ಲೋಕಸಭಾ ಚುನಾವಣೆ; 1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದವರು ಇವರು; ಇಲ್ಲಿದೆ ಪ್ರಮುಖರ ಪಟ್ಟಿ
Apr 24, 2024 12:04 PM IST
ಸೂರತ್‌ನಿಂದ ಅವಿರೋಧ ಆಯ್ಕೆ ಕಂಡ ಬಿಜೆಪಿಯ ಮುಖೇಶ್ ದಲಾಲ್, ಜಮ್ಮು-ಕಾಶ್ಮೀರದ ಶ್ರೀನಗರದಿಂದ ಈ ಹಿಂದೆ ಅವಿರೋಧ ಆಯ್ಕೆಯಾಗಿದ್ದ ಫಾರೂಕ್ ಅಬ್ದುಲ್ಲಾ, ಉಪಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದ ವೈಬಿ ಚವಾಣ್.
ಲೋಕಸಭಾ ಚುನಾವಣೆ ಚಾಲ್ತಿಯಲ್ಲಿದ್ದು ಗುಜರಾತ್‌ನ ಸೂರತ್‌ನಿಂದ ಬಿಜೆಪಿ ಅಭ್ಯರ್ಥಿ ಮುಖೇಶ್ ಕುಮಾರ್ ದಲಾಲ್ ಅವಿರೋಧ ಆಯ್ಕೆ ಕಂಡರು. ತನ್ನಿಮಿತ್ತವಾಗಿ 1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಮುಖರ ಪಟ್ಟಿ ಇಲ್ಲಿದೆ.
ಬೆಂಗಳೂರು/ನವದೆಹಲಿ: ಲೋಕಸಭಾ ಚುನಾವಣೆ 2024ರ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗುವ ಮೊದಲೇ ಬಿಜೆಪಿ ತನ್ನ ಖಾತೆ ತೆರೆದಿದೆ. ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಖೇಶ್ ಕುಮಾರ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ.
ಮುಖೇಶ್ ಕುಮಾರ್ ಅವಿರೋಧ ಆಯ್ಕೆಗೆ ಮೊದಲು ಕಾಂಗ್ರೆಸ್ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿತ್ತು. ಇದಾದ ಬಳಿಕ, ಇತರೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದ ಕಾರಣ ಮುಖೇಶ್ ಕುಮಾರ್ ಅವಿರೋಧ ಆಯ್ಕೆ ಸುಲಭವಾಯಿತು.
ಲೋಕಸಭೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದವರ ಪೈಕಿ ಮುಖೇಶ್ ಕುಮಾರ್ ಮೊದಲಿಗರಲ್ಲ. 1951ರಿಂದೀಚೆಗೆ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ಅಂಥವರ ವಿವರ ಇಲ್ಲಿದೆ.
1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಮುಖರ ಪಟ್ಟಿ
ಒಟ್ಟು ಸಾರ್ವತ್ರಿಕ ಚುನಾವಣೆಗಳನ್ನು ಗಮನಿಸುವಾಗ, 1957ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗರಿಷ್ಠ ಏಳು ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದರು. ನಂತರ 1951 ಮತ್ತು 1967ರ ಚುನಾವಣೆಯಲ್ಲಿ ತಲಾ ಐವರು. 1962ರಲ್ಲಿ ಮೂವರು ಮತ್ತು 1977ರಲ್ಲಿ ಇಬ್ಬರು ಅವಿರೋಧವಾಗಿ ಗೆಲುವು ಕಂಡಿದ್ದಾರೆ. 1971, 1980 ಮತ್ತು 1989ರಲ್ಲಿ ತಲಾ ಒಬ್ಬ ಅಭ್ಯರ್ಥಿ ಇದೇ ಮಾದರಿಯಲ್ಲಿ ಗೆದ್ದಿದ್ದರು.
ಲೋಕಸಭೆ ಉಪಚುನಾವಣೆ, ಎರಡೆರಡು ಸಲ ಒಂದೇ ಕ್ಷೇತ್ರದಿಂದ ಅವಿರೋಧ ಆಯ್ಕೆ
ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಗಮನಿಸಿದರೆ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ 2012ರಲ್ಲಿ ಕನೌಜ್ ಲೋಕಸಭೆ ಉಪಚುನಾವಣೆಯಲ್ಲಿ ಅವಿರೋಧವಾಗಿ ಗೆಲುವು ಸಾಧಿಸಿದ್ದರು. ಡಿಂಪಲ್ ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಲೋಕಸಭೆ ಉಪಚುನಾವಣೆಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ.
ಸಂಸದೀಯ ಚುನಾವಣೆಯಲ್ಲಿ ಅವಿರೋಧವಾಗಿ ಗೆದ್ದಿರುವ ಪ್ರಮುಖ ರಾಜಕಾರಣಿಗಳಲ್ಲಿ ವೈಬಿ ಚವಾಣ್ (ಉಪ ಚುನಾವಣೆಯಲ್ಲಿ ಅವಿರೋಧ ಆಯ್ಕೆ), ಫಾರೂಕ್ ಅಬ್ದುಲ್ಲಾ, ಹರೇ ಕೃಷ್ಣ ಮಹತಾಬ್, ಟಿಟಿ ಕೃಷ್ಣಮಾಚಾರಿ, ಪಿಎಂ ಸಯೀದ್ ಮತ್ತು ಎಸ್‌ಸಿ ಜಮೀರ್ (ಚುಬಾತೋಷಿ ಜಮೀರ್) ಸೇರಿದ್ದಾರೆ. ಸ್ಪರ್ಧೆಯಿಲ್ಲದೆ ಲೋಕಸಭೆ ಪ್ರವೇಶಿಸಿದ ಅಭ್ಯರ್ಥಿಗಳ ಪೈಕಿ ಗರಿಷ್ಠ ಅಭ್ಯರ್ಥಿಗಳು ಕಾಂಗ್ರೆಸ್‌ನವರೇ ಆಗಿದ್ದಾರೆ. ಸಿಕ್ಕಿಂ ಮತ್ತು ಶ್ರೀನಗರ ಕ್ಷೇತ್ರಗಳಲ್ಲಿ ಎರಡು ಬಾರಿ ಇಂತಹ ಅವಿರೋಧ ಆಯ್ಕೆಗಳಾಗಿವೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.