Wipro lays off: ಭಾರತದ ಬಹುರಾಷ್ಟ್ರೀಯ ಕಂಪನಿ ವಿಪ್ರೊದಿಂದ ಉದ್ಯೋಗ ಕಡಿತ
ವಜಾಗೊಂಡವರಲ್ಲಿ 100 ಕ್ಕೂ ಹೆಚ್ಚು ಜನರು ಸಂಸ್ಕರಣಾ ಏಜೆಂಟ್‌ಗಳಾಗಿದ್ದು, ಉಳಿದವರು ತಂಡದ ನಾಯಕರು ಮತ್ತು ತಂಡದ ವ್ಯವಸ್ಥಾಪಕರಾಗಿದ್ದಾರೆ.
ಜಗತ್ತಿನಾದ್ಯಂತ ಆರ್ಥಿಕ ಬಿಕ್ಕಟ್ಟು ಪ್ರೇರಿತ ಉದ್ಯೋಗ ಕಡಿತ ಮುಂದುವರೆದಿದೆ. ಭಾರತದ ಬಹುರಾಷ್ಟ್ರೀಯ ಕಂಪನಿ ವಿಪ್ರೋ ಇದೀಗ ಅಮೆರಿಕದಲ್ಲಿ 120 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಫ್ಲೋರಿಡಾದ ಟ್ಯಾಂಪಾ ಕಚೇರಿಯ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ವ್ಯವಹಾರದ ಮರುಜೋಡಣೆ ಉದ್ದೇಶಕ್ಕಾಗಿ ಉದ್ಯೋಗ ಕಡಿತ ಮಾಡಲಾಗಿದೆ ಎನ್ನಲಾಗಿದೆ.
ಟ್ರೆಂಡಿಂಗ್ ಸುದ್ದಿ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಯು ಕೆಲಸಗಾರರ ಹೊಂದಾಣಿಕೆ ಮತ್ತು ಮರುತರಬೇತಿ ಅಧಿಸೂಚನೆಯಲ್ಲಿ ಉದ್ಯೋಗಿಗಳ ವಜಾಗೊಳಿಸುವಿಕೆಯ ಕುರಿತು ಮಾಹಿತಿ ನೀಡಿದೆ. ಈ ಕುರಿತು ವಿವರವನ್ನು ಫ್ಲೋರಿಡಾದ ಆರ್ಥಿಕ ಇಲಾಖೆಗೆ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.
"ವಿಪ್ರೋ ಕಂಪನಿಯು ಈ (ಟ್ಯಾಂಪಾ) ಪ್ರದೇಶಕ್ಕೆ ಆಳವಾಗಿ ಬದ್ಧವಾಗಿದೆ. ಟ್ಯಾಂಪಾ ಪ್ರದೇಶದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಇತರೆ ಎಲ್ಲಾ ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಪ್ರೊ ಹೇಳಿಕೆಯಲ್ಲಿ ತಿಳಿಸಿದೆ.
ವಜಾಗೊಳಿಸಿದವರಲ್ಲಿ, 100 ಕ್ಕೂ ಹೆಚ್ಚು ಜನರು ಸಂಸ್ಕರಣಾ ಏಜೆಂಟ್‌ಗಳಾಗಿದ್ದು, ಉಳಿದವರು ತಂಡದ ನಾಯಕರು ಮತ್ತು ತಂಡದ ವ್ಯವಸ್ಥಾಪಕರಾಗಿದ್ದಾರೆ. ಕಾಯಂ ಉದ್ಯೋಗಿಗಳ ಉದ್ಯೋಗ ಕಡಿತವು ಮೇ ತಿಂಗಳಿನಲ್ಲಿ ಆರಂಭವಾಗಲಿವೆ. ಅಮೆರಿಕ, ಕೆನಡಾ, ಮೆಕ್ಸಿಕೋ ಮತ್ತು ಬ್ರೆಜಿಲ್‌ನಾದ್ಯಂತ, ವಿಪ್ರೋ 20,500 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ವಿಪ್ರೊ ಕಂಪನಿಯು ಈ ವರ್ಷದ ಜನವರಿಯಲ್ಲಿ ಭಾರತದಲ್ಲಿ 452 ಫ್ರೆಶರ್‌ಗಳ ಉದ್ಯೋಗ ಕಡಿತ ಮಾಡಿತ್ತು. ಹೊಸಬರನ್ನು ಕಳಪೆ ಕಾರ್ಯನಿರ್ವಹಣೆ ಹೆಸರಿನಲ್ಲಿ ಕೆಲಸದಿಂದ ತೆಗೆಯಲಾಗಿತ್ತು. ಇದೇ ಸಮಯದಲ್ಲಿ ಉದ್ಯೋಗಕ್ಕೆ ಸೇರಲು ಆನ್‌ಬೋರ್ಡ್‌ಗೆ ಕಾಯುತ್ತಿದ್ದ ಉದ್ಯೋಗಿಗಳಲ್ಲಿ ಮೊದಲು ನಿಗದಿಪಡಿಸಿದ್ದಕ್ಕಿಂತ ಕಡಿಮೆ ವೇತನಕ್ಕೆ ಉದ್ಯೋಗಕ್ಕೆ ಸೇರಲು ಸಿದ್ಧರಿರುವಿರೇ ಎಂದು ಕೇಳಲಾಗಿತ್ತು.
ಫೇಸ್‌ಬುಕ್‌ನಿಂದಲೂ ಉದ್ಯೋಗ ಕಡಿತ
ಫೇಸ್‌ಬುಕ್‌ನ ಮಾತೃ ಸಂಸ್ಥೆಯಾದ ಮೆಟಾ ಪ್ಲಾಟ್‌ಫಾರ್ಮ್ಸ್ ಮುಂಬರುವ ತಿಂಗಳುಗಳಲ್ಲಿ ಎರಡನೇ ಹಂತದ ಉದ್ಯೋಗ ಕಡಿತಕ್ಕೆ ಯೋಜಿಸಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಮುಂದಿನ ದಿನಗಳಲ್ಲಿ ಬಹುಹಂತಗಳಲ್ಲಿ ಹೆಚ್ಚುವರಿಯಾಗಿ ಉದ್ಯೋಗ ಕಡಿತ ಮಾಡಲಾಗುತ್ತದೆ. ಕಳೆದ ವರ್ಷ ಕಂಪನಿಯು ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇಕಡ 13 ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಈ ಬಾರಿಯೂ ಇಷ್ಟೇ ಉದ್ಯೋಗ ಕಡಿತವಾಗುವ ಸೂಚನೆಯನ್ನು ಮೂಲಗಳು ನೀಡಿವೆ ಎಂದು ವರದಿಗಳು ತಿಳಿಸಿವೆ.
ಈ ಬಾರಿಯೂ ಶೇಕಡ ಶೇಕಡ 13ರಷ್ಟು ಅಥವಾ 11 ಸಾವಿರದಷ್ಟು ಉದ್ಯೋಗ ಕಡಿತಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಿದ್ದರೂ, ಈ ತ್ರೈಮಾಸಿಕದಲ್ಲಿ ಎಷ್ಟು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ಟ್ವಿಟ್ಟರ್‌ನಿಂದಲೂ ಜಾಬ್ ಕಟ್
ಸಾಮಾಜಿಕ ಮಾಧ್ಯಮ ಮತ್ತು ಮೈಕ್ರೋಬ್ಲಾಗಿಂಗ್ ನೆಟ್‌ವರ್ಕಿಂಗ್ ಕಂಪನಿ ಟ್ವಿಟರ್ ಮತ್ತೊಮ್ಮೆ ಉದ್ಯೋಗಿಗಳನ್ನು ವಜಾಗೊಳಿಸಿದೆ. ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಹೊಸದಾಗಿ 200 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಕಳೆದ ತಿಂಗಳು ವರದಿ ಮಾಡಿತ್ತು. ಇದರರ್ಥ ಕಂಪನಿಯು ತನ್ನ ಸಿಬ್ಬಂದಿಯಲ್ಲಿ ಶೇ. 10 ರಷ್ಟು ಉದ್ಯೋಗ ಕಡಿತಗೊಳಿಸಿದೆ. ಈ ಕಡಿತದಲ್ಲಿ ಟ್ವಿಟರ್ ನೀಲಿ ಟಿಕ್ ಮುಖ್ಯಸ್ಥೆ ಎಸ್ತರ್ ಕ್ರಾಫೋರ್ಡ್ ಕೂಡ ಸೇರಿದ್ದಾರೆ.
ಡೆಲ್‌ನಿಂದ 6,500 ಉದ್ಯೋಗ ಕಡಿತ
ಡೆಲ್ ಟೆಕ್ನಾಲಜೀಸ್ ಐಎನ್‌ಸಿಯು ಸುಮಾರು 6500 ಸಿಬ್ಬಂದಿಗಳನ್ನು ಅಥವಾ ತನ್ನ ಜಾಗತಿಕ ಉದ್ಯೋಗ ಪಡೆಯಲ್ಲಿ ಶೇಕಡ 5ರಷ್ಟು ಉದ್ಯೋಗಿಗಳ ಉದ್ಯೋಗ ಕಡಿತ ಮಾಡಲು ಯೋಜಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಈ ಮೂಲಕ ಜಾಗತಿಕವಾಗಿ ಉದ್ಯೋಗ ಕಡಿತ ಮಾಡುತ್ತಿರುವ ಪ್ರಮುಖ ಕಂಪನಿಗಳ ಸಾಲಿಗೆ ಡೆಲ್ ಸೇರಿದೆ. "ಕಂಪನಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ತೊಂದರೆಗಳಾಗುತ್ತಿದ್ದು, ಅನಿಶ್ಚಿತ ಭವಿಷ್ಯವಿದೆ" ಎಂದು ಡೆಲ್‌ನ ಮುಖ್ಯ ಸಹ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಕ್ಲರ್ಕ್ ಹೇಳಿದ್ದಾರೆ.