ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China Loan To Pakistan: ಪಾಕ್‌, ಶ್ರೀಲಂಕಾಗೆ ಚೀನಾದ ಸಾಲ: 'ಬಲವಂತದ ಹತೋಟಿ'ಯ ಉದ್ದೇಶ ಎಂದ ಅಮೆರಿಕ!

China Loan To Pakistan: ಪಾಕ್‌, ಶ್ರೀಲಂಕಾಗೆ ಚೀನಾದ ಸಾಲ: 'ಬಲವಂತದ ಹತೋಟಿ'ಯ ಉದ್ದೇಶ ಎಂದ ಅಮೆರಿಕ!

''ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಚೀನಾ ನೀಡುತ್ತಿರುವ ಸಾಲ ಅಗಾಧ ಪ್ರಮಾಣದಿಂದ ಕೂಡಿದೆ. ಚೀನಾ ಈ ಅವಕಾಶವನ್ನು ಎರಡೂ ರಾಷ್ಟ್ರಗಳನ್ನು ಬಲವಂತದ ಹತೋಟಿಗೆ ತೆಗೆದುಕೊಳ್ಳಲು ಬಳಸಿಕೊಳ್ಳಬಹುದು..'' ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿದ್ದಾರೆ. ಅಲ್ಲದೇ ಈ ವಿಚಾರವಾಗಿ ನಾವು ಭಾರತೊದೊಂದಿಗೆ ಮಾತನಾಡುತ್ತಿದ್ದೇವೆ ಎಂದು ಲು ಹೇಳಿದ್ದಾರೆ.

ಕ್ಸಿ ಜಿನ್‌ಪಿಂಗ್‌ (ಸಂಗ್ರಹ ಚಿತ್ರ)
ಕ್ಸಿ ಜಿನ್‌ಪಿಂಗ್‌ (ಸಂಗ್ರಹ ಚಿತ್ರ) (HT)

ವಾಷಿಂಗ್ಟನ್: ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾಗೆ ಡ್ರ್ಯಾಗನ್‌ ರಾಷ್ಟ್ರ ಚೀನಾ ಭಾರೀ ಪ್ರಮಾಣದಲ್ಲಿ ಸಾಲ ನೀಡುತ್ತಿದೆ. ಇದು ಈ ಭಾಗದಲ್ಲಿ ಭಾರತದ ಪ್ರಭಾವವವನ್ನು ಕಡಿಮೆ ಮಾಡುವ ಹಾಗೂ ಪಾಕ್‌ ಮತ್ತು ಶ್ರೀಲಂಕಾವನ್ನು ಬಲವಂತವಾಗಿ ಹತೋಟಿಗೆ ತೆಗೆದುಕೊಳ್ಳುವ ಚೀನಾದ ಹುನ್ನಾರ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ.

''ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಚೀನಾ ನೀಡುತ್ತಿರುವ ಸಾಲ ಅಗಾಧ ಪ್ರಮಾಣದಿಂದ ಕೂಡಿದೆ. ಚೀನಾ ಈ ಅವಕಾಶವನ್ನು ಎರಡೂ ರಾಷ್ಟ್ರಗಳನ್ನು ಬಲವಂತದ ಹತೋಟಿಗೆ ತೆಗೆದುಕೊಳ್ಳಲು ಬಳಸಿಕೊಳ್ಳಬಹುದು..'' ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮಾರ್ಚ್ 1 ರಿಂದ 3 ರವರೆಗೆ, ಮೂರು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಬರಲಿದ್ದಾರೆ. ಇದಕ್ಕೂ ಮೊದಲೇ ಪಾಕಿಸ್ತಾನ ಮತ್ತು ಶ್ರೀಲಂಕಾಗೆ ಚೀನಾ ನೀಡುತ್ತಿರುವ ನೆರವಿನ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.

''ಭಾರತವನ್ನು ಒಳಗೊಂಡಿರುವ ಈ ಪ್ರದೇಶದಲ್ಲಿನ ದೇಶಗಳು, ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಶಕ್ತರಾಗಿರಬೇಕು ಎಂಬುದು ಅಮೆರಿಕದ ಒತ್ತಾಸೆಯಾಗಿದೆ. ಯಾವುದೇ ಹೊರಗಿನ ಪಾಲುದಾರರ ಬಲವಂತವನ್ನು ಈ ದೇಶಗಳು ಸಹಿಸುವಂತಾಗಬಾರದು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾದ ಪರಿಸ್ಥಿತಿ ನಮ್ಮನ್ನು ಕಳವಳಗೊಳ್ಳುವಂತೆ ಮಾಡಿದೆ..'' ಎಂದು ಡೊನಾಲ್ಡ್ ಲು ಹೇಳಿದ್ದಾರೆ.

"ಈ ಪ್ರದೇಶದ ದೇಶಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು, ಈ ಪ್ರದೇಶದ ದೇಶಗಳೊಂದಿಗೆ ನಾವು ಮಾತನಾಡುತ್ತಿದ್ದೇವೆ. ಭಾರತ ಈ ನಿಟ್ಟಿನಲ್ಲಿ ನೀಡಬಹುದಾದ ನೆರವು ನಮಗೆ ಅತ್ಯಂತ ಪ್ರಮುಖವಾಗಿರುತ್ತದೆ.." ಎಂದು ಡೊನಾಲ್ಡ್ ಲು ಅಭಿಪ್ರಾಯಪಟ್ಟಿದ್ದಾರೆ.

ಚೀನಾ ಡೆವಲಪ್‌ಮೆಂಟ್ ಬ್ಯಾಂಕ್ (ಸಿಡಿಬಿ) ಪಾಕಿಸ್ತಾನಕ್ಕೆ 700 ಮಿಲಿಯನ್ ಅಮೆರಿಕನ್‌ ಡಾಲರ್ ಸಾಲ ಸೌಲಭ್ಯವನ್ನು ಅನುಮೋದಿಸಿದೆ ಎಂದು‌, ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಘೋಷಿಸಿದ ಮರುದಿನವೇ ಅಮೆರಿಕದಿಂದ ಇಂತಹ ಹೇಳಿಕೆ ಹೊರಬಿದ್ದಿದೆ. ಚೀನಾದ ಕುರಿತು ಭಾರತ ಮತ್ತು ಅಮೆರಿಕದ ನಡುವೆ ಗಂಭೀರ ಮಾತುಕತೆ ನಡೆಯುತ್ತಿದೆ ಎಂದು ಡೊನಾಲ್ಡ್ ಲು ಹೇಳಿರುವುದು ಇದೀಗ ಗಮನ ಸೆಳೆದಿದೆ.

"ನಾವು ಚೀನಾದ ಬಗ್ಗೆ ಗಂಭೀರವಾದ ಸಂಭಾಷಣೆಗಳನ್ನು ನಡೆಸಿದ್ದೇವೆ. ಅಮೆರಿಕದ ವಾಯು ಪ್ರದೇಶದಲ್ಲಿ ಕಂಡುಬಂದ ಚೀನಾದ ಸ್ಪೈ ಬಲೂನ್‌ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ. ಅಲ್ಲದೇ ಈ ವಿಚಾರವಾಗಿ ಎಚ್ಚರಿಕೆಯಿಂದ ಇರುವಂತೆಯೂ ನಾವು ಣಭಾರತಕ್ಕೆ ಮನವಿ ಮಾಡಿದ್ದೇವೆ.." ಎಂದು ಡೊನಾಲ್ಡ್ ಲು ಸ್ಪಷ್ಟಪಡಿಸಿದ್ದಾರೆ.

"ಕ್ವಾಡ್ ವಾಸ್ತವವಾಗಿ, ಯಾವುದೇ ಒಂದು ದೇಶ ಅಥವಾ ದೇಶಗಳ ಗುಂಪಿನ ವಿರುದ್ಧದ ಸಂಘಟನೆಯಲ್ಲ. ಕ್ವಾಡ್ ಮುಕ್ತ ಇಂಡೋ-ಪೆಸಿಫಿಕ್ ವ್ಯಾಪಾರವನ್ನು ಬಯಸುವ ಸಂಘಟನೆಯಾಗಿದೆ. ಅಲ್ಲದೇ ಕ್ವಾಡ್‌ ತನ್ನ ನಾಲ್ಕು ಸದಸ್ಯ ರಾಷ್ಟ್ರಗಳ ಮೌಲ್ಯಗಳನ್ನು ಪ್ರತಿಪಾದಿಸುವ ಸಂಘಟನೆಯೂ ಹೌದು.." ಎಂದು ಡೊನಾಲ್ಡ್ ಲು ಹೇಳಿದ್ದಾರೆ.

ರಷ್ಯಾದೊಂದಿಗಿನ ಭಾರತದ ಮಿಲಿಟರಿ ಸಂಬಂಧದ ಬಗ್ಗೆ ಕೇಳಿದಾಗ, ಭಾರತ ಒಂದು ಸಾರ್ವಭೌಮ ರಾಷ್ಟ್ರವಾಗಿದ್ದು, ಅದರ ನಿರ್ಧಾರಗಳನ್ನು ನಾವು ಪ್ರಶ್ನಿಸಲು ಬರುವುದಿಲ್ಲ. ಆದರೆ ಮಿಲಿಟರಿ ಒಪ್ಪಂದಗಳಿಗೆ ಅನುಗುಣವಾಗಿ, ಜಾಗತಿಕವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಲು ಈಗ ರಷ್ಯಾಗೆ ಸಾಧ್ಯವಾಗುತ್ತಿಲ್ಲ ಎಂಬುದು ಸತ್ಯ ಎಂದು ಡೊನಾಲ್ಡ್ ಲು ಹೇಳಿದ್ದಾರೆ.

ಭಾರತ-ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧ ಐತಿಹಾಸಿಕವಾಗಿದ್ದು, ಅಷ್ಟು ಸುಲಭನವಾಗಿ ಇದು ಶಿಥಿಲಗೊಳ್ಳುವುದಿಲ್ಲ. ಬದಲಾಗಿ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧ ಗಟ್ಟಿಯಾಗುತ್ತಲೇ ಹೋಗುತ್ತದೆ ಎಂದು ಡೊನಾಲ್ಡ್ ಲು ಭರವಸೆ ವ್ಯಕ್ತಪಡಿಸಿದ್ದಾರೆ.

IPL_Entry_Point

ವಿಭಾಗ