ಕನ್ನಡ ಸುದ್ದಿ  /  Sports  /  Cristiano Ronaldo Completes Second Hat Trick For Al Nassr

Watch: ಅಲ್ ನಾಸರ್ ಪರ ಮೂರೇ ಪಂದ್ಯಗಳಲ್ಲಿ ಎರಡು ಬಾರಿ ಹ್ಯಾಟ್ರಿಕ್ ಗೋಲು ಗಳಿಸಿದ ರೊನಾಲ್ಡೊ

ಅಲ್ ನಾಸರ್ ತಂಡವು ಪ್ರಸ್ತುತ 18 ಪಂದ್ಯಗಳಿಂದ 43 ಅಂಕಗಳನ್ನು ದಾಖಲಿಸಿದೆ. ಮತ್ತೊಂದೆಡೆ 18 ಪಂದ್ಯಗಳಿಂದ 41 ಅಂಕ ಗಳಿಸಿರುವ ಅಲ್ ಇತ್ತಿಹಾದ್‌ ತಂಡವು ಎರಡನೇ ಸ್ಥಾನದಲ್ಲಿದೆ.

ಅಲ್ ನಾಸರ್ ಪರ ಕ್ರಿಸ್ಟಿಯಾನೊ ರೊನಾಲ್ಡೊ ಹ್ಯಾಟ್ರಿಕ್ ಗೋಲು ಗಳಿಸಿದರು
ಅಲ್ ನಾಸರ್ ಪರ ಕ್ರಿಸ್ಟಿಯಾನೊ ರೊನಾಲ್ಡೊ ಹ್ಯಾಟ್ರಿಕ್ ಗೋಲು ಗಳಿಸಿದರು (Twitter)

ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಸೌದಿ ಪ್ರೊ ಲೀಗ್‌ನಲ್ಲಿ ಮಿಂಚುತ್ತಿದ್ದಾರೆ. ಅಲ್ ನಾಸರ್ ಪರ ಆಡುತ್ತಿರುವ ರೊನಾಲ್ಡೊ, ಎರಡನೇ ಬಾರಿ ಹ್ಯಾಟ್ರಿಕ್‌ ಗೋಲುಗಳನ್ನು ಬಾರಿಸಿದ್ದಾರೆ. ಇವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಡಮಾಕ್ ವಿರುದ್ಧ ಅಲ್‌ ನಾಸರ್‌ ತಂಡವು 3-0 ಅಂತರದಿಂದ ಗೆಲುವು ಸಾಧಿಸಿದೆ. ಅಲ್ಲದೆ ಆ ಮೂಲಕ ಸೌದಿ ಪ್ರೊ ಲೀಗ್ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ.

ವಿಶ್ವ ಫುಟ್ಬಾಲ್‌ನಲ್ಲಿ ಪೋರ್ಚುಗಲ್ ತಂಡದ ನಾಯಕನಾಗಿರುವ ಜಾಗತಿಕ ಕ್ರೀಡಾ ಐಕಾನ್‌ ರೊನಾಲ್ಡೊ, ಅಲ್ ನಾಸರ್‌ ಪರ ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಎರಡು ಬಾರಿ ಹ್ಯಾಟ್ರಿಕ್‌ ಗೋಲುಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಜಾಗತಿಕ ಫುಟ್ಬಾಲ್‌ ಕ್ಷೇತ್ರದಲ್ಲಿ ಈಗಾಗಲೇ ಹಲವು ದಾಖಲೆ ಬರೆದಿರುವ ರೊನಾಲ್ಡೊ, ಕ್ಲಬ್‌ ಫುಟ್ಬಾಲ್‌ನಲ್ಲೂ ಮೇಲಿಂದ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಅದೇ ರೀತಿ ಶನಿವಾರದಂದು ಅಭಾದಲ್ಲಿನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದಿದ್ದಾರೆ.

ಅಲ್ ನಾಸರ್ ಮತ್ತು ಡಮಾಕ್ ನಡುವಿನ ಪಂದ್ಯವು ಸಂಪೂರ್ಣ ಏಕಮುಖವಾಗಿ ಸಾಗಿತು. ಅದರಲ್ಲೂ ರೊನಾಲ್ಡೋ ತಮ್ಮ ತಂಡವನ್ನು ಒಂಟಿಯಾಗಿ ಗೆಲುವಿನತ್ತ ಮುನ್ನಡೆಸಿದರು. ತಂಡ ಗಳಿಸಿದ ಎಲ್ಲಾ ಮೂರು ಗೋಲುಗಳನ್ನು ರೊನಾಲ್ಡೊ ಒಬ್ಬರೇ ಗಳಿಸಿದರು. ಪಂದ್ಯವು ಮೊದಲಾರ್ಧದಲ್ಲಿಯೇ ಬಹುತೇಕ ಮುಕ್ತಾಯವಾಗಿತ್ತು. ಏಕೆಂದರೆ ಕ್ರಿಸ್ಟಿಯಾನೊ ಪಂದ್ಯದ ಅರ್ಧ ಸಮಯಕ್ಕೂ ಮುಂಚಿತವಾಗಿ ಹ್ಯಾಟ್ರಿಕ್ ಗೋಲು ಗಳಿಸಿದ್ದರು.

ಅಲ್ ನಾಸರ್ ತಂಡವು ಪ್ರಸ್ತುತ 18 ಪಂದ್ಯಗಳಿಂದ 43 ಅಂಕಗಳನ್ನು ದಾಖಲಿಸಿದೆ. ಮತ್ತೊಂದೆಡೆ 18 ಪಂದ್ಯಗಳಿಂದ 41 ಅಂಕ ಗಳಿಸಿರುವ ಅಲ್ ಇತ್ತಿಹಾದ್‌ (Al Ittihad) ತಂಡವು ಎರಡನೇ ಸ್ಥಾನದಲ್ಲಿದೆ.

ಡಮಾಕ್ ವಿರುದ್ಧದ ಪಂದ್ಯದಲ್ಲಿ18ನೇ ನಿಮಿಷದಲ್ಲಿ ರೊನಾಲ್ಡೊ ಮೊದಲ ಗೋಲು ಗಳಿಸಿದರು. ನಂತರ 23ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ 2-0ಯಿಂದ ಮುನ್ನಡೆ ತಂದುಕೊಟ್ಟರು. ಅಂತಿಮವಾಗಿ ತಮ್ಮ ಹ್ಯಾಟ್ರಿಕ್ ಸಾಧನೆಯನ್ನು ಪೂರ್ಣಗೊಳಿಸಲು 44ನೇ ನಿಮಿಷದಲ್ಲಿ ಮತ್ತೊಂದು ಗೋಲು ಸಿಡಿಸಿದರು.

ಸೌದಿ ಪ್ರೊ ಲೀಗ್‌ಗೆ ಪದಾರ್ಪಣೆ ಮಾಡಿದ ಬಳಿಕ, ರೊನಾಲ್ಡೊ ಒಟ್ಟು ಎಂಟು ಗೋಲುಗಳನ್ನು ಗಳಿಸಿದ್ದಾರೆ. ಹೀಗಾಗಿ ಗೋಲ್ಡನ್ ಬೂಟ್ ಪಡೆಯುವ ಆಟಗಾರರ ರೇಸ್‌ನಲ್ಲಿ ಫೆರಾಸ್ ಅಲ್ಬ್ರಿಕನ್ ಮತ್ತು ಓಡಿಯನ್ ಇಘಾಲೊ ಅವರೊಂದಿಗೆ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ರೊನಾಲ್ಡೊ ಅವರ ಸಹ ಆಟಗಾರ ತಾಲಿಸ್ಕಾ, ಪ್ರಸ್ತುತ ಗೋಲ್ಡನ್ ಬೂಟ್ ರೇಸ್‌ನಲ್ಲಿ 13 ಗೋಲುಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

ಅಲ್ ನಾಸರ್ ತಂಡವು ಮಾರ್ಚ್ 3ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅಲ್ ಬಾಟಿನ್(Al Batin) ತಂಡವನ್ನು ಎದುರಿಸಲಿದೆ. ತಮ್ಮ ಖಾತೆಗೆ ಮತ್ತಷ್ಟು ಗೋಲುಗಳನ್ನು ಸೇರಿಸುವ ಗುರಿಯನ್ನು ರೊನಾಲ್ಡೊ ಹೊಂದಿದ್ದಾರೆ. ಆ ಮೂಲಕ ಗೋಲ್ಡನ್ ಬೂಟ್‌ ತಮ್ಮದಾಗಿಲು ಹೋರಾಡುವ ಉತ್ಸಾಹದಲ್ಲಿದ್ದಾರೆ.