ಕನ್ನಡ ಸುದ್ದಿ  /  Nation And-world  /  Mumbai News Salman Khan House Firing What Happened A Timeline Of Events 5 Latest Updates Explained Uks

Explained; ಸಲ್ಮಾನ್ ಖಾನ್ ಬಾಂದ್ರಾ ಮನೆ ಮೇಲೆ ಗುಂಡಿನ ದಾಳಿ, 2 ಆರೋಪಿಗಳ ಬಂಧನ, ಇದುವರೆಗೆ ಏನೇನಾಯಿತು 5 ವಿದ್ಯಮಾನಗಳ ವಿವರ

ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ ದೇಶದ ಗಮನಸೆಳೆದಿದೆ. ಸಲ್ಮಾನ್ ಖಾನ್ ಬಾಂದ್ರಾ ಮನೆ ಮೇಲೆ ಗುಂಡಿನ ದಾಳಿಗೆ ಸಂಬಂಧಿಸಿ 2 ಆರೋಪಿಗಳ ಬಂಧನವಾಗಿದೆ. ಗುಜರಾತ್ ಪೊಲೀಸರ ಕಾರ್ಯಾಚರಣೆ, ಮುಂಬಯಿ ಕ್ರೈಂ ಬ್ರಾಂಚ್ ತನಿಖೆ ಸೇರಿ ಇದುವರೆಗೆ ಏನೇನಾಯಿತು. ಇದುವರೆಗಿನ 5 ವಿದ್ಯಮಾನಗಳ ವಿವರ ಇಲ್ಲಿದೆ.

ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದ 2 ಆರೋಪಿಗಳನ್ನು ಗುಜರಾತ್ ಪೊಲೀಸರು ಬಂಧಿಸಿದರು. (ಎಡಚಿತ್ರ). ಮುಂಬಯಿ ಬಾಂದ್ರಾದ ಮನೆಯಲ್ಲಿ ಸಲ್ಮಾನ್ ಖಾನ್‌ (ಬಲ ಚಿತ್ರ)
ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದ 2 ಆರೋಪಿಗಳನ್ನು ಗುಜರಾತ್ ಪೊಲೀಸರು ಬಂಧಿಸಿದರು. (ಎಡಚಿತ್ರ). ಮುಂಬಯಿ ಬಾಂದ್ರಾದ ಮನೆಯಲ್ಲಿ ಸಲ್ಮಾನ್ ಖಾನ್‌ (ಬಲ ಚಿತ್ರ)

ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ (Salman Khan house firing) ಪ್ರಕರಣ ಚಿತ್ರರಂಗದಲ್ಲಿ, ರಾಜಕೀಯವಾಗಿ ಸಂಚಲನ ಮೂಡಿಸಿರುವ ಘಟನೆ. ಕಳೆದ ಭಾನುವಾರ (ಏಪ್ರಿಲ್ 14) ಈ ದಾಳಿ ನಡೆದಿದ್ದು, ನಿನ್ನೆ ಗುಂಡು ಹಾರಿಸಿದ ಇಬ್ಬರು ಆರೋಪಿಗಳನ್ನು ಕಛ್‌ ಭುಜ್‌ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಬೆನ್ನಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಸಲ್ಮಾನ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದು, ಭದ್ರತೆಯ ಭರವಸೆ ನೀಡಿದ್ದಾರೆ.

ಈ ಗುಂಡಿನ ದಾಳಿ ನಡೆಸಿದವರು ಲಾರೆನ್ಸ್‌ ಬಿಷ್ಣೋಯ್‌, ಅನಮೋಲ್‌ ಬಿಷ್ಣೋಯ್‌ ಗ್ಯಾಂಗ್‌ನವರು ಎಂಬುದು ದೃಢಪಟ್ಟಿದೆ. ಈ ದಾಳಿ ಆದ ಕೂಡಲೇ ದಾಳಿಯ ಹೊಣೆಯನ್ನು ಹೊತ್ತುಕೊಂಡ ಗ್ಯಾಂಗ್‌, ಸಲ್ಮಾನ್‌ ಖಾನ್‌ಗೆ ಎಚ್ಚರಿಕೆ ಸಂದೇಶ ನೀಡಿತ್ತು. ಸಲ್ಮಾನ್ ಖಾನ್ ಅವರ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮೇಲೆ ಈ ದಾಳಿ ನಡೆದಿತ್ತು. ಈ ದಾಳಿ ಮತ್ತು ನಂತರದ ವಿದ್ಯಮಾನಗಳ ಕಿರು ಅವಲೋಕನ ಇಲ್ಲಿದೆ.

1) ಏಪ್ರಿಲ್ 14ರ ಮುಂಜಾನೆ 5ಕ್ಕೆ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ

ಮುಂಬಯಿ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮೇಲೆ ಏಪ್ರಿಲ್ 14ರ ಮುಂಜಾನೆ 5 ಗಂಟೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಈ ದಾಳಿಯು ಸಲ್ಮಾನ್ ಖಾನ್‌ ಮತ್ತು ಅವರ ಕುಟುಂಬ ಸದಸ್ಯರ ಭದ್ರತೆ ವಿಚಾರದಲ್ಲಿ ಕಳವಳ ಮೂಡಿಸಿತ್ತು. ಅಲ್ಲದೆ, ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದರು.

2) ಸಿಸಿಟಿವಿ ಕ್ಯಾಮೆರಾದ ವಿಡಿಯೋ ಅಸ್ಪಷ್ಟ, ಬಾಂದ್ರಾದಲ್ಲಿ ಎಫ್‌ಐಆರ್ ದಾಖಲು

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ವೇಳೆ ಸಿಸಿಟಿವಿ ಕ್ಯಾಮೆರಾದಲ್ಲಿ ದುಷ್ಕರ್ಮಿಗಳ ಸುಳಿವು ಸಿಕ್ಕಿತು. ಸಿಸಿಟಿವಿ ದೃಶ್ಯಾವಳಿಗಳು ಅಪರಾಧಿಗಳ ಮುಖ ಸ್ಪಷ್ಟವಾಗಿ ಗೋಚರಿಸಿಲ್ಲ. ಅವರು ಬಳಸಿದ ಬೈಕಿನ ನಂಬರ್ ಪ್ಲೇಟ್ ಕೂಡ ಅಸ್ಪಷ್ಟವಾಗಿತ್ತು. ಇಬ್ಬರು ಸವಾರರು ಕೂಡ ಹೆಲ್ಮೆಟ್‌ಗಳನ್ನು ಧರಿಸಿದ್ದರು. ಗುಂಡಿನ ದಾಳಿ ಮತ್ತು ಚಾಲನಾ ಸ್ವಭಾವಗಳು ಗುರುತು ಪತ್ತೆ ಹಚ್ಚುವಲ್ಲಿ ನೆರವಾಗಲಿಲ್ಲ. ಅದು ಬಹಳ ಸಂಕೀರ್ಣವಾಗಿತ್ತು.

ಈ ಅಡೆತಡೆಗಳ ನಡುವೆಯೂ, ಬಾಂದ್ರಾ ಪೊಲೀಸರು ಗುಂಡಿನ ಸದ್ದು ಕೇಳಿದವರ ಸಾಕ್ಷಿ ಹೇಳಿಕೆಗಳನ್ನು ಅವಲಂಬಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಮುಂದಾದರು. ಇದರಂತೆ, ಈ ದಾಳಿಗೆ ಬಳಸಿದ್ದು ಎಂದು ನಂಬಲಾಗಿದ್ದ ಬೈಕ್ ಅನ್ನು ನಟನ ಮನೆಯ ಸಮೀಪದಲ್ಲೇ ಪತ್ತೆಹಚ್ಚಲಾಯಿತು. ಇದು ದಾಳಿಯ ಒಳಸಂಚು ತೆರೆದುಕೊಳ್ಳಲು ನೆರವಾಯಿತು.

3) ದಾಳಿ ಬಳಿಕ ಮಂಗಳವಾರ ಮನೆಯಿಂದ ಹೊರಬಂದ ಸಲ್ಮಾನ್ ಖಾನ್‌

ಮನೆಯ ಮೇಲೆ ಭಾನುವಾರ (ಏಪ್ರಿಲ್ 14) ಮುಂಜಾನೆ ಗುಂಡಿನ ದಾಳಿ ನಡೆದಿತ್ತು. ಅದಾದ ಬಳಿಕ, ಸಲ್ಮಾನ್ ಖಾನ್ ಮನೆಯಿಂದ ಹೊರಗೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ನಿನ್ನೆ (ಏಪ್ರಿಲ್ 16). ಇದೇ ವೇಳೆ, ಸಲ್ಮಾನ್ ಖಾನ್ ಅವರ ತಂದೆ, ಚಿತ್ರಕಥೆಗಾರ ಸಲೀಂ ಖಾನ್ ಅವರು ಮಗನ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

“ಸಲೀಂ ಖಾನ್ ಯಾವುದರಿಂದಲೂ ವಿಚಲಿತರಾಗಿಲ್ಲ. ತಮ್ಮ ದಿನಚರಿಯನ್ನು ಮುಂದುವರಿಸಿದ್ದಾರೆ. ಕುಟುಂಬವು ತುಂಬಾ ಜಾಗರೂಕವಾಗಿದೆ. ಸಲ್ಮಾನ್ ಖಾನ್ ಸುರಕ್ಷಿತ ಮತ್ತು ಸದೃಢರಾಗಿದ್ದಾರೆ. ಜೊತೆಗಿದ್ದೇವೆ" ಎಂದು ಸಲ್ಮಾನ್ ಖಾನ್ ಹೇಳಿರುವುದಾಗಿ ಎಕನಾಮಿಕ್ ಟೈಮ್ಸ್‌ ವರದಿ ಮಾಡಿದೆ.

3) ಅನ್ಮೋಲ್ ಬಿಷ್ಣೋಯ್ ಸಂದೇಶ ?

ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಗಾರಿಕೆ ತಮ್ಮದು ಎಂದು ಅನ್ಮೋಲ್ ಬಿಷ್ಣೋಯ್ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಲಾಗಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿ ಅನ್ಮೋಲ್ ಅವರು ಹಿಂದಿಯಲ್ಲಿ ಪೋಸ್ಟ್ ಅನ್ನು ಬರೆದಿದ್ದು, ಶಾಂತಿ ಬಯಸುತ್ತಿದ್ದು, ದಬ್ಬಾಳಿಕೆ ನಡೆಸಿದರೆ ಸಂಭವನೀಯ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿರುವುದು ಕಂಡುಬಂದಿದೆ.

ಅನ್ಮೋಲ್ ನೇರವಾಗಿ ಸಲ್ಮಾನ್ ಖಾನ್ ಅವರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ್ದು, ಎರಡು ಸಾಕುನಾಯಿಗಳಿಗೆ ಕುಖ್ಯಾತ ಭೂಗತ ವ್ಯಕ್ತಿಗಳಾದ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಅವರ ಹೆಸರು ಇಟ್ಟಿರುವುದರ ಬಗ್ಗೆ ಪ್ರಸ್ತಾಪಿಸಿದ್ದಾನೆ. ಅಲ್ಲದೆ, ತಮ್ಮ ಶಕ್ತಿಯನ್ನು ಕಡಿಮೆ ಅಂದಾಜಿಸದಂತೆ ಎಚ್ಚರಿಕೆ ನೀಡಿದ್ದಾನೆ. ಈ ಪೋಸ್ಟ್‌ ಜೈ ಶ್ರೀರಾಮ್ ಘೋ‍ಷಣೆಯೊಂದಿಗೆ ಕೊನೆಗೊಂಡಿದೆ. ಈ ಪೋಸ್ಟ್‌ನ ಸತ್ಯಾಸತ್ಯ ಮತ್ತು ಅನ್ಮೋಲ್ ಅವರ ಭಾಗವಹಿಸುವಿಕೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

4) ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ ಕೇಸ್; ಆರೋಪಿಗಳನ್ನು ಬಂಧಿಸಿದ ಗುಜರಾತ್ ಪೊಲೀಸ್

ಮುಂಬೈ ಕ್ರೈಂ ಬ್ರಾಂಚ್ ಪ್ರಕರಣದ ತನಿಖೆ ನಡೆಸುತ್ತಿದ್ದು, 10 ತಂಡಗಳನ್ನು ನಿಯೋಜಿಸಿತ್ತು. ಹೊಸ ಸಿಸಿಟಿವಿ ದೃಶ್ಯಾವಳಿಗಳಿಂದ ತಾಜಾ ಇಮೇಜ್‌ಗಳನ್ನು ಪಡೆದಿದ್ದು ಅದರಲ್ಲಿ ದಾಳಿಕೋರರ ಗುರುತು ಸ್ಪಷ್ಟವಾಗಿದೆ. ಪೊಲೀಸರು ಇದನ್ನು ಎಲ್ಲೆಡೆ ರವಾನಿಸಿದೆ.

ಮುಂಬಯಿ ಪೊಲೀಸರು ನೀಡಿದ ಸುಳಿವನ್ನು ಆಧರಿಸಿ ಗುಜರಾತ್‌ನ ಕಛ್‌ ಭುಜ್ ಪೊಲೀಸರು ಇಬ್ಬರು ಆರೋಪಿಗಳನ್ನು ಮಂಗಳವಾರ (ಏಪ್ರಿಲ್ 16) ಬಂಧಿಸಿದ್ದಾರೆ. ಇದನ್ನು ಗುಜರಾತ್ ಡಿಜಿಪಿ (ಕಾನೂನು ಸುವ್ಯವಸ್ಥೆ) ಶಂಶೇರ್ ಸಿಂಗ್ ಖಚಿತಪಡಿಸಿದ್ದಾರೆ.

5) ಬಾಲಿವುಡ್‌ ತಾರೆಯರ ಪ್ರತಿಕ್ರಿಯೆಗಳು ಹೀಗಿದ್ದವು

ಈ ಆತಂಕಕಾರಿ ಘಟನೆಯ ನಂತರ, ಕುಟುಂಬ ಸದಸ್ಯರು ಮತ್ತು ಪ್ರಮುಖ ವ್ಯಕ್ತಿಗಳು ಖಾನ್ ನಿವಾಸಕ್ಕೆ ಆಗಮಿಸಿದ ಕಾರಣ ಅಲ್ಲಿ ಕೋಲಾಹಲದ ವಾತಾವರಣ ಉಂಟಾಗಿತ್ತು. ಅರ್ಬಾಜ್ ಖಾನ್‌, ಶುರಾ ಖಾನ್, ಸೊಹೈಲ್ ಖಾನ್‌, ಆಯುಷ್ ಶರ್ಮಾ, ಅರ್ಪಿತಾ ಖಾನ್‌, ಚಲನಚಿತ್ರ ನಿರ್ಮಾಪಕ ಮಹೇಶ್ ಮಾಂಜ್ರೇಕರ್‌ ಮತ್ತು ಇತರರು ಸಲ್ಮಾನ್ ನಿವಾಸದಲ್ಲಿದ್ದರು.

ಬಾಲಿವುಡ್ ಸೆಲೆಬ್ರಿಟಿಗಳಷ್ಟೇ ಅಲ್ಲ, ರಾಜಕೀಯ ನೇತಾರರಾದ ರಾಜ್ ಠಾಕ್ರೆ, ರಾಹುಲ್ ಕನಾಲ್‌, ಬಾಬಾ ಸಿದ್ದಿಕಿ ಸೇರಿ ಅನೇಕರು ಖಾನ್ ನಿವಾಸಕ್ಕೆ ಭೇಟಿ ನೀಡಿದರು. ಎಲ್ಲರ ಫೋಟೋ, ವಿಡಿಯೋ ಮಾಡಿಕೊಳ್ಳಲಾಗುತ್ತಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಒತ್ತಿಹೇಳುತ್ತದೆ.

ಈ ಸಂಕಷ್ಟದ ಸಮಯದಲ್ಲಿ ಭರವಸೆ ಮತ್ತು ಬೆಂಬಲ ನೀಡಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಲ್ಮಾನ್ ಖಾನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಏತನ್ಮಧ್ಯೆ, ಎನ್‌ಸಿಪಿ-ಎಸ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಘಟನೆಯನ್ನು ಖಂಡಿಸಿದರು. ಇದನ್ನು 'ಗೃಹ ಸಚಿವಾಲಯದ ಸಂಪೂರ್ಣ ವೈಫಲ್ಯ' ಎಂದು ಟೀಕಿಸಿದ ಅವರು, ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ಮತ್ತು ನಿರ್ಣಾಯಕ ಕ್ರಮದ ಅಗತ್ಯವನ್ನು ಒತ್ತಿ ಹೇಳಿದರು.

“ದಾಳಿಯು ಭಯಾನಕ ಮತ್ತು ಖಂಡನೀಯ. ಪೊಲೀಸರು ಖಾನ್ ನಿವಾಸದ ಹೊರಗೆ ಭದ್ರತೆಗಾಗಿ ನಿಯೋಜಿತರಾಗಿದ್ದರೂ ಈ ದಾಳಿ ನಡೆದಿದೆ ಎಂದಾದರೆ ಸುರಕ್ಷತೆ, ಭದ್ರತೆ ಎಂಬುದು ಭ್ರಮೆ ಎಂದು ಹೇಳುವುದು ನ್ಯಾಯೋಚಿತ. ಬಾಂದ್ರಾದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತೆ, ಕಣ್ಗಾವಲು ಅಗತ್ಯವಿದೆ. ಕೆಲ ಸಮಯ ಹಿಂದೆ ಈ ಪ್ರದೇಶದಲ್ಲಿ ದರೋಡೆಗಳು ನಡೆಯುತ್ತಿದ್ದವು. ಈಗ ಶೂಟ್‌ಔಟ್‌” ಎಂದು ಪೂಜಾ ಭಟ್‌ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

IPL_Entry_Point