ಕನ್ನಡ ಸುದ್ದಿ  /  Sports  /  Cricket News Ipl 2023 Virender Sehwag Blasted On Srh Player Harry Brook On I Shut Indian Fans Remark Trollers Jra

Virender Sehwag: ಟ್ರೋಲರ್‌ಗಳನ್ನು ಕೆಣಕೋದ್ಯಾಕೆ; ಭಾರತೀಯರ ಬಾಯಿ ಮುಚ್ಚಿಸ್ತೇನೆ ಎಂದ ಬ್ರೂಕ್‌ಗೆ ಸೆಹ್ವಾಗ್ ಕ್ಲಾಸ್

ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್‌ರನ್ನು ಸೆಹ್ವಾಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ರೋಲರ್‌ಗಳಿಗೆ ಪ್ರತಿಕ್ರಿಯೆ ನೀಡಲು ಹೋಗಿದ್ದಕ್ಕೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ವೀರೇಂದ್ರ ಸೆಹ್ವಾಗ್; ಹ್ಯಾರಿ ಬ್ರೂಕ್
ವೀರೇಂದ್ರ ಸೆಹ್ವಾಗ್; ಹ್ಯಾರಿ ಬ್ರೂಕ್

ಈ ಬಾರಿಯ ಐಪಿಎಲ್ ಆವೃತ್ತಿಗೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಕೇಳಿ ಬಂದ ಪ್ರಮುಖ ಹೆಸರುಗಳಲ್ಲಿ ಹ್ಯಾರಿ ಬ್ರೂಕ್ ಕೂಡ ಒಬ್ಬರು. ಅದಕ್ಕೆ ಸರಿಯಾಗಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಇಂಗ್ಲೆಂಡ್ ದೈತ್ಯನನ್ನು ಬರೋಬ್ಬರಿ 13.25 ಕೋಟಿ ರೂಪಾಯಿಗೆ ತನ್ನ ತಂಡ ಸೇರಿಸಿಕೊಂಡಿತು. ಆದರೆ ಬ್ರೂಕ್ ತನ್ನ ಮೊದಲ ಮೂರು ಪಂದ್ಯಗಳಲ್ಲಿ ಕೇವಲ 13, 3 ಮತ್ತು 13 ರನ್‌ ಗಳಿಸಿ ಔಟಾಗುವ ಮೂಲಕ ವ್ಯಾಪಕ ಟ್ರೋಲ್‌ಗಳಿಗೆ ಗುರಿಯಾದರು. ಆದರೆ, ನಂತರದ ಪಂದ್ಯದಲ್ಲಿ ಶತಕ ಸಿಡಿಸಿ ಪುಟಿದೆದ್ದರು. ಆ ಮೂಲಕ ತಮ್ಮ ಆಟದಿಂದಲೇ ಅವರು ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದರು.

ಆ ಬಳಿಕ ಮತ್ತೆ ಫಾರ್ಮ್‌ ಕಂಡುಕೊಳ್ಳಲು ವಿಫಲರಾದ ಬ್ರೂಕ್‌ ಅವರನ್ನು ಎಸ್‌ಆರ್‌ಎಚ್‌ ತಂಡವು ಮತ್ತೆ ತಂಡದಿಂದ ಕೈಬಿಟ್ಟಿದೆ. ಈ ನಡುವೆ ಭಾರತದ ಬ್ಯಾಟಿಂಗ್ ದಿಗ್ಗಜ ವೀರೇಂದ್ರ ಸೆಹ್ವಾಗ್, ಟ್ರೋಲರ್‌ಗಳನ್ನು ಗುರಿಯಾಗಿಟ್ಟುಕೊಂಡು ನೀಡಿದ ಬ್ರೂಕ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬ್ರೂಕ್ ಮೊದಲ ಎರಡು ಪಂದ್ಯಗಳಲ್ಲಿ, ತಾವು ಪಡೆದ ದುಬಾರಿ ಬೆಲೆಗೆ ಸಮರ್ಥನೆ ನೀಡಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ವಿಶೇಷವಾಗಿ ಸ್ಪಿನ್ನರ್‌ಗಳ ವಿರುದ್ಧ ಬ್ಯಾಟ್‌ ಬೀಸಲು ಪರದಾಡಿದರು. ಆದರೆ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 55 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಅಲ್ಲದೆ ಆ ಪಂದ್ಯದಲ್ಲಿ ತಂಡವು 23 ರನ್‌ಗಳಿಂದ ಗೆದ್ದು ಬೀಗಿತು.

ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಬ್ರೂಕ್, ಟ್ರೋಲರ್‌ಗಳಿಗೆ ತಿರುಗೇಟು ನೀಡಿದ್ದರು, “ಮೊದಲ ಕೆಲವು ಪಂದ್ಯಗಳ ನಂತರ ನಾನು ನನ್ನ ಮೇಲೆ ಸ್ವಲ್ಪ ಒತ್ತಡ ಹಾಕುತ್ತಿದ್ದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ನನ್ನ ಆಟವನ್ನು ಟೀಕಿಸುತ್ತಿದ್ದರು. ಕಳಪೆ ಪ್ರದರ್ಶನ ನೀಡಿದ ಬಳಿಕ ಟ್ರೋಲ್‌ಗಳು ಕೇಳಿಬರುತ್ತವೆ. ನಾನು ಇಂದು ರಾತ್ರಿ 'ಐ ಡೋಂಟ್ ಕೇರ್' ಮನಸ್ಥಿತಿಯೊಂದಿಗೆ ಮೈದಾನಕ್ಕಿಳಿದಿದ್ದೆ. ಅದೃಷ್ಟವಶಾತ್ ನನ್ನಿಂದ ಉತ್ತಮ ಆಟ ಹೊರಬಂದಿತು. ಇಂದು ರಾತ್ರಿ 'ಚೆನ್ನಾಗಿ ಆಡಿದೆ' ಎಂದು ಹೇಳುವ ಬಹಳಷ್ಟು ಭಾರತೀಯ ಅಭಿಮಾನಿಗಳು ಇಲ್ಲಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಅವರೇ ನನ್ನನ್ನು ಟ್ರೋಲ್ ಮಾಡುತ್ತಿದ್ದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅವರ ಬಾಯಿ ಮುಚ್ಚಿಸಲು ಸಾಧ್ಯವಾಗಿರುವುದಕ್ಕೆ ಸಂತೋಷವಾಗಿದೆ” ಎಂದು ಬ್ರೂಕ್‌ ಹೇಳಿದ್ದರು.

ಬ್ರೂಕ್ ಆ ಫಾರ್ಮ್ ಅನ್ನು ಮುಂದುವರಿಸುತ್ತಾರೆ ಎಂಬ ನಿರೀಕ್ಷೆ ಇತ್ತಾದರೂ, ನಂತರದ ಐದು ಪಂದ್ಯಗಳಲ್ಲಿ ಸಂಪೂರ್ಣ ವಿಫಲರಾದರು. ಇದರಲ್ಲಿ ಎರಡು ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಡಕೌಟ್‌ ಆದರು. ಇದೇ ಕಾರಣದಿಂದ ಭಾನುವಾರ ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ಗ್ಲೆನ್ ಫಿಲಿಫ್ಸ್‌ ಆಡಿಸುವ ಸಲುವಾಗಿ ಬ್ರೂಕ್ ಅವರನ್ನು ತಂಡದಿಂದ ಕೈಬಿಡಲಾಯ್ತು.

ಪಂದ್ಯಕ್ಕೂ ಮುನ್ನ ಆಡುವ ಬಳಗದ ಪ್ರಕಟಣೆಯ ನಂತರ, ಸೆಹ್ವಾಗ್ ಇಂಗ್ಲೆಂಡ್ ಬ್ಯಾಟರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ರೋಲರ್‌ಗಳಿಗೆ ಪ್ರತಿಕ್ರಿಯೆ ನೀಡಲು ಹೋಗಿದ್ದಕ್ಕೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

“ನೀವು ಟ್ರೋಲರ್‌ಗಳನ್ನು ಕೆಣಕೋದ್ಯಾಕೆ? ಯಾರೆಲ್ಲಾ ನಿಮ್ಮನ್ನು ಟ್ರೋಲ್ ಮಾಡುತ್ತಿದ್ದಾರೆ, ಯಾರೆಲ್ಲಾ ಟೀಕಿಸುತ್ತಿದ್ದಾರೆ ಅಥವಾ ಹೊಗಳುತ್ತಿದ್ದಾರೆ ಎಂದು ಏಕೆ ನೋಡಬೇಕು? ನಿಮ್ಮ ಕೆಲಸವು ಬರುವುದು, ಆಡುವುದು ಮತ್ತು ಅದನ್ನು ಅಲ್ಲಿಗೆ ಬಿಡುವುದು ಅಷ್ಟೇ. ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಹಾಕಲು ಬಯಸಿದರೆ, ಅದನ್ನು ಪೋಸ್ಟ್ ಮಾಡಿ. ಪೋಸ್ಟ್ ಮಾಡಿದ ನಂತರ ಕಾಮೆಂಟ್‌ಗಳನ್ನು ನೋಡಬೇಡಿ. ಏಕೆಂದರೆ ಅದು ಖಂಡಿತವಾಗಿಯೂ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ಬಿಟ್ಟು ಚಲನಚಿತ್ರಗಳನ್ನು ವೀಕ್ಷಿಸಿ, ಸಂಗೀತವನ್ನು ಆಲಿಸಿ, ಸ್ನೇಹಿತರೊಂದಿಗೆ ಹೊರಹೋಗಿ. ಸಾಮಾಜಿಕ ಮಾಧ್ಯಮದಲ್ಲಿ ನೋಡುವಂಥದ್ದು ಏನೂ ಅಲ್ಲ. ಅದು ಕೇವಲ ಅಪ್ಡೇಟ್‌ಗಳನ್ನು ಪೋಸ್ಟ್ ಮಾಡುವ ಸ್ಥಳ ಅಷ್ಟೇ. ಟ್ರೋಲರ್‌ಗಳಿಗೆ ಭಯಪಡಬೇಡಿ. ನೀವು ಉತ್ತಮ ಪ್ರದರ್ಶನ ನೀಡಿದರೆ, ನಿಮ್ಮನ್ನು ಟ್ರೋಲ್ ಮಾಡಿದವರೇ ನಿಮ್ಮನ್ನು ಹೊಗಳುತ್ತಾರೆ,” ಎಂದು ಸೆಹ್ವಾಗ್ ಹೇಳಿದ್ದಾರೆ.