ಕನ್ನಡ ಸುದ್ದಿ  /  Sports  /  Football News Lionel Messi To Join Al Hilal In Saudi Arabian Club Against Cristiano Ronaldo Of Al Nassr Jra

Lionel Messi: ಸೌದಿ ಕ್ಲಬ್ ಜೊತೆ ಒಪ್ಪಂದಕ್ಕೆ ಮುಂದಾದ ಫುಟ್ಬಾಲ್ ಸ್ಟಾರ್; ಅಭಿಮಾನಿಗಳಿಗೆ ಮತ್ತೆ ಮೆಸ್ಸಿ ರೊನಾಲ್ಡೊ ಕಾದಾಟ ನೋಡೋ ಭಾಗ್ಯ

ಪ್ರಸ್ತುತ ಪ್ಯಾರಿಸ್‌ ಮೂಲದ ಫುಟ್ಬಾಲ್‌ ಕ್ಲಬ್‌ ಆಗಿರುವ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಜೊತೆಗಿನ ಒಪ್ಪಂದ ಅಂತಿಮವಾದ ಬಳಿಕ, ಮೆಸ್ಸಿ ಸೌದಿ ಅರೇಬಿಯಾದ ಕ್ಲಬ್‌ಗೆ ಸೇರಲಿದ್ದಾರೆ ಎಂದು ವರದಿ ತಿಳಿಸಿದೆ.

ಲಿಯೋನಲ್‌ ಮೆಸ್ಸಿ
ಲಿಯೋನಲ್‌ ಮೆಸ್ಸಿ (REUTERS)

ಫುಟ್ಬಾಲ್‌ನ ಇಬ್ಬರು ದಿಗ್ಗಜ ಆಟಗಾರರೆಂದರೆ, ಲಿಯೋನಲ್‌ ಮೆಸ್ಸಿ (Lionel Messi) ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo). ಇವರಿಗೆ ಜಾಗತಿಕ ಮಟ್ಟದಲ್ಲಿ ಮಿಲಿಯನ್‌ಗಟ್ಟಲೆ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಇವರನ್ನು ಆರಾಧಿಸುವ ದೊಡ್ಡ ಬಳಗವೇ ಇದೆ. ಇವರಿಬ್ಬರು ಒಂದೇ ಮೈದಾನದಲ್ಲಿ ಪರಸ್ಪರ ಎದುರಾಳಿಗಾಳಾಗಿ ಕಣಕ್ಕಿಳಿಯುತ್ತಾರೆ ಎಂದರೆ, ಅಭಿಮಾನಿಗಳಿಗೆ ಭರಪೂರ ಮನರಂಜನೆ. ಆ ಪಂದ್ಯಗಳ ರೋಚಕತೆ ಕೂಡಾ ದುಪ್ಪಟ್ಟಾಗಿರುತ್ತದೆ. ಜಾಗತಿಕ ಕ್ರೀಡಾಕೂಟದಲ್ಲಿ ತಮ್ಮ ತಮ್ಮ ದೇಶಗಳನ್ನು ಪ್ರತಿನಿಧಿಸುವ ಇವರು, ಇದೀಗ ಮತ್ತೆ ಎದುರಾಳಿಗಳಾಗಿ ಮೈದಾನಕ್ಕಿಳಿಯುವ ಮತ್ತೊಂದು ಸುಳಿವು ಸಿಕ್ಕಿದೆ.

ಪೋರ್ಚುಗಲ್‌ ಪರ ಆಡುವ ರೊನಾಲ್ಡೊ, ಸೌದಿ ಅರೇಬಿಯಾದ ಫುಟ್ಬಾಲ್‌ ಕ್ಲಬ್‌ ಅಲ್‌ ನಾಸರ್‌ (Al Nassr) ಪರವೂ ಆಡುತ್ತಿದ್ದಾರೆ. ಅತ್ತ ಅರ್ಜೆಂಟೀನಾದ ಆರಾಧ್ಯ ದೈವವಾದ ಮೆಸ್ಸಿ, ಸೌದಿ ಅರೇಬಿಯಾ ಫುಟ್ಬಾಲ್‌ ಕ್ಲಬ್‌ ಪರ ಒಪ್ಪಂದ ಮಾಡಿರಲಿಲ್ಲ. ಆದರೆ, ಇದೀಗ ಅಭಿಮಾನಿಗಳ ಆಸೆ ಚಿಗುರೊಡೆಯುವ ಕಾಲ ಬಂದಿದೆ. ಸೌದಿ ಅರೇಬಿಯಾದಲ್ಲಿ ಲಿಯೋನೆಲ್ ಮೆಸ್ಸಿ ಆಡುವ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ಪೈಪೋಟಿ ನಡೆಸುವ ನಿರೀಕ್ಷೆಯು ನಿಜವಾಗುತ್ತಿದೆ. ಎಲ್ ಚಿರಿಂಗುಯಿಟೊ (El Chiringuito) ಮಾಡಿರುವ ವರದಿಯ ಪ್ರಕಾರ, ಸೌದಿ ಅರೇಬಿಯಾದ ಫುಟ್ಬಾಲ್‌ ಕ್ಲಬ್‌ ಅಲ್ ಹಿಲಾಲ್‌(Al-Hilal)ಗೆ ಸೇರುವ ಆಫರ್‌ ಅನ್ನು ಮೆಸ್ಸಿ ಒಪ್ಪಿಕೊಂಡಿದ್ದಾರೆ.

ವರದಿಯ ಪ್ರಕಾರ, ಪ್ರಸ್ತುತ ಪ್ಯಾರಿಸ್‌ ಮೂಲದ ಫುಟ್ಬಾಲ್‌ ಕ್ಲಬ್‌ ಆಗಿರುವ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಜೊತೆಗಿನ ಒಪ್ಪಂದ ಅಂತಿಮವಾದ ಬಳಿಕ, ಮೆಸ್ಸಿ ಸೌದಿ ಅರೇಬಿಯಾದ ಕ್ಲಬ್‌ಗೆ ಸೇರಲಿದ್ದಾರೆ. ಏಕೆಂದರೆ, ಅವರು ಎಫ್‌ಸಿ ಬಾರ್ಸಿಲೋನಾಗೆ ಮರಳುವ ಸಂಭಾವ್ಯತೆಯನ್ನು ಈಗಾಗಲೇ ತಳ್ಳಿಹಾಕಿದ್ದಾರೆ.

ಒಪ್ಪಂದದ ಮೌಲ್ಯವೆಷ್ಟು?

ಅರ್ಜೆಂಟೀನಾದ ಸೂಪರ್‌ ಸ್ಟ್ರೈಕರ್‌ ಅಲ್-ಹಿಲಾಲ್‌ ಕ್ಲಬ್‌ನೊಂದಿಗೆ ಮಾಡಿರುವ ಒಪ್ಪಂದವು ವರ್ಷಕ್ಕೆ ಬರೋಬ್ಬರಿ 262 ಮಿಲಿಯನ್ ಪೌಂಡ್‌ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.

ಕುತೂಹಲಕಾರಿ ಎಂಬಂತೆ, ಸ್ಪೇನ್‌ನ ಫುಟ್ಬಾಲ್‌ ಆಟಗಾರ ಸೆರ್ಗಿಯೋ ಬುಸ್ಕೆಟ್ಸ್ ಕೂಡ ಮೆಸ್ಸಿ ಜೊತೆಗೆ ಅಲ್-ಹಿಲಾಲ್ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಸೌದಿಯ ಈ ಕ್ಲಬ್, ಬಾರ್ಸಿಲೋನಾ ತಂಡದ ಮಾಜಿ ಸಹ ಆಟಗಾರರನ್ನು ಮತ್ತೆ ಒಂದುಗೂಡಿಸುವ ಸಲುವಾಗಿ ಜೋರ್ಡಿ ಆಲ್ಬಾ ಅವರನ್ನು ಕೂಡಾ ಕರೆತರಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ಲೆಕ್ಕಾಚಾರಗಳು ನಿಜವಾದರೆ, ಫುಟ್ಬಾಲ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ಖಚಿತವಾಗುತ್ತದೆ.

ತಮ್ಮ ಅನುಮೋದನೆಯಿಲ್ಲದೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದಕ್ಕಾಗಿ ಮೆಸ್ಸಿಯನ್ನು ಇತ್ತೀಚೆಗೆ ಪ್ಯಾರಿಸ್ ಸೇಂಟ್-ಜರ್ಮೈನ್ ಎಫ್‌ಸಿ ಕ್ಲಬ್‌ ಅಮಾನತುಗೊಳಿಸಿತ್ತು. ಹೀಗಾಗಿ ಫುಟ್‌ಬಾಲ್ ಸೂಪರ್‌ಸ್ಟಾರ್ ತಮ್ಮ ಅನಧಿಕೃತ ಭೇಟಿಗಾಗಿ ಕ್ಲಬ್‌ಗೆ ಕ್ಷಮೆಯಾಚಿಸಿದ್ದಾರೆ. ವರದಿಗಳ ಪ್ರಕಾರ, ತರಬೇತಿಗೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಅವರನ್ನು ಎರಡು ವಾರಗಳ ಕಾಲ ಅಮಾನತುಗೊಳಿಸಲಾಗಿತ್ತು.

"ನಾನು ನನ್ನ ತಂಡದ ಆಟಗಾರರಿಗೆ ಮತ್ತು ಕ್ಲಬ್‌ಗೆ ಕ್ಷಮೆಯಾಚಿಸಲು ಬಯಸುತ್ತೇನೆ" ಎಂದು ಮೆಸ್ಸಿ ತಮ್ಮ ಸೌದಿ ಭೇಟಿಯ ನಂತರ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದರು.

ಮೆಸ್ಸಿಯ ಪ್ರತಿಸ್ಪರ್ಧಿಯಾಗಿರುವ ರೊನಾಲ್ಡೊ, ಪ್ರಸ್ತುತ ಸೌದಿ ಅರೇಬಿಯಾ ಕ್ಲಬ್ ಅಲ್ ನಾಸರ್‌ ಪರ ಆಡುತ್ತಿದ್ದಾರೆ. ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೋರ್ಗಾನ್ ಅವರ ಸಂದರ್ಶನದ ನಂತರ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದ ರೊನಾಲ್ಡೊ, ಕ್ಲಬ್‌ನಿಂದ ಹೊರಬಂದಿದ್ದರು. ಆ ಬಳಿಕ ಸೌದಿ ಕ್ಲಬ್‌ ಸೇರಿಕೊಂಡಿದ್ದರು.