logo
ಕನ್ನಡ ಸುದ್ದಿ  /  ಕ್ರಿಕೆಟ್  /  Video: ಕೊಟ್ಟ ಮಾತು ಉಳಿಸಿದ ತೆಂಡೂಲ್ಕರ್;‌ ಕಾಶ್ಮೀರದ ವಿಶೇಷ ಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಭೇಟಿಯಾದ ಸಚಿನ್‌

Video: ಕೊಟ್ಟ ಮಾತು ಉಳಿಸಿದ ತೆಂಡೂಲ್ಕರ್;‌ ಕಾಶ್ಮೀರದ ವಿಶೇಷ ಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಭೇಟಿಯಾದ ಸಚಿನ್‌

Jayaraj HT Kannada

Feb 24, 2024 03:17 PM IST

google News

ಕಾಶ್ಮೀರದ ವಿಶೇಷ ಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಭೇಟಿಯಾದ ಸಚಿನ್‌

    • Amir Hussain: ವಿಶೇಷ ಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಅವರನ್ನು ಸಚಿನ್ ತೆಂಡೂಲ್ಕರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.‌ ಈ ವೇಳೆ ಭಾವುಕರಾದ ಹುಸೇನ್‌ ಅವರನ್ನು ಸಂತೈಸಿದ ಕ್ರಿಕೆಟ್‌ ದೇವರು, ತಮ್ಮ ಆಟೋಗ್ರಾಫ್‌ ಹಾಕಿದ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಸಚಿನ್‌ ಸದ್ಯ ಕಾಶ್ಮೀರ ಪ್ರವಾಸದಲ್ಲಿದ್ದಾರೆ.
ಕಾಶ್ಮೀರದ ವಿಶೇಷ ಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಭೇಟಿಯಾದ ಸಚಿನ್‌
ಕಾಶ್ಮೀರದ ವಿಶೇಷ ಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಭೇಟಿಯಾದ ಸಚಿನ್‌

ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸಚಿನ್‌, ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ದಾಖಲೆಯ ಸರದಾರ ಅಲ್ಲ. ಮೈದಾನದ ಹೊರಗೂ ಮಾನವೀಯತೆಯ ಸಾಕಾರ ಮೂರ್ತಿ. ಇದಕ್ಕೆ ಈ ವಿಡಿಯೋ ಸಾಕ್ಷಿಯಾಗುತ್ತದೆ.

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌, ಸದ್ಯ ತಮ್ಮ ಕುಟುಂಬದೊಂದಿಗೆ ಜಮ್ಮು ಮತ್ತು ಕಾಶ್ಮೀರ ಪ್ರವಾಸವನ್ನು ಕೈಗೊಂಡಿದ್ದಾರೆ. ಭಾರತದ ಮುಕುಟ ಕಾಶ್ಮೀರದಲ್ಲಿ ಎಂಜಾಯ್‌ ಮಾಡ್ತಿದ್ದಾರೆ. ತಮ್ಮ ಪ್ರವಾಸದ ಭಾಗವಾಗಿ, ವಿಶೇಷ ಚೇತನ ಕ್ರಿಕೆಟಿಗನನ್ನು ಭೇಟಿಯಾಗಿದ್ದಾರೆ. ಅವರೇ ಅಮೀರ್ ಹುಸೇನ್.

ತೆಂಡೂಲ್ಕರ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ಆ ವಿಡಿಯೋದಲ್ಲಿ ಇದ್ದವರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಮರ್ಥ್ಯದ ಕ್ರಿಕೆಟಿಗ ಅಮೀರ್ ಹುಸೇನ್. ಅಮೀರ್ ಅವರ ಕ್ರಿಕೆಟ್ ಕೌಶಲ್ಯ ಕಂಡು ಖುಷಿಯಾದ ತೆಂಡೂಲ್ಕರ್, ಆ ಸ್ಪೂರ್ತಿದಾಯಕ ಕ್ರೀಡಾಪಟುವನ್ನು ಒಂದು ಬಾರಿ ಭೇಟಿಯಾಗಬೇಕು ಎಂಬ ಇರಾದೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಚಿನ್‌ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಅಮೀರ್‌ ಅವರನ್ನು ಮುಖತಃ ಭೇಟಿಯಾಗಿದ್ದಾರೆ.

ಇದನ್ನೂ ಓದಿ | ಕೊನೆಯ ಎಸೆತಕ್ಕೆ 5 ರನ್, ಭರ್ಜರಿ ಸಿಕ್ಸರ್ ಸಿಡಿಸಿ ರೋಚಕ ಜಯ ತಂದುಕೊಟ್ಟ ಸಜನಾ; ಚೊಚ್ಚಲ ಪಂದ್ಯದಲ್ಲೇ ಮುಂಬೈಗೆ ಗೆಲುವು

ಸದ್ಯ ಕಾಶ್ಮೀರ ಪ್ರವಾಸದಲ್ಲಿರುವ ಸಚಿನ್‌, ಅಮೀರ್ ಅವರನ್ನು ಭೇಟಿಯಾಗಿದ್ದಾರೆ. ಇದು ಸಚಿನ್‌ ಅವರಿಗಿಂತ ಪ್ರತಿಭಾವಂತ ಕ್ರಿಕೆಟಿಗ ಅಮೀರ್ ಅವರಿಗೆ ವಿಶೇಷ ಕ್ಷಣ. ತಮ್ಮ ಆರಾಧ್ಯ ದೇವರನ್ನು ಭೇಟಿಯಾಗಿ ಹುಸೈನ್‌ ಖುಷಿಯಾಗಿದ್ದಾರೆ. ಈ ವಿಡಿಯೋವನ್ನು ಸಚಿನ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಮೀರ್ ಹುಸೇನ್ ಮತ್ತು ಸಚಿನ್ ತೆಂಡೂಲ್ಕರ್ ಕೆಲಕಾಲ ಸಂವಾದ ನಡೆಸಿದ್ದಾರೆ.‌ ತಮ್ಮ ಕ್ರಿಕೆಟ್‌ ಬದುಕಿನ ಬಗ್ಗೆ ಮಾತನಾಡುತ್ತಾ, ಸ್ಫೂರ್ತಿದಾಯಕ ಕಥೆ ಹೇಳಿದ ಹುಸೇನ್ ಭಾವುಕರಾಗುತ್ತಾರೆ. ಈ ವೇಳೆ ಅವರನ್ನು ಸಂತೈಸಿದ ಸಚಿನ್‌, ತಮ್ಮ ಆಟೋಗ್ರಾಫ್‌ ಹಾಕಿದ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಅಲ್ಲದೆ ಅದೇ ಬ್ಯಾಟ್‌ನಲ್ಲಿ ತಮ್ಮ ಕುತ್ತಿಗೆಯ ಸಹಾಯದಿಂದ ಬ್ಯಾಟಿಂಗ್‌ ಮಾಡಿ ಸಚಿನ್‌ಗೆ ತೋರಿಸುತ್ತಾರೆ.

ಅಮೀರ್ ಹುಸೇನ್ ಯಾರು?

ಕಾಶ್ಮೀರದ ವಾಘಮಾ ಗ್ರಾಮದವರಾದ ಅಮೀರ್ ಹುಸೇನ್, ಸಣ್ಣ ವಯಸ್ಸಿನಲ್ಲೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರು. ಎಂಟು ವರ್ಷ ವಯಸ್ಸು ಇದ್ದಾಗ ತಮ್ಮ ತಂದೆಯ ಗಿರಣಿಯಲ್ಲಿ ನಡೆದ ದುರಂತ ಅಪಘಾತದಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡರು. ಆ ಮೊದಲೇ ಕ್ರಿಕೆಟ್‌ ಆಟದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು, ಎರಡು ಕೈ ಕಳೆದುಕೊಂಡರೂ ಕ್ರಿಕೆಟ್ ಮೇಲಿನ ಹುಚ್ಚು ಪ್ರೀತಿ ಕುಗ್ಗಲಿಲ್ಲ. ತಮ್ಮ ಕುತ್ತಿಗೆಯ ಸಹಾಯದಿಂದಲೇ ಬ್ಯಾಟ್‌ ಬೀಸಿ ವಿಶೇಷ ಶೈಲಿಯಲ್ಲಿ ಆಡುವುದು ಮುಂದುವರೆಸಿದರು. ಇವರಲ್ಲಿನ ಅದಮ್ಯ ಚೇತನ ಹಾಗೂ ಆಟದ ಮೇಲಿನ ಉತ್ಸಾಹವನ್ನು ಗಮನಿಸಿದ ಶಿಕ್ಷಕರೊಬ್ಬರು, ವೃತ್ತಿಪರ ಕ್ರೀಡಾ ಜಗತ್ತಿಗೆ ಅವರನ್ನು ಕರೆದೊಯ್ದರು. ಇದು ಕಾಶ್ಮೀರ ಕ್ರಿಕೆಟಿಗನ ಬಾಳಲ್ಲಿ ಮಹತ್ವದ ತಿರುವು ನೀಡಿತು.

ಇದನ್ನೂ ಓದಿ | ಬೌಲಿಂಗ್-ಬ್ಯಾಟಿಂಗ್ ನಡೆಸದೆಯೇ ವಿಶ್ವದಾಖಲೆ ನಿರ್ಮಿಸಿದ ಜೇಮ್ಸ್ ಆಂಡರ್ಸನ್; ವಿವಿಯನ್ ರಿಚರ್ಡ್ಸ್ ಹಿಂದಿಕ್ಕಿದ ವೇಗಿ

ಅಮೀರ್‌ ಅವರ ಕುಟುಂಬದ ಸದಸ್ಯರನ್ನು ಕೂಡಾ ಭೇಟಿಯಾದ ಸಚಿನ್‌, ಅವರಿಗೂ ಬ್ಯಾಟ್‌ ನೀಡಿ ಗೌರವಿಸಿದರು. ಈ ಭೇಟಿಯನ್ನು ಶಾಶ್ವತವಾಗಿ ನೆನಪಿನಲ್ಲಿಡುವಂತೆ ಮಾಡಲು ಫೋಟೋ ತೆಗೆಸಿಕೊಂಡರು. ಈ ಎಲ್ಲಾ ದೃಶ್ಯಗಳನ್ನು ಸಚಿನ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.‌

ಇದನ್ನೂ ಓದಿ | ‌IND vs ENG: ರೂಟ್‌-ರಾಬಿನ್ಸನ್‌ ಆಕರ್ಷಕ ಜೊತೆಯಾಟ; ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ