ರಾಜಸ್ಥಾನ ರಾಯಲ್ಸ್ ಮಾಜಿ ಸಹ ಮಾಲೀಕ ರಾಜ್ ಕುಂದ್ರಾ 98 ಕೋಟಿ ಆಸ್ತಿ ಇಡಿ ಜಪ್ತಿ; ನಟಿ ಶಿಲ್ಪಾ ಶೆಟ್ಟಿ ಪತಿಗೆ ಮತ್ತೆ ಸಂಕಷ್ಟ
Apr 18, 2024 06:01 PM IST
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ 98 ಕೋಟಿ ಆಸ್ತಿ ಇಡಿ ಮುಟ್ಟುಗೋಲು
- Shilpa Shetty Raj kundra : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸಂಬಂಧಿಸಿದ 98 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಇಡಿ ವಶಪಡಿಸಿಕೊಂಡಿದೆ. ಕಾರಣ ಹೀಗಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ಹಾಗೂ ಐಪಿಎಲ್ನ ರಾಜಸ್ಥಾನ್ ರಾಯಲ್ಸ್ ಮಾಲೀಕರಾಗಿದ್ದ ರಾಜ್ ಕುಂದ್ರಾ (Raj Kundra) ಅವರಿಗೆ ಸೇರಿದ 97.79 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿದೆ. ಬಿಟ್‌ಕಾಯಿನ್ ಪೊಂಜಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಈ ಕ್ರಮ ಕೈಗೊಂಡಿದೆ.
ಮುಂಬೈನ ಜುಹುನಲ್ಲಿರುವ ಫ್ಲಾಟ್ ಅನ್ನು ಶಿಲ್ಪಾ ಶೆಟ್ಟಿ ಹೆಸರಿಗೆ ಇತ್ತೀಚೆಗಷ್ಟೇ ನೋಂದಣಿ ಮಾಡಲಾಗಿತ್ತು. ಇದೀಗ ಅದನ್ನೂ ಇಡಿ ಜಪ್ತಿ ಮಾಡಿದೆ. ಜೊತೆಗೆ ಪುಣೆಯಲ್ಲಿರುವ ಬಂಗಲೆ ಹಾಗೂ ರಾಜ್ ಕುಂದ್ರಾ ಖರೀದಿಸಿದ್ದ ಈಕ್ವಿಟಿ ಷೇರುಗಳನ್ನೂ ವಶಕ್ಕೆ ಪಡೆಯಲಾಗಿದೆ. 2002ರ ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) 2002ರ ನಿಬಂಧನೆಗಳ ಅಡಿಯಲ್ಲಿ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ನಂಬಿಸಿ ಮೋಸ ಮಾಡಿದ್ದರು!
ಆರೋಪಿಗಳು ಬಿಟ್ ಕಾಯಿನ್ ರೂಪದಲ್ಲಿ ತಿಂಗಳಿಗೆ ಶೇ.10ರಷ್ಟು ರಿಟರ್ನ್ ನೀಡುವುದಾಗಿ ಸುಳ್ಳು ಭರವಸೆ ನೀಡಿ ಜನರಿಂದ ಬಿಟ್ ಕಾಯಿನ್ ರೂಪದಲ್ಲಿ (2017ರಲ್ಲಿಯೇ 6,600 ಕೋಟಿ ರೂ. ಮೌಲ್ಯ) ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ. ಹೂಡಿಕೆದಾರರಿಗೆ ಅತಿ ಹೆಚ್ಚಿನ ಲಾಭದ ಭರವಸೆ ನೀಡಿದ್ದ ವಂಚಕರು, ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಅವರು ಈ ಮೊತ್ತವನ್ನು ಹೂಡಿಕೆ ಮಾಡಿಯೇ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಮತ್ತು ದೆಹಲಿಯಲ್ಲಿ ಸಾಕಷ್ಟು ದೂರುಗಳು ದಾಖಲಾಗಿದ್ದವು. ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡಿದ್ದ ಇಡಿ, ವಿವೇಕ್ ಭಾರದ್ವಾಜ್, ಅಮಿತ್ ಭಾರದ್ವಾಜ್, ಮಹೇಂದ್ರ ಭಾರದ್ವಾಜ್, ಅಜಯ್ ಭಾರದ್ವಾಜ್, ಸಿಂಪ್ಲಿ ಭಾರದ್ವಾಜ್ ಸೇರಿದಂತೆ ಅನೇಕರ ವಿರುದ್ಧ ದೂರು ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
285 ಬಿಟ್‌ಕಾಯಿನ್ ಅಂದರೆ 150 ಕೋಟಿ ರೂಪಾಯಿ
ಇಡಿ ತನಿಖೆಯ ಪ್ರಕಾರ, ಶಿಲ್ಪಾ ಶೆಟ್ಟಿ ಗಂತ ರಾಜ್ ಕುಂದ್ರಾ ಅವರು ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಮೈನಿಂಗ್ ಫಾರ್ಮ್ ಸ್ಥಾಪಿಸಲು ಗೇನ್‌ಬಿಟ್‌ಕಾಯಿನ್ ಪೊಂಜಿ ಹಗರಣದ ಮಾಸ್ಟರ್‌ಮೈಂಡ್ ಮತ್ತು ಪ್ರವರ್ತಕ ಅಮಿತ್ ಭಾರದ್ವಾಜ್ ಅವರಿಂದ 285 ಬಿಟ್‌ಕಾಯಿನ್ ಪಡೆದಿದ್ದರು. ಹೂಡಿಕೆದಾರರಿಗೆ ಶೇ 10ರಷ್ಟು ಲಾಭದ ಆಸೆ ತೋರಿಸಿ ನಂಬಿಸಿದ್ದ ಆರೋಪಿಗಳು, ಹೂಡಿಕೆದಾರರ ಹೆಸರಿನಲ್ಲೇ ತಾವೇ ಬಿಟ್ ಕಾಯಿನ್ ಖರೀದಿಸಿ ತಮ್ಮ ವ್ಯಾಲೆಟ್ನಲ್ಲಿ ಇಟ್ಟುಕೊಂಡಿದ್ದರು ಎಂದು ಇಡಿ ಆರೋಪಿಸಿದೆ.
ಪ್ರಕರಣದ ಪ್ರಮಖ ಆರೋಪಿ ಅಮಿತ್ ಭಾರದ್ವಾಜ್ ಅವರಿಂದ ರಾಜ್‌ಕುಂದ್ರಾ ಸುಮಾರು 285 ಬಿಟ್ ಕಾಯಿನ್ ಪಡೆದಿದ್ದರು. ಉಕ್ರೇನ್ನಲ್ಲಿರುವ ಬಿಟ್ ಕಾಯಿನ್ ಮೈನಿಂಗ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಒಡಂಬಡಿಕೆ ಅಂತಿಮಗೊಂಡಿರಲಿಲ್ಲ. ಆಗ ರಾಜ್ ಕುಂದ್ರಾ ಬಳಿ ಸುಮಾರು 150 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಸಂಗ್ರಹ ಇತ್ತು ಎಂಬ ಮಾಹಿತಿ ಲಭ್ಯವಾಗಿತ್ತು. ನೀಲಿ ಚಿತ್ರ ತಯಾರಿ ಆರೋಪದ ಮೇಲೂ 2021ರಲ್ಲಿ ರಾಜ್‌ಕುಂದ್ರಾ ಬಂಧನವಾಗಿದ್ದರು. ಬಳಿಕ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
ಐಪಿಎಲ್ನಿಂದ ಅಜೀವ ಶಿಕ್ಷೆ
ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಚಟುವಟಿಕೆಯಲ್ಲಿ ರಾಜಸ್ಥಾನ್ ರಾಯಲ್ಸ್ ಅಧಿಕಾರಿಗಳು ಪಾಲ್ಗೊಂಡಿದ್ದ ಕಾರಣ, ರಾಜ್‌ಕುಂದ್ರಾ ಮಾಲೀಕತ್ವದ ತಂಡವನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗಿತ್ತು. ಅದೇ ವರ್ಷದಲ್ಲಿ ಬೆಟ್ಟಿಂಗ್ ಹಗರಣದಲ್ಲಿ ರಾಜ್ ಕುಂದ್ರಾ ಅವರು ಒಳಗೊಂಡಿದ್ದರು. ಇದರ ಪರಿಣಾಮವಾಗಿ ಐಪಿಎಲ್ನಿಂದ ಜೀವಮಾನ ನಿಷೇಧ ಹೇರಲಾಯಿತು.