ಕನ್ನಡ ಸುದ್ದಿ  /  ಕ್ರಿಕೆಟ್  /  ಎಸ್‌ಆರ್‌ಎಚ್‌ Vs ಎಲ್‌ಎಸ್‌ಜಿ ಏಕೈಕ ಮುಖಾಮುಖಿಗೆ ಮಳೆ ಭೀತಿ; ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ

ಎಸ್‌ಆರ್‌ಎಚ್‌ vs ಎಲ್‌ಎಸ್‌ಜಿ ಏಕೈಕ ಮುಖಾಮುಖಿಗೆ ಮಳೆ ಭೀತಿ; ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ

ಐಪಿಎಲ್‌ 2024ರ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಮೊದಲ ಹಾಗೂ ಏಕೈಕ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಿಗೂ ಪ್ಲೇ ಆಫ್‌ ಕನಸಿದ್ದು, ಗೆಲುವು ಅನಿವಾರ್ಯವಾಗಿದೆ.

ಎಸ್‌ಆರ್‌ಎಚ್‌ vs ಎಲ್‌ಎಸ್‌ಜಿ ಏಕೈಕ ಮುಖಾಮುಖಿಗೆ ಮಳೆ ಭೀತಿ
ಎಸ್‌ಆರ್‌ಎಚ್‌ vs ಎಲ್‌ಎಸ್‌ಜಿ ಏಕೈಕ ಮುಖಾಮುಖಿಗೆ ಮಳೆ ಭೀತಿ (PTI)

ಐಪಿಎಲ್‌ ಪಂದ್ಯಾವಳಿಯು ರೋಚಕ ಹಂತದತ್ತ ತಲುಪುತ್ತಿದೆ. ಪ್ಲೇ ಆಫ್‌ಗೆ ಲಗ್ಗೆ ಹಾಕಲು ತಂಡಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಇದೀಗ ಮೇ 8ರ ಬುಧವಾರ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಎಸ್‌ಆರ್‌ಎಚ್‌ ತವರು ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ರನ್‌ ಮಳೆ ಹರಿಯುವ ನಿರೀಕ್ಷೆ ಇದೆ. ಉಭಯ ತಂಡಗಳ ಬಳಿ ಸದ್ಯ ತಲಾ 12 ಅಂಕಗಳಿದ್ದು, ನೆಟ್‌ ರನ್‌ ರೇಟ್‌ನಿಂದ ಎಸ್‌ಆರ್‌ಎಚ್‌ ನಾಲ್ಕನೇ ಸ್ಥಾನದಲ್ಲಿದ್ದರೆ, ಲಕ್ನೋ ಐದನೇ ಸ್ಥಾನ ಪಡೆದಿದೆ. ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದು, ಗೆದ್ದರೆ ಪ್ಲೇ ಆಫ್‌ ಹಂತಕ್ಕೆ ಹತ್ತಿರವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಈ ಎರಡೂ ತಂಡಗಳು ಆಡಿದ ಕೊನೆಯ ಪಂದ್ಯಗಳಲ್ಲಿ ಸೋಲು ಅನುಭವಿಸಿವೆ. ಹೀಗಾಗಿ ಲೀಗ್ ಹಂತದಲ್ಲಿ ಉಳಿದ ಮೂರು ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ. ಹೈದರಾಬಾದ್‌ ತಂಡವು ಉಳಿದ ಮೂರೂ ಪಂದ್ಯಗಳನ್ನು ತವರಿನಲ್ಲಿ ಆಡುತ್ತಿದೆ. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಕೊನೆಯ ಪಂದ್ಯದಲ್ಲಿ ಎಸ್‌ಆರ್‌ಎಚ್‌ ಇಂಪ್ಯಾಕ್ಟ್ ಪ್ಲೇಯರ್ ಆಗಿ ಉಮ್ರಾನ್ ಮಲಿಕ್ ಆಡುವ ಸಾಧ್ಯತೆ ಇತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ತಂಡ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡ ಬಳಿಕ ಬ್ಯಾಟರ್‌ ಸನ್ವಿರ್ ಸಿಂಗ್ ಈ ಪಾತ್ರದಲ್ಲಿ ಬಂದರು. ಹೀಗಾಗಿ ಮಯಾಂಕ್ ಅಗರ್ವಾಲ್ ಅಥವಾ ಅಭಿಷೇಕ್ ಶರ್ಮಾ ಬದಲಿಗೆ ಟಿ ನಟರಾಜನ್ ಅಥವಾ ಉಮ್ರಾನ್ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡುವ ಸಾಧ್ಯತೆ ಇದೆ. ಮುಂಬೈ ವಿರುದ್ಧ ಮಾರ್ಕೊ ಜಾನ್ಸೆನ್ ಉತ್ತಮ ಬೌಲಿಂಗ್‌ ನಡೆಸಿದ್ದರು. ಹೀಗಾಗಿ ಅವರು ಆಡುವ ಬಳಗದಲ್ಲಿ ಉಳಿಯುವ ಸಾಧ್ಯತೆ ಇದೆ.‌

ಇದನ್ನೂ ಓದಿ | ಸೂರ್ಯಕುಮಾರ್‌ ಯಾದವ್‌ ಪ್ರಚಂಡ ಶತಕ; ಸನ್‌ರೈಸರ್ಸ್‌ ವಿರುದ್ಧ 7 ವಿಕೆಟ್‌ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್

ಮೊಹ್ಸಿನ್‌ ಖಾನ್‌ ಹೊರಕ್ಕೆ

ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೊನೆಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಮೊಹ್ಸಿನ್ ಖಾನ್ ತಲೆಗೆ ಪೆಟ್ಟಾಗಿತ್ತು. ಆ ಬಳಿಕ ಅವರ ಬದಲಿಗೆ ಕನ್ಕ್ಯುಶನ್ ಬದಲಿ ಆಟಗಾರನನ್ನು ಆಡಿಸಲಾಯ್ತು. ಸದ್ಯ ಮೊಹ್ಸಿನ್ ಆಡುವ ಸಾಧ್ಯತೆ ಇಲ್ಲ. ತಂಡದ ಕೊನೆಯ ಎರಡು ಪಂದ್ಯಗಳಲ್ಲಿ ಅರ್ಶಿನ್ ಕುಲಕರ್ಣಿ ಎಲ್‌ಎಸ್‌ಜಿ ತಂಡದ ಇಂಪ್ಯಾಕ್ಟ್ ಆಟಗಾರರಾಗಿದ್ದಾರೆ. ಇದು ಹೀಗೆಯೇ ಮುಂದುವರೆಯುವ ನಿರೀಕ್ಷೆ ಇದೆ.

ಹೈದರಾಬಾದ್‌ ಹವಾಮಾನ ವರದಿ

ಪಂದ್ಯದ ಮುನ್ನಾದಿನವಾದ ಮಂಗಳವಾರದಂದು ಮುತ್ತಿನ ನಗರಿಯಲ್ಲಿ ಮಳೆಯಿಂದಾಗಿ ಲಕ್ನೋ ತಂಡದ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಲಾಗಿತ್ತು. ಪಂದ್ಯದ ದಿನವೂ ನಗರದಲ್ಲಿ ಮಳೆಯ ನಿರೀಕ್ಷೆ ಇದೆ. ನಗರದಲ್ಲಿ ತಾಪಮಾನವು 27ರಿಂದ 33 ಡಿಗ್ರಿಯವರೆಗೆ ಇರುವ ಸಾಧ್ಯತೆ ಇದೆ.

ಹೈದರಾಬಾದ್‌ ಪಿಚ್‌ ವರದಿ

ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ. ಪ್ರಸಕ್ತ ಆವೃತ್ತಿಯಲ್ಲಿ ಪಿಚ್ ಬ್ಯಾಟರ್‌ಗಳಿಗೆ ನೆರವಾಗಿದೆ. ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ 200ಕ್ಕೂ ಅಧಿಕ ರನ್‌ಗಳು ಹರಿದು ಬಂದಿವೆ.

ಸನ್‌ರೈಸರ್ಸ್‌ ಹೈದರಾಬಾದ್ ಸಂಭಾವ್ಯ ತಂಡ

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಮಯಾಂಕ್ ಅಗರ್ವಾಲ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಭುವನೇಶ್ವರ್ ಕುಮಾರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಟಿ ನಟರಾಜನ್, ಉಮ್ರಾನ್ ಮಲಿಕ್/ಜಯದೇವ್ ಉನದ್ಕತ್ (ಇಂಪ್ಯಾಕ್ಟ್‌ ಪ್ಲೇಯರ್‌).

ಲಕ್ನೋ ಸಂಭಾವ್ಯ ಆಡುವ ಬಳಗ

ಕೆಎಲ್ ರಾಹುಲ್, ಅರ್ಶಿನ್ ಕುಲಕರ್ಣಿ, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಶ್ಟನ್ ಟರ್ನರ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ನವೀನ್-ಉಲ್-ಹಕ್, ಯಶ್ ಠಾಕೂರ್ (ಇಂಪ್ಯಾಕ್ಟ್‌ ಪ್ಲೇಯರ್‌).

IPL_Entry_Point