logo
ಕನ್ನಡ ಸುದ್ದಿ  /  ಚುನಾವಣೆಗಳು  /  Mysore News: ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರ ಗೆಲ್ಲಲು ಸಿಎಂ ರಣತಂತ್ರ, ಬೆಂಬಲಿಗರಿಗೆ ಸೂಚನೆ ನೀಡಿದ ಸಿದ್ದರಾಮಯ್ಯ

Mysore News: ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರ ಗೆಲ್ಲಲು ಸಿಎಂ ರಣತಂತ್ರ, ಬೆಂಬಲಿಗರಿಗೆ ಸೂಚನೆ ನೀಡಿದ ಸಿದ್ದರಾಮಯ್ಯ

Umesha Bhatta P H HT Kannada

Mar 24, 2024 04:59 PM IST

ತವರು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಗೆಲುವಿಗೆ ಸಿಎಂ ಸಿದ್ದರಾಮಯಯ ಸಭೆ ನಡೆಸಿದರು.

    • ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ. ಇವೆರಡನ್ನೂ ಸೇರಿಸಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತವಾಗಿ ಹೇಳಿದ್ದಾರೆ.
ತವರು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಗೆಲುವಿಗೆ ಸಿಎಂ ಸಿದ್ದರಾಮಯಯ ಸಭೆ ನಡೆಸಿದರು.
ತವರು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಗೆಲುವಿಗೆ ಸಿಎಂ ಸಿದ್ದರಾಮಯಯ ಸಭೆ ನಡೆಸಿದರು.

ಮೈಸೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಳೆದುಕೊಂಡಿದ್ದ ತವರು ಜಿಲ್ಲೆ ಮೈಸೂರು- ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಶತಾಯಗತಾಯ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಸಿಎಂ ಸಿದ್ದರಾಮಯ್ಯ, ಇದಕ್ಕಾಗಿ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದಕ್ಕಾಗಿ ಮೈಸೂರಿನಲ್ಲಿ ಭಾನುವಾರ ಎರಡು ಕ್ಷೇತ್ರಗಳ ಸಚಿವರು, ಶಾಸಕರು, ಪ್ರಮುಖ ನಾಯಕರ ಸಭೆಯನ್ನು ನಡೆಸಿದ ಸಿದ್ದರಾಮಯ್ಯ ಅವರು ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಎಂತಹ ಪರಿಸ್ಥಿತಿ ಬಂದರೂ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯನ್ನು ಹಿಮ್ಮೆಟ್ಟಿಸಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು. ಇದಕ್ಕಾಗಿ ಜವಾಬ್ದಾರಿಯನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕು ಎಂದು ಸಿಎಂ ಸೂಚಿಸಿದರು.

ಟ್ರೆಂಡಿಂಗ್​ ಸುದ್ದಿ

ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು

ಲೋಕಸಭಾ ಚುನಾವಣೆ 2024; ರಾಯ್ ಬರೇಲಿಯಿಂದ ರಾಹುಲ್ ಗಾಂಧಿ, ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಕಣಕ್ಕೆ, ಕುತೂಹಲಕ್ಕೆ ತೆರೆ ಎಳೆದ ಕಾಂಗ್ರೆಸ್

ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೂರು ಜಿಲ್ಲೆಗಳ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು, ಬೋರ್ಡ್ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಇವೆರಡೂ ಕಾಂಗ್ರೆಸ್ ಕ್ಷೇತ್ರಗಳು. ಮತ್ತೆ ನಮ್ಮ 'ಕೈ'ಗೆ ಬರಲೇಬೇಕು. ಬರುತ್ತವೆ. ಹಿಂದಿನ ಬಾರಿ ಕೆಲವು ಕಾರಣಗಳಿಂದಾಗಿ ಅತ್ಯಂತ ಕಡಿಮೆ ಮತಗಳಿಂದ ನಮಗೆ ಹಿನ್ನೆಡೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಪರವಾದ ಯಾವ ಕಾರಣಗಳೂ ಇಲ್ಲ. ರಾಜ್ಯದಲ್ಲಿ ಬಿಜೆಪಿ ವಿರೋಧಿಯಾದ ಅಲೆ ಜೋರಾಗಿದೆ. ಬಿಜೆಪಿಯ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದ ಎಲ್ಲಾ ಕುಟುಂಬಗಳಿಗೆ ಕಾಂಗ್ರೆಸ್ ಗ್ಯಾರಂಟಿಗಳು ನೆಮ್ಮದಿ ತರಿಸಿರುವುದನ್ನು ನಾಡಿನ ಜನತೆ ಹೃದಯಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ ಎಂದರು.

ಗ್ಯಾರಂಟಿ ಸಾಧನೆ ತಿಳಿಸಿ

ನಾಲ್ಕು ದಶಕದ ಬಳಿಕ ಮೈಸೂರಿನಲ್ಲಿ ಒಕ್ಕಲಿಗ ಅಭ್ಯರ್ಥಿಗೆ ಕಾಂಗ್ರೆಸ್‌ ಅವಕಾಶ ನೀಡಿದೆ. ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಮ್ಮ ಅಭ್ಯರ್ಥಿಗೆ ಗೆಲ್ಲಿಸುವುದು ಕಷ್ಟ ಅಲ್ಲವೇ ಅಲ್ಲ. ಜತೆಗೆ ನಮ್ಮ ಗ್ಯಾರಂಟಿ ಯೋಜನಗಳ ಕಾರ್ಡ್‌ಗಳನ್ನು ಮನೆ ಮನೆಗೂ ತಲುಪಿಸಿ ಜನರಿಗೆ ಮನವರಿಕೆ ಮಾಡಿಕೊಡಿ. ರಾಜ್ಯ ಸರ್ಕಾರದಿಂದ ಜಾರಿ ಮಾಡಲಾದ ಕಾರ್ಯಕ್ರಮಗಳ ವಿವರಗಳನ್ನು ಗಟ್ಟಿದನಿಯಲ್ಲೇ ತಿಳಿಸಿ ಎಂದು ಸಲಹೆ ನೀಡಿದರು.

ನಾವು ನಡೆಸಿರುವ ಹಲವು‌ ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಗೆಲ್ಲುವುದೂ ಸೇರಿ 20 ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ ಎನ್ಮುವ ವರದಿಗಳು ಬಂದಿವೆ. ಹೀಗಾಗಿ‌ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪರವಾದ ಅಭೂತಪೂರ್ವ ಫಲಿತಾಂಶ ಹೊರಗೆ ಬರಲಿದೆ ಎಂದು‌ ವಿಶ್ವಾಸದಿಂದ ನುಡಿದರು.

ನಮ್ಮ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸಿಗುತ್ತಿದೆ. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಮತ್ತು ನರೇಂದ್ರ ಮೋದಿ ಹೇಳಿದ್ದರಲ್ಲಿ ಒಂದನ್ನೂ ಮಾಡಿಲ್ಲ ಎಂದು ಅವರ ವಿಫಲ ಅಶ್ವಾಸನೆಗಳ ಪಟ್ಟಿಯನ್ನೇ ನೀಡಿದರು.

ಕೇಂದ್ರದ ಸಾಧನೆ ಏನಿಲ್ಲ

ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿಯವರಿಗೆ ಜನರ ಬಳಿ ಹೋಗಲು ಮುಖ ಇಲ್ಲ. ಏಕೆಂದರೆ ಈ ಹತ್ತು ವರ್ಷಗಳಲ್ಲಿ ಬಿಜೆಪಿ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಅದಕ್ಕೇ ಕೇವಲ ಮೋದಿಯವರ ಮುಖ ತೋರಿಸಿ ಚುನಾವಣೆ ಮಾಡ್ತೀವಿ ಎಂದು ಬಿಜೆಪಿ ಹೆಣಗಾಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ 50-60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ ಎಂದರು.

ಹತ್ತು ವರ್ಷ ಅಧಿಕಾರ ಮಾಡಿದ ಮೋದಿ ಸರ್ಕಾರಕ್ಕೆ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಶ್ರೀರಾಮನ ಹೆಸರಲ್ಲಿ ಮತ ಕೇಳುವಂತಾಗಿದೆ. ರಾಮ ಸರ್ವರಿಗೂ ಸೇರಿದವನು. ನನ್ನ ಹೆಸರಲ್ಲೇ ರಾಮ ಇದೆ, ಹೀಗಾಗಿ ಬಿಜೆಪಿ ಸುಳ್ಳುಗಳ ಮೊರೆ ಹೋಗಿದೆ. ನನ್ನ ಬಗ್ಗೆ , ನಮ್ಮ ನಾಯಕರ ಬಗ್ಗೆ, ನಮ್ಮ ಪಕ್ಷದ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳುತ್ತಾ, ಸುಳ್ಳುಗಳ ಆಧಾರದಲ್ಲೇ ಚುನಾವಣೆ ಮಾಡುತ್ತಿದೆ ಎಂದು ಟೀಕಿಸಿದರು.

ಗೌಡರ ಸೆಕ್ಯುಲರ್ ಏನಾಯ್ತು?

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌಡರು, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು ಈಗ ಬಿಜೆಪಿ ಜತೆ ಸೇರಿದ್ದಾರೆ. ತಮ್ಮ ಅಳಿಯ ಡಾ.ಮಂಜುನಾಥ್ ಅವರನ್ನು ಬಿಜೆಪಿಗೆ ಕಳಿಸಿದ್ದಾರೆ. ಮೊದಲು ನೀನು ಹೋಗಿರು, ಆಮೇಲೆ ನಾವೂ ಬರ್ತೀವಿ ಎನ್ನುವ ರೀತಿ ಅಳಿಯನನ್ನು ಬಿಜೆಪಿಗೆ ಕಳಿಸಿದ್ದಾರೆ. ಅದಕ್ಕೇ ತಮ್ಮ ಪಕ್ಷದ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕುವುದು ಉತ್ತಮ ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಶಾಸಕರಾದ ಡಿ.ರವಿಶಂಕರ್‌, ಕೆ.ಹರೀಶ್‌ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಆಶ್ರಯ ಯೋಜನೆ ಅಧ್ಯಕ್ಷರಾದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಸೇರಿ ಮೂರು ಜಿಲ್ಲೆಗಳ ಎಲ್ಲಾ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ