Amit Shah: 'ಪಾಕಿಸ್ತಾನದೊಂದಿಗೆ ಮಾತುಕತೆ ಸಾಧ್ಯವಿಲ್ಲ, ಜಮ್ಮು-ಕಾಶ್ಮೀರದಿಂದ ಭಯೋತ್ಪಾದನೆ ನಿರ್ಮೂಲನೆ ಮಾಡುತ್ತೇವೆ'
“ಕೆಲವರು ನಾವು ಪಾಕಿಸ್ತಾನದೊಂದಿಗೆ ಮಾತನಾಡಬೇಕು ಎಂದು ಹೇಳುತ್ತಾರೆ. ನಾವು ಪಾಕಿಸ್ತಾನದೊಂದಿಗೆ ಏಕೆ ಮಾತನಾಡಬೇಕು? ನಾವು ಮಾತನಾಡುವುದಿಲ್ಲ. ನಾವು ಬಾರಾಮುಲ್ಲಾದ ಜನರೊಂದಿಗೆ ಮಾತನಾಡುತ್ತೇವೆ. ನಾವು ಕಾಶ್ಮೀರದ ಜನರೊಂದಿಗೆ ಮಾತನಾಡುತ್ತೇವೆ” ಎಂದು ಶಾ ಹೇಳಿದರು.
ನವದೆಹಲಿ: ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ದೋಸ್ತಿ ಮಾತುಕತೆ ನಡೆಸುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಮೋದಿ ಸರ್ಕಾರವು ಮುಂದೆ ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತದೆ. ಇದನ್ನು ದೇಶದ ಅತ್ಯಂತ ಶಾಂತಿಯುತ ಸ್ಥಳವನ್ನಾಗಿ ಮಾಡುತ್ತದೆ ಎಂದು ಶಾ ಪ್ರತಿಪಾದಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಬಾರಾಮುಲ್ಲಾದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ 1990 ರಿಂದೀಚೆಗೆ 42,000 ಜೀವಗಳನ್ನು ಬಲಿ ಪಡೆದಿರುವ ಭಯೋತ್ಪಾದನೆಯಿಂದ ಯಾರಿಗಾದರೂ ಪ್ರಯೋಜನವಾಗಿದೆಯೇ ಎಂದು ಪ್ರಶ್ನಿಸಿದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯಾಗಿಲ್ಲ. ರಾಜ್ಯವನ್ನು ಬಹುಕಾಲ ಆಳಿದ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್), ಮುಫ್ತಿಗಳು (ಪಿಡಿಪಿ) ಮತ್ತು ನೆಹರು-ಗಾಂಧಿ (ಕಾಂಗ್ರೆಸ್) ಅವರ ಕುಟುಂಬಗಳೇ ಇಲ್ಲಿ ಅಭಿವೃದ್ಧಿ ಆಗದಿರುವುದಕ್ಕೆ ಕಾರಣ ಎಂದು ಅವರು ದೂಷಿಸಿದರು.
“ಮೊದಲು, ಇದು ಭಯೋತ್ಪಾದಕರ ತಾಣವಾಗಿತ್ತು. ಆದರೆ ಈಗ ಇದು ಪ್ರವಾಸಿ ತಾಣವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮವು ಇಲ್ಲಿ ಹಲವಾರು ಯುವಕರಿಗೆ ಉದ್ಯೋಗವನ್ನು ನೀಡಿದೆ” ಎಂದು ಗೃಹ ಸಚಿವರು ಹೇಳಿದರು.
“ಕೆಲವರು ನಾವು ಪಾಕಿಸ್ತಾನದೊಂದಿಗೆ ಮಾತನಾಡಬೇಕು ಎಂದು ಹೇಳುತ್ತಾರೆ. ನಾವು ಪಾಕಿಸ್ತಾನದೊಂದಿಗೆ ಏಕೆ ಮಾತನಾಡಬೇಕು? ನಾವು ಮಾತನಾಡುವುದಿಲ್ಲ. ನಾವು ಬಾರಾಮುಲ್ಲಾದ ಜನರೊಂದಿಗೆ ಮಾತನಾಡುತ್ತೇವೆ. ನಾವು ಕಾಶ್ಮೀರದ ಜನರೊಂದಿಗೆ ಮಾತನಾಡುತ್ತೇವೆ” ಎಂದು ಶಾ ಹೇಳಿದರು. ಮೋದಿ ಸರ್ಕಾರ ಯಾವ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಉಗ್ರವಾದವನ್ನು ಕೊನೆಗೊಳಿಸಲು ನಮ್ಮ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಅತ್ಯಂತ ಶಾಂತಿಯುತ ಸ್ಥಳವನ್ನಾಗಿ ಮಾಡಲು ನಾವು ಬಯಸುತ್ತೇವೆ. ಕೆಲವರು ಆಗಾಗ್ಗೆ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಎಷ್ಟು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದೆ ಎಂದು ತಿಳಿಯಲು ಬಯಸಿದ್ದೇನೆ ಎಂದು ಶಾ ಹೇಳಿದರು. “ಕಳೆದ ಮೂರು ವರ್ಷಗಳಲ್ಲಿ, ಕಾಶ್ಮೀರದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿದೆ ಎಂದು ನಾವು ಖಚಿತಪಡಿಸಿದ್ದೇವೆ” ಎಂದು ಅವರು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡಿರುವ ಶಾ, ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಡಿಜಿಗಳು, ಪೊಲೀಸ್ ಮತ್ತು ಸೇನಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಶ್ರೀನಗರಕ್ಕೆ ಹಿಂತಿರುಗುವ ಮೊದಲು ಷಾ ಅವರು ಬಾರಾಮುಲ್ಲಾ ಜಿಲ್ಲೆಯ ಶೋಕತ್ ಅಲಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ನಿನ್ನೆಯಷ್ಟೇ ಅವರು ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಪ್ರಸಿದ್ಧ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಮಹಾ ನವಮಿಯ ಅಂಗವಾಗಿ ಭೇಟಿ ನೀಡಿದ್ದರು.
ವಿಭಾಗ