ಕನ್ನಡ ಸುದ್ದಿ  /  Nation And-world  /  Lok Sabha Election 2024 Apart From Some Minor Incidents Voting In 102 Constituencies Over Rmy

ಲೋಕಸಭೆ ಚುನಾವಣೆ 2024: ಮಣಿಪುರ ಸೇರಿ ಅಲ್ಲಲ್ಲಿ ಸಣ್ಣಪುಟ್ಟ ಗೊಂದಲ, 102 ಕ್ಷೇತ್ರಗಳ ಮೊದಲ ಹಂತದ ಮತದಾನ ಸುಗಮ, ಶೇಕಡಾ 64 ರಷ್ಟು ವೋಟಿಂಗ್

ಲೋಕಸಭೆ ಚುನಾವಣೆಯ 102 ಕ್ಷೇತ್ರಗಳ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಶೇಕಡಾ 64 ರಷ್ಟು ಮತದಾನವಾಗಿದೆ.

ಅಸ್ಸಾಂನ ಸಿವಾಸ್ಗರ್ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ಬಂದು ಮತದಾನ ಮಾಡಿದರು. ಲೋಕಸಭೆ ಚುನಾವಣೆಯ ಮೊದಲ ಹಂತದ 102 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ.
ಅಸ್ಸಾಂನ ಸಿವಾಸ್ಗರ್ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ಬಂದು ಮತದಾನ ಮಾಡಿದರು. ಲೋಕಸಭೆ ಚುನಾವಣೆಯ ಮೊದಲ ಹಂತದ 102 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ.

ದೆಹಲಿ: 18ನೇ ಲೋಕಸಭೆ ಚುನಾವಣೆಯ (18th Lok Sabha Election 2024) ಮೊದಲ ಹಂತದ 102 ಲೋಕಸಭಾ ಕ್ಷೇತಗಳ ಮತದಾನ ಅಂತ್ಯಗೊಂಡಿದೆ. ಇಂದು ಸಂಜೆ (ಏಪ್ರಿಲ್ 19, ಶುಕ್ರವಾರ) ಒಟ್ಟಾರೆಯಾಗಿ ಶೇ. 64 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. ಇದರ ನಡುವೆಯೇ ಅಚ್ಚರಿ ಎಂದರೆ ನಾಗಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನವಾಗಿದೆ. ಈ ರೀತಿ ನಡೆದಿರುವುದು ನಾಗಲ್ಯಾಂಡ್ ಇತಿಹಾಸದಲ್ಲೇ ಇದೇ ಮೊದಲು. ಮಣಿಪುರದಲ್ಲಿ (Manipur Lok Sabha Elections) ಶಸ್ತ್ರಸಜ್ಜಿತ ವ್ಯಕ್ತಿಗಳು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿ ಕೆಲಕಾಲ ಆತಂಕ ಮೂಡಿಸಿದ್ದು, ಇಂಫಾಲ್‌ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಪಕ್ಷದ ಏಜೆಂಟರನ್ನು ಸ್ಥಳದಿಂದ ಖಾಲಿ ಮಾಡುವಂತೆ ಒತ್ತಾಯಿಸಿ ಮತದಾರರಿಗೆ ಒಂದು ಪಕ್ಷಕ್ಕೆ ಮತ ಚಲಾಯಿಸುವಂತೆ ಬೆದರಿಕೆ ಹಾಕಿದ್ದು ಸೇರಿದಂತೆ ಅಲ್ಲಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಕಡೆ ಮತದಾನ ಸುಗಮವಾಗಿದೆ.

21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನವಾಗಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 16.63 ಕೋಟಿ ಮತದಾರರು ಹಕ್ಕು ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದರು. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಬಿಹಾರ, ಛತ್ತೀಸ್‌ಗಢ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ತಮಿಳುನಾಡು, ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಪುದುಚೇರಿ.

ಯಾರೆಲ್ಲಾ ವೋಟ್‌ ಮಾಡಿದ್ರು?

ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಸ್ಟಾರ್‌ಗಳು ತಮ್ಮ ಮತವನ್ನು ಚಲಾಯಿಸಿದ್ದಾರೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್, ಕಮಲ್ ಹಾಸನ್, ವಿಜಯ್ ಸೇತುಪತಿ, ಧನುಷ್, ನಟಿ ತ್ರಿಶಾ, ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಸೇರಿದಂತೆ ಹಲವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸರ್ಬಾನಂದ ಸೋನೋವಾಲ್, ಭೂಪೇಂದ್ರ ಯಾದವ್, ಕಿರಣ್ ರಿಜಿಜು, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಸೇರಿದಂತೆ ಹಲವರು ರಾಜಕೀಯ ಭವಿಷ್ಯ ಮತಪಟ್ಟೆಗೆ ಸೇರಿದೆ.

ನಾಗಾಲ್ಯಾಂಡ್ ಆರು ಜಿಲ್ಲೆಗಳಲ್ಲಿ ಶೂನ್ಯ ಮತದಾನಕ್ಕೆ ಕಾರಣವೇನು?

ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ಘೋಷಿಸಿರುವ ಸಾರ್ವಜನಿಕ ತುರ್ತು ಪರಿಸ್ಥಿತಿಗೆ ಅಲ್ಲಿನ ಜನರು ಸ್ಪಂದಿಸಿದ್ದಾರೆ. ಇವತ್ತು ಬೆಳಗ್ಗೆ 7 ರಿಂದ ಆರಂಭವಾಗಿದ್ದ 9 ಗಂಟೆಗಳ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು. ನಾಗಾಲ್ಯಾಂಡ್‌ನ ಪೂರ್ವದ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ ದಾಖಲಾಯಿತು. ಹೆಚ್ಚು ಆರ್ಥಿಕ ಸ್ವಾಯತ್ತತೆಯೊಂದಿಗೆ ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸಿ ಇಲ್ಲಿ ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು.

ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ಇಎನ್‌ಪಿಒ) ಪೂರ್ವ ಭಾಗದಲ್ಲಿರುವ ಏಳು ಬುಡಕಟ್ಟು ಸಂಘಟನೆಗಳ ಉನ್ನತ ಸಂಸ್ಥೆಯಾಗಿದೆ. ಗುರುವಾರ (ಏಪ್ರಿಲ್ 18) ಒಂದು ನೋಟಿಸ್ ನೀಡಿ ಮತದಾನ ಸ್ಥಗಿತಕ್ಕೆ ಕರೆ ನೀಡಿದೆ. 16 ಜಿಲ್ಲೆಗಳ ಪೈಕಿ ಇದೀಗ 6 ಜಿಲ್ಲೆಗಳಲ್ಲಿ ಮತದಾನ ಶೂನ್ಯವಾಗಿದೆ. ಲೋಕಸಭೆ ಚುನಾವಣೆ ಒಟ್ಟು 7 ಹಂತಗಳಲ್ಲಿ ನಡೆಯುತ್ತಿದ್ದು, ಎರಡನೇ ಹಂತದ ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ. ಇದರಲ್ಲಿ ಕರ್ನಾಟಕದ 14 ಕ್ಷೇತ್ರಗಳೂ ಸೇರಿವೆ. ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

IPL_Entry_Point