾವವನ್ನು ವ್ಯಕ್ತಪಡಿಸುವುದು.

* ಸಾಮಾಜಿಕ ಸಂವಹನದ ಕೊರತೆ: ಮಗು ಹೊರಗಿನ ಜನರೊಂದಿಗೆ ಸಾಮಾಜಿಕ ಸಂವಹನದಲ್ಲಿ ಆಸಕ್ತಿ ತೋರದೇ ಇರುವುದು, ನಗದೇ ಇರುವುದು, ಬೇರೆಯವರು ಮಾತನಾಡಿಸಲು ಪ್ರಯತ್ನಿಸಿದರೂ ಮಾತನಾಡದೇ ಇರುವುದು.

ಹದಿಹರೆಯದವರಲ್ಲಿ

ಹದಿಹರೆಯದ ಮಕ್ಕಳಲ್ಲೂ ಈ ರೀತಿಯ ಅಸಹಜ ಮಾನಸಿಕ ಬೆಳವಣಿಗೆಯ ಈ ಎಚ್ಚರಿಕೆಯ ಸಂಕೇತಗಳನ್ನು ಗುರುತಿಸಬಹುದು. ಈ ಬಗ್ಗೆ ಪುಣೆಯ ಲುಲ್ಲಾನಗರದಲ್ಲಿರುವ ಮದರ್‌ಹುಡ್ ಆಸ್ಪತ್ರೆಯ ಸಲಹೆಗಾರ ಶಿಶುವೈದ್ಯೆ ಡಾ. ವೃಶಾಲಿ ಬಿಚ್ಕರ್ ಹೇಳುವುದು ಹೀಗೆ:

ಭಾವನೆಗಳಿಲ್ಲದಂತೆ ಇರುವುದು: ನಿಮ್ಮ ಮಗು ಕಾರಣವಿಲ್ಲದೆ ದುಃಖದಲ್ಲಿದ್ದರೆ, ಯಾವಾಗಲೂ ಡಲ್‌ ಆಗಿದ್ದರೆ ಅದು ಖಿನ್ನತೆ ಅಥವಾ ಬೇರೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿರಬಹುದು.

ಗೊಂದಲಮಯ ಚಿಂತನೆ ಅಥವಾ ಏಕಾಗ್ರತೆ ಕೊರತೆ: ನಿಮ್ಮ ಮಗ ಅಥವಾ ಮಗಳ ಮನಸ್ಸು ಯಾವಾಗಲೂ ಗೊಂದಲ ಅಥವಾ ಚಿಂತೆಯಿಂದ ಕೂಡಿದ್ದರೆ, ಅವರು ಏಕಾಗ್ರತೆಯ ಕೊರತೆಯನ್ನು ಅನುಭವಿಸುತ್ತಿದ್ದರೆ ಇವರಲ್ಲಿ ಮಾನಸಿಕ ಸಮಸ್ಯೆ ಇದೆ ಎಂದು ಅರ್ಥ.

ಚಿಂತೆ ಅಥವಾ ತಪ್ಪಿತಸ್ಥ ಭಾವನೆ: ನಿಮ್ಮ ಮಗು ಯಾವಾಗಲೂ ಚಿಂತೆ ಮಾಡುತ್ತಿದ್ದರೆ, ಪ್ರತಿ ಬಾರಿಯೂ ಅವರಲ್ಲಿ ತಪ್ಪಿತಸ್ಥ ಭಾವನೆ ಕಾಡುತ್ತಿದ್ದರೆ ನೀವು ಅವರ ಮಾನಸಿಕ ಯೋಗಕ್ಷೇಮದ ಮೇಲೆ ಕಾಳಜಿ ವಹಿಸಬೇಕು.

ಪದೇ ಪದೇ ಮನಸ್ಸು ಬದಲಿಸುವುದು: ನಿಮ್ಮ ಮಗ ಅಥವಾ ಮಗಳು ಕ್ಷಣಕ್ಕೊಮ್ಮೆ, ಘಳಿಗೆಗೊಮ್ಮೆ ತಮ್ಮ ನಿರ್ಧಾರಗಳನ್ನು ಬದಲಿಸುತ್ತಿದ್ದರೆ ಅವರಲ್ಲಿ ಮಾನಸಿಕ ಸಮಸ್ಯೆ ಇದೆ ಎಂದು ಅರ್ಥ. ಒಮ್ಮೆ ಕೋಪ, ಇದ್ದಕ್ಕಿದಂತೆ ಖುಷಿ ಇದು ಕೂಡ ಮಾನಸಿಕ ತೊಂದರೆಯ ಲಕ್ಷಣವಿರಬಹುದು.

ಒತ್ತಡವನ್ನು ಎದುರಿಸಲು ಹೆಣಗಾಡುವುದು: ಪರೀಕ್ಷೆ ಅಥವಾ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಕೂಡ ಮಾನಸಿಕ ಸಮಸ್ಯೆಯನ್ನು ಸೂಚಿಸಬಹುದು.

ಆತ್ಮಹತ್ಯೆಯ ಯೋಚನೆ: ಕೆಲವು ಮಕ್ಕಳಲ್ಲಿ ಪದೇ ಪದೇ ಆತ್ಮಹತ್ಯೆಯ ಯೋಚನೆ, ಆತ್ಮಹತ್ಯೆಯ ಬಗ್ಗೆ ಮಾತು ಇಂತಹ ಅಪಾಯಕಾರಿ ವರ್ತನೆಗಳು ಕಾಣಿಸಬಹುದು. ಇದನ್ನು ತಕ್ಷಣ ಗುರುತಿಸುವುದು ಮುಖ್ಯವಾಗುತ್ತದೆ.

ವಿಭಾಗ