ಕಾಮೆಂಟರಿ ಬಾಕ್ಸ್‌ನಲ್ಲಿ ಕೂತು ನನ್ನ ಸ್ಟ್ರೈಕ್ರೇಟ್ ಬಗ್ಗೆ ಮಾತಾಡುವುದು ಸುಲಭ; ಟೀಕಾಕಾರರ ಚಳಿಬಿಡಿಸಿದ ವಿರಾಟ್ ಕೊಹ್ಲಿ
Virat Kohli : ಕಾಮೆಂಟರಿ ಬಾಕ್ಸ್‌ನಲ್ಲಿ ಕೂತು ನನ್ನ ಸ್ಟ್ರೈಕ್ರೇಟ್ ಬಗ್ಗೆ ಮಾತನಾಡುವುದು ಸುಲಭ ಎಂದು ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಅವರು ಟೀಕಾಕಾರರ ಚಳಿಬಿಡಿಸಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನ 45ನೇ ಪಂದ್ಯದಲ್ಲಿ (IPL 2024) ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli), ತನ್ನ ಸ್ಟ್ರೈಕ್ರೇಟ್ ಕುರಿತು ವ್ಯಕ್ತವಾಗಿದ್ದ ಟೀಕೆಗೆ ಬಹಿರಂಗವಾಗಿ ತಿರುಗೇಟು ನೀಡಿದ್ದಾರೆ. ಕೊಹ್ಲಿಯ ನಿಧಾನಗತಿ ಬ್ಯಾಟಿಂಗ್ ವಿರುದ್ಧ ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಸುನಿಲ್ ಗವಾಸ್ಕರ್, ಮುರಳಿ ಕಾರ್ತಿಕ್ ಸೇರಿ ಹಲವರು ಟೀಕಿಸಿದ್ದರು. ವಿರಾಟ್ ಸ್ಲೋ ಇನ್ನಿಂಗ್ಸ್ನಿಂದಲೇ ಆರ್ಸಿಬಿ ಸೋಲುತ್ತಿದೆ ಎಂದು ಟೀಕಿಸಿದ್ದರು.
ಜಿಟಿ ವಿರುದ್ಧ ಬೊಂಬಾಟ್ ಇನ್ನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ, ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಸ್ಪಿನ್ನರ್ಗಳ ಎದುರು ರನ್ ಗಳಿಸಲು ಹರಸಾಹಸಪಟ್ಟಿದ್ದರು. ಹೀಗಾಗಿ ಸ್ಪಿನ್ನರ್ಗಳ ಆಡಲು ಬರಲ್ಲ ಎಂದು ಟೀಕಿಸಿದ್ದರು. ಇದೀಗ ಗುಜರಾತ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಕಟ್ಟಿ ಹಲವು ದಾಖಲೆ ಬರೆದಿರುವ ಕಿಂಗ್, 32 ಬಾಲ್ಗಳಲ್ಲಿ ಹಾಫ್ ಸೆಂಚುರಿ ಪೂರ್ಣಗೊಳಿಸಿ, ಒಟ್ಟು 44 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿದರು. ಅಲ್ಲದೆ, ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ 10 ಪಂದ್ಯಗಳಿಂದ 500 ರನ್ ಗಳಿಸಿದ್ದಾರೆ.
ಪಂದ್ಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ತನ್ನ ಸ್ಟ್ರೈಕ್ರೇಟ್ ಕುರಿತು ಟೀಕಿಸಿದವರಿಗೆ ಮುಟ್ಟಿನೋಡಿಕೊಳ್ಳುವಂತೆ ಸರಿಯಾಗಿ ಉತ್ತರ ನೀಡಿದ್ದಾರೆ. ಕಾಮೆಂಟೇಟರ್ ಬಾಕ್ಸ್‌ನಲ್ಲಿ ಕೂತು ಹೀಗೆ ಟೀಕೆಗಳನ್ನು ಮಾಡುವುದು ಸುಲಭ ಎಂದು ಹೇಳಿದ್ದಾರೆ. ಸ್ಟ್ರೈಕ್ ರೇಟ್‌ಗಳ ಬಗ್ಗೆ ಮಾತನಾಡುವ ಮತ್ತು ನಾನು ಸ್ಪಿನ್ಗಳ ವಿರುದ್ಧ ಚೆನ್ನಾಗಿ ಆಡುತ್ತಿಲ್ಲ, ಅಂಕಿ-ಅಂಶಗಳ ಕುರಿತು ಚರ್ಚೆ ಮತ್ತು ಮಾತನಾಡುತ್ತಿದ್ದಾರೆ. ಆದರೆ ಅದು ನನಗಾಗಿ ಅಲ್ಲ, ತಂಡಕ್ಕಾಗಿ, ತಂಡದ ಗೆಲುವಿಗಾಗಿ ಎಂದಿದ್ದಾರೆ.
15 ವರ್ಷಗಳಿಂದ ಇದನ್ನು ಮಾಡುತ್ತಿರುವುದಕ್ಕೆ ಒಂದು ಕಾರಣವಿದೆ. ಆದರೆ ಇದೆಲ್ಲವೂ ತಂಡದ ಗೆಲುವಿಗೆ. ಆದರೆ ನೀವೇ ಆ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಹೇಗಿರುತ್ತಿದ್ದಿರಿ ಎಂಬುದರ ಬಗ್ಗೆ ಖಚಿತವಿಲ್ಲ. ಕಾಮೆಂಟೆರಿ ಬಾಕ್ಸ್‌ನಲ್ಲಿ ಕೂತು ನನ್ನ ಸ್ಟ್ರೈಕ್ರೇಟ್ ಮಾಡನಾಡುವುದು ಸುಲಭ. ಜನರು ತಮಗೆ ಅನಿಸಿದ್ದನ್ನು ದಿನ ಬಿಟ್ಟು ದಿನ ಮಾತನಾಡಬಹುದು. ಏನು ನಡೆಯುತ್ತಿದೆ ಎಂಬುದರ ಕುರಿತು ಅವರಿಗೂ ತಿಳಿದಿದೆ ಎಂದು ಕಾಮೆಂಟೇಟರ್ಗಳ ಟೀಕೆಗೆ ಚಾಟಿ ಬೀಸಿದ್ದಾರೆ.
ವಿರಾಟ್ಗೆ ಇರ್ಫಾನ್ ಪಠಾಣ್ ಬೆಂಬಲ
ಸ್ಟ್ರೈಕ್ರೇಟ್ಗೆ ಸಂಬಂಧಿಸಿದ ಟೀಕೆಗಳಿಗೆ ಸಂಬಂಧಿಸಿ ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಬೆಂಬಲ ನೀಡಿದ್ದಾರೆ. ಜನರು ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಆದರೆ ಅವರು ತಮ್ಮ ಆರೆಂಜ್ ಕ್ಯಾಪ್ನೊಂದಿಗೆ 150 ರ ಸಮೀಪ ಹೊಡೆಯುತ್ತಿದ್ದಾರೆ ಎಂಬ ಅಂಶವನ್ನು ಅವರು ಮರೆತುಬಿಡುತ್ತಾರೆ ಎಂದು ಟೀಕಿಸುವವರ ವಿರುದ್ಧ ಕಿಡಿಕಾರಿದ್ದಾರೆ.
ವಿರಾಟ್ ಕೊಹ್ಲಿ ದಾಖಲೆ
ಅಜೇಯ 70 ರನ್ ಬಾರಿಸಿದ ವಿರಾಟ್ ಕೊಹ್ಲಿ, ಪ್ರಸಕ್ತ ಟೂರ್ನಿಯಲ್ಲಿ 500 ರನ್ಗಳ ಗಡಿ ದಾಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಸಲ 500+ ರನ್ ಬಾರಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರು ಸಹ ತಲಾ ಏಳು ಬಾರಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ವಿರಾಟ್, 10 ಸಲ 400+ ಸ್ಕೋರ್ ಮಾಡಿದ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.