ಕನ್ನಡ ಸುದ್ದಿ  /  Nation And-world  /  Class 10 Exams Assam To Abolish Class 10 Exams Merge Two Boards Education Reforms Nep Implementation Fact Checking Uks

Class 10 exams: ಈ ರಾಜ್ಯದಲ್ಲಿನ್ನು 10ನೇ ತರಗತಿ ಪರೀಕ್ಷೆ ಚಿಂತೆ ಇಲ್ಲ; 2 ಪರೀಕ್ಷಾ ಮಂಡಳಿಗಳ ವಿಲೀನ

Class 10 exams: ಹತ್ತನೇ ತರಗತಿ ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟ. ಬೋರ್ಡ್‌ ಪರೀಕ್ಷೆ ಎಂದರೆ ಸಾಕು ಅನೇಕರಿಗೆ ಚಿಂತೆ. ಆದರೆ, ಎನ್‌ಇಪಿ ಜಾರಿಯಾಗುತ್ತಿರುವ ಕಾರಣ 10ನೇ ತರಗತಿ ಬೋರ್ಡ್‌ ಪರೀಕ್ಷೆ ರದ್ದುಗೊಳಿಸಿದೆ ಈ ರಾಜ್ಯ ಸರ್ಕಾರ. ಎಲ್ಲಿ ಯಾವ ರಾಜ್ಯ ಸರ್ಕಾರ ಎಂಬಿತ್ಯಾದಿ ವಿವರಗಳಿಗೆ ಮುಂದೆ ಓದಿ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತಂದ ಮತ್ತು ಶಿಕ್ಷಣ ಕ್ಷೇತ್ರವನ್ನು ತರ್ಕಬದ್ಧಗೊಳಿಸಿದ ಮೊದಲ ರಾಜ್ಯಗಳಲ್ಲಿ ಅಸ್ಸಾಂ ಒಂದು ಎಂದು ಅಸ್ಸಾಂ ಮುಖ್ಯಮಂತ್ರಿ ಕಚೇರಿ ಹೇಳಿದೆ. (ಪ್ರಾತಿನಿಧಿಕ ಚಿತ್ರ)
ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತಂದ ಮತ್ತು ಶಿಕ್ಷಣ ಕ್ಷೇತ್ರವನ್ನು ತರ್ಕಬದ್ಧಗೊಳಿಸಿದ ಮೊದಲ ರಾಜ್ಯಗಳಲ್ಲಿ ಅಸ್ಸಾಂ ಒಂದು ಎಂದು ಅಸ್ಸಾಂ ಮುಖ್ಯಮಂತ್ರಿ ಕಚೇರಿ ಹೇಳಿದೆ. (ಪ್ರಾತಿನಿಧಿಕ ಚಿತ್ರ) (HT)

ಹತ್ತನೇ ತರಗತಿ ಪರೀಕ್ಷೆ ಅಂದರೆ ಅದು ಬಹುತೇಕ ವಿದ್ಯಾರ್ಥಿಗಳ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಈ ರಾಜ್ಯದ ವಿದ್ಯಾರ್ಥಿಗಳಿಗೆ ಇನ್ನು 10ನೇ ತರಗತಿ ಬೋರ್ಡ್‌ ಪರೀಕ್ಷೆಯ ಆತಂಕ ಇಲ್ಲ. ಅವರಿನ್ನು ಶಾಲಾ ಪರೀಕ್ಷೆ ಬರೆದು ನೇರವಾಗಿ 11ನೇ ತರಗತಿಗೆ ಪ್ರವೇಶ ಪಡೆಯಬಹುದು.

ಹೌದು ಅಸ್ಸಾಂ ಸರ್ಕಾರ ಇಂಥದ್ದೊಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಶಿಕ್ಷಣ ಸುಧಾರಣೆಯ ಕ್ರಮದ ಭಾಗವಾಗಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಅಸ್ಸಾಂ ಸರ್ಕಾರವು ಸೆಕೆಂಡರಿ ಮತ್ತು ಹೈಯರ್‌ ಸೆಕೆಂಡರಿ ಸ್ಕೂಲ್‌ ಬೋರ್ಡ್‌ಗಳನ್ನು ವಿಲೀನಗೊಳಿಸಲಿದೆ ಎಂದು HT ಕನ್ನಡದ ಮಾತೃತಾಣ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಶಾಲಾ ಮಟ್ಟದಲ್ಲಿ ನಡೆಯಲಿದೆ 10ನೇ ತರಗತಿ ಪರೀಕ್ಷೆ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕಚೇರಿ (CMO) ಮಂಗಳವಾರ ಮಾಡಿರುವ ಟ್ವೀಟ್‌ನಲ್ಲಿ, 10 ನೇ ತರಗತಿ ಪರೀಕ್ಷೆಯನ್ನು ಶಾಲಾ ಮಟ್ಟದಲ್ಲೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ನೇರವಾಗಿ 11 ನೇ ತರಗತಿಗೆ ಪ್ರವೇಶ ಪಡೆಯಬಹುದು. ಎರಡು ಮಂಡಳಿಗಳ ವಿಲೀನ ಕೂಡ ನಡೆಯಲಿದೆ. ಇದರಿಂದ ಯಾವುದೇ ನಷ್ಟ ಉಂಟಾಗುವುದಿಲ್ಲ ಎಂದು ಹೇಳಿದೆ.

"ವಿಲೀನವು ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಹಂತದಲ್ಲಿ ಶಿಕ್ಷಣಕ್ಕೆ ಒಂದು ಸುಸಂಬದ್ಧ ವಿಧಾನವನ್ನು ಖಚಿತಪಡಿಸುವುದು. ವಿಲೀನದಿಂದ ಯಾರೂ ತಮ್ಮ ಕೆಲಸವನ್ನು ಕಳೆದುಕೊಳ್ಳುವುದಿಲ್ಲ. ಎನ್‌ಇಪಿಯನ್ನು ಜಾರಿಗೆ ತಂದ ಮತ್ತು ಶಿಕ್ಷಣ ಕ್ಷೇತ್ರವನ್ನು ತರ್ಕಬದ್ಧಗೊಳಿಸಿದ ಮೊದಲ ರಾಜ್ಯಗಳಲ್ಲಿ ಅಸ್ಸಾಂ ಒಂದಾಗಿ ಸಾಧನೆ ಮಾಡಿದೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ ಅವರು ಸೋಮವಾರ ಗುವಾಹಟಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ಎನ್‌ಇಪಿ 2020ಕ್ಕೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆ ಜಾರಿ ಶುರು

"ಎಲ್ಲ ಲೋಯರ್ ಪ್ರೈಮರಿಯನ್ನು ಹತ್ತಿರದ ಎಂಇ ಶಾಲೆಗಳೊಂದಿಗೆ ವಿಲೀನಗೊಳಿಸುವುದನ್ನು ಒಳಗೊಂಡಂತೆ ನಾವು ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಎಲ್ಲ ಹೈಸ್ಕೂಲ್‌ಗಳನ್ನು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ" ಎಂದು ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಅಸ್ಸಾಂ ಸರ್ಕಾರವು ಜೂನ್ 3 ರಂದು ಎಲ್ಲ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಪ್ರಾರಂಭಿಸಿತು. ರಾಜ್ಯದಾದ್ಯಂತ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು 2024 ರ ಶೈಕ್ಷಣಿಕ ಅಧಿವೇಶನದಿಂದ 4 ವರ್ಷಗಳ ಪದವಿಪೂರ್ವ ಪದವಿಯನ್ನು ನೀಡುತ್ತವೆ ಎಂದು ಮುಖ್ಯಮಂತ್ರಿ ಘೋಷಿಸಿದರು.

ರಾಜ್ಯ ಸರ್ಕಾರವು NEP 2020 ಅನ್ನು ಜಾರಿಗೆ ತರಲು ಮೊದಲಿನಿಂದಲೂ ಬದ್ಧವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದು ಕ್ರಮೇಣ ಅನುಷ್ಠಾನಗೊಳ್ಳುತ್ತಿದೆ. ಅಸ್ಸಾಂನಲ್ಲಿ ಶೈಕ್ಷಣಿಕ ಉತ್ಕೃಷ್ಟತೆಯ ಪ್ರಯಾಣದಲ್ಲಿ, ಮುಂಬರುವ ದಿನಗಳಲ್ಲಿ ಈ ಉಪಕ್ರಮಗಳು ಮೈಲಿಗಲ್ಲುಗಳಾಗಲಿವೆ ”ಎಂದು ಜೂನ್ 3 ರಂದು ನೀತಿಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಸರ್ಮಾ ಹೇಳಿದರು.

“NEP 2020 ಉನ್ನತ ಶಿಕ್ಷಣದಲ್ಲಿ ವಿಭಾಗೀಕರಣವನ್ನು ಸವಾಲು ಮಾಡುವ ಮೊದಲ ಶಿಕ್ಷಣ ನೀತಿಯಾಗಿದೆ.ಬಹು-ಶಿಸ್ತಿನ ವಿಧಾನದೊಂದಿಗೆ ಉನ್ನತ ಶಿಕ್ಷಣವನ್ನು ರೂಪಿಸುವುದನ್ನು ಬೆಂಬಲಿಸುತ್ತದೆ. ಮೊದಲ ಬಾರಿಗೆ, ವಿಜ್ಞಾನ, ಕಲೆ, ವಾಣಿಜ್ಯ ಮುಂತಾದ ಸ್ಟ್ರೀಮ್‌ಗಳಲ್ಲಿನ ಕಟ್ಟುನಿಟ್ಟಾದ ವ್ಯತ್ಯಾಸಗಳನ್ನು ತೆಗೆದುಹಾಕಿರುವ ಉದಾರ ಶಿಕ್ಷಣವನ್ನು ಪ್ರಸ್ತಾಪಿಸಲಾಗಿದೆ”ಎಂದು ಅವರು ಹೇಳಿದರು.

ಪಿಐಬಿ ಫ್ಯಾಕ್ಟ್‌ಚೆಕ್‌ ವರದಿ ಹೇಳಿದ್ದೇ ಬೇರೆ…

ಈ ವರ್ಷದ ಏಪ್ರಿಲ್ 1 ರಂದು ಕೇಂದ್ರ ಸರ್ಕಾರದ ಪ್ರೆಸ್‌ ಇನ್ಫರ್ಮೇಷನ್ ಬ್ಯೂರೋ (ಪಿಐಬಿ)ದ ಫ್ಯಾಕ್ಟ್‌ಚೆಕ್‌ ವಿಭಾಗವು, ಎನ್‌ಇಪಿ ಅಡಿಯಲ್ಲಿ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವ ವರದಿ ಫೇಕ್‌ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಬಹುದು.

“NEP ಅಡಿಯಲ್ಲಿ 10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲು ಯಾವುದೇ ಅವಕಾಶವಿಲ್ಲ. ದಯವಿಟ್ಟು ಇಂತಹ ತಪ್ಪು ಸಂದೇಶಗಳನ್ನು ಫಾರ್ವರ್ಡ್ ಮಾಡಬೇಡಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿತ್ತು.

IPL_Entry_Point