ಕನ್ನಡ ಸುದ್ದಿ  /  Sports  /  Karnataka And Meghalaya Set Up Santosh Trophy Final Clash In Saudi

Santosh Trophy: ಸುಮಾರು 5 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ ಕರ್ನಾಟಕ; ಪ್ರಶಸ್ತಿ ಸುತ್ತಿನಲ್ಲಿ ಮೇಘಾಲಯ ಎದುರಾಳಿ

ಸೆಮಿಫೈನಲ್‌ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಕರ್ನಾಟಕ ಫೈನಲ್‌ ಪ್ರವೇಶಿಸಿದೆ. ರಾಬಿನ್ ಯಾದವ್, ಅಂಕಿತ್ ಪಿ ಮತ್ತು ಎಂ ಸುನಿಲ್ ಕುಮಾರ್ ಅವರ ಗೋಲುಗಳ ನೆರವಿನಿಂದ 3-1 ಗೋಲುಗಳ ಅಂತರದೊಂದಿಗೆ ಗೆದ್ದು, ರಾಜ್ಯವು ಅಂತಿಮ ಸುತ್ತು ಪ್ರವೇಶಿಸಿತು.

ಕಿಂಗ್ ಫಹದ್ ಅಂತಾರಾಷ್ಟ್ರೀಯ ಕ್ರೀಡಾಂಗಣ
ಕಿಂಗ್ ಫಹದ್ ಅಂತಾರಾಷ್ಟ್ರೀಯ ಕ್ರೀಡಾಂಗಣ (REUTERS)

ರಿಯಾದ್ (ಸೌದಿ ಅರೇಬಿಯಾ): ಭಾರತದಲ್ಲಿ ಫುಟ್ಬಾಲ್ ಅಭಿಮಾನಿಗಳ ಸಂಖ್ಯೆ ಅಪಾರವಿದೆ. ವಿಶ್ವಕಪ್‌ ಮಟ್ಟದಲ್ಲಿ ಆಡುವ ಮಟ್ಟಕ್ಕೆ ಭಾರತ ಬೆಳೆದಿಲ್ಲವಾದರೂ, ಪ್ರತಿಭಾನ್ವಿತ ಫುಟ್ಬಾಲ್‌ ಆಟಗಾರರು ನಮ್ಮಲ್ಲಿದ್ದಾರೆ. ಅದರಲ್ಲೂ ಫುಟ್ಬಾಲ್‌ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ. ದೇಶವು ಸ್ವಾತಂತ್ರ್ಯ ಪಡೆಯುವ ಮೊದಲೇ ಕರ್ನಾಟಕವು ಫುಟ್ಬಾಲ್ ರಂಗದಲ್ಲಿ ಗುರುತಿಸಿಕೊಂಡಿದ್ದ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿತ್ತು. ಆ ನಂತರದ ವರ್ಷಗಳಲ್ಲಿ ಕನ್ನಡನಾಡು ಹಲವಾರು ಫುಟ್ಬಾಲ್ ಆಟಗಾರರನ್ನು ದೇಶಕ್ಕೆ ಕೊಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ದೇಶದ ಕೀರ್ತಿಪತಾಕೆಯನ್ನು ಹಾರಿಸುವಲ್ಲಿ ಕರ್ನಾಟಕದ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ.

ದೇಶೀಯ ಫುಟ್ಬಾಲ್ ಟೂರ್ನಿಯಾಗಿರುವ ಸಂತೋಷ್ ಟ್ರೋಫಿ (Santosh Trophy), ಭಾರತದ ವಿವಿಧ ರಾಜ್ಯಗಳ ಪ್ರತಿಭಾವಂತ ಕಾಲ್ಚೆಂಡು ಆಟಗಾರನ್ನು ಮೇಲ್ಪಂಕ್ತಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಲವು ದಶಕಗಳಿಂದ ಈ ಟೂರ್ನಿಯನ್ನು ನಡೆಸಲಾಗುತ್ತಿದೆ. ಇದರಲ್ಲಿ ಒಂದು ಕಾಲದಲ್ಲಿ ಕರ್ನಾಟಕವು ಬಲಿಷ್ಠ ಫುಟ್ಬಾಲ್‌ ತಂಡ ಎನಿಸಿಕೊಂಡಿತ್ತು. ಆದರೆ, ಕಳೆದ ಐದು ದಶಕಗಳಿಂದ ಕರ್ನಾಟಕವು ಫುಟ್ಬಾಲ್‌ ಆಡುತ್ತಿದೆಯೋ ಇಲ್ಲವೋ ಎಂಬ ಗೊಂದಲ ಮೂಡುವಂತೆ, ರಾಜ್ಯದ ಆಟಗಾರರ ಪ್ರತಿಭೆಗಳು ಕಣ್ಮರೆಯಾಗಿತ್ತು. ಆದರೆ, ಈಗ ಮತ್ತೆ ಇದೇ ಫುಟ್ಬಾಲ್‌ ಆಟದಲ್ಲಿ ರಾಜ್ಯ ಗುರುತಿಸಿಕೊಳ್ಳುತ್ತಿದೆ. 1975-76ರ ಸಂತೋಶ್‌ ಟ್ರೋಫಿಯ ಋತುವಿನಲ್ಲಿ ಕೊನೆಯ ಬಾರಿಗೆ ಫೈನಲ್ ತಲುಪಿದ್ದ ಕರ್ನಾಟಕ, ಇದೀಗ ಮತ್ತೆ ಅಂತಿಮ ಸುತ್ತಿನ ಸ್ಪರ್ಧೆಗೆ ಇಳಿಯುತ್ತಿದೆ. 1976ರ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕದ ಆಟಗಾರರು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಬುಧವಾರ ರಾತ್ರಿ ರಿಯಾದ್‌ನ ಕಿಂಗ್ ಫಹದ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬಂತು. ಸೆಮಿಫೈನಲ್‌ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಕರ್ನಾಟಕ ಫೈನಲ್‌ ಪ್ರವೇಶಿಸಿದೆ. ದಿನದ ಎರಡನೇ ಸೆಮಿಫೈನಲ್‌ನಲ್ಲಿ, ಕರ್ನಾಟಕವು ಪ್ರಬಲ ಸ್ಪರ್ಧಿಯಾದ ಸರ್ವಿಸಸ್ ವಿರುದ್ಧ ಪ್ರಬಲ ಆಟ ಪ್ರದರ್ಶಿಸಿತು. ರಾಬಿನ್ ಯಾದವ್, ಅಂಕಿತ್ ಪಿ ಮತ್ತು ಎಂ ಸುನಿಲ್ ಕುಮಾರ್ ಅವರ ಗೋಲುಗಳ ನೆರವಿನಿಂದ 3-1 ಗೋಲುಗಳ ಅಂತರದೊಂದಿಗೆ ಗೆದ್ದು, ರಾಜ್ಯವು ಅಂತಿಮ ಸುತ್ತು ಪ್ರವೇಶಿಸಿತು.

ಅದಕ್ಕೂ ಮುನ್ನ ನಡೆದ ಮೊದಲ ಸೆಮಿ ಕದನದಲ್ಲಿ, ಎಂಟು ಬಾರಿಯ ಚಾಂಪಿಯನ್ ಪಂಜಾಬ್‌ ತಂಡವನ್ನು ಮಣಿಸಿದ ಮೇಘಾಲಯ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತು. ಆ ಮೂಲಕ ಚಾಂಪಿಯನ್‌ ತಂಡಕ್ಕೆ ಶಾಕ್‌ ಕೊಟ್ಟು ಅಂತಿಮ ಸುತ್ತು ಪ್ರವೇಶಿಸಿತು. ಅದರ ಬೆನ್ನಲ್ಲೇ ಕರ್ನಾಟಕ ಕೂಡಾ ಇತಿಹಾಸ ಸೃಷ್ಟಿಸಿತು.

ಕರ್ನಾಟಕದ ಪಂದ್ಯವು ಸುದೀರ್ಘ ಅವಧಿಯವರೆಗೆ ನಡೆಯಿತು. ಆಟಗಾರರ ಗಾಯಗಳು ಮತ್ತು ಹಲವು ಬಾರಿ ಬ್ರೇಕ್‌ ಪಡೆದ ಕಾರಣದಿಂದಾಗಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪಂದ್ಯ ನಡೆಯಿತು. ಮೊದಲಾರ್ಧದ ಕೊನೆಯ ಆರು ನಿಮಿಷಗಳು ಭಾರಿ ರೋಚಕತೆ ಸೃಷ್ಟಿಸಿತು. ಈ ಅವಧಿಯಲ್ಲಿ ಮೂರು ಗೋಲುಗಳು ಬಂದವು.

ಮಾರ್ಚ್ 4ರ ಶನಿವಾರದಂದು ಸಂತೋಷ್‌ ಟ್ರೋಫಿಯ ಫೈನಲ್‌ ಪಂದ್ಯಗಳಿಗೆ ಮುಹೂರ್ತ ನಿಗದಿಯಾಗಿದೆ. ಸಂತೋಷ್ ಟ್ರೋಫಿಗಾಗಿ 76ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದಲ್ಲಿ ಮೇಘಾಲಯ ಮತ್ತು ಕರ್ನಾಟಕ ರಾಜ್ಯಗಳು ಸೆಣಸಲಿವೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9 ಗಂಟೆಗೆ ರಿಯಾದ್‌ನಲ್ಲಿ ಪಂದ್ಯ ಆರಂಭವಾಗಲಿದೆ. ಅದೇ ದಿನ ಅದೇ ಸ್ಥಳದಲ್ಲಿ ಸಂಜೆ 5.30 ಕ್ಕೆ 3ನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ತಂಡವು ಸರ್ವಿಸಸ್‌ ತಂಡವನ್ನು ಎದುರಿಸಲಿದೆ.