ಕನ್ನಡ ಸುದ್ದಿ  /  Lifestyle  /  Relationship: How To Re-build Trust In Relationship After A Betrayal

Relationship: ನಂಬಿಕೆ ದ್ರೋಹ: ಅಪನಂಬಿಕೆ ಹುಟ್ಟಿದ ಸಂಬಂಧದಲ್ಲಿ ಪುನಃ ಪ್ರೀತಿ ಅರಳಿಸುವುದು ಹೇಗೆ; ಇಲ್ಲಿದೆ ಕೆಲವು ಸಲಹೆ

Relationship: ನಾವು ಅತಿಯಾಗಿ ಪ್ರೀತಿಸುವವರು ನಮಗೆ ಮೋಸ ಮಾಡಿದಾಗ ಆಗುವ ನೋವನ್ನು ಬಹುಶಃ ಪದಗಳಲ್ಲಿ ವಿವರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಪ್ರೀತಿಪಾತ್ರರು ನೀವು ಮಾಡಿದ ಮೋಸವನ್ನು ಮರೆತು ಪುನಃ ನಿಮ್ಮೊಂದಿಗೆ ಒಂದಾಗಬೇಕು ಎಂದರೆ ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ.

ಸಂಬಂಧ
ಸಂಬಂಧ

ಸಂಗಾತಿ, ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಹೀಗೆ.. ನಮ್ಮ ಮನಸ್ಸಿಗೆ ಆಪ್ತರಾದವರು ಒಮ್ಮೆ ನಮಗೆ ಮೋಸ ಅಥವಾ ನಂಬಿಕೆ ದ್ರೋಹ ಎಸಗಿದರೆ ಪುನಃ ಅವರನ್ನು ನಂಬುವುದು ನಿಜಕ್ಕೂ ಕಷ್ಟವಾಗುತ್ತದೆ. ಹಾಗಂತ ನಾವು ಅತಿಯಾಗಿ ಪ್ರೀತಿಸುವವರನ್ನು ದೂರ ಮಾಡಿಕೊಳ್ಳಲೂ ಆಗುವುದಿಲ್ಲ. ಕೆಲವೊಮ್ಮೆ ನಿಮ್ಮ ಸಂಗಾತಿ ಅಥವಾ ಆಪ್ತರು ಮನಸಾರೆ ಕ್ಷಮೆ ಕೇಳಿ ತಪ್ಪು ಒಪ್ಪಿಕೊಂಡರೆ ಕ್ಷಮಿಸದೇ ಇರಲು ಸಾಧ್ಯವಿಲ್ಲ.

ನೀವು ನಿಮ್ಮ ಸಂಗಾತಿ ಅಥವಾ ಆಪ್ತರಿಗೆ ತಿಳಿದೋ, ತಿಳಿಯದೆಯೋ ಮೋಸ ಮಾಡಿದ್ದು, ಪುನಃ ಅವರೊಂದಿಗೆ ಸಂಬಂಧ ಬೆಳೆಸುವ ಯೋಚನೆ ನಿಮ್ಮಲ್ಲಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸಿ. ಇವು ಸಂಬಂಧ ಸಂಕೋಲೆಗಳನ್ನು ಗಟ್ಟಿಗೊಳಿಸಲು ಖಂಡಿತ ನಿಮಗೆ ಸಹಾಯ ಮಾಡಬಹುದು. ಆದರೆ ಇದಕ್ಕೆ ಕೊಂಚ ಸಮಯ ಬೇಕು ಎನ್ನುವುದಷ್ಟೇ ಸತ್ಯ.

ದ್ರೋಹವನ್ನು ಒಪ್ಪಿಕೊಳ್ಳಿ

ಸಂಬಂಧದಲ್ಲಿ ದ್ರೋಹ ಮಾಡಿದ ವ್ಯಕ್ತಿಯು ತನ್ನ ಮೇಲೆ ವಿಶ್ವಾಸ ಮರುನಿರ್ಮಾಣ ಮಾಡಿಕೊಳ್ಳಲು ತಾನೇ ಮೊದಲ ಹೆಜ್ಜೆ ಇರಿಸಬೇಕು. ಮಾಡಿದ ದ್ರೋಹವನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಎದುರಿನ ಅಂದರೆ ನಿಮ್ಮ ಸಂಗಾತಿಯಿಂದ ನೀವು ತಿರಸ್ಕಾರಕ್ಕೆ ಒಳಗಾದರೂ ಕೂಡ ಯಾವುದೇ ಮನ್ನಿಸುವಿಕೆಯನ್ನು ನಿರೀಕ್ಷಿಸದೆ, ಯಾರನ್ನೂ ದೂಷಿಸದೆ, ನಂಬಿಕೆಯನ್ನು ಪುನಃ ಗಳಿಸಬೇಕು ಎಂದರೆ ತಮ್ಮ ತಪ್ಪಿನ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಬೇಕು.

ಪಶ್ಚಾತ್ತಾಪ ಮತ್ತು ಸಹಾನುಭೂತಿಯ ಭಾವವಿರಲಿ

ಪ್ರಾಮಾಣಿಕ ಕ್ಷಮೆಯಾಚನೆಯು ದ್ರೋಹದಿಂದ ಉಂಟಾದ ನೋವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಆದರೆ ನಿಮ್ಮ ಕ್ಷಮೆಯಲ್ಲಿ ನಿಜವಾದ ಪಶ್ಚಾತ್ತಾಪವಿರಬೇಕು. ಅಲ್ಲದೆ ನೀವು ಮಾಡಿದ ಮೋಸದಿಂದ ಆದ ನೋವನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ನಿಮ್ಮದಾಗಬೇಕು. ನಿಮ್ಮ ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ. ಅವರ ಮೇಲೆ ಸಹಾನುಭೂತಿ ತೋರಿ. ಇದೆಲ್ಲದರ ಜೊತೆಗೆ ಹಿಂದೆ ಆದ ತಪ್ಪು ಇನ್ನೆಂದೂ ಆಗುವುದಿಲ್ಲ ಎಂದು ಭರವಸೆ ಮೂಡಿಸುವುದು ಬಹಳ ಮುಖ್ಯವಾಗುತ್ತದೆ.

ಹಾನಿಯನ್ನು ಸರಿಪಡಿಸಿ

ನೀವು ಮಾಡಿದ ದ್ರೋಹದ ಸ್ವರೂಪವನ್ನು ಅವಲಂಬಿಸಿ, ತಿದ್ದುಪಡಿ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಹಾನಿಯನ್ನು ಸರಿಪಡಿಸಲು ನೋಡಿ. ದಾಂಪತ್ಯ ಜೀವನದ ವಿಷಯಕ್ಕೆ ಬರುವುದಾದರೆ ನೀವು ಮೂರನೇ ವ್ಯಕ್ತಿಯೊಂದಿಗೆ ಸಂಬಂಧ ಇರಿಸಿಕೊಂಡಿದ್ದರೆ, ತಕ್ಷಣಕ್ಕೆ ಆ ವ್ಯಕ್ತಿಯಿಂದ ದೂರ ಸರಿಯಿರಿ. ನಂಬಿಕೆ ದ್ರೋಹದಿಂದ ಉಂಟಾದ ಸಂಬಂಧವನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ.

ಪಾರದರ್ಶಕ ಮತ್ತು ಮುಕ್ತವಾಗಿರಿ

ನಂಬಿಕೆಯನ್ನು ಪುನಃ ನಿರ್ಮಿಸಲು ನಿಮ್ಮ ಆಲೋಚನೆಗಳು, ಭಾವನೆಗಳು ಮತ್ತು ಕಾರ್ಯಗಳ ಬಗ್ಗೆ ನಿರಂತರ ಪಾರದರ್ಶಕತೆ ಹಾಗೂ ಮುಕ್ತವಾಗಿರುವುದು ಬಹಳ ಮುಖ್ಯ ಎನ್ನಿಸುತ್ತದೆ. ಅಂದರೆ ನಿಮ್ಮ ಜೀವನದ ಎಲ್ಲಾ ವಿಷಯಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುವುದು, ಕೆಲವೊಂದು ಮಾಹಿತಿಗಳನ್ನು ಸ್ವ ಇಚ್ಛೆಯಿಂದ ನೀಡುವುದು, ಪ್ರಾಮಾಣಿಕರಾಗಿರುವುದು ಮುಖ್ಯವಾಗುತ್ತದೆ. ಇದು ಮುಕ್ತ ಸಂವಹನಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲದೆ ನಿಮ್ಮ ಸಂಗಾತಿಗೆ ಪುನಃ ನಿಮ್ಮ ಮೇಲೆ ನಂಬಿಕೆ ಇಡಬಹುದು ಎಂಬ ಭರವಸೆ ಮೂಡಿಸುತ್ತದೆ.

ಸ್ಥಿರತೆ ಇರಲಿ

ನಿಮ್ಮ ಭಾವನೆಗಳಲ್ಲಿ ಸ್ಥಿರತೆ ಇರಲಿ. ಇದು ಕಾಲಾನಂತರದಲ್ಲಿ ಸಂಬಂಧದಲ್ಲಿ ನಂಬಿಕೆ ಹುಟ್ಟಲು ಕಾರಣವಾಗುತ್ತದೆ. ಭರವಸೆ ಇರಿಸಿಕೊಳ್ಳುವುದು, ಸಮಯಪಾಲನೆ ಮತ್ತು ಬದ್ಧತೆಗಳಿಗೆ ಅಂಟಿಕೊಳ್ಳುವುದು ಮುಖ್ಯವಾಗುತ್ತದೆ. ನಂಬಿಕೆ ಮುರಿದ ಸಂಬಂಧದಲ್ಲಿ ನೀವು ಸಂಗಾತಿಯ ಮೇಲೆ ಅವಲಂಬಿತರಾಗಿದ್ದೀರಿ ಹಾಗೂ ಸಂಬಂಧವನ್ನು ಪೋಷಿಸಲು ಬದ್ಧರಾಗಿದ್ದೀರಿ ಎಂಬುದನ್ನು ಸಾಬೀತುಪಡಿಸುವಲ್ಲಿ ಅನುಸರಣೆ ಇನ್ನಷ್ಟು ನಿರ್ಣಾಯಕವಾಗುತ್ತದೆ.

ತಾಳ್ಮೆಯಿಂದಿರಿ

ಒಮ್ಮೆ ಮನಸ್ಸಿನಿಂದ ಅಳಿಸಿ ಹಾಕಿದ ನಂಬಿಕೆಯನ್ನು ಪುನಃ ನಿರ್ಮಿಸುವುದು ಸುಲಭವಲ್ಲ, ಜೊತೆಗೆ ಇದು ಒಂದು ದಿನದ ಕೆಲಸವಲ್ಲ. ನೀವು ದ್ರೋಹ ಮಾಡಿದ ವ್ಯಕ್ತಿಯ ಜೊತೆ ತಾಳ್ಮೆಯಿಂದ ಇರುವುದು ಬಹಳ ಅವಶ್ಯ. ನಂಬಿಕೆಯನ್ನು ಸಂಪೂರ್ಣವಾಗಿ ಮರುಸ್ಥಾಪಿಸುವ ಮೊದಲು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿರಂತರವಾಗಿ ನಿಮ್ಮ ವಿಶ್ವಾರ್ಹತೆಯನ್ನು ಸಾಬೀತು ಪಡಿಸುವುದು ಮುಖ್ಯವಾಗುತ್ತದೆ. ಅವರಿಗೆ ಭಾವನಾತ್ಮಕ ಬೆಂಬಲ ಸೂಚಿಸುವುದರಿಂದ ಅವರು ನಿಮ್ಮ ಮೇಲೆ ನಂಬಿಕೆ ಮೂಡಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಚೇತರಿಸಿಕೊಳ್ಳಲು ಅವರಿಗೆ ಸ್ಥಳ ಮತ್ತು ಸಮಯವನ್ನು ನೀಡಲು ಮರೆಯದಿರಿ.

ವಿಭಾಗ