ಕನ್ನಡ ಸುದ್ದಿ  /  Sports  /  Messi Record In Fifa World Cup As He Is The First Argentina Player To Score Goals In Four World Cups

Messi Record in FIFA World Cup: ಫಿಫಾ ವಿಶ್ವಕಪ್ ನಲ್ಲಿ ಹೊಸ ದಾಖಲೆ ಬರೆದ ಮೆಸ್ಸಿ

ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ (ನವೆಂಬರ್ 22) ಸೌದಿ ಅರೇಬಿಯಾ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ ಪರ ಗೋಲು ಗಳಿಸುವ ಮೂಲಕ ಮೆಸ್ಸಿ ಇತಿಹಾಸ ನಿರ್ಮಿಸಿದ್ದಾರೆ.

ಸೌದಿ ಅರೇಬಿಯಾ ಪಂದ್ಯದಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ (ಫೋಟೋ-REUTERS)
ಸೌದಿ ಅರೇಬಿಯಾ ಪಂದ್ಯದಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ (ಫೋಟೋ-REUTERS)

ಕತಾರ್: ಸೌದಿ ಅರೇಬಿಯಾ ವಿರುದ್ಧ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡ 2-1 ಅಂತರದ ಗೋಲುಗಳಿಂದ ಸೋತರೂ ಆ ತಂಡದ ಸ್ಟಾರ್ ಆಟಗಾರ, ನಾಯಕ ಲಿಯೋನೆಲ್ ಮೆಸ್ಸಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಲಿಯೋನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ 2022 ರಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಸೌದಿ ಅರೇಬಿಯಾ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಮೆಸ್ಸಿ ನಾಲ್ಕು ಫಿಪಾ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಗೋಲು ಗಳಿಸಿದ ಮೊದಲ ಅರ್ಜೆಂಟೀನಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕತಾರ್‌ನ ಅತಿದೊಡ್ಡ ಫುಟ್‌ಬಾಲ್ ಸ್ಟೇಡಿಯಂ ಲುಸೈಲ್‌ನಲ್ಲಿ ನಡೆದ ಪಂದ್ಯದಲ್ಲಿ 35ರ ಹರೆಯದ ಮೆಸ್ಸಿ 8ನೇ ನಿಮಿಷದಲ್ಲಿ ಅರ್ಜೆಂಟೀನಾಗೆ ಬಂದ ಪೆನಾಲ್ಟಿಯ ಲಾಭ ಪಡೆದರು.

ಸೌದಿ ಗೋಲ್ ಕೀಪರ್ ಅನ್ನು ಉರುಳಿಸಿ ಚೆಂಡನ್ನು ಗೋಲ್ ಪೋಸ್ಟ್ ನ ಇನ್ನೊಂದು ಮೂಲೆಗೆ ಸರಿಸಿದರು. ಇದರೊಂದಿಗೆ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು.

ಮೆಸ್ಸಿ ಅರ್ಜೆಂಟೀನಾ ಪರ 2006, 2014 ಮತ್ತು 2018ರಲ್ಲಿ ಗೋಲು ಗಳಿಸಿದ್ದರು. ಮತ್ತು ಈಗ 2022 ರಲ್ಲಿ, ಅವರು ನಾಲ್ಕನೇ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಮೊದಲ ಅರ್ಜೆಂಟೀನಾದ ಆಟಗಾರ ಎನಿಸಿದರು.

ನಾಲ್ಕು ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಐದನೇ ಆಟಗಾರ ಮೆಸ್ಸಿ. ಈ ಹಿಂದೆ ಬ್ರೆಜಿಲ್‌ನ ಪೀಲೆ, ಜರ್ಮನಿಯ ಓವ್ ಸೀಲರ್, ಮಿರೋಸ್ಲಾವ್ ಕ್ಲೋಸ್ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಈ ಸಾಧನೆ ಮಾಡಿದ್ದರು.

ಮೆಸ್ಸಿ ಈ ಪೀಳಿಗೆಯ ಶ್ರೇಷ್ಠ ಆಟಗಾರರೆಂದು ಹೆಸರಾಗಿದ್ದರೂ ಅವರ ವಿಶ್ವಕಪ್ ಕನಸು ಇದುವರೆಗೂ ನನಸಾಗಿಲ್ಲ. 2014ರಲ್ಲಿ ಸಮೀಪ ಬಂದರೂ ಫೈನಲ್‌ನಲ್ಲಿ ಸೋಲು ಕಾಣಬೇಕಾಯಿತು. ಆ ನಂತರ ಅವರು ಆಟದಿಂದ ನಿವೃತ್ತಿ ಘೋಷಿಸಿದರು. ಆದರೆ ಮತ್ತೆ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದು ತಂಡಕ್ಕೆ ಮರಳಿದ್ದರು. ಈ ಬಾರಿ ಅವರು ತಮ್ಮ ತಂಡಕ್ಕೆ ಕಪ್ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ.

ವಿಭಾಗ