ಟಿ20 ವಿಶ್ವಕಪ್ಗೆ ನ್ಯೂಜಿಲೆಂಡ್ ತಂಡ ಪ್ರಕಟ; ಕೇನ್ ವಿಲಿಯಮ್ಸನ್ ಕ್ಯಾಪ್ಟನ್, ಡೆವೊನ್ ಕಾನ್ವೆ ಫಿಟ್
Apr 29, 2024 12:07 PM IST
ಟಿ20 ವಿಶ್ವಕಪ್ಗೆ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಕೇನ್ ವಿಲಿಯಮ್ಸನ್ ಕ್ಯಾಪ್ಟನ್, ಡೆವೊನ್ ಕಾನ್ವೆ ಫಿಟ್
- New Zealand Cricket Team : ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ ತನ್ನ 15 ಸದಸ್ಯರ ತಂಡವನ್ನು ಏಪ್ರಿಲ್ 29ರ ಸೋಮವಾರ ಪ್ರಕಟಿಸಿದೆ. ಕೇನ್ ವಿಲಿಯಮ್ಸನ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಜೂನ್ 1ರಿಂದ ಪ್ರಾರಂಭವಾಗುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ (T20 World Cup 2024) ನ್ಯೂಜಿಲೆಂಡ್ ತಮ್ಮ ತಂಡವನ್ನು (New Zealand Cricket Team) ಪ್ರಕಟಿಸಿದ ಮೊದಲ ತಂಡವಾಗಿದೆ. ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಕಿವೀಸ್ (ಏಪ್ರಿಲ್ 29) ಸೋಮವಾರ 20-ಓವರ್ಗಳ ವಿಶ್ವಕಪ್ನ ಒಂಬತ್ತನೇ ಆವೃತ್ತಿಗೆ ತಮ್ಮ 15-ಆಟಗಾರರ ತಂಡ ಹೆಸರಿಸಿದೆ.
ಬ್ಲ್ಯಾಕ್ ಕ್ಯಾಪ್ಸ್ ಕೇನ್ ವಿಲಿಯಮ್ಸನ್ ಮತ್ತು ವೇಗದ ಬೌಲಿಂಗ್ ಜೋಡಿಯಾದ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ಅವರನ್ನು ಒಳಗೊಂಡಿರುವ ಅನುಭವಿ ತಂಡವನ್ನು ಆಯ್ಕೆ ಮಾಡಿಕೊಂಡಿದೆ. ಇದು ವಿಲಿಯಮ್ಸನ್ ಅವರಿಗೆ ಆರನೇ ಟಿ20 ವಿಶ್ವಕಪ್ ಆಗಿದೆ. ಅಲ್ಲದೆ, ಚುಟುಕು ವಿಶ್ವಕಪ್‌ನಲ್ಲಿ ನಾಯಕನಾಗಿ ನಾಲ್ಕನೇ ಬಾರಿ ತಂಡವನ್ನು ಮುನ್ನಡೆಸಲಿದ್ದಾರೆ. ಟಿಮ್ ಸೌಥಿಗೆ 7ನೇ, ಟ್ರೆಂಟ್ ಬೋಲ್ಟ್ಗೆ 5ನೇ ಟಿ20 ವಿಶ್ವಕಪ್ ಆಗಿದೆ.
ಪ್ರಮುಖರನ್ನೇ ಕೈಬಿಟ್ಟ ನ್ಯೂಜಿಲೆಂಡ್
ಕಿವೀಸ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಮೊದಲ ಐಸಿಸಿ ಟ್ರೋಫಿಗಾಗಿ ಹುಡುಕಾಟ ನಡೆಸುತ್ತಿದೆ. ನ್ಯೂಜಿಲೆಂಡ್‌ನ ತಂಡದಲ್ಲಿ ಪ್ರಮುಖ ವೇಗಿ ಕೈಲ್ ಜೇಮಿಸನ್ (ಬೆನ್ನುನೋವು), ಆಲ್‌ರೌಂಡರ್ ಆಡಮ್ ಮಿಲ್ನೆ (ಪಾದದ) ಗಾಯದ ಮೂಲಕ ಈ ಮಿನಿ ಸಮರದಿಂದ ಹೊರಗುಳಿದಿದ್ದಾರೆ. ವಿಲ್ ಒ'ರೂರ್ಕ್, ಟಾಮ್ ಲ್ಯಾಥಮ್, ಟಿಮ್ ಸೀಫರ್ಟ್ ಮತ್ತು ವಿಲ್ ಯಂಗ್ ಅವರಂತಹ ಆಟಗಾರರಿಗೂ ಮಣೆ ಹಾಕಿಲ್ಲ.
ವೈಟ್ಬಾಲ್ ಕ್ರಿಕೆಟ್ನಲ್ಲಿ ಇತ್ತೀಚಿನ ಉತ್ತಮ ಫಾರ್ಮ್‌ನ ಹೊರತಾಗಿಯೂ ವಿಲ್ ಯಂಗ್ ಅವರನ್ನು ಕಡೆಗಣಿಸಿರುವುದು ಅಚ್ಚರಿ ಮೂಡಿಸಿದೆ. ಅಗ್ರ ಕ್ರಮಾಂಕಕ್ಕೆ ಯಂಗ್ ಗನ್ ರಚಿನ್ ರವೀಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ವೇಗದ ಬೌಲರ್ ಮ್ಯಾಟ್ ಹೆನ್ರಿ ಕೂಡ ಕಾಣಿಸಿಕೊಂಡಿದ್ದಾರೆ. ಕಿವೀಸ್ ಯುವ ವೇಗಿ ಬೆನ್ ಸಿಯರ್ಸ್ ಅವರನ್ನು ಯುಎಸ್ಎ ಮತ್ತು ವೆಸ್ಟ್ ಇಂಡೀಸ್ಗೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಸಮತೋಲಿತ ತಂಡವನ್ನು ಆಯ್ಕೆ ಮಾಡಿರುವ ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಅವರು ಟೂರ್ನಿಯಲ್ಲಿ ಬಲವಾದ ಪ್ರದರ್ಶನದ ವಿಶ್ವಾಸ ಹೊಂದಿದ್ದಾರೆ. ತಂಡಕ್ಕೆ ಹೆಸರಿಸಲಾದ ಪ್ರತಿಯೊಬ್ಬರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ವಿಶ್ವಕಪ್‌ನಲ್ಲಿ ನಿಮ್ಮ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ ಎಂದು ಸ್ಟೆಡ್ ಹೇಳಿದ್ದಾರೆ. ವೆಸ್ಟ್ ಇಂಡೀಸ್‌ನ ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ವ್ಯಾಪ್ತಿಯೊಂದಿಗೆ ನಾವು ತಂಡವನ್ನು ಆಯ್ಕೆ ಮಾಡಿದ್ದೇವೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಮೊದಲ ಪಂದ್ಯವು ಜೂನ್ 7 ರಂದು ಗಯಾನಾದಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆಯಲಿದೆ. ಸಿ ಗುಂಪಿನಲ್ಲಿರುವ ವೆಸ್ಟ್ ಇಂಡೀಸ್, ಉಗಾಂಡಾ ಮತ್ತು ಪಪುವಾ ನ್ಯೂಗಿನಿ ತಂಡಗಳೊಂದಿಗೆ ಕಿವೀಸ್ ಸೆಣಸಾಟ ನಡೆಸಲಿದೆ.
ನ್ಯೂಜಿಲೆಂಡ್ 15 ಸದಸ್ಯರ ತಂಡ
ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸಾಂಟ್ನರ್, ಇಶ್ ಸೋದಿ, ಟಿಮ್ ಸೌಥಿ.
ಮೀಸಲು ಆಟಗಾರ: ಬೆನ್ ಸಿಯರ್ಸ್.
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.