ಕನ್ನಡ ಸುದ್ದಿ  /  Nation And-world  /  Muslim Cleric Umer Ahmed Ilyasi Calls Mohan Bhagwat As Rashtra Rishi

Umer Ahmed Ilyasi: ಭಾಗವತ್‌ 'ರಾಷ್ಟ್ರ ಋಷಿ': ಇಲ್ಯಾಸಿ ಹೇಳಿಕೆಯಿಂದ ಕಾಂಗ್ರೆಸ್‌ಗೆ ಕಸಿವಿಸಿ!

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)‌ದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು 'ರಾಷ್ಟ್ರ ಋಷಿ' ಎಂದು ಕರೆದಿರುವ ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ, ದೇಶದ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಪಾತ್ರ ಮಹತ್ವದ್ದು ಎಂದು ಬಣ್ಣಿಸಿದ್ದಾರೆ. ಭಾಗವತ್‌ ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ಬುದ್ಧಜೀವಿಗಳನ್ನು ಭೇಟಿ ಮಾಡುತ್ತಿದ್ದಾರೆ.

ಮೋಹನ್‌ ಭಾಗವತ್‌ (ಸಂಗ್ರಹ ಚಿತ್ರ)
ಮೋಹನ್‌ ಭಾಗವತ್‌ (ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)‌ದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು 'ರಾಷ್ಟ್ರ ಋಷಿ' ಎಂದು ಕರೆದಿರುವ ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ, ದೇಶದ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಪಾತ್ರ ಮಹತ್ವದ್ದು ಎಂದು ಬಣ್ಣಿಸಿದ್ದಾರೆ.

ಸೌಹಾರ್ದತೆ ಗಟ್ಟಿಗೊಳಿಸುವ ಪ್ರಯತ್ನದಲ್ಲಿ ನಿರತರಾಗಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಇದರ ಭಾಗವಾಗಿ ದೇಶದ ಪ್ರಮುಖ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿ ಮಾಡುತ್ತಿದ್ಧಾರೆ. ಅದರಂತೆ ನಿನ್ನೆ(ಸೆ.22-ಗುರುವಾರ) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭಾಗವತ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಭಾಗವತ್‌ ಭೇಟಿ ಬಳಿಕ ಮಾತನಾಡಿದ ಇಲ್ಯಾಸಿ, ನನ್ನ ಆಹ್ವಾನದ ಮೇರೆಗೆ ನನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಮೋಹನ್‌ ಭಾಗವತ್‌ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಅಲ್ಲದೇ ಭಾಗವತ್‌ ಓರ್ವ 'ರಾಷ್ಟ್ರಪಿತ' ಮತ್ತು 'ರಾಷ್ಟ್ರ ಋಷಿ' ಎಂದು ಇದೇ ವೇಳೆ ಇಲ್ಯಾಸಿ ಹೊಗಳಿದರು.

ಭಾಗವತ್‌ ಭೇಟಿಯಿಂದಾಗಿ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ. ನಾವು ದೇವರನ್ನು ಆರಾಧಿಸುವ ಮಾರ್ಗ ಬೇರೆಯಾಗಿರಬಹುದು, ಆದರೆ ನಾವೆಲ್ಲರೂ ಒಂದೇ. ಮಾನವೀಯತೆಗಿಂತ ದೊಡ್ಡ ಧರ್ಮ ಬೇರೊಂದಿಲ್ಲ. ದೇಶ ಮೊದಲು ಎಂಬುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ ಎಂದು ಇಲ್ಯಾಸಿ ಇದೇ ವೇಳೆ ಮಾರ್ಮಿಕವಾಗಿ ನುಡಿದರು.

ನವದೆಹಲಿಯ ಕಸ್ತೂರ್‌ಬಾ ಗಾಂಧಿ ರಸ್ತೆಯಲ್ಲಿನ ಮಸೀದಿಗೆ ತೆರಳಿದ ಭಾಗವತ್‌, ಬಳಿಕ ಅಜಾದ್‌ಪುರದಲ್ಲಿನ ಮದರಸಾ ತಾಜವೀದುಲ್ ಖುರಾನ್‌ಗೂ ಭೇಟಿ ನೀಡಿದರು.ಸೌಹಾರ್ದತೆ ಗಟ್ಟಿಗೊಳಿಸುವ ಭಾಗವಾಗಿ ಭಾಗವತ್‌ ಅವರು ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ಬುದ್ಧಿಜೀವಿಗಳನ್ನು ಭೇಟಿ ಮಾಡುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಆರ್‌ಎಸ್‌ಎಸ್‌ ವಕ್ತಾರ ವಕ್ತಾರ ಸುನಿಲ್ ಅಂಬೇಕರ್, ಎಲ್ಲಾ ಜನಸಮುದಾಯಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನದ ಭಾಗವಾಗಿ ಮೋಹನ್‌ ಭಾಗವತ್‌ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ದಿಲ್ಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ, ಅಲಿಗಡ ಮುಸ್ಲಿಂ ವಿವಿಯ ಮಾಜಿ ಕುಲಪತಿ ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದಿನ್ ಶಾ, ಆರ್‌ಎಲ್‌ಡಿ ರಾಷ್ಟ್ರೀಯ ಉಪಾಧ್ಯಕ್ಷ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಶೆರ್ವಾನಿ ಅವರಂತಹ ಪ್ರಮುಖರನ್ನು ಮೋಹನ್‌ ಭಾಗವತ್ ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಸುನಿಲ್‌ ಅಂಬೇಕರ್‌ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಪ್ರತಿಕ್ರಿಯೆ:

ಇನ್ನು ಮುಸ್ಲಿಂ ಮುಖಂಡರೊಂದಿಗಿನ ಮೋಹನ್‌ ಭಾಗವತ್‌ ಅವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ಕಾಂಗ್ರೆಸ್‌, ಇದು ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ʼಭಾರತ್‌ ಜೋಡೋʼ ಯಾತ್ರೆಯ ಪ್ರತಿಫಲ ಎಂದು ಹೇಳಿದೆ. ʼಭಾರತ್‌ ಜೋಡೋʼ ಯಾತ್ರೆಯಿಂದಾಗಿ ದೇಶದಲ್ಲಿ ಕೋಮು ಸೌಹಾರ್ದತೆ ಗಟ್ಟಿಗೊಳ್ಳುತ್ತಿದೆ ಎಂದು ಅರಿತಿರುವ ಆರ್‌ಎಸ್‌ಎಸ್‌, ಇದರ ಕ್ರೆಡಿಟ್‌ ಪಡೆಯಲು ಪ್ರಯತ್ನ ಆರಂಭಿಸಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಅಲ್ಲದೇ ಕೋಮು ಸೌಹಾರ್ದತೆ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ, ಮೋಹನ್‌ ಭಾಗವತ್‌ ಅವರು ʼಭಾರತ್‌ ಜೋಡೋʼ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಒವೈಸಿ ಟೀಕೆ:

ಇನ್ನು ಮೋಹನ್‌ ಭಾಗವತ್‌ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರ ಭೇಟಿಯನ್ನು ಟೀಕಿಸಿರುವ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ, ಈ ಮುಸ್ಲಿಂ ನಾಯಕರು ಗಣ್ಯ ಗುಂಪಿನವರು. ಈ ಗುಂಪಿಗೂ ಹಾಗೂ ವಾಸ್ತವಿಕತೆಗೂ ಯಾವುದೇ ಸಂಬಂಧವಿಲ್ಲ. ಆರ್‌ಎಸ್‌ಎಸ್‌ನ ಮುಸ್ಲಿಂ ವಿರೋಧಿ ನೀತಿಗಳ ಬಗ್ಗೆ ನೇರವಾಗಿ ಮೋಹನ್‌ ಭಾಗವತ್‌ ಅವರನ್ನು ಪ್ರಶ್ನಿಸುವ ಛಾತಿ ಇವರಿಗಿಲ್ಲ ಎಂದು ಒವೈಸಿ ತೀವ್ರ ವಾಗ್ದಾಳಿ ನಡೆಸಿದ್ಧಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.
IPL_Entry_Point

ವಿಭಾಗ