ಕನ್ನಡ ಸುದ್ದಿ  /  Sports  /  Rohit Sharma On Ks Bharat On India Vs Australia 4th Test

India vs Australia 4th Test: 'ಇಶಾನ್‌ಗೆ ಅವಕಾಶ ಸಿಕ್ಕರೂ ಅವರನ್ನು ಕೈಬಿಡುವುದಿಲ್ಲ': 'ಕೆಎಸ್ ಭರತ್‌ಗೆ ಅನ್ಯಾಯ' ಕುರಿತು ನಾಯಕನ ಹೇಳಿಕೆ

ಭರತ್ ಫಾರ್ಮ್‌ ಬಗೆಗಿನ ಟೀಕೆಗಳ ನಡುವೆ ನಾಯಕ ರೋಹಿತ್ ಶರ್ಮಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ಭರತ್‌ ಸ್ಥಾನದ ಬಗ್ಗೆ ಮಾತನಾಡಿದರು. ಇದೇ ವೇಳೆ ಪಂತ್‌ ಅವರನ್ನು ತಂಡ ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಭರತ್‌, ರೋಹಿತ್‌, ಕಿಶನ್
ಭರತ್‌, ರೋಹಿತ್‌, ಕಿಶನ್

ಕಳೆದ ವಾರ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಿರಾಶಾದಾಯಕ ಸೋಲನ್ನು ಎದುರಿಸಿತು. ಇದೀಗ ಗುರುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಮೈಕೊಡವಿ ಆಡುವ ಗುರಿಯನ್ನು ರೋಹಿತ್‌ ಪಡೆ ಹೊಂದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಭಾರತಕ್ಕೆ ಒಂದು ಗೆಲುವಿನ ಅಗತ್ಯವಿದೆ.

ನಾಲ್ಕನೇ ಟೆಸ್ಟ್‌ ಆರಂಭಕ್ಕೂ ಮುಂಚಿತವಾಗಿ, ಭಾರತದ ಆಡುವ ಬಳಗದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹೆಚ್ಚಿದೆ. ಭಾರತವು ಹೆಚ್ಚುವರಿ ಬ್ಯಾಟರ್‌ಗಳೊಂದಿಗೆ ಮೈದಾನಕ್ಕಿಳಿಯಬೇಕು ಎಂಬ ಅಭಿಪ್ರಾಯ ಕೆಲವೊಂದು ಕಡೆಯಿಂದ ಬಂದಿದೆ. ಈ ಮಧ್ಯೆ ವಿಕೆಟ್‌ ಕೀಪರ್‌ ಕೆಎಸ್ ಭರತ್ ಅವರ ಸ್ಥಾನದ ಬಗ್ಗೆ ಊಹಾಪೋಹಗಳಿವೆ. ಬ್ಯಾಟ್‌ನಲ್ಲಿ ಪ್ರಭಾವ ಬೀರಲು ವಿಫಲರಾಗಿರುವ ಭರತ್ ಬದಲಿಗೆ ಇಶಾನ್ ಕಿಶನ್ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಹಮದಾಬಾದ್ ಟೆಸ್ಟ್‌ಗೆ ಭರತ್ ಸ್ಥಾನವು ಅಪಾಯದಲ್ಲಿದೆ.

ಆದರೆ ನಾಯಕ ರೋಹಿತ್ ಶರ್ಮಾ ಅವರು, ಭರತ್ ಫಾರ್ಮ್‌ ಬಗೆಗಿನ ಟೀಕೆಗಳ ನಡುವೆ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ಭರತ್‌ ಸ್ಥಾನದ ಬಗ್ಗೆ ಮಾತನಾಡಿದರು. ಇದೇ ವೇಳೆ ಪಂತ್‌ ಅವರನ್ನು ತಂಡ ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

“ಪ್ರಾಮಾಣಿಕವಾಗಿ, ಪಂತ್ ದೊಡ್ಡ ಮಿಸ್. ಅವರು ಬ್ಯಾಟಿಂಗ್‌ನಲ್ಲಿ ಏನು ಮಾಡಬಹುದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಟರ್ನಿಂಗ್ ಪಿಚ್‌ಗಳಲ್ಲಿ ಅವರು ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರು ತಂಡಕ್ಕೆ ಪ್ರಮುಖ ಗೈರು. ಅವರು ನಮಗೆ ಲಭ್ಯವಾಗುವುದಿಲ್ಲ ಎಂದು ನಮಗೆ ತಿಳಿದಿತ್ತು. ಇಶಾನ್ ತಂಡಕ್ಕೆ ಸಿಗಲು ಅದು ಒಂದು ಪ್ರಮುಖ ಕಾರಣ. ಅವರು ಕೂಡಾ ಎಡಗೈ ಆಟಗಾರ. ಉತ್ತಮ ದಾಳಿ ನಡೆಸಬಲ್ಲರು ಎಂದು ರೋಹಿತ್ ಹೇಳಿದರು.

“ಭರತ್ ಬಗ್ಗೆ ಮಾತನಾಡಿದ ರೋಹಿತ್‌, ಅವರು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಆಡಿದ್ದಾರೆ. ಅಲ್ಲದೆ ಸಾಕಷ್ಟು ರನ್ ಗಳಿಸಿದ್ದಾರೆ. ಹೀಗಾಗಿ ಅವರ ಆಟವನ್ನು ಈ ರೀತಿಯ ಪಿಚ್‌ಗಳಲ್ಲಿ ನಿರ್ಣಯಿಸುವುದು ಸರಿಯಲ್ಲ. ವಿಶೇಷವಾಗಿ, ಯಾರಾದರೂ ತಂಡಕ್ಕೆ ಪದಾರ್ಪಣೆ ಮಾಡಿದಾಗ ಅವರಿಗೆ ನಾವು ಸಾಕಷ್ಟು ಸಮಯಾವಕಾಶ ನೀಡಬೇಕು. ದೊಡ್ಡ ಮಟ್ಟದ ರನ್‌ ಗಳಿಸಲು ಅವಕಾಶ ನೀಡಬೇಕು” ಎಂದು ಅವರು ಹೇಳಿದರು.

“ಸರಣಿಯ ಪ್ರಾರಂಭದಲ್ಲಿ ನಾನು ಅವನೊಂದಿಗೆ ಇದೇ ವಿಷಯದ ಬಗ್ಗೆ ಮಾತನಾಡಿದ್ದೆ. ಪಿಚ್‌ಗಳು ಮತ್ತು ಸವಾಲುಗಳ ಬಗ್ಗೆ ಚಿಂತಿಸಬೇಡ. ನಿನ್ನನ್ನು ನೀನು ಸಾಬೀತುಪಡಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ” ಎಂದು ಹೇಳಿರುವುದಾಗಿ ರೋಹಿತ್ ಹೇಳಿದರು.

ಟೆಸ್ಟ್ ತಂಡದಲ್ಲಿ ಸ್ಥಾನದ ಬಗ್ಗೆ ಇಶಾನ್ ಕಿಶನ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಭಾರತೀಯ ನಾಯಕ ಹೇಳಿದರು. “ನೀವು ಈ ರೀತಿಯ ಪಿಚ್‌ಗಳಲ್ಲಿ ಆಡಲು ಬಯಸಿದರೆ, ಕೆಲವು ಇನ್ನಿಂಗ್ಸ್‌ಗಳಲ್ಲಿ ವಿಫಲರಾದ ಆಟಗಾರರ ಸ್ಥಾನ ತುಂಬಲು ನೀವು ಸಿದ್ಧರಾಗಿರಬೇಕು. ಅದನ್ನೇ ನಾವು ಕೆ ಎಸ್ ಭರತ್‌ ಅವರೊಂದಿಗೆ ಮಾಡುತ್ತಿದ್ದೇವೆ. ಅವರು ಉತ್ತಮ ಕೀಪರ್. ನಾನು ಈ ಬಗ್ಗೆ ಇಶಾನ್ ಕಿಶನ್ ಅವರೊಂದಿಗೆ ಮಾತನಾಡಿದೆ. ಅವರು ಅವಕಾಶಗಳನ್ನು ಪಡೆದಾಗಲೂ ಸಹ, ಸುದೀರ್ಘ ಅವಕಾಶ ಪಡೆಯುತ್ತಾರೆ. ಎರಡು ಪಂದ್ಯಗಳ ನಂತರ ನಾವು ಅವರನ್ನು ಕೈಬಿಡುವುದಿಲ್ಲ. ಅದು ಅನ್ಯಾಯ. ಅದನ್ನೇ ನಾವು ಈಗ ಕೆಎಸ್ ಭರತ್ ಅವರೊಂದಿಗೆ ಮಾಡುತ್ತಿದ್ದೇವೆ" ಎಂದು ರೋಹಿತ್ ಹೇಳಿದ್ದಾರೆ.