ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆಮನೆಯಲ್ಲಿದೆ ಚರ್ಮ, ಕೂದಲಿನ ಅಂದ; ಬೇಸಿಗೆಯಲ್ಲಿ ಅಂದ ಹೆಚ್ಚಿಸುವ ಮನೆಮದ್ದುಗಳಿವು

ಅಡುಗೆಮನೆಯಲ್ಲಿದೆ ಚರ್ಮ, ಕೂದಲಿನ ಅಂದ; ಬೇಸಿಗೆಯಲ್ಲಿ ಅಂದ ಹೆಚ್ಚಿಸುವ ಮನೆಮದ್ದುಗಳಿವು

ಬೇಸಿಗೆಯಲ್ಲಿ ಚರ್ಮ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲು. ಆದರೆ ಅಡುಗೆಮನೆಯಲ್ಲೇ ಇರುವ ಕೆಲವು ವಸ್ತುಗಳು ಇವುಗಳ ಅಂದ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಇದನ್ನು ನೀವೂ ಪ್ರಯತ್ನಿಸಿ ನೋಡಿ.

ಸೌಂದರ್ಯ
ಸೌಂದರ್ಯ

ಸೌಂದರ್ಯಪ್ರಜ್ಞೆ ಇರುವವರು ತಮ್ಮ ಒತ್ತಡ ಬದುಕಿನ ನಡುವೆಯೂ ಸೌಂದರ್ಯದ ಕಾಳಜಿ ಮಾಡುವುದನ್ನು ಮರೆಯುವುದಿಲ್ಲ. ಆದರೆ ಸೌಂದರ್ಯವರ್ಧಕಗಳು ಹಾಗೂ ಚರ್ಮದ ಆರೋಗ್ಯ ಕಾಪಾಡುವ ಉತ್ಪನ್ನಗಳ ಬೆಲೆ ತುಂಬಾನೇ ದುಬಾರಿ, ಇದರೊಂದಿಗೆ ಈ ಉತ್ಪನ್ನಗಳಲ್ಲಿನ ರಾಸಾಯನಿಕ ಅಂಶಗಳು ತ್ವಚೆಗೆ ಹಾನಿ ಉಂಟು ಮಾಡುವ ಸಾಧ್ಯತೆಯೂ ಹೆಚ್ಚು. ಆ ಕಾರಣಕ್ಕೆ ಹಲವರು ಇತ್ತೀಚೆಗೆ ನೈಸರ್ಗಿಕ ಸೌಂದರ್ಯವರ್ದಕಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಮನೆಮದ್ದುಗಳನ್ನೂ ಬಳಸಲು ಆರಂಭಿಸಿದ್ದಾರೆ. ಮನೆಯಲ್ಲಿ ನಾವೇ ತಯಾರಿಸಿ ಬಳಸುವ ಸೌಂದರ್ಯವರ್ಧಕ ಉತ್ಪನ್ನಗಳು ಖರ್ಚನ್ನು ಕಡಿಮೆ ಮಾಡುವುದು ಮಾತ್ರವಲ್ಲ, ನಮ್ಮ ಚರ್ಮ ಹಾಗೂ ಕೂದಲಿಗೆ ಹೊಂದುವುದನ್ನು ನಾವೇ ಅರಿತುಕೊಳ್ಳಬಹುದು. ಈ ಬೇಸಿಗೆಯಲ್ಲಿ ಅಡುಗೆಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಸೌಂದರ್ಯವರ್ಧಕಗಳನ್ನು ತಯಾರಿಸಿಕೊಳ್ಳಬಹುದು. ಮನೆಯಲ್ಲಿ ಸಿಗುವ ವಸ್ತುಗಳಿಂದ ಸರಳವಾಗಿ, ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಕೆಲವು ಬ್ಯೂಟಿ ಉತ್ಪನ್ನಗಳು ಹಾಗೂ ಕೂದಲು, ಚರ್ಮಕ್ಕೆ ಅದರಿಂದಾಗುವ ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ.

ಟ್ರೆಂಡಿಂಗ್​ ಸುದ್ದಿ

ಜೇನುತುಪ್ಪದ ಮಾಸ್ಕ್‌

ಜೇನುತುಪ್ಪವನ್ನು ನಿಂಬೆರಸದೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ, ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಬೇಕು. ಇದು ತ್ವಚೆಯ ಕಾಂತಿ ಹೆಚ್ಚಿಸುತ್ತದೆ ಮಾತ್ರವಲ್ಲ, ಏಕ್ಸ್‌ಫೋಲಿಯೇಟ್‌ ಮಾಡಿಕೊಂಡ ಹಾಗೆಯೂ ಇರುತ್ತದೆ.

ಕಾಫಿ ಸ್ಕ್ರಬ್‌

ಕಾಫಿ ಪುಡಿ, ತೆಂಗಿನೆಣ್ಣೆ ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಇದು ನೈಸರ್ಗಿಕ ಎಕ್ಸಫೋಲಿಯೇಷನ್‌ ವಿಧಾನ ಕೂಡ ಹೌದು. ಇದು ಚರ್ಮವನ್ನು ಪುನಶ್ಚೇತನಗೊಳಿಸುವುದು ಮಾತ್ರವಲ್ಲ, ಚರ್ಮವನ್ನು ಮೃದುವಾಗಿಸುತ್ತದೆ. ಚರ್ಮದ ಟ್ಯಾನ್‌ ಅನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

ಅವಕಾಡೊ ಹೇರ್‌ ಮಾಸ್ಕ್‌

ಕೂದಲಿಗೆ ಕಾಳಜಿಗೆ ನಾವು ಹಲವು ವಿಧಾನಗಳನ್ನು ಅನುಸರಿಸುತ್ತೇವೆ. ತೆಂಗಿನೆಣ್ಣೆಯ ಬಳಕೆ ಕೂದಲಿಗೆ ಬಹಳ ಉತ್ತಮ. ಕೂದಲ ಆರೈಕೆಗೆ ಅವಕಾಡೊ ಅಥವಾ ಬೆಣ್ಣೆ ಹಣ್ಣಿನ ತಿರುಳನ್ನು ಬಳಸಬಹುದು. ಬೆಣ್ಣೆಹಣ್ಣಿನ ತಿರುಳನ್ನು ಸ್ಮ್ಯಾಷ್‌ ಮಾಡಿ, ಅದಕ್ಕೆ ಒಂದು ಚಮಚ ಆಲಿವ್‌ ಎಣ್ಣೆ ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಒಂದು ಗಂಟೆಯ ಬಳಿಕ ಸ್ನಾನ ಮಾಡಿ. ಇದರಿಂದ ಕೂದಲು ನಯವಾಗುವ ಜೊತೆಗೆ ಕೂದಲಿನ ಹೊಳಪು ಹೆಚ್ಚುತ್ತದೆ.

ಗ್ರೀನ್‌ ಟೀ ಟೋನರ್‌

ಗ್ರೀನ್‌ ಕೇವಲ ತೂಕ ಇಳಿಸುವುದು ಮಾತ್ರವಲ್ಲ, ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಗ್ರೀನ್‌ ಟೀ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ನಂತರ ಇದನ್ನು ತಣ್ಣಗಾಗಲು ಬಿಡಿ. ಇದನ್ನು ಮುಖ, ಕುತ್ತಿಗೆಯ ಭಾಗಕ್ಕೆ ಹತ್ತಿಯ ಉಂಡೆಯ ಸಹಾಯದಿಂದ ಹಚ್ಚಿ. ಗ್ರೀನ್‌ ಟೀಯನ್ನು ಟೋನರ್‌ ರೀತಿ ಬಳಸುವುದರಿಂದ ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುವ ಜೊತೆಗೆ ಹೊಳಪನ್ನೂ ಹೆಚ್ಚಿಸುತ್ತದೆ.

ಮೊಸರಿನ ಮಾಸ್ಕ್‌

ಮೊಸರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುವ ಜೊತೆಗೆ ತೇವಾಂಶ ನೀಡುತ್ತದೆ. ಒಣ ಚರ್ಮದ ಸಮಸ್ಯೆಗೆ ಇದು ಉತ್ತಮ ಮದ್ದು.

ಆಪಲ್‌ ಸೀಡರ್‌ ವಿಗೆನರ್‌

ನೀರಿನಲ್ಲಿ ಆಪಲ್‌ ಸೀಡರ್‌ ವಿನೆಗರ್‌ ಸೇರಿಸಿ, ಆ ನೀರನ್ನು ಕೂದಲಿಗೆ ಹಚ್ಚಿ ಒಣಗಲು ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಶಾಂಪೂ ಬಳಸದೆ ತೊಳೆದುಕೊಳ್ಳಿ. ಇದು ಕೂದಲಿಗೆ ಹೊಳಪು ಮರಳಿಸುವ ಜೊತೆಗೆ ಕೂದಲನ್ನು ಸದೃಢಗೊಳಿಸುತ್ತದೆ.

ಸನ್‌ಬರ್ನ್‌ಗೆ ಲೋಳೆಸರದ ಜೆಲ್‌

ಬೇಸಿಗೆಯಲ್ಲಿ ಸನ್‌ಬರ್ನ್‌ ಸಮಸ್ಯೆ ಹೆಚ್ಚು. ಇದರ ಪರಿಹಾರಕ್ಕೆ ಸನ್‌ಬರ್ನ್‌ ಆದ ಜಾಗಕ್ಕೆ ಅಲೊವೆರಾ ಜೆಲ್‌ ಅನ್ನು ಹಚ್ಚಬೇಕು. ಇದರಿಂದ ಚರ್ಮ ತಂಪಾಗುವುದು ಮಾತ್ರವಲ್ಲ, ಸನ್‌ಬರ್ನ್‌ ಜಾಗದಲ್ಲಿ ಕಾಂತಿ ಮರಳಲು ಸಾಧ್ಯವಾಗುತ್ತದೆ.

ತೆಂಗಿನೆಣ್ಣೆ ಹೇರ್‌ ಮಾಸ್ಕ್‌

ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಯಾವುದೇ ಇರಲಿ ಕೂದಲಿಗೆ ತೆಂಗಿನೆಣ್ಣೆಯ ಬಳಕೆ ಉತ್ತಮ. ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಉಗುರು ಬೆಚ್ಚಗಿನ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಬೇಕು. ಇದು ಕೂದಲಿಗೆ ಡೀಪ್‌ ಕಂಡಿಷನಿಂಗ್‌ ಮಾಡುತ್ತದೆ. ಇದು ಕೂದಲನ್ನು ಬುಡದಿಂದಲೇ ಸದೃಡಗೊಳಿಸುವ ಜೊತೆಗೆ ಕೂದಲು ಉದುರುವುದನ್ನೂ ತಡೆಯುತ್ತದೆ.

ಸಕ್ಕರೆಯ ಲಿಪ್‌ ಸ್ಕ್ರಬ್‌

ಸಕ್ಕರೆಯನ್ನು ಸ್ವಲ್ಪ ತೆಂಗಿನೆಣ್ಣೆ ಹಾಗೂ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ತುಟಿಗಳ ಮೇಲೆ ಚೆನ್ನಾಗಿ ಉಜ್ಜಿ. ಇದು ತುಟಿಯನ್ನು ಎಕ್ಸಫೋಲಿಯೇಟ್‌ ಮಾಡುತ್ತದೆ, ಅಲ್ಲದೆ ತುಟಿಯ ರಂಗು ಹೆಚ್ಚುವಂತೆ ಮಾಡುತ್ತದೆ. ಅಲ್ಲದೆ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ.

ವಿಭಾಗ