ಕನ್ನಡ ಸುದ್ದಿ  /  Nation And-world  /  Big Fight Between Former Pakistan Prime Minister Imran Khan Army And Government Distress To Investors Rmy

Pakistan: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಸೇನೆ, ಸರ್ಕಾರದ ನಡುವೆ ಬಿಗ್ ಫೈಟ್; ಹೂಡಿಕೆದಾರರಿಗೆ ತಂದಿಟ್ಟ ಸಂಕಷ್ಟ

ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಬಂಧನ ಹಾಗೂ ಬಿಡುಗಡೆ ನಂತರ ನಡೆಯುತ್ತಿರುವ ಸಂಘರ್ಷದಿಂದ ಅಲ್ಲಿನ ಹೂಡಿಕೆದಾರರಿಗೆ ಭಾರಿ ಹೊಡೆತ ಬಿದ್ದಿದೆ.

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (AFP)
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (AFP)

ನವದೆಹಲಿ: ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನ (Pakistan) ಈಗಾಗಲೇ ಆರ್ಥಿಕ ಬಿಕ್ಕಟ್ಟು (Economic Crisis) ಅನುವಿಸುತ್ತಿದ್ದು, ಹಣಕಾಸಿನ ನೆರವಿಗಾಗಿ ಜಾಗತಿಕ ಹಣಕಾಸು ಸಂಸ್ಥೆಗಳ ಬಲಿ ಕೈಚಾಚುತ್ತಿದ್ದರೂ ಅದು ಅಷ್ಟಾಗಿ ಫಲ ನೀಡುತ್ತಿಲ್ಲ.

ಇದರ ನಡುವೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Pak Ex PM Imran Khan) ಅವರ ಬಂಧನ, ಕೋರ್ಟ್ ಜಾಮೀನು ನೀಡುತ್ತಿದ್ದಂತೆ ಬಿಡುಗಡೆಯ ನಂತರವೂ ಪಾಕಿಸ್ತಾನದಲ್ಲಿ ಭಾರಿ ಹೈಡ್ರಾಮಾಗಳು ನಡೆಯುತ್ತಲೇ ಇವೆ. ಇಮ್ರಾನ್ ಖಾನ್, ಅಲ್ಲಿನ ಸೇನೆ ಹಾಗೂ ಸರ್ಕಾರದ ನಡುವಿನ ಸಮರ ಅಲ್ಲಿನ ಹೂಡಿಕೆದಾರರಿಗೆ (Investors) ಹೊಡೆತ ನೀಡಿದೆ.

ಸರ್ಕಾರ, ಸೇನೆ ಹಾಗೂ ರಾಜಕೀಯ ನಾಯಕರ ಪ್ರಸಕ್ತ ಬೆಳವಣಿಗೆಗಳಿಂದಾಗಿ ರೂಪಾಯಿ ಮೌಲ್ಯದ ಭಾರಿ ಕುಸಿತ ಆಗಲಿದೆ ಎಂಬ ಎಚ್ಚರಿಕೆಗಳು ಕೇಳಿ ಬರುತ್ತಿವೆ. ಕೆಲವು ವಿಶ್ಲೇಷಕರ ಪ್ರಕಾರ ಪಾಕಿಸ್ತಾನದ ರೂಪಾಯಿ ಮೌಲ್ಯ ಇನ್ನೂ ಶೇ.20 ರಂದು ಕುಸಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.

ಕಳೆದ ವಾರದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ ಹೆಚ್ಚಿನ ಹಿಂಸಾಚಾರ ಮತ್ತು ಉದ್ವಿಗ್ನತೆಗಳು ಅಂತಾರಾಷ್ಟ್ರೀಯ ಹಣಕಾಸು ನಿಧಿಯ 6.7 ಬಿಲಿಯನ್ ಡಾಲರ್ ಸಾಲದ ನಿರ್ಧಾರವನ್ನು ಮತ್ತಷ್ಟು ದೂರಕ್ಕೆ ತಳ್ಳಬಹುದು ಎಂದು ಹೇಳಲಾಗಿದೆ.

ನೆರೆಯ ಪಾಕಿಸ್ತಾನದ ಇತಿಹಾಸದಲ್ಲಿ 1958ರಿಂದ ಅತ್ಯಂತ ಪ್ರಬಲವಾದ ಮೂರು ದಂಗೆಗಳು ಇನ್ನೂ ಹಚ್ಚಳಿಯದೇ ಉಳಿದಿರುವುದರಿಂದ ಹೂಡಿಕೆದಾರರ ಅಪಾಯವನ್ನು ಹೆಚ್ಚುತ್ತಿವೆ. ಇದರ ಜೊತೆಗೆ 70 ವರ್ಷದ ಇಮ್ರಾನ್ ಖಾನ್ ಮೇಲಿನ ಹತ್ಯೆ ಪ್ರಯತ್ನಗಳು ಹಿಂಸಾಚಾರವನ್ನು ತೀವ್ರಗೊಳಿಸಬಹುದು ಎಂದು ಒತ್ತಿ ಹೇಳಲಾಗುತ್ತಿದೆ.

ಪಾಕಿಸ್ತಾನದಲ್ಲಿ ಹೂಡಿಕೆ ಮಾಡುವುದೆಂದರೆ ದೊಡ್ಡ ಅಪಾಯಗಳಿಗೆ ಸಿದ್ಧವಾಗಿರಬೇಕು ಎಂದು ಪಾಕ್‌ನಲ್ಲಿ ದೀರ್ಘಕಾಲೀನ ಹೂಡಿಕೆದಾರ ಸಂಸ್ಥೆ ಎಬಿಆರ್‌ಡಿಎನ್ ಪಿಎಲ್‌ಸಿನ ಎಮರ್ಜಿಂಗ್ ಮಾರ್ಕೆಟ್ ಸಾವರಿನ್ ಡೆಬ್ಟ್ ಮುಖ್ಯಸ್ಥ ಎಡ್ವಿನ್ ಗುಟೈರೆಜ್ ಹೇಳಿದ್ದಾರೆ.

ಐಎಂಎಫ್ ನಿಧಿಯನ್ನು ಪಡೆಯಲು ವಿಫಲವಾದರೆ ಈ ವರ್ಷದ ಜೂನ್ ನಂತರ ಪಾಕಿಸ್ತಾನ ಡೀಫಾಲ್ಟ್ ಆಗಬಹುದು ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಸಂಸ್ಥೆ ಇದೇ ತಿಂಗಳು ಹೇಳಿತ್ತು.

ಕೊಲಂಬಿಯಾ ಥ್ರೆಡ್‌ನೀಡಲ್ ಇನ್ವೆಸ್ಟ್‌ಮೆಂಟ್‌ ಪ್ರಕಾರ, ಜುಲೈನಲ್ಲಿ ಪ್ರಾರಂಭವಾಗುವ 2024ರ ಆರ್ಥಿಕ ವರ್ಷಕ್ಕೆ ಪಾಕಿಸ್ತಾನದ ಬಾಹ್ಯ ಸಾಲ ಮಿತಿ 22 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಆ ರಾಷ್ಟ್ರದ ವಿದೇಶಿ ವಿನಿಮಯದ ಮೀಸಲುಗಳು ಐದು ಪಟ್ಟು ಹೆಚ್ಚಾಗಿದೆ.

ಎಲ್ಲಾ ಅಂಕಿ ಅಂಶಗಳು ಹಾಗೂ ಪ್ರಸಕ್ತ ಬೆಳವಣಿಗೆಗಳಿಂದ ಪಾಕಿಸ್ತಾನದಲ್ಲಿನ ಬಾಂಡ್‌ ಹೂಡಿಕೆದಾರರು ಹೆಚ್ಚು ಆತಂಕಕ್ಕೊಳಗಾಗಿದ್ದಾರೆ. ಪಾಕ್‌ನ ಡಾಲರ್ ಬಾಂಡ್‌ಗಳು ಸಂಕಷ್ಟದ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ ಎಂದು ವರದಿಯಾಗಿದೆ.

ಕಳೆದ ವಾರದ ಅಂತ್ಯದಲ್ಲಿ ರೂಪಾಯಿ ಮೌಲ್ಯವು ದಾಖಲೆಯ ಕನಿಷ್ಠ 1 ಡಾಲರ್‌ಗೆ 299ಕ್ಕೆ ಕುಸಿತ ಕಂಡಿದೆ. ನಿನ್ನೆ (ಮೇ 18, ಗುರುವಾರ) 285.6 ರೂಪಾಯಿಯಲ್ಲಿ ಕೊನೆಗೊಂಡಿದೆ. ಈ ವರ್ಷ ಪಾಕ್‌ ಕರೆನ್ಸಿ ಸುಮಾರು ಶೇ.20 ರಷ್ಟು ನಷ್ಟ ಅನುಭವಿಸಿದೆ. ಇದು ಇಡೀ ವಿಶ್ವದಲ್ಲೇ ಅತ್ಯಂತ ಕೆಟ್ಟ ಪ್ರದರ್ಶನದಲ್ಲಿ ಒಂದಾಗಿದೆ.

ವಿವಿಧ ಪ್ರಕರಣಗಳಲ್ಲಿನ ಎಫ್ಐಆರ್ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರನ್ನ ಇಸ್ಲಾಮಾಬಾದ್‌ನ ಹೈಕೋರ್ಟ್ ಬಳಿ ಸೇನಾ ಪಡೆ ಅರೆಸ್ಟ್ ಮಾಡಿತ್ತು. ಖಾನ್ ಬಂಧನ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು.

ಬಂಧನವಾದ ಎರಡ್ಮೂರು ದಿನಕ್ಕೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಬಂಧನಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಇಮ್ರಾನ್ ನನ್ನ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲ. ನನ್ನನ್ನು ಜೈಲಿನಲ್ಲಿ ಇಡಬೇಕೆಂಬುದೇ ಅವರ ಉದ್ದೇಶ. ನಾನು ಅದಕ್ಕೆ ಸಿದ್ಧನಿದ್ದೇನೆ ಅಂತ ಹೇಳಿದ್ದರು.

ಜೈಲಿನಿಂದ ಬಿಡುಗಡೆ ನಂತರವೂ ಅಲ್ಲಿನ ಸೇನೆ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ದೇಶದ್ರೋಹ ಆರೋಪದಡಿಯಲ್ಲಿ ನನ್ನನ್ನು ಮುಂದಿನ 10 ವರ್ಷಗಳ ಕಾಲ ಜೈಲಿನಲ್ಲಿ ಇರಿಸಲು ದೇಶದ ಸೇನೆ ಪ್ಲಾನ್ ಮಾಡಿಕೊಂಡಿದೆ. ಇದೀಗ ಸಂಪೂರ್ಣ ಲಂಡನ್ ಪ್ಲಾನ್ ಹೊರಬಂದಿದೆ ಎಂದು ಆರೋಪಿಸಿದ್ದರು.

IPL_Entry_Point

ವಿಭಾಗ