ಕನ್ನಡ ಸುದ್ದಿ  /  Nation And-world  /  Nasa Shares Images Of Open Star Cluster Glittering In A Nearby Galaxy Captured By Hubble Space Telescope

Open Star Cluster: ನೋಡಬನ್ನಿ ಬ್ರಹ್ಮಾಂಡದ ಅಚ್ಚರಿ: ಇದು ತೆರೆದ ನಕ್ಷತ್ರ ಸಮೂಹವೆಂಬ ಅದ್ಭುತ ನರ್ಸರಿ..

ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕ ಯಂತ್ರ ಇತ್ತೀಚೆಗೆ NGC 1858 ಎಂಬ ಸುಂದರವಾದ ತೆರೆದ ನಕ್ಷತ್ರ ಸಮೂಹದ ಅದ್ಭುತ ಚಿತ್ರವನ್ನು ಸೆರೆಹಿಡಿದಿದೆ. ಇದು ನಕ್ಷತ್ರ-ರೂಪಿಸುವ ಪ್ರದೇಶವಾಗಿದ್ದು, ಹೊಸ ನಕ್ಷತ್ರಗಳ ವಿಶಾಲ ಸಮೂಹವೊಂದು ದಿಗಂತದಲ್ಲಿ ಮಿನುಗುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತಾದ ಹೆಚ್ಚಿನ ಮಾಹಿತಿಯತ್ತ ಗಮನಹರಿಸುವುದಾದರೆ..

ತೆರೆದ ನಕ್ಷತ್ರ ಸಮೂಹ
ತೆರೆದ ನಕ್ಷತ್ರ ಸಮೂಹ (Verified Instagram)

ವಾಷಿಂಗ್ಟನ್:‌ ಬ್ರಹ್ಮಾಂಡ ಅಚ್ಚರಿಗಳ ಆಗರ ಎಂಬುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ. ಈ ವಿಶಾಲ ವಿಶ್ವದ ಒಡಲಲ್ಲಿರುವ ಖಗೋಳೀಯ ವಿಸ್ಮಯಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಅದೇ ರೀತಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ದಿನಕ್ಕೊಂದು ಬ್ರಹ್ಮಾಂಡದ ಅಚ್ಚರಿಯನ್ನು ಖಗೋಳಪ್ರಿಯರಿಗೆ ಉಣಬಡಿಸುತ್ತದೆ.

ಅದರಂತೆ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕ ಯಂತ್ರ ಇತ್ತೀಚೆಗೆ NGC 1858 ಎಂಬ ಸುಂದರವಾದ ತೆರೆದ ನಕ್ಷತ್ರ ಸಮೂಹದ ಅದ್ಭುತ ಚಿತ್ರವನ್ನು ಸೆರೆಹಿಡಿದಿದೆ. ಇದು ನಕ್ಷತ್ರ-ರೂಪಿಸುವ ಪ್ರದೇಶವಾಗಿದ್ದು, ಹೊಸ ನಕ್ಷತ್ರಗಳ ವಿಶಾಲ ಸಮೂಹವೊಂದು ದಿಗಂತದಲ್ಲಿ ಮಿನುಗುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನಮ್ಮ ಕ್ಷೀರಪಥ ನಕ್ಷತ್ರಪುಂಜ( ಮಿಲ್ಕಿ ವೇ ಗ್ಯಾಲಕ್ಸಿ)ದ ಉಪಗ್ರಹ ಗ್ಯಾಲಕ್ಸಿಯಾದ ದೊಡ್ಡ ಮೆಗೆಲಾನಿಕ್ ಮೋಡ(Large Magellanic cloud)ದಲ್ಲಿ, ಈ ತೆರೆದ ನಕ್ಷತ್ರ ಸಮೂಹ ಕಂಡುಬಂದಿದೆ. ಇದರ ವಾಯುವ್ಯ ಭಾಗದಲ್ಲಿ ನೆಲೆಸಿರುವ ಈ ತೆರೆದ ನಕ್ಷತ್ರ ಸಮೂಹವು, ನಕ್ಷತ್ರ-ರೂಪಿಸುವ ಪ್ರದೇಶಗಳ ಸಮೃದ್ಧಿಯನ್ನು ತೋರಿಸುತ್ತದೆ.

ತೆರೆದ ಸಮೂಹಗಳು (Open Clusters) ನಕ್ಷತ್ರಗಳ ನಡುವೆ ಸಡಿಲವಾದ ಗುರುತ್ವಾಕರ್ಷಣೆಯ ಸಂಬಂಧ ಹೊಂದಿರುವ ಒಂದು ರೀತಿಯ ನಕ್ಷತ್ರ ಸಮೂಹವಾಗಿದೆ. ಅದರಂತೆ NGC 1858 ಹೆಸರಿನ ತೆರೆದ ನಕ್ಷತ್ರ ಸಮೂಹ ಕೂಡ, ಹೊಸ ನಕ್ಷತ್ರಗಳ ನರ್ಸರಿಯಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಈ ನಕ್ಷತ್ರ ಸಮೂಹವು ಸುಮಾರು 10 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ನಾಸಾ ಖಗೋಳಶಾಸ್ತ್ರಜ್ಞರು ನಂಬಿದ್ದಾರೆ. NGC 1858 ನಕ್ಷತ್ರ ಸಮೂಹದ ನಕ್ಷತ್ರಗಳು ಹೊರಸೂಸುವ UV ವಿಕಿರಣದಿಂದಾಗಿ, ಅಯಾನೀಕರಣಕ್ಕೆ ಒಳಗಾದ ಅಂತರತಾರಾ ಅನಿಲದ ಬೃಹತ್‌ ಮೋಡ ಕೂಡ ಸೃಷ್ಟಿಯಾಗಿದೆ ಎಂದು ನಾಸಾ ಖಗೋಳ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ನೀಹಾರಿಕೆಯ ಅನಿಲವು ಗೋಚರ ತರಂಗಾಂತರಗಳಲ್ಲಿ ತನ್ನದೇ ಆದ ಬೆಳಕನ್ನು ಸೃಷ್ಟಿಸುತ್ತದೆ. ಇದನ್ನು ಚಿತ್ರದ ಮಧ್ಯ ಮತ್ತು ಕೆಳಗಿನ ಬಲಭಾಗದಲ್ಲಿ ಮಸುಕಾದ ಮೋಡದಂತೆ ಗೋಚರವಾಗುವ ಪ್ರದೇಶದಲ್ಲಿ ಗುರುತಿಸಬಹುದು ಎಂದು ನಾಸಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ವರದಿಯಲ್ಲಿ ತಿಳಿಸಿದೆ.

NGC 1858 ತೆರೆದ ನಕ್ಷತ್ರ ಸಮೂಹದಲ್ಲಿ, ವಿಕಾಸದ ವಿವಿಧ ಹಂತಗಳಲ್ಲಿರುವ ನಕ್ಷತ್ರಗಳು ಆಶ್ರಯ ಪಡೆದಿವೆ. ಇದು ಸಂಕೀರ್ಣ ಸಂಗ್ರಹವಾಗಿದ್ದು ಹೊರಸೂಸುವಿಕೆಯ ನೀಹಾರಿಕೆಯ ಉಪಸ್ಥಿತಿಯು, ಅನಿಲವನ್ನು ಅಯಾನೀಕರಿಸಲು ಅಗತ್ಯವಾದ ವಿಕಿರಣದಿಂದ ನಕ್ಷತ್ರ ರಚನೆಯ ಪ್ರಕ್ರಿಯೆ ಇತ್ತೀಚೆಗೆ ಸಂಭವಿಸಿದೆ ಎಂಬುದನ್ನು ಸೂಚಿಸುತ್ತದೆ ಎಂದು ನಾಸಾ ತಿಳಿಸಿದೆ.

ಡೊರಾಡೊ ನಕ್ಷತ್ರಪುಂಜದಲ್ಲಿ ನೆಲೆಗೊಂಡಿರುವ NGC 1858, ಭೂಮಿಯಿಂದ ಸುಮಾರು 160,000 ಜ್ಯೋತಿರ್ವರ್ಷ ದೂರದಲ್ಲಿದೆ. ನಾಸಾ ಹಂಚಿಕೊಂಡಿರುವ ಚಿತ್ರದ ಹೃದಯಭಾಗದಲ್ಲಿ ಅದ್ಭುತವಾಗಿ ಹೊಳೆಯುತ್ತಿರುವ ಹಲವಾರು ದೊಡ್ಡ ನಕ್ಷತ್ರಗಳಿಗೆ, NGC 1858 ನೆಲೆಯಾಗಿದೆ.

NGC 1858 ನಕ್ಷತ್ರ ಸಮೂಹವು ಲಕ್ಷಾಂತರ ನಕ್ಷತ್ರಗಳಿಂದ ಆವೃತವಾಗಿದೆ ಮತ್ತು ಇದು ಆಕಾಶದ ಕಾರ್ಯನಿರತ ಪ್ರದೇಶದಲ್ಲಿದೆ. ನಕ್ಷತ್ರಗಳು ಬಣ್ಣ ಮತ್ತು ಗಾತ್ರದಲ್ಲಿ ಬದಲಾಗುತ್ತವೆ. ಕೆಲವು ನಕ್ಷತ್ರಗಳು ಚುಕ್ಕೆಗಳಂತೆ ಕಂಡುಬಂದರೆ, ಮತಗ್ತೆ ಕೆಲವು ಆಧುನಿಕ ಬಾಹ್ಯಾಕಾಶ ದೂರದರ್ಶಕ ಯಂತ್ರಗಳಲ್ಲಿ ಸ್ಪಷ್ಟವಾಗಿ ಕಾಣಿಸುವಷ್ಟು ಬೃಹತ್‌ ಗಾತ್ರವನ್ನು ಹೊಂದಿವೆ ಎಂದು ನಾಸಾ ಹೇಳಿದೆ.

ಇಂದಿನ ಪ್ರಮುಖ ಸುದ್ದಿ

PM Modi: ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ: ಮತದಾನದ ಬಳಿಕ ಪ್ರಧಾನಿ ಮೋದಿ ಅಭಿಮತ

ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬಗಳಾಗಿದ್ದು, ಈ ಹಬ್ಬದಲ್ಲಿ ದೇಶದ ಪ್ರತಿಯೊಬ್ಬ ಮತದಾರನ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ