ಕನ್ನಡ ಸುದ್ದಿ  /  Sports  /  Ms Dhoni Reveals Best Feeling From 2011 World Cup Win

Dhoni on 2011 WC win: 'ಆ ಕ್ಷಣವನ್ನು ಮರುಸೃಷ್ಟಿ ಮಾಡಲಾಗದು'; 2011ರ ವಿಶ್ವಕಪ್ ಪಂದ್ಯದ ಭಾವುಕ ಕ್ಷಣ ಮೆಲುಕು ಹಾಕಿದ ಮಾಹಿ

ವಿಶ್ವಕಪ್ ವೈಭವಕ್ಕೆ ತಂಡವನ್ನು ಮುನ್ನಡೆಸಿದ ಭಾರತ ತಂಡದ ನಾಯಕ ಧೋನಿ, ಆ ಸಂಜೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಫೈನಲ್‌ ಪಂದ್ಯದಲ್ಲಿನ ತಮ್ಮ ಭಾವುಕ ಕ್ಷಣದ ಕುರಿತು ಬಹಿರಂಗಪಡಿಸಿದರು. ವಿಶೇಷವೆಂದರೆ, ಅದು ಸಿಕ್ಸರ್‌ ಸಿಡಿಸಿ ಪಂದ್ಯ ಗೆದ್ದ ಕ್ಷಣ ಅಲ್ಲವಂತೆ.

ಪಂದ್ಯ ಗೆಲುವಿನ ಕ್ಷಣವನ್ನು ನೆನಪಿಸಿಕೊಂಡ ಮಾಹಿ
ಪಂದ್ಯ ಗೆಲುವಿನ ಕ್ಷಣವನ್ನು ನೆನಪಿಸಿಕೊಂಡ ಮಾಹಿ (ICC event grab)

ಭಾರತ ಕ್ರಿಕೆಟ್‌ ತಂಡವು ಐತಿಹಾಸಿಕ ಏಕದಿನ ವಿಶ್ವಕಪ್ ಗೆದ್ದು 12 ವರ್ಷಗಳಾಗಿವೆ. 2011ರ ಋತುವಿನಲ್ಲಿ ವಾಣಿಜ್ಯ ನಗರಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ, ಭಾರತವು ವಿಶ್ವಕಪ್‌ ಜಯಿಸಿದ ಕ್ಷಣ ಎಂದಿಗೂ ಅವಿಸ್ಮರಣೀಯ. ಎಂಎಸ್‌ ಧೋನಿ ನೇತೃತ್ವದ ಭಾರತ ತಂಡವು ಸರಣಿಯುದ್ದಕ್ಕೂ ಅಮೋಘ ಪ್ರದರರ್ಶನ ನೀಡಿ ಬರೋಬ್ಬರಿ 28 ವರ್ಷಗಳ ಬಳಿಕ ಎರಡನೇ ಏಕದಿನ ವಿಶ್ವಕಪ್‌ ತನ್ನದಾಗಿಸಿಕೊಂಡಿತು. ಭರ್ಜರಿ ಸಿಕ್ಸರ್‌ನೊಂದಿಗೆ ಮಾಹಿ ಪಂದ್ಯ ಗೆಲ್ಲಿಸಿ ಲಕ್ಷಾಂತರ ಜನರ ಶಿಳ್ಳೆ, ಚಪ್ಪಾಳೆ ಹಾಗೂ ಜಯಘೋಷಗಳಿಗೆ ಕಾರಣರಾದರು.

1983ರಲ್ಲಿ ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ಮೊದಲ ವಿಶ್ವಕಪ್‌ ಗೆದ್ದಿತ್ತು. ಅದಾದ 28 ವರ್ಷಗಳ ಬಳಿಕ ಭಾರತವು ಏಷ್ಯಾದ ಎದುರಾಳಿ ಶ್ರೀಲಂಕಾವನ್ನು ಸೋಲಿಸಿ ಎರಡನೇ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ನಿನ್ನೆ, ಅಂದರೆ ಭಾನುವಾರಕ್ಕೆ ವಿಶ್ವಕಪ್‌ ಗೆಲುವಿಗೆ 12 ವರ್ಷಗಳು ತುಂಬಿದವು. ಅದಾದ ಮರುದಿನ, ಅಂದರೆ ಈ ದಿನದಂದು ದೇಶದೆಲ್ಲೆಡೆ ಗೆಲುವಿನ ಸಂಭ್ರಮ ಮನೆ ಮಾಡಿತ್ತು. ವಿಶ್ವಕಪ್ ವೈಭವಕ್ಕೆ ತಂಡವನ್ನು ಮುನ್ನಡೆಸಿದ ಭಾರತ ತಂಡದ ನಾಯಕ ಧೋನಿ, ಆ ಸಂಜೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಫೈನಲ್‌ ಪಂದ್ಯದಲ್ಲಿನ ತಮ್ಮ ಭಾವುಕ ಕ್ಷಣದ ಕುರಿತು ಬಹಿರಂಗಪಡಿಸಿದರು. ವಿಶೇಷವೆಂದರೆ, ಅದು ಸಿಕ್ಸರ್‌ ಸಿಡಿಸಿ ಪಂದ್ಯ ಗೆದ್ದ ಕ್ಷಣ ಅಲ್ಲವಂತೆ.

2011ರ ವಿಶ್ವಕಪ್ ಗೆಲುವಿಗೆ 12 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ, ಭಾನುವಾರ ಚೆನ್ನೈನಲ್ಲಿ ವಿಶೇಷ ಕಾರ್ಯಕ್ರಮವೊಂದು ನಡೆಯಿತು. ಇದರಲ್ಲಿ ಭಾಗವಹಿಸಿದ ಧೋನಿ ಅವರನ್ನು ಗೌರವಿಸಲಾಯ್ತು. ಮ್ಯಾಚ್‌ ವಿನ್ನಿಂಗ್ ಸಿಕ್ಸರ್ ಮತ್ತು ಅಜೇಯ 91 ರನ್‌‌ ಗಳಿಸಿದ ಅವರಿಗೆ ಈ ವೇಳೆ ಕೆಲವು ಡಿಜಿಟಲ್ ಸಂಗ್ರಹಣೆಗಳನ್ನು ನೀಡಲಾಯ್ತು.

ಇದೇ ಕಾರ್ಯಕ್ರಮದಲ್ಲಿ ನಿರೂಪಕ ಸಂಜನಾ ಗಣೇಶನ್ ಮತ್ತು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮೈಕ್ ಹಸ್ಸಿ ಅವರೊಂದಿಗೆ ಧೋನಿ ಸಂಭಾಷಣೆ ನಡೆಸಿದರು. ಈ ವೇಳೆ ಪಂದ್ಯದಲ್ಲಿ ತಾವು ಭಾವುಕರಾದ ಕ್ಷಣವನ್ನು ಬಹಿರಂಗಪಡಿಸಿದರು. ವಿಶೇಷವೆಂದರೆ ಧೋನಿ ಕೊನೆಯದಾಗಿ ಸಿಡಿಸಿದ ಆ ಸಿಕ್ಸರ್ ಅಥವಾ ಅವರು ವಿಶ್ವಕಪ್ ಎತ್ತಿದ ಕ್ಷಣ ಧೋನಿಯನ್ನು ಭಾವುಕವಾಗಿಸಿದ್ದಲ್ಲವಂತೆ. ಭಾರತವು ಚೇಸಿಂಗ್‌ ಪೂರ್ಣಗೊಳಿಸುವ 15ರಿಂದ 20 ನಿಮಿಷಕ್ಕೂ ಮೊದಲು, ತುಂಬಿದ ವಾಂಖೆಡೆ ಮೈದಾನದಲ್ಲಿದ್ದ ಪ್ರೇಕ್ಷಕರು ವಂದೇ ಮಾತರಂ ಹಾಡಲು ಪ್ರಾರಂಭಿಸಿದರಂತೆ. ಆ ಕ್ಷಣವೇ ಭಾರತ ಗೆಲುವು ಸಾಧಿಸುತ್ತಿದೆ ಎಂಬುದು ಗೊತ್ತಾಯಿತು ಎಂದು ಧೋನಿ ಆ ಅವಿಸ್ಮರಣೀಯ ಕ್ಷಣವನ್ನು ನೆನೆಪಿಸಿಕೊಂಡರು.

“ಪಂದ್ಯವನ್ನು ಗೆಲ್ಲುವ 15ರಿಂದ 20 ನಿಮಿಷಕ್ಕೂ ಮುನ್ನ ತುಂಬಿದ ಕ್ರೀಡಾಂಗಣವು ವಂದೇ ಮಾತರಂ ಹಾಡಲು ಪ್ರಾರಂಭಿಸಿತು. ಆ ವಾತಾವರಣವನ್ನು ಮರುಸೃಷ್ಟಿಸುವುದು ತುಂಬಾ ಕಷ್ಟ ಎಂದು ನಾನು ಭಾವಿಸುತ್ತೇನೆ. ಬಹುಶಃ ಮುಂಬರುವ 2023ರ ವಿಶ್ವಕಪ್‌ನಲ್ಲಿ, ಇದೇ ರೀತಿಯ ಸನ್ನಿವೇಶ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಮಾಹಿ ಹೇಳಿದ್ದಾರೆ.

“ಅಂತಹ ಸನ್ನಿವೇಶವನ್ನು ಪುನರಾವರ್ತಿಸುವುದು ತುಂಬಾ ಕಷ್ಟಕರ. ಏಕೆಂದರೆ ಆ ಸಂದರ್ಭದಲ್ಲಿ 40, 50 ಅಥವಾ 60,000 ಜನರು ಹಾಡುತ್ತಿದ್ದರು. ಹೀಗಾಗಿ ಪಂದ್ಯ ಗೆದ್ದ ಕ್ಷಣ ನನ್ನ ಪಾಲಿಗೆ ಅಮೂಲ್ಯ ಕ್ಷಣವಲ್ಲ. ಅದಕ್ಕಿಂದ 20 ನಿಮಿಷಕ್ಕೂ ಮುಂಚೆ ನಾನು ಭಾವನೆಗಳಿಂದ ತುಂಬಿಕೊಂಡಿದ್ದೆ,” ಎಂದು ಮಾಹಿ ಹೇಳಿದ್ದಾರೆ.