UPSC NDA NA II Exam 2023: ಯುಪಿಎಸ್‌ಸಿ ಎನ್‌ಡಿಎ- ಎನ್‌ಎ, ಸಿಡಿಎಸ್ ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟ, 395 ಅಭ್ಯರ್ಥಿಗಳಿಗೆ ಅವಕಾಶ
UPSC NDA & NA II Exam 2023 registration begins: ಕೇಂದ್ರ ಲೋಕ ಸೇವಾ ಆಯೋಗವು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ (ಎನ್‌ಡಿಎ-ಎನ್‌ಎ) ಹಾಗೂ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಎಕ್ಸಾಂಗೆ (ಸಿಡಿಎಸ್) ಅಧಿಸೂಚನೆ ಪ್ರಕಟಿಸಿದೆ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ನೇವಲ್ ಅಕಾಡೆಮಿ ಮತ್ತು ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಎಗ್ಸಾಮ್ ಬರೆದು ಭೂಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಆಫೀಸರ್ ಆಗಲು ಬಯಸುವವರಿಗೆ ಅವಕಾಶ ಇಲ್ಲಿದೆ. ಕೇಂದ್ರ ಲೋಕ ಸೇವಾ ಆಯೋಗವು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ (ಎನ್‌ಡಿಎ-ಎನ್‌ಎ) ಹಾಗೂ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಎಕ್ಸಾಂಗೆ (ಸಿಡಿಎಸ್) ಅಧಿಸೂಚನೆ ಪ್ರಕಟಿಸಿದೆ.
ದೇಶದ ರಕ್ಷಣಾ ಪಡೆ ಸೇರಲು ಬಯಸುವ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನವಾಗಿರುತ್ತದೆ. ಮುಂಬರುವ ಸೆಪ್ಟೆಂಬರ್ 3ರಂದು ಈ ಎರಡೂ ಪರೀಕ್ಷೆಗಳು ನಿಗದಿಯಾಗಿವೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು ಹಾಗೂ ಧಾರವಾಡದಲ್ಲಿ ಪರೀಕ್ಞಾ ಕೇಂದ್ರಗಳಿರಲಿವೆ.
395 ಅಭ್ಯರ್ಥಿಗಳಿಗೆ ಅವಕಾಶ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ (ಭೂಸೇನೆ-208, ನೌಕಾಪಡೆ-42 ಮತ್ತು ವಾಯುಪಡೆ-120 (ಫ್ಲೈಯಿಂಗ್ 92, ಗ್ರೌಂಡ್ ಡ್ಯೂಟಿ 28) ಮತ್ತು ನೇವಲ್ ಅಕಾಡೆಮಿಗೆ 25 ಅಭ್ಯರ್ಥಿ ಗಳು ಸೇರಿ ಒಟ್ಟು 395 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 2024ರ ಜುಲೈನಿಂದ ಕೋರ್ಸ್ ಆರಂಭವಾಗಲಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಕಲೆ, ವಿಜ್ಞಾನ, ವಾಣಿಜ್ಯ, ತಾಂತ್ರಿಕ ಮತ್ತಿತರ ಯಾವುದೇ ವಿಷಯದಲ್ಲಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರುವ ಅವಿವಾಹಿತ ಯುವಕ- ಯುವತಿಯರು ಈ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ನೌಕಾ ಸೇನೆ ಮತ್ತು ವಾಯುಸೇನೆ ವಿಭಾಗಕ್ಕೆ ಸೇರಬೇಕೆಂದು ಇಚ್ಛಿಸಿದಲ್ಲಿ ದ್ವಿತೀಯ ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಪತ್ರಿಕೆಗಳನ್ನು ಕಡ್ಡಾಯವಾಗಿ ಓದಿರಬೇಕು.
ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2005ರ ಜನವರಿ 2 ಮತ್ತು 2008ರ ಜನವರಿ 1ರ ನಡುವೆ ಜನಿಸಿರಬೇಕು.
ಅರ್ಜಿ ಶುಲ್ಕ ಎಷ್ಟು?
ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ, ಮಹಿಳಾ ಅಭ್ಯರ್ಥಿಗಳು ಮತ್ತು ಸೇನೆಯ ಅಧಿಕಾರಿಗಳ (ಜೆಸಿಒ/ಎನ್‌ಸಿಒ/ಒಆರ್) ಮಕ್ಕಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
ಅರ್ಜಿ ಶುಲ್ಕ ಪಾವತಿ ಹೇಗೆ?
ಆನ್‌ಲೈನ್ ಪಾವತಿ ವಿಧಾನದ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು. ವೀಸಾ ಕಾರ್ಡ್/ಮಾಸ್ಟರ್ ಕಾರ್ಡ್/ರುಪೇ ಕಾರ್ಡ್/ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಅಥವಾ ಯಾವುದೇ ಎಸ್‌ಬಿಐ ಶಾಖೆಯಲ್ಲಿ ಶುಲ್ಕ ಪಾವತಿಸಬಹುದಾಗಿದೆ.
ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ
2022ರಿಂದ ಅವಿವಾಹಿತ ಮಹಿಳಾ ಅಭ್ಯರ್ಥಿಗಳಿಗೂ ರಕ್ಷಣಾ ಅಕಾಡೆಮಿಗೆ ಸೇರಲು ಅವಕಾಶ ನೀಡಲಾಗುತ್ತಿದೆ. ಈ ಬಾರಿಯೂ ಭೂಸೇನೆಗೆ ಮೀಸಲಾಗಿರಿಸಿರುವ 208 ಹುದ್ದೆಗಳಲ್ಲಿ 10 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ನೌಕಾಪಡೆಯಲ್ಲಿ ಒಟ್ಟು 42 ಹುದ್ದೆಗಳ ಪೈಕಿ 12 ಮಹಿಳೆಯರಿಗೆ ನೀಡಲಾಗಿದ್ದು, ವಾಯುಸೇನೆಯಲ್ಲಿ ಫ್ಲೈಯಿಂಗ್, ಗ್ರೌಂಡ್ ಡ್ಯೂಟಿಸ್ (ತಾಂತ್ರಿಕ-ತಾಂತ್ರಿಕೇತರ) ಒಟ್ಟು 120 ಹುದ್ದೆಗಳ ಪೈಕಿ 6 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ನೇವಲ್ ಅಕಾಡೆಮಿಯ (10+2 ಕೆಡೆಟ್ ಎಂಟ್ರಿ ಸ್ಕೀಮ್) 25 ಹುದ್ದೆಗಳಲ್ಲಿ 7 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ವರ್ಷದಲ್ಲಿ ಎರಡು ಬಾರಿ ಈ ಪರೀಕ್ಷೆ ನಡೆಯುತ್ತಿದ್ದು, 2023ರ ಮೊದಲನೇ ಹಂತದ ಪರೀಕ್ಷೆಗೆ 2022ರಲ್ಲಿ ಅಧಿಸೂಚನೆ ಪ್ರಕಟಿಸಿ ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಳೆದ ಬಾರಿ ಒಟ್ಟು ಒಟ್ಟು ಇದ್ದ 395 ಹುದ್ದೆಗಳ ಪೈಕಿ 19 ಹುದ್ದೆಗಳನ್ನು ಮಾತ್ರ ಮಹಿಳೆಯರಿಗೆ ಮೀಸಲಿಡಲಾಗಿತ್ತು. ಆದರೆ, ಈ ಬಾರಿ 35 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
- ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ: https://www.upsc.gov.in/
- ಎನ್‌ಡಿಎ ಎನ್‌ಎ ಪರೀಕ್ಷೆಯ ಅಧಿಸೂಚನೆಗೆ ನೇರ ಲಿಂಕ್ ಇಲ್ಲಿದೆ
- ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ.