Skin Health: ಬೆವರಿನ ಸಮಸ್ಯೆಯೇ; ಬೆವರು ಕೆಟ್ಟದ್ದಲ್ಲ; ಬೆವರುವಿಕೆಯಿಂದ ಚರ್ಮದ ಸೌಂದರ್ಯ ಹೆಚ್ಚುತ್ತೆ ಅಂದ್ರೆ ನಂಬಲೇಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  Skin Health: ಬೆವರಿನ ಸಮಸ್ಯೆಯೇ; ಬೆವರು ಕೆಟ್ಟದ್ದಲ್ಲ; ಬೆವರುವಿಕೆಯಿಂದ ಚರ್ಮದ ಸೌಂದರ್ಯ ಹೆಚ್ಚುತ್ತೆ ಅಂದ್ರೆ ನಂಬಲೇಬೇಕು

Skin Health: ಬೆವರಿನ ಸಮಸ್ಯೆಯೇ; ಬೆವರು ಕೆಟ್ಟದ್ದಲ್ಲ; ಬೆವರುವಿಕೆಯಿಂದ ಚರ್ಮದ ಸೌಂದರ್ಯ ಹೆಚ್ಚುತ್ತೆ ಅಂದ್ರೆ ನಂಬಲೇಬೇಕು

Sweating Problem: ಬೇಸಿಗೆಯಲ್ಲಿ ಹಲವರನ್ನು ಕಾಡುವ ಸಮಸ್ಯೆ ಬೆವರುವುದು. ಅತಿಯಾದ ಬೆವರು ಕಿರಿಕಿರಿಗೆ ಕಾರಣವಾಗುತ್ತದೆ. ಆದರೆ ಬೆವರುವಿಕೆಯಿಂದ ಸೌಂದರ್ಯ ಹೆಚ್ಚುತ್ತದೆ ಎಂದರೆ ನಂಬಲೇಬೇಕು. ತಜ್ಞರ ಪ್ರಕಾರ ಬೆವರುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಅಲ್ಲದೆ ಚರ್ಮದ ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ತಡೆಯಲು ಇದು ಸಹಕಾರಿ.

ಬೆವರುವುದರಿಂದ ಚರ್ಮದ ಸೌಂದರ್ಯ ಹೆಚ್ಚುತ್ತದೆ
ಬೆವರುವುದರಿಂದ ಚರ್ಮದ ಸೌಂದರ್ಯ ಹೆಚ್ಚುತ್ತದೆ

ಬೇಸಿಗೆಯಲ್ಲಿ ದೇಹ ಬೆವರುವುದು ಸಾಮಾನ್ಯ, ಅದರಲ್ಲೂ ಈ ವರ್ಷ ಅತಿಯಾದ ಬಿಸಿಲು ಹಾಗೂ ತಾಪಮಾನದ ಏರಿಕೆಯ ಕಾರಣದಿಂದ ಬೆವರುವಿಕೆಯು ಹೆಚ್ಚಾಗಿದೆ. ಬೇಸಿಗೆಯಲ್ಲಿನ ಬೆವರು ಹಾಗೂ ಚರ್ಮದ ಬಗ್ಗೆ ಯೋಚಿಸಿದಾಗ ಮೊದಲು ತಲೆಯಲ್ಲಿ ಬರುವುದು ಎಣ್ಣೆ ಚರ್ಮ ಹಾಗೂ ಚರ್ಮವನ್ನು ಕಾಡುವ ಸಮಸ್ಯೆಗಳು.

ಆದರೆ ಬೆವರು ದೇಹದಲ್ಲಿನ ಕಲ್ಮಶ ಹಾಗೂ ನಿರ್ಜೀವ ಚರ್ಮದ ಕೋಶಗಳನ್ನು ಹೊರ ಹಾಕುತ್ತದೆ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಬೆವರುವುದು ಸೌಂದರ್ಯ ವಿರೋಧಿಯಾಗಿರಬಹುದು, ಆದರೆ ಇದು ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ತಡೆಯುತ್ತದೆ.

ಬೆವರು ಸಹಜವಾಗಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಸಾಮಾನ್ಯ ಶಾರೀರಿಕ ಪ್ರತಿಕ್ರಿಯೆಯಾಗಿದೆ. ಬೆವರುವುದರಿಂದ ದೇಹದಲ್ಲಿ ಸಾಮಾನ್ಯ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು. ದೇಹದ ಉಷ್ಣತೆ ಹೆಚ್ಚಾದಾಗ ದೇಹವನ್ನು ತಂಪು ಮಾಡಲು ಬೆವರು ಸಹಾಯ ಮಾಡುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಇದರೊಂದಿಗೆ ಬೆವರುವುದರಿಂದ ಸೌಂದರ್ಯಕ್ಕೂ ಹಲವು ರೀತಿಯ ಪ್ರಯೋಜನಗಳಿವೆ.

ಚರ್ಮಕ್ಕೆ ಹಾನಿ ಮಾಡುವ ಬ್ಯಾಕ್ಟೀರಿಯಾಗಳನ್ನು ಹೊರಹಾಕುತ್ತದೆ

ಮನುಷ್ಯನಲ್ಲಿ ಹಲವು ಬೆವರಿನ ಗ್ರಂಥಿಗಳಿರುತ್ತವೆ. ಎರಡು ಪ್ರಮುಖ ಬೆವರು ಗಂಥ್ರಿಗಳೆಂದರೆ ಎಕ್ರಿನ್‌ ಹಾಗೂ ಅಪೊಕ್ರೈನ್‌. ಇವುಗಳಲ್ಲಿ ಎಕ್ರಿನ್‌ ಗ್ರಂಥಿಯು ಚರ್ಮದ ಆರೋಗ್ಯಕ್ಕೆ ಸಹಕಾರಿ.

ಬೆವರು ಡರ್ಮ್ಸಿಡನ್‌ ಎಂಬ ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಪೆಪ್ಟೈಡ್ ಅನ್ನು ಹೊಂದಿರುತ್ತದೆ. ಈ ಪೆಪ್ಟೈಡ್ ಸ್ವಾಭಾವಿಕವಾಗಿ ಬ್ಯಾಕ್ಟೀರಿಯಾ ಮತ್ತು ಇತರ ಹಾನಿಕಾರಕ ಮಾಲಿನ್ಯಕಾರಕಗಳನ್ನು ನಾಶಪಡಿಸುತ್ತದೆ. ಪರಿಣಾಮವಾಗಿ, ಇದು ಚರ್ಮದ ಸೋಂಕುಗಳನ್ನು ನಿಯಂತ್ರಿಸುತ್ತದೆ ಮತ್ತು ಮೊಡವೆಗಳಾದಂತೆ ತಡೆಯತ್ತದೆ. ಚರ್ಮದಲ್ಲಿನ ವಿಷಕಾರಿ ಅಂಶಗಳು ಮತ್ತು ಪಾದರಸ, ಸೀಸ, ಕ್ಯಾಡ್ಮಿಯಮ್ ಮತ್ತು ಆರ್ಸೆನಿಕ್‌ನಂತಹ ರಾಸಾಯನಿಕ ಅಂಶಗಳು ಬೆವರಿನ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ ಎಂದು ಅಧ್ಯಯನಗಳು ತೋರಿಸಿವೆʼ ಎನ್ನುತ್ತಾರೆ ತಜ್ಞರು.

ಬೆವರುವುದರಿಂದ ಚರ್ಮದಲ್ಲಿ ತೇವಾಂಶ ಹೆಚ್ಚುತ್ತದೆ

ಬೆವರುವುದಿಂದ ಚರ್ಮದಲ್ಲಿ ತೇವಾಂಶ ಉಳಿಯುತ್ತದೆ, ಅಲ್ಲದೆ ಬೆವರು ಚರ್ಮದಿಂದ ತೇವಾಂಶ ಹೊರ ಹೋಗದಂತೆ ತಡೆಗೋಡೆಯಾಗಿ ನಿಲ್ಲುತ್ತದೆ ಎನ್ನುವುದು ತಜ್ಞರು ಅಭಿಪ್ರಾಯ. ಬೆವರು ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ, ಅಂದ ಹೆಚ್ಚಿಸಲೂ ಸಹಕಾರಿ. ಚರ್ಮದಲ್ಲಿ ರಕ್ತಪರಿಚಲನೆಯ ಪ್ರಮಾಣ ಕಡಿಮೆಯಾದಾಗ ಚರ್ಮ ಕಳೆಗುಂದುತ್ತದೆ, ಅಲ್ಲದೆ ಬಿರುಕಿಗೂ ಕಾರಣವಾಗಬಹುದು. ಚರ್ಮ ಶುಷ್ಕವಾಗಲು ಇದು ಕಾರಣವಾಗಬಹುದು. ಬೆವರುವುದರಿಂದ ಚರ್ಮದಲ್ಲಿನ ಅಕಾಲಿಕ ವಯಸ್ಸಿನ ಲಕ್ಷಣಗಳು ಕಡಿಮೆಯಾಗುತ್ತವೆ. ಅಲ್ಲದೆ ಇದು ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡುತ್ತದೆ. ಇದು ಚರ್ಮದ ಮೇಲ್ಮೈ ಮೇಲೆ ತೇವಾಂಶವನ್ನು ಹೆಚ್ಚಿಸಿ, ಅಲರ್ಜಿಯು ಚರ್ಮದ ಒಳಗೆ ಪ್ರವೇಶಿಸಿದಂತೆ ತಡೆಯುತ್ತದೆ.

ಬೆವರು ಕೆಟ್ಟದ್ದು ಎನ್ನುವುದೇಕೆ?

ದೇಹದಲ್ಲಿ ಬೆವರಿನ ಹರಿಯುವಿಕೆಯನ್ನು ಸರಿಯಾಗಿ ನಿರ್ವಹಿಸಬೇಕು, ಇಲ್ಲದಿದ್ದರೆ ಇದರಿಂದ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು. ತಜ್ಞರ ಪ್ರಕಾರ, ಅತಿಯಾದ ಬೆವರುವಿಕೆಯು ಚರ್ಮದ ಕಿರಿಕಿರಿ, ದದ್ದುಗಳು ಮತ್ತು ಚರ್ಮದ ರಂಧ್ರಗಳ ಮುಚ್ಚುವಿಕೆಗೆ ಕಾರಣವಾಗಬಹುದು. ಇದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯ ಪ್ರಮಾಣ ಹೆಚ್ಚುತ್ತದೆ. ಅಲ್ಲದೆ, ಚರ್ಮದ ಸೋಂಕು ಅಥವಾ ಟಿನಿಯಾ ಪೆಡಿಸ್‌ನಂತಹ ಚರ್ಮದ ಸಮಸ್ಯೆಗಳಿಗೂ ಕಾರಣವಾಗಬಹುದು.

ದೇಹದ ಹಾಗೂ ಚರ್ಮದ ಆರೋಗ್ಯಕ್ಕೆ ಬೆವರುವುದು ಅವಶ್ಯ, ಆದರೆ ಬೆವರಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯವಾಗುತ್ತದೆ. ಬೇಸಿಗೆಯಲ್ಲಿ ದಿನದಲ್ಲಿ ಎರಡು ಬಾರಿ ಸ್ನಾನ ಮಾಡುವುದು, ದೈಹಿಕ ಚಟುವಟಿಕೆ ಅಥವಾ ಬಿಸಿಲಿನಲ್ಲಿ ಹೊರ ಹೋಗುವಾಗ ಸಡಿಲವಾದ ಬಟ್ಟೆ ಧರಿಸುವುದು ಅವಶ್ಯವಾಗುತ್ತದೆ.

ಹೈಪರ್ಹೈಡ್ರೋಸಿಸ್ ಅಥವಾ ಅತಿಯಾದ ಬೆವರುವಿಕೆಯ ಸಮಸ್ಯೆ ಇರುವವರು ತಜ್ಞರ ಬಳಿ ಮಾತನಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ಬೆವರುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ತಪ್ಪು.

ಒಟ್ಟಾರೆಯಾಗಿ ಹೇಳಬೇಕು ಎಂದರೆ ಬೆವರುವಿಕೆ ಕೆಟ್ಟದ್ದಲ್ಲ, ಇದರಿಂದ ಚರ್ಮಕ್ಕೆ ಹಲವು ರೀತಿಯ ಧನಾತ್ಮಕ ಪ್ರಯೋಜನಗಳಿವೆ. ಆದರೆ ಚರ್ಮದ ಆರೈಕೆಯನ್ನು ನಿರ್ಲಕ್ಷಿಸಬಾರದು. ಬೆವರುವುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಆದರೆ ಅತಿಯಾದ ಬೆವರನ್ನು ನಿರ್ಲಕ್ಷ್ಯ ಮಾಡುವುದೂ ಸರಿಯಲ್ಲ.

Whats_app_banner