ಕನ್ನಡ ಸುದ್ದಿ  /  Lifestyle  /  Summer Vacation And Trip Plan: Summer Vacation Is Around The Corner, Keep These Points In Mind Before Going On A Trip With Kids

summer vacation and trip plan: ಬೇಸಿಗೆ ರಜೆ ಸನಿಹದಲ್ಲಿದೆ, ಮಕ್ಕಳೊಂದಿಗೆ ಪ್ರವಾಸ ಹೊರಡುವ ಮುನ್ನ ಈ ಅಂಶಗಳು ಗಮನದಲ್ಲಿರಲಿ

summer vacation and trip plan: ಇನ್ನೇನು ಕೆಲ ದಿನಗಳಲ್ಲಿ ಮಕ್ಕಳಿಗೆ ರಜೆ ಆರಂಭವಾಗುತ್ತದೆ. ರಜೆ ಎಂದರೆ ಮಕ್ಕಳು ಪ್ರವಾಸಕ್ಕೆ ಹೊರಡಲು ಸಿದ್ಧರಾಗುತ್ತಾರೆ. ಆದರೆ ಪ್ರವಾಸ ಆಯೋಜಿಸುವ ಮುನ್ನ ಪೋಷಕರು ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳುವುದು ಅವಶ್ಯ.

ಪ್ರವಾಸ
ಪ್ರವಾಸ

ಶಾಲಾದಿನಗಳು ಮುಗಿದು ಮಕ್ಕಳಿಗೆ ರಜೆಯ ದಿನಗಳು ಆರಂಭವಾಗುತ್ತಿವೆ. ಚಿಕ್ಕ ಮಕ್ಕಳಿಗೆ ರಜೆ ಎಂದರೆ ಪ್ರವಾಸ. ರಜೆ ಆರಂಭವಾಗಲು ಮೂರ್ನಾಲ್ಕು ತಿಂಗಳಿರುವಾಗಲೇ ಅಲ್ಲಿಗೆ ಹೋಗೋಣ, ಇಲ್ಲಿಗೆ ಹೋಗೋಣ ಎಂದುಕೊಂಡು ಪೋಷಕರಿಗೆ ದಂಬಾಲು ಬೀಳುತ್ತಾರೆ. ಆದರೆ ಮಕ್ಕಳೊಂದಿಗೆ ಪ್ರವಾಸ ಮಾಡುವುದು ಸುಲಭವಲ್ಲ. ಮಕ್ಕಳೊಂದಿಗೆ ಪ್ರವಾಸ ಎಂದರೆ ಬೇರೆ ಮನೆಗೆ ಶಿಫ್ಟ್‌ ಆದಂತೆ ಸರಿ. ಆ ಕಾರಣಕ್ಕೆ ಮೊದಲೇ ಒಂದಿಷ್ಟು ತಯಾರಿ ಮಾಡಿಕೊಂಡು, ಕೆಲವೊಂದು ವಿಷಯಗಳಲ್ಲಿ ರಾಜಿ ಮಾಡಿಕೊಂಡು, ಇನ್ನೂ ವಾಸ್ತವಗಳ ನಿರೀಕ್ಷೆ ಇರಿಸಿಕೊಂಡು ಪ್ರವಾಸ ಮಾಡುವುದರಿಂದ ಪ್ರವಾಸವನ್ನು ನೀವು ಮಕ್ಕಳೂ ಇಬ್ಬರೂ ಎಂಜಾಯ್‌ ಮಾಡಬಹುದು.

ಬುದ್ಧಿವಂತಿಕೆಯಿಂದ ಪ್ರವಾಸ ಸ್ಥಳವನ್ನು ಆಯ್ಕೆ ಮಾಡಿ

ಮಕ್ಕಳೊಂದಿಗೆ ಪ್ರವಾಸ ಮಾಡುವ ಮುನ್ನ ಸ್ಥಳ ಆಯ್ಕೆಯ ಬಗ್ಗೆ ಜಾಗರೂಕರಾಗಿರಿ. ಹೆಚ್ಚು ಜನಜಂಗುಳಿ ಇರುವ ಪ್ರದೇಶಕ್ಕೆ ಹೋಗದೇ ಇರುವುದು ಉತ್ತಮ. ಎತ್ತರದ ಜಲಪಾತ, ಅಪಾಯದ ನದಿ, ಕಣಿವೆಗಳಂತಹ ಪ್ರದೇಶಗಳಿಗೆ ಹೋಗದಿರುವುದು ಉತ್ತಮ. ಮಕ್ಕಳ ಜೊತೆ ಸಮುದ್ರ, ಪಾರ್ಕ್‌, ಮ್ಯೂಸಿಯಂನಂತಹ ಜಾಗಗಳಿಗೆ ಹೋಗುವುದು ಉತ್ತಮ. ಇದರಿಂದ ಮಕ್ಕಳಿಗೂ ಖುಷಿ ಸಿಗುತ್ತದೆ ನೀವು ಎಂಜಾಯ್‌ ಮಾಡಬಹುದು. ಆದರೆ ಅಲ್ಲೂ ಎಚ್ಚರದಿಂದಿರುವುದು ಅವಶ್ಯ.

ನಿರೀಕ್ಷೆಗಳಿಗೆ ಕಡಿವಾಣ ಹಾಕಿ

ಮಕ್ಕಳೊಂದಿಗೆ ಪ್ರವಾಸ ಹೋಗುವ ಮುನ್ನ ಆ ಪ್ರವಾಸದ ಕುರಿತು ಸಾಕಷ್ಟು ನಿರೀಕ್ಷೆ ಇರಿಸಿಕೊಳ್ಳುವುದು ಸರಿಯಲ್ಲ. ಯಾಕೆಂದರೆ ಮಕ್ಕಳ ಮನೋಭಾವ ಯಾವಾಗ ಹೇಗೆ ಬದಲಾಗುತ್ತದೆ ಹೇಳಲು ಸಾಧ್ಯವಿಲ್ಲ, ಹಾಗಾಗಿ ಎಲ್ಲದ್ದಕ್ಕೂ ಹೊಂದುವಂತೆ ಯೋಜನೆ ರೂಪಿಸಿಕೊಳ್ಳಿ.

ಸ್ಥಳಗಳ ಬಗ್ಗೆ ಮೊದಲೇ ಅರಿಯಿರಿ

ಪ್ರವಾಸ ಆಯೋಜಿಸುವ ಮೊದಲು ಆ ಸ್ಥಳದ ಬಗ್ಗೆ ನಿಖರವಾಗಿ ತಿಳಿದುಕೊಳ್ಳಿ. ಮಕ್ಕಳಿಗೆ ಅಲ್ಲಿನ ವಾತಾವರಣ ಹೊಂದುತ್ತದೆಯೋ ಇಲ್ಲವೋ ಎಂಬುದನ್ನು ಯೋಚಿಸಿ. ನಿಮಗೆ ಇಷ್ಟವಾಯ್ತು ಎಂಬ ಕಾರಣಕ್ಕೆ ಮಕ್ಕಳಿಗೆ ಇಷ್ಟ ಆಗಬೇಕು ಎಂದೇನಿಲ್ಲ. ನೀವು ಪ್ರವಾಸ ಮಾಡುವ ಜಾಗದಲ್ಲಿ ಅಂಗಡಿ, ಮಳಿಗೆಗಳು, ಬೇಬಿ ಸಿಟ್ಟಿಂಗ್‌ಗಳು, ಬಾಡಿಗೆ ಕಾರು, ಬೈಕ್‌ ಇವೆಲ್ಲವೂ ಲಭ್ಯ ಇದೆಯೇ ಇಲ್ಲವೋ ತಿಳಿದುಕೊಳ್ಳಿ.

ಸ್ವಂತ ವಾಹನದಲ್ಲಿ ಹೋಗಿ ಬರುವ ಹಾಗಿದ್ದರೆ ಉತ್ತಮ

ಕುಟುಂಬದವರೆಲ್ಲರೂ ಒಟ್ಟಾಗಿ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎನ್ನುವ ಖುಷಿಯ ನಡುವೆ ಮಕ್ಕಳನ್ನು ಮರೆತು ಬಿಡಬೇಡಿ. ದೂರದ ಊರು, ದೇಶಗಳಿಗೆ ಪ್ರವಾಸ ಮಾಡುವುದಕ್ಕಿಂತ ನಿಮ್ಮ ಸ್ವಂತ ವಾಹನದಲ್ಲಿ ಹೋಗುವಷ್ಟು ದೂರದ ಪ್ರದೇಶಗಳಿಗೆ ಪ್ರವಾಸ ಆಯೋಜಿಸುವುದು ಉತ್ತಮ. ಇದರಿಂದ ಮಕ್ಕಳಿಗೆ ದೈಹಿಕ ತೊಂದರೆಗಳು ಉಂಟಾಗುವುದನ್ನೂ ತಪ್ಪಿಸಬಹುದು. ಅಲ್ಲದೆ ಅವರು ಈ ರೋಡ್‌ ಟ್ರಿಪ್‌ ಅನ್ನು ಹೆಚ್ಚು ಎಂಜಾಯ್‌ ಮಾಡುತ್ತಾರೆ. ಇದರಿಂದ ಹಣ ಉಳಿತಾಯವೂ ಆಗುತ್ತದೆ.

ಸಾಕಷ್ಟು ತಿನಿಸುಗಳಿರಲಿ

ಗಂಟೆಗಟ್ಟಲೆ ಕಾರು ಅಥವಾ ಟ್ರೈನ್‌ನಲ್ಲಿ ಕುಳಿತು ಕುಳಿತು ಮಕ್ಕಳಿಗೆ ಬೇಸರ ಮೂಡಬಹುದು. ಇದರಿಂದ ಅವರು ಹಟ ಮಾಡುವ ಸಾಧ್ಯತೆ ಇದೆ. ಆ ಕಾರಣಕ್ಕೆ ಮಕ್ಕಳಿಗೆ ಇಷ್ಟವಾಗುವ ಸಾಕಷ್ಟು ತಿಂಡಿಗಳನ್ನು ಇರಿಸಿಕೊಳ್ಳಿ. ನೀವು ಹೋಗುವ ಜಾಗದಲ್ಲಿ ತಿಂಡಿ, ತಿನಿಸುಗಳು ಸಿಗದೇ ಇರಬಹುದು ಅಥವಾ ಗುಣಮಟ್ಟದ ತಿಂಡಿ ತಿನಿಸುಗಳು ಸಿಗದಿರಬಹುದು. ಮಕ್ಕಳು ಹಟ ಮಾಡಿದರೆಂದು ಸಿಕ್ಕಿದ್ದನ್ನು ನೀಡಿ ಸಮಾಧಾನ ಮಾಡಿ ಮಕ್ಕಳ ಆರೋಗ್ಯ ಕೆಡಿಸುವ ಬದಲು ನೀವು ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.

ಉತ್ತಮ ಮಲಗುವ ವಾತಾವರಣ ಕಲ್ಪಿಸಿ

ಪ್ರವಾಸದ ಸ್ಥಳದಲ್ಲಿ ಮಕ್ಕಳು ಮನೆಯಲ್ಲಿ ಮಲಗುವ ರೀತಿಯ ವಾತಾವರಣವನ್ನೇ ಸೃಷ್ಟಿಸಿ. ಮಕ್ಕಳ ಇಷ್ಟದ ಬ್ಲಾಂಕೆಟ್‌, ಗೊಂಬೆಯನ್ನು ಜೊತೆ ತೆಗೆದುಕೊಂಡು ಹೋಗಿ. ಇದರಿಂದ ಅವುಗಳಿಗೆ ಜಾಗ ಬದಲಾಗಿದೆ ಅನ್ನಿಸುವುದಿಲ್ಲ. ಅಲ್ಲದೆ ಹಟ, ಸಿಟ್ಟು ಮಾಡುವುದೂ ಇಲ್ಲ.

ವಿಭಾಗ