Pregnancy Skincare: ಗರ್ಭಿಣಿಯರೇ, ಸೌಂದರ್ಯ ಹೆಚ್ಚಿಸಿಕೊಳ್ಳುವ ಭರದಲ್ಲಿ ಅಪಾಯ ತಂದುಕೊಳ್ಳಬೇಡಿ; ಈ ಉತ್ಪನ್ನಗಳ ಬಳಕೆಗೆ ಮಿತಿ ಇರಲಿ
Pregnancy Skincare: ಗರ್ಭಿಣಿಯರಲ್ಲಿ ಚರ್ಮದ ಪ್ರಕಾರಗಳು ಬದಲಾಗುವುದು ಸಹಜ. ಈ ಸಮಯದಲ್ಲಿ ಚರ್ಮದ ಕಾಳಜಿ ಮಾಡಬೇಕಿರುವುದು ಅವಶ್ಯ. ಹಾಗಂತ ಎಲ್ಲಾ ಉತ್ಪನ್ನಗಳನ್ನು ಬಳಸುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಅಂತಹ ಕೆಲವು ಉತ್ಪನ್ನಗಳು ಯಾವುವು, ಇದರಿಂದ ಯಾವ ರೀತಿ ತೊಂದರೆಗಳು ಉಂಟಾಗಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ.
ಹೆಣ್ಣಾದವಳು ಬಹುಶಃ ತಮ್ಮ ಜೀವನದಲ್ಲಿ ಅತಿ ಖುಷಿ ಪಡುವುದು ತಾನು ಗರ್ಭಿಣಿ ಎಂದು ತಿಳಿದಾಗ. ಗರ್ಭಾವಸ್ಥೆಯು ಸಂತೋಷ, ಉತ್ಸಾಹ ಹಾಗೂ ನಿರೀಕ್ಷೆಯ ಅವಧಿಯಾಗಿದೆ. ಈ ಸಮಯದಲ್ಲಿ ಚರ್ಮದ ಪ್ರಕಾರ ಹಾಗೂ ಮೈಬಣ್ಣದ ಬದಲಾವಣೆ ಒಳಗೊಂಡಂತೆ ಹೆಣ್ಣುಮಕ್ಕಳ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಗರ್ಭಿಣಿಯರು ತ್ವಚೆಯ ಆರೈಕೆಗೆ ಬಳಸುವ ಉತ್ಪನ್ನಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ.
ತ್ವಚೆಗೆ ಬಳಸುವ ಕೆಲವು ಉತ್ಪನ್ನಗಳು ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟು ಮಾಡಬಹುದು ಮತ್ತು ಇದು ಚರ್ಮದ ಕಿರಿಕಿರಿಗೂ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ತಪ್ಪಿಸಬೇಕಾದ ತ್ವಚೆಯ ಉತ್ಪನ್ನಗಳ ಪಟ್ಟಿ ಇಲ್ಲಿದೆ.
ರೆಟಿನಾಯ್ಡ್ಸ್
ಟ್ರೆಟಿನೊಯಿನ್ ಮತ್ತು ಐಸೊಟ್ರೆಟಿನೊಯಿನ್‌ನಂತಹ ರೆಟಿನಾಯ್ಡ್‌ಗಳು ಮೊಡವೆ, ಸುಕ್ಕುಗಳು ಮತ್ತು ಹೈಪರ್ ಪಿಗ್ಮೆಂಟೇಶನ್‌ನಂತಹ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಆದರೆ ಇದು ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆ ಕಾರಣಕ್ಕೆ ಗರ್ಭಾವಸ್ಥೆಯಲ್ಲಿದ್ದಾಗ ಇದರ ಬಳಕೆಯನ್ನು ನಿಲ್ಲಿಸುವುದು ಉತ್ತಮ. ನೀವು ಗರ್ಭಿಣಿಯಾಗಲು ಯೋಚಿಸುತ್ತಿದ್ದು, ರೆಟಿನಾಯ್ಡ್‌ಗಳನ್ನು ಬಳಸುತ್ತಿದ್ದರೆ, ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.
ಸ್ಯಾಲಿಸಿಲಿಕ್ ಆಮ್ಲ
ಸ್ಯಾಲಿಸಿಲಿಕ್ ಆಮ್ಲವು ಬೀಟಾ-ಹೈಡ್ರಾಕ್ಸಿ ಆಸಿಡ್ (BHA) ಆಗಿದ್ದು, ಇದನ್ನು ಸಾಮಾನ್ಯವಾಗಿ ಮೊಡವೆಗಳಿಗೆ ಚಿಕಿತ್ಸೆ ನೀಡಲು ಮತ್ತು ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು ಬಳಸಲಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಇದನ್ನು ಬಳಸುವುದು ಸುರಕ್ಷಿತ ಎಂದು ಭಾವಿಸಿದರೂ ಕೂಡ ಗರ್ಭಾವಸ್ಥೆಯಲ್ಲಿ ಇದರ ಬಳಕೆಯ ಕುರಿತು ಎಚ್ಚರ ವಹಿಸಬೇಕು. ಅಧಿಕ ಪ್ರಮಾಣದಲ್ಲಿ ಸ್ಯಾಲಿಸಿಲಿಕ್ ಆಮ್ಲದ ಬಳಕೆಯಿಂದ ಭ್ರೂಣಕ್ಕೆ ತೊಂದರೆ ಉಂಟಾಗಬಹುದು. ಅಲ್ಲದೆ, ಇತರ ಸಮಸ್ಯೆಗಳಿಗೂ ಕಾರಣವಾಗಬಹುದು.
ಹೈಡ್ರೋಕ್ವಿನೋನ್
ಹೈಡ್ರೋಕ್ವಿನೋನ್ ಚರ್ಮವನ್ನು ಹಗುರಗೊಳಿಸುವ ಏಜೆಂಟ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಹೈಪರ್ ಪಿಗ್ಮೆಂಟೇಶನ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದರ ಬಳಕೆಯಿಂದ ಭ್ರೂಣದ ವಿರೂಪ ಹಾಗೂ ನ್ಯೂರೋಟಾಕ್ಸಿಸಿಟಿ ಸೇರಿದಂತೆ ಗರ್ಭಾವಸ್ಥೆಯಲ್ಲಿ ಸಂಭವನೀಯ ಅಪಾಯಗಳಿಗೆ ಇದು ಕಾರಣವಾಗಬಹುದು. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಹೈಡ್ರೋಕ್ವಿನೋನ್ ಬಳಸುವುದನ್ನು ತಪ್ಪಿಸುವುದು ಉತ್ತಮ.
ಏಸೆನ್ಷಿಯಲ್ ಆಯಿಲ್
ಏಸೆನ್ಷಿಯಲ್ ಆಯಿಲ್ ಅಥವಾ ಸಾರಭೂತ ತೈಲಗಳು ಹೆಚ್ಚು ಕೇಂದ್ರೀಕರಿಸಿದ ಸಸ್ಯಜನ್ಯ ಸಾರಗಳಾಗಿವೆ. ಇದನ್ನು ಸಾಮಾನ್ಯವಾಗಿ ಅರೋಮಾಥೆರಪಿ ಮತ್ತು ತ್ವಚೆ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇವು ಮಾನಸಿಕ ವಿಶ್ರಾಂತಿ ಹಾಗೂ ಚರ್ಮದ ಆರೋಗ್ಯಕ್ಕೆ ಉತ್ತಮವಾದರೂ ಕೂಡ ಗರ್ಭಿಣಿಯರಿಗೆ ಅಥವಾ ಹೊಟ್ಟೆಯಲ್ಲಿರುವ ಮಗುವಿಗೆ ಇದು ತೊಂದರೆ ಉಂಟು ಮಾಡಬಹುದು. ಇದರಲ್ಲಿ ಬಳಕೆಯಾಗುವ ಟೀ ಟ್ರೀ ಆಯಿಲ್ ಮತ್ತು ಕ್ಲಾರಿ ಸೇಜ್ ಆಯಿಲ್ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ಗರ್ಭಾವಸ್ಥೆಯಲ್ಲಿ ಇದನ್ನು ತಪ್ಪಿಸಬೇಕು.
ರಾಸಾಯನಿಕ ಅಂಶವುಳ್ಳ ಸನ್‌ಸ್ಕ್ರೀನ್
ಆಕ್ಸಿಬೆನ್ಜೋನ್ ಮತ್ತು ಆಕ್ಟಿನೋಕ್ಸೇಟ್‌ನಂತಹ ರಾಸಾಯನಿಕ ಅಂಶಗಳುಳ್ಳ ಸನ್‌ಸ್ಕ್ರೀನ್‌ಗಳು ಯುವಿ ಕಿರಣಗಳನ್ನು ಹೀರಿಕೊಳ್ಳುವ ಮೂಲಕ ಮತ್ತು ಅವುಗಳನ್ನು ಶಾಖವಾಗಿ ಪರಿವರ್ತಿಸುವ ಮೂಲಕ ಕೆಲಸ ಮಾಡುತ್ತವೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುವಲ್ಲಿ ಅವು ಪರಿಣಾಮಕಾರಿಯಾಗಿದ್ದರೂ, ಕೆಲವು ಅಧ್ಯಯನಗಳು ಇವು ಮಗುವಿನ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡಬಹುದು ಎಂದು ತೋರಿಸಿವೆ.
ಮೊಡವೆ ಔಷಧಿಗಳು
ಅಕ್ಯುಟೇನ್‌ನಂತಹ ಮೊಡವೆ ನಿವಾರಿಸಲು ಬಳಸುವ ಔಷಧಿಗಳು ಗರ್ಭದಲ್ಲಿರುವ ಮಗುವಿಗೆ ತೊಂದರೆ ಉಂಟು ಮಾಡಬಹುದು. ನೀವು ಗರ್ಭಿಣಿಯಾಗಲು ಯೋಚಿಸಿದರೆ ಇದನ್ನು ಬಳಸದೇ ಇರುವುದು ಉತ್ತಮ. ಈ ಬಗ್ಗೆ ತಜ್ಞರ ವೈದ್ಯ ಸಲಹೆ ಪಡೆಯಿರಿ.
ವಿಭಾಗ