ಕನ್ನಡ ಸುದ್ದಿ  /  Sports  /  Ipl 2023 Rashid Back As No 1 In Icc Men's T20i Player Rankings

IPL 2023: ಗುಜರಾತ್ ತಂಡಕ್ಕೆ ಸಿಹಿ ಸುದ್ದಿ; ಮೊದಲ ಪಂದ್ಯಕ್ಕೂ ಮುನ್ನವೇ ಜೋಶ್ ತುಂಬಿದ ಐಸಿಸಿ!

IPL 2023: ಇತ್ತೀಚೆಗಷ್ಟೇ ಮುಕ್ತಾಯವಾದ ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ (Afghanistan vs Pakistan) ಅದ್ಭುತ ಬೌಲಿಂಗ್​ ಮೂಲಕ ಗಮನ ಸೆಳೆದಿದ್ದ ಗುಜರಾತ್​ ಟೈಟಾನ್ಸ್​ ತಂಡದ ಸ್ಪಿನ್ನರ್ ರಶೀದ್​​​​, ಐಸಿಸಿ ಶ್ರೇಯಾಂಕದಲ್ಲಿ ಶ್ರೀಲಂಕಾದ ವನಿಂದು ಹಸರಂಗ (Wanindu Hasaranga) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಡೇವಿಡ್​ ಮಿಲ್ಲರ್​, ಹಾರ್ದಿಕ್​ ಪಾಂಡ್ಯ, ರಶೀದ್​ ಖಾನ್​​
ಡೇವಿಡ್​ ಮಿಲ್ಲರ್​, ಹಾರ್ದಿಕ್​ ಪಾಂಡ್ಯ, ರಶೀದ್​ ಖಾನ್​​ (Twitter)

ಐಸಿಸಿ ನೂತನ ಟಿ20 ರ್ಯಾಂಕಿಂಗ್​ (ICC T20 Ranking) ಪಟ್ಟಿಯನ್ನು ಪ್ರಕಟಿಸಿದೆ. ಆಫ್ಘಾನಿಸ್ತಾನ ತಂಡದ ನಾಯಕ ರಶೀದ್​ ಖಾನ್ (Afghanistan Captain Rashid Khan)​, ಮತ್ತೆ ನಂಬರ್​​​ ವನ್​ ಬೌಲರ್​ ಆಗಿ ಹೊರ ಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ (Afghanistan vs Pakistan) ಅದ್ಭುತ ಬೌಲಿಂಗ್​ ಮೂಲಕ ಗಮನ ಸೆಳೆದಿದ್ದ ರಶೀದ್​​​​, ಐಸಿಸಿ ಶ್ರೇಯಾಂಕದಲ್ಲಿ ಶ್ರೀಲಂಕಾದ ವನಿಂದು ಹಸರಂಗ (Wanindu Hasaranga) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಜೊತೆಗೆ ಐಪಿಎಲ್​ ಆರಂಭಕ್ಕೂ ಮುನ್ನವೇ ಗುಜರಾತ್ ಟೈಟಾನ್ಸ್​​​ (Gujarat Titans) ತಂಡಕ್ಕೆ ಶುಭ ಸುದ್ದಿ ನೀಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಚುಟುಕು ಸರಣಿಯಲ್ಲಿ ರಶೀದ್ ಖಾನ್ 3 ವಿಕೆಟ್ ಕಬಳಿಸಿ ಮಿಂಚಿದರು. ವಿಕೆಟ್​​ ಕಡಿಮೆ ಪಡೆದರೂ, ಎಕಾನಮಿಯನ್ನು ಅದ್ಭುತವಾಗಿ ಕಾಪಾಡಿಕೊಂಡಿದ್ದರು. ಈ ಸ್ಪಿನ್​ ಜಾದೂಗಾರ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಒಂದೇ ಒಂದು ಫೋರ್-ಸಿಕ್ಸರ್ ನೀಡಲಿಲ್ಲ. ಸ್ಪಿನ್​ ಮಾಂತ್ರಿಕನ ಬೌಲಿಂಗ್​​​ ಮುಂದೆ ತತ್ತರಿಸಿದ ಪಾಕಿಸ್ತಾನ ತಂಡದ ಆಟಗಾರರು, ರನ್​ ಗಳಿಸಲು ಪರದಾಟ ನಡೆಸಿದರು. ಹಾಗೆಯೇ ಅವರ ನಾಯಕತ್ವದಲ್ಲಿ ಅಫ್ಘಾನಿಸ್ತಾನ 2-1 ಅಂತರದಲ್ಲಿ ಸರಣಿ ಗೆದ್ದು ಚರಿತ್ರೆ ಸೃಷ್ಟಿಸಿತು.

ಗುಜರಾತ್​ ಟೈಟಾನ್ಸ್​​ಗೆ ಗುಡ್​ನ್ಯೂಸ್​

ಪಾಕಿಸ್ತಾನ ಸರಣಿಯನ್ನು ಯಶಸ್ವಿಯಾಗಿ ಮುಗಿಸಿರುವ ರಶೀದ್ ಖಾನ್, ಈಗ 16ನೇ ಆವೃತ್ತಿಯ ಐಪಿಎಲ್​​​​ನಲ್ಲಿ ನಂಬರ್ 1 ಟಿ20 ಬೌಲರ್ ಆಗಿ ಪ್ರವೇಶಿಸಲಿದ್ದಾರೆ. ರಶೀದ್ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಆಟಗಾರ. ಆಟಗಾರ ಕಳೆದ ಋತುವಿನಲ್ಲಿ 16 ಪಂದ್ಯಗಳಲ್ಲಿ 19 ವಿಕೆಟ್​​​​ ಉರುಳಿಸಿದ್ದ ಸ್ಪಿನ್​​​ ಮಾಂತ್ರಿಕ, ಪ್ರತಿ ಓವರ್​​ಗೆ 6.6 ರನ್​ ಮಾತ್ರ ಬಿಟ್ಟು ಕೊಟ್ಟಿದ್ದರು. ರಶೀದ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್​​​ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದರು. ತನ್ನ ಅದ್ಭುತ ಆಟದ ಮೂಲಕ ತಂಡವನ್ನು ಚಾಂಪಿಯನ್​ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಸಿರಾಜ್​ ಮತ್ತೆ ಕುಸಿತ!

2022ರಿಂದ ಇಲ್ಲಿಯವರೆಗೂ ಅಮೋಘ ನಿರ್ವಹಣೆ ತೋರಿದ್ದ ಮೊಹಮ್ಮದ್​ ಸಿರಾಜ್​​​​ (Mohammed Siraj), ಏಕದಿನ ರ್ಯಾಂಕಿಂಗ್​​ನಲ್ಲಿ ಮತ್ತೆ ಕುಸಿತ ಕಂಡಿದ್ದಾರೆ. ಶ್ರೀಲಂಕಾ, ನ್ಯೂಜಿಲೆಂಡ್​ ಏಕದಿನ ಸರಣಿಗಳಲ್ಲಿ ವಿಕೆಟ್​​​ ಬೇಟೆಯಾಡಿದ್ದ ಹೈದರಾಬಾದ್​​ ವೇಗಿ ನಂಬರ್​​ ವನ್​ ಬೌಲರ್​ ಆಗಿ ಹೊರಹೊಮ್ಮಿದ್ದರು. ಆದರೆ ಆಸ್ಟ್ರೇಲಿಯಾ ಸರಣಿಯಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ರ್ಯಾಂಕಿಂಗ್​​ನಲ್ಲಿ ಕುಸಿತ ಕಂಡರು. ಇದೀಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಿನ್ನಡೆ ತಂದಿದೆ. ಜೋಶ್​ ಹೇಜಲ್​ವುಡ್ (Josh Hazlewood)​​​ ಪ್ರಸ್ತುತ ನಂಬರ್​​ 1 ಬೌಲರ್​ ಆಗಿದ್ದರೆ, ಟ್ರೆಂಟ್​ ಬೌಲ್ಟ್​​ 2ನೇ ಸ್ಥಾನದಲ್ಲಿದ್ದಾರೆ. ಸದ್ಯ ಸಿರಾಜ್​ ಆರ್​​ಸಿಬಿ ಪರ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೇಜಲ್​ವುಡ್​ ಆರ್​​ಸಿಬಿ ತಂಡದ ಆಟಗಾರ ಎಂಬುದು ವಿಶೇಷ.

ನಂ.1 ಸ್ಥಾನದಲ್ಲೇ ಮುಂದುವರೆದ ಸೂರ್ಯ.!

T20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್​​ನಲ್ಲಿ ಬಗ್ಗೆ ಮಾತನಾಡುವುದಾದರೆ, ಸೂರ್ಯಕುಮಾರ್ ಯಾದವ್ (Suryakumar Yadav) ಅವರೇ ನಂಬರ್​ವನ್​ ಶ್ರೇಯಾಂಕದಲ್ಲೇ ಮುಂದುವರೆದಿದ್ದಾರೆ. ಏಕದಿನ ಮಾದರಿಯಲ್ಲಿ ಸೂರ್ಯ ಕಳಪೆ ಫಾರ್ಮ್‌ನಲ್ಲಿದ್ದರೂ, ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಸೂರ್ಯ ಅವರನ್ನು ನಂಬರ್ 1 ಸ್ಥಾನದಲ್ಲಿ ಇರಿಸಿದೆ. ಆದರೆ ಕಳೆದ ಏಕದಿನ ಸರಣಿಯಲ್ಲಿ ಸತತ ಮೂರು ಪಂದ್ಯಗಳಲ್ಲೂ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಇದೀಗ ಮುಂಬೈ ಇಂಡಿಯನ್ಸ್ (Mumbai Indians)​ ಪರ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.