ಕನ್ನಡ ಸುದ್ದಿ  /  Sports  /  Glenn Maxwell Recalls Moment He Realised Rcb Retained Him

Glenn Maxwell: ರಿಟೈನ್ ಮಾಡಿರುವ ಬಗ್ಗೆ ಆರ್‌ಸಿಬಿಯಿಂದ ಕರೆ ಬಂದಾಗ ಮ್ಯಾಕ್ಸಿಗೆ ಆದ ಖುಷಿ ಹೇಗಿತ್ತು? ಅವರ ಬಾಯಿಂದಲೇ ಕೇಳಿ

“ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುವುದು ಎಂಬ ಫೋನ್ ಕರೆ ಬಂದಾಗ, ನನಗೆ ನಿಜಕ್ಕೂ ನಂಬಲಾಗಲಿಲ್ಲ. ನನ್ನ ಉತ್ಸಾಹ ಇಮ್ಮಡಿಯಾಯ್ತು. ತಂಡ ಸೇರಿಕೊಳ್ಳಲು ಹೆಚ್ಚು ಕಾಯಲು ನನ್ನಿಂದ ಸಾಧ್ಯವಾಗಲಿಲ್ಲ,” ಎಂದು ಮ್ಯಾಕ್ಸಿ ಹೇಳಿದ್ದಾರೆ.

ಗ್ಲೆನ್‌ ಮ್ಯಾಕ್ಸ್‌ವೆಲ್
ಗ್ಲೆನ್‌ ಮ್ಯಾಕ್ಸ್‌ವೆಲ್ (IPL)

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರನ್ನು 2022ರ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆವೃತ್ತಿಗೂ ಮುನ್ನ ಫ್ರಾಂಚೈಸಿ ರಿಟೈನ್‌ ಮಾಡಿಕೊಂಡಿತ್ತು. ತಂಡವು ಆ ವರ್ಷ ಉಳಿಸಿಕೊಂಡ ಮೂವರು ಆಟಗಾರರಲ್ಲಿ ಮ್ಯಾಕ್ಸಿ ಕೂಡಾ ಒಬ್ಬರು. ಪಂದ್ಯಾವಳಿಯ ಹಿಂದಿನ ಋತುವಿನಲ್ಲಿ ಆರ್‌ಸಿಬಿ ತಂಡವು ಪ್ಲೇಆಫ್ ಹಂತವನ್ನು ತಲುಪುವಲ್ಲಿ ಮ್ಯಾಕ್ಸ್‌ವೆಲ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಅವರು ಗಾಯದಿಂದಾಗಿ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಆದರೆ, ಐಪಿಎಲ್‌ ವೇಳೆಗೆ ಗುಣಮುಖರಾಗಲಿರುವ ಅವರು, ಮತ್ತೊಮ್ಮೆ ಆರ್‌ಸಿಬಿ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ವಿವಿಧ ಫ್ರಾಂಚೈಸಿಗಳ ಪರ ಆಡಿದ ಅನುಭವ ಹೊಂದಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್, ಮತ್ತು ಕಿಂಗ್ಸ್ XI ಪಂಜಾಬ್ ಪರ ಅನೇಕ ಪಂದ್ಯಗಳನ್ನು ಅವರು ಆಡಿದ್ದರು. ಆದರೆ, RCBಯಲ್ಲಿ ಆಡಿದಂತೆ ಅವರಿಂದ ಸ್ಥಿರ ಪ್ರದರ್ಶನ ಬೇರೆ ತಂಡಗಳಲ್ಲಿದ್ದಾಗ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಆರ್‌ಸಿಬಿ ತಂಡದೊಂದಿಗೆ ಅವರ ನಂಟು ಅಪಾರವಾಗಿದೆ. ಇಲ್ಲಿ ತಮ್ಮ ಇಚ್ಛೆಯ ಪ್ರಕಾರ ಬ್ಯಾಟ್‌ ಬೀಸುವ ಸ್ವಾತಂತ್ಯ ನನಗಿದೆ ಎಂದು ಈ ಹಿಂದೆಯೇ ಮ್ಯಾಕ್ಸಿ ಹೇಳಿಕೊಂಡಿದ್ದರು. ಅಲ್ಲದೆ ಮ್ಯಾಕ್ಸಿ ಆಟಕ್ಕೆ ಬೆಂಗಳೂರು ಅಭಿಮಾನಿಗಳು ಫಿದಾ ಆಗಿದ್ದಾರೆ.

RCB ಪಾಡ್‌ಕ್ಯಾಸ್ಟ್‌ನಲ್ಲಿ ಡ್ಯಾನಿಶ್ ಸೇಟ್ ಅವರೊಂದಿಗೆ ಫ್ರೀವೀಲಿಂಗ್ ಚಾಟ್‌ನಲ್ಲಿ ಮಾತನಾಡಿದ ಮ್ಯಾಕ್ಸ್‌ವೆಲ್, 2021ರ ಅದ್ಭುತ ಋತುವಿನ ನಂತರವೂ ಬೆಂಗಳೂರು ಫ್ರಾಂಚೈಸಿಯು ತಮ್ಮನ್ನು ಉಳಿಸಿಕೊಳ್ಳುತ್ತದೆ ಎಂಬುದನ್ನು ತಾನು ನಿರೀಕ್ಷಿಸಿರಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಆ ಋತುವಿನಲ್ಲಿ ಅವರು ತಂಡದ ಪರ ಆಡಿದ 15 ಪಂದ್ಯಗಳಲ್ಲಿ ಬರೋಬ್ಬರಿ 513 ರನ್ ಗಳಿಸಿದರು. ಅದು ಕೂಡಾ 144.10ರ ಭರ್ಜರಿ ಸ್ಟ್ರೈಕ್‌ ರೇಟ್‌ನೊಂದಿಗೆ ಬ್ಯಾಟ್‌ ಬೀಸಿದ್ದರು.

“ಇದು ದೊಡ್ಡ ಪ್ರಾಮಾಣದ ಹರಾಜಾಗಿರುವುದರಿಂದ ಏನಾಗುತ್ತದೆ ಎಂದು ನಮಗೆ ಮೊದಲೇ ತಿಳಿದಿರಲಿಲ್ಲ. ಫ್ರಾಂಚೈಸಿಯು ಎಷ್ಟು ಜನರನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಐಡಿಯಾ ನಮಗಿರಲಿಲ್ಲ. ನಮ್ಮಲ್ಲಿ ಬೌಲರ್‌ಗಳಾಗಿ ಸಿರಾಜ್, ಹರ್ಷಲ್, ಯುಜಿ (ಚಾಹಲ್) ಇದ್ದರು. ಅಲ್ಲದೆ ಎಬಿ, ವಿರಾಟ್ ಮತ್ತು ಕೆಲ ಯುವ ಭಾರತೀಯ ಆಟಗಾರರಿದ್ದರು. ಇವರೆಲ್ಲರನ್ನೂ ಇಲ್ಲಿ ಉಳಿಸಿಕೊಳ್ಳಬಹುದಿತ್ತು. ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ರಿಟೈನ್‌ ಆಗುವ ಅರ್ಹತೆ ಹೊಂದಿದ್ದರು. ಹೀಗಾಗಿ ವಿದೇಶಿ ಬ್ಯಾಟರ್ ಅನ್ನು ಉಳಿಸಿಕೊಳ್ಳುವುದು ಕೆಲವೊಂದು ಸಂದರ್ಭದಲ್ಲಿ ಬುದ್ಧಿವಂತ ನಡೆ ಆಗಿರುವುದಿಲ್ಲ ಎಂಬುದು ನನ್ನ ಅನಿಸಿಕೆ,” ಎಂದು ಮ್ಯಾಕ್ಸ್‌ವೆಲ್ ಹೇಳಿದರು.

“ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುವುದು ಎಂಬ ಫೋನ್ ಕರೆ ಬಂದಾಗ, ನನಗೆ ನಿಜಕ್ಕೂ ನಂಬಲಾಗಲಿಲ್ಲ. ನನ್ನ ಉತ್ಸಾಹ ಇಮ್ಮಡಿಯಾಯ್ತು. ತಂಡ ಸೇರಿಕೊಳ್ಳಲು ಹೆಚ್ಚು ಕಾಯಲು ನನ್ನಿಂದ ಸಾಧ್ಯವಾಗಲಿಲ್ಲ,” ಎಂದು ಮ್ಯಾಕ್ಸಿ ಹೇಳಿದ್ದಾರೆ.

ಪಂದ್ಯಾವಳಿಯ 2022ರ ಆವೃತ್ತಿಯಲ್ಲಿ, ಮ್ಯಾಕ್ಸ್‌ವೆಲ್ ತಂಡದ ಪರ 13 ಪಂದ್ಯಗಳಲ್ಲಿ 301 ರನ್ ಗಳಿಸಿದರು. 169.10ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಆಸ್ಟ್ರೇಲಿಯಾ ಆಲ್‌ರೌಂಡರ್‌, ಆ ಆವೃತ್ತಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಐಪಿಎಲ್ 2023ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡವು, ಏಪ್ರಿಲ್ 2ರಂದು ತನ್ನ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.