WTC final: ನಾವೇ ಚಾಂಪಿಯನ್; ಆಸ್ಟ್ರೇಲಿಯಾ ಗೆಲ್ಲುವ ಫೇವರೆಟ್ ಎಂದ ಶಾಸ್ತ್ರಿ, ಪಾಂಟಿಂಗ್, ಅಕ್ರಮ್‌ಗೆ ದ್ರಾವಿಡ್ ಟಾಂಗ್
Rahul Dravid: ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಉತ್ತಮ ತಂಡಗಳು. ಉಭಯ ತಂಡಗಳು ಕೆಲವು ಉತ್ತಮ ಆಟಗಾರರನ್ನು ಹೊಂದಿವೆ. ನಾವು ಉತ್ತಮ ಕ್ರಿಕೆಟ್ ಆಡಿದರೆ ಪಂದ್ಯ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ದ್ರಾವಿಡ್ ಹೇಳಿದ್ದಾರೆ.
ವಿಶ್ವ ಕ್ರಿಕೆಟ್‌ನ ಬಲಿಷ್ಠ ರಾಷ್ಟ್ರ ಭಾರತ (Team India). ಯಾವುದೇ ಸ್ವರೂಪದ ಪಂದ್ಯವಿರಲಿ ಅಥವಾ ವಿಶ್ವದ ಯಾವುದೇ ಮೂಲೆಯಲ್ಲಿ ಭಾರತದ ಪಂದ್ಯವಿದ್ದರೂ, ಟೀಮ್ ಇಂಡಿಯಾ ಯಾವಾಗಲೂ ಗೆಲ್ಲುವ ಫೇವರಿಟ್ ಆಗಿರುತ್ತದೆ. ಅದರಲ್ಲೂ, ಕಳೆದ ಒಂದು ದಶಕದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಮತ್ತಷ್ಟು ಬಲಿಷ್ಠವಾಗಿದೆ. ತವರು ಮಾತ್ರವಲ್ಲದೆ ವಿದೇಶಿ ನೆಲದಲ್ಲಿಯೂ ತನ್ನ ಸಾಮರ್ಥ್ಯವನ್ನು ಭಾರತದ ಆಟಗಾರರು ಪ್ರದರ್ಶಿಸಿದ್ದಾರೆ.
ಇದೀಗ, ಟೆಸ್ಟ್ ಕ್ರಿಕೆಟ್‌ನ ಮಹತ್ವದ ಐಸಿಸಿ ಪಂದ್ಯಕ್ಕೆ ಭಾರತ ಸಿದ್ಧವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship final) ಪಂದ್ಯಕ್ಕೆ ಇಂಗ್ಲೆಂಡ್‌ನ ದಿ ಓವಲ್ ಮೈದಾನ ವೇದಿಕೆಯಾಗಿದೆ. ಹೀಗಾಗಿ, ಈ ಮಹತ್ವದ ಐಸಿಸಿ ಪಂದ್ಯದಲ್ಲಿ ಫೇವರೆಟ್ ತಂಡ ಯಾವುದು ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ಭಾರತದ ದಿಗ್ಗಜ ಕ್ರಿಕೆಟಿಗರಾದ ರವಿಶಾಸ್ತ್ರಿ ಮತ್ತು ವಾಸಿಂ ಅಕ್ರಮ್ ಹಾಗೂ ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್, ಆಸ್ಟ್ರೇಲಿಯಾವನ್ನೇ "ಸ್ವಲ್ಪಹೆಚ್ಚು ಫೇವರೆಟ್" ಎಂದು ಹೇಳಿದ್ದಾರೆ. ಇದು ಭಾರತೀಯರ ಅಚ್ಚರಿಗೂ ಕಾರಣವಾಗಿದೆ.
ಆದರೆ, ಈ ಮೂವರು ದಿಗ್ಗಜರ ಪ್ರತಿಕ್ರಿಯೆಗೆ, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಲಂಡನ್‌ನಲ್ಲಿ ಸೋಮವಾರ (ಮೇ 05) ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಚರ್ಚೆಗೆ ಅನಗತ್ಯ ಚರ್ಚೆಗೆ ತೆರೆ ಎಳೆದಿದ್ದಾರೆ.
ಕಳೆದ ಭಾನುವಾರ(ಮೇ 04) ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂಭಾಷಣೆ ವೇಳೆ, ಆಸ್ಟ್ರೇಲಿಯಾವು ನೆಚ್ಚಿನ ತಂಡವಾಗಿದೆ ಎಂದು ಭಾರತದ ಮಾಜಿ ಕೋಚ್ ಶಾಸ್ತ್ರಿ ಹೇಳಿಕೊಂಡಿದ್ದರು. ಜಸ್ಪ್ರೀತ್ ಬುಮ್ರಾ ಗೈರುಹಾಜರಿ ಇದಕ್ಕೆ ಕಾರಣ ಎಂದು ಅವರು ಹೇಳಿದ್ದರು. ಇದೇ ವೇಳೆ ಐಪಿಎಲ್ 2023ರ ಆವೃತ್ತಿ ಬಳಿಕ ಭಾರತದ ಆಟಗಾರರು ಆಸೀಸ್ ಆಟಗಾರರಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ದಣಿದಿದ್ದಾರೆ ಎಂದು ಪಾಂಟಿಂಗ್ ತಮ್ಮ ದೇಶದ ಪರ ನಿಂತಿದ್ದರು. ಅಕ್ರಂ ಕೂಡಾ ಆಸೀಸ್ ತಂಡವನ್ನೇ ಆಯ್ಕೆ ಮಾಡಿದರು.
ಆ ಬಳಿಕ ಸೋಮವಾರ ಭಾರತದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ, ಈ ತಜ್ಞರ ಅಭಿಪ್ರಾಯವನ್ನು ತಿಳಿಸಲಾಯಿತು. ಅನುಭವಿ ಹಾಗೂ ಹಿರಿಯ ಆಟಗಾರ, ಫೇವರೆಟ್ ಚರ್ಚೆಯ ಕುರಿತಾಗಿ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಬದಲಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವ ವಿಶ್ವಾಸವನ್ನು ದಿ ವಾಲ್ ವ್ಯಕ್ತಪಡಿಸಿದ್ದಾರೆ.
“ಏನೇ ಆಗಲಿ, ಮುಂದಿನ 5 ದಿನಗಳಲ್ಲಿ ಫಲಿತಾಂಶ ತಿಳಿಯುತ್ತದೆ. ಅದಕ್ಕಿಂತ ಮುಂಚೆಯೇ ಏನಾಗುತ್ತದೆ ಎಂದು ಯಾರು ಏನೇ ಹೇಳಿದರೂ ಪ್ರಯೋಜನವಿಲ್ಲ. ಇವೆರಡೂ ಉತ್ತಮ ತಂಡಗಳು. ಉಭಯ ತಂಡಗಳು ಕೆಲವು ಉತ್ತಮ ಆಟಗಾರರನ್ನು ಹೊಂದಿವೆ. ನಾವು ಉತ್ತಮ ಕ್ರಿಕೆಟ್ ಆಡಿದರೆ, ನಾವು 20 ವಿಕೆಟ್ ಪಡೆದು ರನ್ ಗಳಿಸಿದರೆ, ನಾವು ಪಂದ್ಯ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ,” ಎಂದು ದ್ರಾವಿಡ್ ಹೇಳಿದ್ದಾರೆ.
2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಬಳಿಕ, ಭಾರತವು ಮೊದಲ ಬಾರಿಗೆ ಐಸಿಸಿ ಟ್ರೋಫಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಮೊದಲ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತವು, ಎರಡನೇ ಪ್ರಯತ್ನದಲ್ಲಿ ಯಶಸ್ಸು ಕಾಣುವ ನಿರೀಕ್ಷೆ ಇದೆ. 2021ರ ಫೈನಲ್‌ನಲ್ಲಿ ಭಾರತಕ್ಕೆ ಎದುರಾದ ಸೋಲು, ಈ ಬಾರಿ ತಂಡಕ್ಕೆ ಹೆಚ್ಚುವರಿ ಒತ್ತಡ ಬೀರುವುದಿಲ್ಲ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ವಿಭಾಗ