ಕನ್ನಡ ಸುದ್ದಿ  /  Lifestyle  /  Summer And Pregnancy Diet: Some Diet Plan For Pregnant Women In Summer; Its Good For Fetus Development Also

summer and pregnancy diet: ಬೇಸಿಗೆಯಲ್ಲಿ ಹೀಗಿರಲಿ ಗರ್ಭಿಣಿಯರ ಆಹಾರಕ್ರಮ; ಇದು ಮಗುವಿನ ಬೆಳವಣಿಗೆಗೂ ಉತ್ತಮ

summer and pregnancy diet: ಬೇಸಿಗೆಯಲ್ಲಿ ಗರ್ಭಿಣಿಯರು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡಕ್ಕೂ ಹೊಂದುವಂತಹ ಆಹಾರ ಸೇವಿಸುವುದು ಅಗತ್ಯ. ಹಾಗಾದರೆ ಬೇಸಿಗೆಯಲ್ಲಿ ಗರ್ಭಿಣಿಯರ ಆಹಾರಕ್ರಮ ಹೇಗಿರಬೇಕು?

ಬೇಸಿಗೆ ಮತ್ತು ಗರ್ಭಿಣಿ ಮಹಿಳೆಯರ ಆಹಾರ ಕ್ರಮ
ಬೇಸಿಗೆ ಮತ್ತು ಗರ್ಭಿಣಿ ಮಹಿಳೆಯರ ಆಹಾರ ಕ್ರಮ

ಮಾರ್ಚ್‌ನಿಂದ ಮೇವರೆಗೆ ಬೇಸಿಗೆ ಕಾಲವನ್ನು ಎದುರಿಸುವುದು ನಿಜಕ್ಕೂ ಸವಾಲು. ಇತ್ತೀಚೆಗಂತೂ ಬಿಸಿಲಿನ ತಾಪ ಇನ್ನೂ ಹೆಚ್ಚಾಗಿದೆ. ಸೂರ್ಯ ಭೂಮಿಯ ಸಮೀಪ ಬಂದಿರಬೇಕು ಅನ್ನಿಸುವುದು ಸುಳ್ಳಲ್ಲ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಬಿಸಿಲು ಇನ್ನೂ ಶಾಪ. ಅತಿಯಾದ ಬಿಸಿಲಿನಿಂದ ನಿರ್ಜಲೀಕರಣ ಮಾತ್ರವಲ್ಲದೆ, ಹಲವು ರೀತಿ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ಟ್ರೆಂಡಿಂಗ್​ ಸುದ್ದಿ

ಹೊಟ್ಟೆಯಲ್ಲಿ ಮಗು ಇರುವಾಗ ತಾಯಿಯಾದವಳು ತನ್ನ ಆರೋಗ್ಯವನ್ನು ಜೋಪಾನ ಮಾಡಿಕೊಳ್ಳುವುದು ಬಹಳ ಅವಶ್ಯ. ಆ ಕಾರಣಕ್ಕೆ ಬೇಸಿಗೆಗೆ ಹೊಂದುವಂತಹ ಪೋಷಕಾಂಶಗಳ ಸೇವನೆ ಅಗತ್ಯವಾಗುತ್ತದೆ. ಈ ಸಮಯದಲ್ಲಿ ಗರ್ಭಿಣಿಯರು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡಕ್ಕೂ ಹೊಂದುವಂತಹ ಆಹಾರ ಸೇವಿಸುವುದು ಅಗತ್ಯ. ಹಾಗಾದರೆ ಬೇಸಿಗೆಯಲ್ಲಿ ಗರ್ಭಿಣಿಯರ ಆಹಾರ ಕ್ರಮದಲ್ಲಿ ಏನೇನಿಬೇಕು?

ತಾಜಾ ಹಣ್ಣುಗಳು

ಗರ್ಭಿಣಿಯರ ಡಯೆಟ್‌ ಕ್ರಮದ ವಿಚಾರಕ್ಕೆ ಬಂದಾಗ ತಾಜಾ ಹಣ್ಣುಗಳು ಮೊದಲ ಸ್ಥಾನದಲ್ಲಿರಬೇಕು. ತಾಜಾ ಹಣ್ಣುಗಳಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ನಾರಿನಂಶವೂ ಅಧಿಕವಾಗಿದ್ದು ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಉತ್ತಮ. ಕಲ್ಲಂಗಡಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ಸೇವನೆಯಿಂದ ಮಗುವಿನ ಬೆಳವಣಿಗೆಗೆ ಜೀವಸತ್ವ ಹಾಗೂ ಖನಿಜಗಳನ್ನು ಒದಗಿಸುವ ಜೊತೆಗೆ ಗರ್ಭಿಣಿ ಮಹಿಳೆಯರ ದೇಹ ನಿರ್ಜಲೀಕರಣವಾಗದಂತೆ ತಡೆಯಬಹುದು.

ಸೊಪ್ಪುಗಳು

ಬೇಸಿಗೆಯಲ್ಲಿ ಗರ್ಭಿಣಿ ಮಹಿಳೆಯರು ಪಾಲಕ್‌, ಮೆಂತ್ಯೆ, ಸಬ್ಬಸ್ಸಿಗೆ, ಬಸಳೆಯಂತಹ ಹಸಿರು ಸೊಪ್ಪುಗಳನ್ನು ಸೇವಿಸುವುದು ಅವಶ್ಯ. ಇವುಗಳಲ್ಲಿ ವಿಟಮಿನ್‌ ಸಿ, ಇ ಹಾಗೂ ಕೆ ಅಧಿಕವಾಗಿರುತ್ತದೆ. ಸೊಪ್ಪಿನಲ್ಲಿ ನಾರಿನಂಶ ಅಧಿಕವಾಗಿದೆ. ಇದರಿಂದ ಗರ್ಭಿಣಿಯರಲ್ಲಿ ಕಾಣಿಸುವ ಮಲಬದ್ಧತೆ ನಿವಾರಣೆಗೂ ಇದು ಸಹಕಾರಿ.

ಸೂಪ್‌ ಹಾಗೂ ಜ್ಯೂಸ್‌ಗಳು

ಸೂಪ್‌ ಹಾಗೂ ಜ್ಯೂಸ್‌ಗಳ ಸೇವನೆ ಬಹುತೇಕರಿಗೆ ಇಷ್ಟವಾಗುತ್ತದೆ. ಇದರ ಸವಿ ಬಾಯಿಗೆ ರುಚಿಸುವುದು ಸುಳ್ಳಲ್ಲ. ಇದು ಗರ್ಭಿಣಿಯರಿಗೆ ಉತ್ತಮ ಆಹಾರಕ್ರಮವೂ ಹೌದು. ಬೇಸಿಗೆಗೆ ಒಗ್ಗುವ ಸೂಪ್‌ಗಳು ಹಾಗೂ ತಾಜಾ ಹಣ್ಣು, ತರಕಾರಿಗಳ ಜ್ಯೂಸ್‌ ಸೇವನೆಯಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ. ಮಾತ್ರವಲ್ಲ ಇದರಲ್ಲಿ ಪೋಷಕಾಂಶಗಳ ಅಂಶವೂ ಹೆಚ್ಚಾಗಿರುತ್ತದೆ.

ಧಾನ್ಯಗಳು

ಗರ್ಭಿಣಿ ಮಹಿಳೆಯರಿಗೆ ಅಗತ್ಯ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ಗಳು ದೇಹವನ್ನು ಸೇರುವುದು ಅವಶ್ಯ. ಆ ಕಾರಣಕ್ಕೆ ಬೇಸಿಗೆಯಲ್ಲಿ ಧಾನ್ಯಗಳನ್ನು ಹೆಚ್ಚು ಸೇವಿಸಬೇಕು. ಇದು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣಕ್ಕೂ ಇದು ಸಹಕಾರಿ.

ಸಿಟ್ರಸ್‌ ಹಣ್ಣುಗಳು

ಬೇಸಿಗೆಯಲ್ಲಿ ಮೂಸಂಬಿ, ಕಿತ್ತಳೆಯಂತಹ ಸಿಟ್ರಸ್‌ ಅಂಶ ಅಧಿಕವಾಗಿರುವ ಹಣ್ಣುಗಳ ಸೇವನೆ ಬಹಳ ಅವಶ್ಯ. ಇವುಗಳಲ್ಲಿ ವಿಟಮಿನ್‌ ಸಿ ಅಂಶ ಅಧಿಕವಾಗಿದ್ದು, ಗರ್ಭಿಣಿಯರಿಗೆ ಬಹಳ ಉತ್ತಮ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಬಿಸಿಲಿನ ತಾಪ ಅತಿಯಾದಾಗ ದೈಹಿಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

ಸೀ ಫುಡ್‌

ಬೇಸಿಗೆಯಲ್ಲಿ ಗರ್ಭಿಣಿ ಮಹಿಳೆಯರು ಮೀನು, ಸಿಗಡಿ, ಏಡಿಯಂತಹ ಸಮುದ್ರ ಆಹಾರಗಳನ್ನು ಸೇವಿಸುವುದು ಅವಶ್ಯ. ಮೀನಿನಲ್ಲಿ ಪ್ರೊಟೀನ್‌, ಕಬ್ಬಿಣಾಂಶ, ಸತುವಿನ ಅಂಶದ ಪ್ರಮಾಣ ಹೆಚ್ಚಿರುತ್ತದೆ. ಮೀನಿನಲ್ಲಿ ಖನಿಜಾಂಶಗಳ ಪ್ರಮಾಣ ಅಧಿಕವಾಗಿದ್ದು, ಇದು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಬಹಳ ಮುಖ್ಯ. ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಮೀನುಗಳ ಸೇವನೆಯಿಂದ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ.

ಮೊಟ್ಟೆ

ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೆ ಪ್ರೊಟೀನ್‌ ಬಹಳ ಅವಶ್ಯ. ಭ್ರೂಣ ಬೆಳವಣಿಗೆ ಮಾತ್ರವಲ್ಲದೆ ಅಂಗಾಂಶಗಳ ಬೆಳವಣಿಗೆ, ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರತಿಕಾಯಗಳ ಉತ್ಪಾದನೆಗೆ ಪ್ರೊಟೀನ್‌ ಅತ್ಯಗತ್ಯ. ಆ ಕಾರಣಕ್ಕೆ ಗರ್ಭಿಣಿ ಮಹಿಳೆಯರು ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ಮೊಟ್ಟೆ ಸೇವಿಸಬೇಕು.

ಯೋಗರ್ಟ್‌

ಗರ್ಭಿಣಿ ಮಹಿಳೆಯರು ಬೇಸಿಗೆಯಲ್ಲಿ ಯೋಗರ್ಟ್‌ ಸೇವಿಸುವುದು ಉತ್ತಮ. ಇದರಿಂದ ಪೊಟ್ಯಾಶಿಂ, ಕ್ಯಾಲ್ಸಿಯಂ, ಪ್ರೊಟೀನ್‌ ಹಾಗೂ ವಿಟಮಿನ್‌ ಬಿ 12 ಅಂಶವಿದ್ದು ಇದು ಭ್ರೂಣದ ಬೆಳವಣಿಗೆ ಹಾಗೂ ಒಟ್ಟಾರೆ ದೈಹಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

ವಿಭಾಗ