ಕನ್ನಡ ಸುದ್ದಿ  /  Sports  /  Watch Rohit Sharma Attacked For Manhandling Ishan Kishan On Field During Ind Vs Aus 4th Test Video Creates Confusion

IND vs AUS 4th Test: ಇಶಾನ್​ ಮೇಲೆ 'ಮ್ಯಾನ್‌ಹ್ಯಾಂಡ್ಲಿಂಗ್' ಮಾಡಿದ್ರಾ ರೋಹಿತ್ ಶರ್ಮಾ? ಗೊಂದಲ ಹೆಚ್ಚಿಸಿದ ವಿಡಿಯೋ

IND vs AUS 4th Test: ಅಂತಿಮ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ರೋಹಿತ್​ ಶರ್ಮಾ ಆಟಗಾರನ ಮೇಲೆ ಸಿಟ್ಟಾಗಿರುವ ಘಟನೆ ನಡೆದಿದೆ. ಇಶಾನ್​ ಕಿಶನ್​​ರನ್ನು ಹೊಡೆಯಲು ಪ್ರಯತ್ನಿಸಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ರೋಹಿತ್​ ಅವರೇ ನಾಯಕನಾಗಿ ಇಷ್ಟೊಂದು ಕೋಪ ಒಳ್ಳೆಯದಲ್ಲ ಎಂದು ನೆಟ್ಟಿಗರು ಕ್ರಿಕೆಟ್​ ಪ್ರೇಮಿಗಳು ವಾಗ್ದಾಳಿ ನಡೆಸಿದ್ದಾರೆ.

ಇಶಾನ್​ರನ್ನು ರೋಹಿತ್​​ ಹೊಡೆಯಲು ಯತ್ನಿಸಿದರು
ಇಶಾನ್​ರನ್ನು ರೋಹಿತ್​​ ಹೊಡೆಯಲು ಯತ್ನಿಸಿದರು

ಟೀಮ್​ ಇಂಡಿಯಾ (Team India) ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಿದೆ. ಉಸ್ಮಾನ್​ ಖವಾಜರ (Usman Khawaja) ಅಜೇಯ ಶತಕದ ನೆರವಿನಿಂದ ಪ್ರವಾಸಿಗರು ಭಾರೀ ಮೊತ್ತದತ್ತ ಮುನ್ನುಗ್ಗುತ್ತಿದ್ದಾರೆ. ಮೊದಲ ಮೂರು ಟೆಸ್ಟ್​​ಗಳಲ್ಲಿ ವಿಕೆಟ್​ ಬೇಟೆಯಾಡಿದ್ದ ಭಾರತದ ಬೌಲರ್ಸ್​​​, ಈಗ ಪರದಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಇದರ ನಡುವೆ ನಾಯಕ ರೋಹಿತ್​ ಶರ್ಮಾ (Rohit Sharma) ವಿರುದ್ಧ ಟೀಕೆಯೊಂದು ಕೇಳಿ ಬಂದಿದ್ದು, ನೆಟಿಜನ್ಸ್​ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಂತಿಮ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ರೋಹಿತ್​ ಶರ್ಮಾ ಆಟಗಾರರ ಮೇಲೆ ಸಿಟ್ಟಾಗಿರುವ ಘಟನೆ ನಡೆದಿದೆ. ಇಶಾನ್​ ಕಿಶನ್​ ಅವರನ್ನು ಹೊಡೆಯಲು ಪ್ರಯತ್ನಿಸಿರುವ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ರೋಹಿತ್​ ಅವರೇ ನಾಯಕನಾಗಿ ಇಷ್ಟೊಂದು ಕೋಪ ಒಳ್ಳೆಯದಲ್ಲ ಎಂದು ನೆಟ್ಟಿಗರು, ಕ್ರಿಕೆಟ್​ ಪ್ರೇಮಿಗಳು ವಾಗ್ದಾಳಿ ನಡೆಸಿದ್ದಾರೆ. ಆಟಗಾರರೊಂದಿಗೆ ತಾಳ್ಮೆಯಿಂದ ವರ್ತಿಸಿ ಎಂದು ಸಲಹೆ ನೀಡಿದ್ದಾರೆ.

ನಡೆದಿದ್ದು ಏನು.?

ಪಂದ್ಯದ ಡ್ರಿಂಕ್ಸ್​​ ಬ್ರೇಕ್​​​​​ ವೇಳೆ ವಾಟರ್​​​ ಬಾಯ್​​​ ಆಗಿ ಇಶಾನ್​​​ ಕಿಶನ್​, ಮೈದಾನಕ್ಕೆ ಬಂದಿದ್ದರು. ನೀರಿನ ಬಾಟಲಿ ನೀಡಲು ಓಡಿ ಬಂದ ಇಶಾನ್​, ಅಷ್ಟೇ ವೇಗವಾಗಿ ಮರಳುವ ಸಂದರ್ಭದಲ್ಲಿ ರೋಹಿತ್ ಬಳಿ ನೀರಿನ ಬಾಟಲಿ ತೆಗೆದುಕೊಂಡರು. ಆದರೆ, ಓಡುವ ಆತುರದಲ್ಲಿ ಬಾಟಲಿಯನ್ನು ನೆಲದ ಮೇಲೆ ಬೀಳಿಸಿದರು. ಇಶಾನ್​​ ಕೈಯಿಂದ ಬಾಟಲಿ ಜಾರಿದ ತಕ್ಷಣವೇ ರೋಹಿತ್​​, ಹೊಡೆಯಲು ಪ್ರಯತ್ನಿಸಿದರು. ಆದರೆ ಇಶಾನ್​ ಅದರಿಂದ ಪಾರಾದರು.

ಆದರೆ ಇದೇ ವಿಷಯವನ್ನಿಟ್ಟುಕೊಂಡು ನೆಟ್ಟಿಗರು ಟ್ವಿಟರ್​​ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಭಾರತ ತಂಡದ ನಾಯಕ, ಇಶಾನ್ ಕಿಶನ್ ಅವರೊಂದಿಗೆ ಅಗೌರವವಾಗಿ ನಡೆದುಕೊಂಡಿದ್ದಾರೆ. 'ಮ್ಯಾನ್‌ಹ್ಯಾಂಡ್ಲಿಂಗ್' ಮಾಡಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾರೆ. ಇದು ಟ್ವಿಟರ್​​​ನಲ್ಲಿ ಟ್ರೆಂಡಿಂಗ್​ ಕೂಡ ಆಗುತ್ತಿದೆ. ನಾಯಕನಾಗಿ ಆಟಗಾರರೊಂದಿಗೆ ಸ್ನೇಹಿತರಂತೆ ವರ್ತಿಸಿ ಎಂದು ಸೂಚಿಸುತ್ತಿದ್ದಾರೆ.

ಕೊಹ್ಲಿ ಎಂದೂ ಈ ರೀತಿ ವರ್ತಿಸಿದವರಲ್ಲ.!

ರೋಹಿತ್​ ಶರ್ಮಾ ಅವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು, ವಿರಾಟ್​ ಕೊಹ್ಲಿ ಒಬ್ಬ ಮಾದರಿ ನಾಯಕ. ಅವರನ್ನು ನೋಡಿ ಕಲಿಯಿರಿ ಎಂದು ಹೇಳಿದ್ದಾರೆ. ಕೊಹ್ಲಿ ಒಬ್ಬ ಅಗ್ರೆಸ್ಸಿವ್​ ಆಟಗಾರ. ಆದರೂ ನಾಯಕನಾಗಿದ್ದಾಗ ಎಂದೂ ಆಟಗಾರರ ಮೇಲೆ ಈ ರೀತಿ ವರ್ತಿಸಿದವರೇ ಅಲ್ಲ. ಭಾವನೆಗಳನ್ನು ನುಂಗಿಕೊಳ್ಳುತ್ತಾರೆಯೇ ಹೊರತು, ಹೊರಹಾಕುವುದಿಲ್ಲ ಎಂದು ರೋಹಿತ್​​ಗೆ ಪಾಠ ಮಾಡಿದ್ದಾರೆ.

ಮೊದಲು ಸಹ ಆಟಗಾರರನ್ನು ಪ್ರೇರೇಪಿಸುವ ಗುಣ ಬೆಳೆಸಿಕೊಳ್ಳುವುದು ಉತ್ತಮ. ಮಾಜಿ ಕ್ರಿಕೆಟಿಗರು ತಮ್ಮ ಅನುಭವದ ಮಾತುಗಳನ್ನೇ ಸಲಹೆಗಳನ್ನಾಗಿ ನೀಡುತ್ತಾರೆ. ಆದರೆ ನೀವು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕ್ರಿಕೆಟಿಗರ ವಿರುದ್ಧ ವಾಗ್ದಾಳಿ ನಡೆಸುತ್ತೀರಾ. ಇದು ಸರಿನಾ.? ಈ ಹಿಂದೆಯೂ ಆಟಗಾರರ ಮೇಲೆ ಕೋಪಗೊಂಡ ಘಟನೆಗಳು ನಡೆದಿವೆ ಅಂತ ಅದರ ವಿಡಿಯೋಗಳನ್ನೂ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಏಷ್ಯಾಕಪ್​​​ನಲ್ಲಿ ಆರ್ಷ್​​ದೀಪ್​ ಸಿಂಗ್​​​ ಕ್ಯಾಚ್​ ಬಿಟ್ಟ ಸಂದರ್ಭದಲ್ಲಿ ರೋಹಿತ್, ಕೆರಳಿ ಕೆಂಡಾಮಂಡಲರಾಗಿ ಬೈದಿದ್ದರು. ದಿನೇಶ್ ಕಾರ್ತಿಕ್ ಅವರ ಕುತ್ತಿಗೆ ಹಿಡಿದ್ದರು. ಬಾಂಗ್ಲಾ ವಿಮಾನ ನಿಲ್ದಾಣದಲ್ಲಿ ಪೋಟೋಗ್ರಾಫರ್​​ಗಳ ಮೇಲೆ ಕೋಪಗೊಂಡಿದ್ದ ರೋಹಿತ್​, ನ್ಯೂಜಿಲೆಂಡ್​ ಸರಣಿಯಲ್ಲಿ ಶಾರ್ದೂಲ್​ ಠಾಕೂರ್​ ಮೇಲೆ ಸಿಟ್ಟಾಗಿದ್ದರು. ಆಟಗಾರನಿಗೆ ಅವಕಾಶವೂ ನೀಡುತ್ತಿಲ್ಲ. ಈಗ ನೋಡಿದರೆ ಮ್ಯಾನ್​ ಹ್ಯಾಂಡ್ಲಿಂಗ್​ ಮುಂದಾಗುತ್ತಿದ್ದೀರಾ.? ಎಂದೆಲ್ಲಾ ನೆಟ್ಟಿಗರು ಸಿಡಿದೆದ್ದಿದ್ದಾರೆ.

ಕೆಲವರು ರೋಹಿತ್​ ಪರ ವಾದಿಸಿದ್ದು, ಅದು ತಮಾಷೆ ಘಟನೆ. ಇಶಾನ್​ ಜೊತೆಗೆ ರೋಹಿತ್​​ ಸ್ನೇಹಿತರಂತೆಯೇ ವರ್ತಿಸುತ್ತಾರೆ. ಅದಕ್ಕೆ ಇತ್ತೀಚೆಗೆ ಬಿಸಿಸಿಐ ನಡೆಸಿದ ಸಂದರ್ಶನದಲ್ಲಿ ಇಶಾನ್​ರೊಂದಿಗೆ ರೋಹಿತ್​​ ವರ್ತಿಸಿದ ಘಟನೆಯೇ ಸಾಕ್ಷಿ. ಹಾಗೆಯೇ ಸರಳೆತೆಯಿಂದಲೂ ಇರುತ್ತಾರೆ. ಇದರಲ್ಲಿ ಗೊಂದಲ ಉಂಟಾಗುವ ಯಾವುದೇ ಅಂಶ ಇಲ್ಲ. ಸುಖಾಸುಮ್ಮನೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಸಮರ್ಥಿಸಿಕೊಂಡಿದ್ದಾರೆ.