ಪ್ರೀತಿ, ಯುದ್ಧ, ದೇಶಪ್ರೇಮ.. ಸ್ಯಾಮ್ ಬಹದ್ದೂರ್ ಟ್ರೇಲರ್ ರಿಲೀಸ್; ವಿಕ್ಕಿ ಬತ್ತಳಿಕೆ ಸೇರಿದ ಮತ್ತೊಂದು ಎಪಿಕ್ ಬಯೋಪಿಕ್
Nov 08, 2023 06:56 AM IST
ಪ್ರೀತಿ, ಯುದ್ಧ, ದೇಶಪ್ರೇಮ.. ಸ್ಯಾಮ್ ಬಹದ್ದೂರ್ ಟ್ರೇಲರ್ ರಿಲೀಸ್; ವಿಕ್ಕಿ ಬತ್ತಳಿಕೆ ಸೇರಿದ ಮತ್ತೊಂದು ಎಪಿಕ್ ಬಯೋಪಿಕ್
- ಬಾಲಿವುಡ್ ನಟ ವಿಕ್ಕಿ ಕೌಶಾಲ್ ನಟನೆಯ ಸ್ಯಾಮ್ ಬಹದ್ದೂರ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಭಾರತೀಯ ಸೇನೆಯ ಮೊದಲ ಏರ್‌ಫೀಲ್ಡ್ ಮಾರ್ಷಲ್ ಆಗಿದ್ದ ಸ್ಯಾಮ್ ಮಾನಿಕ್ ಷಾ ಅವರ ಜೀವನ ಆಧರಿತ ಚಿತ್ರ ಇದಾಗಿದೆ.
Sam Bahadur Trailer: ಬಾಲಿವುಡ್ ನಟ ವಿಕ್ಕಿ ಕೌಶಾಲ್, ನಟನೆ ಜತೆಗೆ ಆಯ್ದುಕೊಳ್ಳುವ ಕಥೆಯ ವಿಚಾರವಾಗಿಯೂ ಅಷ್ಟೇ ಸೂಕ್ಷ್ಮ. ಇದೀಗ ಇದೇ ಕಲಾವಿದ ತಮ್ಮ ಸಿನಿಮಾ ವೃತ್ತಿ ಜೀವನದ ಮತ್ತೊಂದು ಅತ್ಯುತ್ತಮ ಪಾತ್ರವನ್ನು ಆವಾಹಿಸಿಕೊಂಡು ಪ್ರೇಕ್ಷಕರ ಮುಂದೆ ಇನ್ನೇನು ಆಗಮಿಸುವ ತವಕದಲ್ಲಿದ್ದಾರೆ. ಸ್ಯಾಮ್ ಮಾನೆಕ್ ಷಾ, ಭಾರತೀಯ ಸೇನಾಪಡೆಯ ಮೊದಲ ಏರ್‌ಫೀಲ್ಡ್ ಮಾರ್ಷಲ್. ಇವರ ಜೀವನ ಆಧರಿತ ಕಥೆಯೇ ಸ್ಯಾಮ್ ಬಹದ್ದೂರ್. ಈ ಚಿತ್ರದ ಟ್ರೇಲರ್ ಬುಧವಾರ ರಿಲೀಸ್ ಆಗಿದೆ.
ಅದು 2017. ಮೇಘನಾ ಗುಲ್ಜಾರ್, ಬಾಲಿವುಡ್‌ನ ಸ್ಪೈ ಥ್ರಿಲ್ಲರ್ ರಾಜಿ ಸಿನಿಮಾದ ನಿರ್ದೇಶದನಲ್ಲಿದ್ದರು. ಆ ಸಮಯದಲ್ಲಿ ಸ್ಯಾಮ್ ಮಾನೆಕ್ ಷಾ ಅವರ ಸಿನಿಮಾ ಬಗ್ಗೆ ವಿಕ್ಕಿ ಕೌಶಾಲ್ ಜತೆಗೆ ಚರ್ಚೆ ನಡಸಿದ್ದರು. ಅವರಿಂದಲೂ ಒಪ್ಪಿಗೆ ಸಿಕ್ಕಿತ್ತು. ಅದಾದ ಬಳಿಕ ಸುದೀರ್ಘ ನಾಲ್ಕು ವರ್ಷಗಳ ಕಾಲ ಒಂದಷ್ಟು ಶೋಧನೆ ನಡೆಸಿ 2021ರಲ್ಲಿ ಸ್ಯಾಮ್ ಮಾನೆಕ್ ಷಾ ಅವರ 102ನೇ ಜಯಂತಿ ದಿನ ಈ ಸಿನಿಮಾ ಘೋಷಣೆ ಆಯಿತು. ಇದೀಗ ಇದೇ ಚಿತ್ರ ಡಿಸೆಂಬರ್ 1ರಂದು ರಿಲೀಸ್ ಆಗಲು ಸಜ್ಜಾಗಿದೆ.
ಇಂಡೋ- ಪಾಕ್ ಯುದ್ಧದ ಕಥೆ
ಇದೊಂದು ಅಪ್ಪಟ ದೇಶ ಪ್ರೇಮದ ಕಥೆ. ಸುದೀರ್ಘ 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದುಡಿದು, ಮೊದಲ ಏರ್ ಫೀಲ್ಡ್ ಮಾರ್ಷಲ್ ಆಗಿದ್ದ ಸ್ಯಾಮ್ ಮಾನೆಕ್ ಷಾ ಅವರ ಸೇನಾ ದಿನಗಳು ಮತ್ತು ಪ್ರಮುಖ ಯುದ್ಧದ ಕಥಾನಕವನ್ನು ಸ್ಯಾಮ್ ಬಹದ್ದೂರ್ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ ನಿರ್ದೇಶಕಿ ಮೇಘನಾ ಗುಲ್ಜಾರ್. 1971ರ ಇಂಡೋ- ಪಾಕ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ತೆರೆದುಕೊಳ್ಳಲಿದೆ.
1969ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸ್ಯಾಮ್ ಮಾನೆಕ್ ಷಾ, ಪಾಕ್ ವಿರುದ್ಧದ ಸಮರದಲ್ಲಿ ವಿಜಯ ಸಾಧಿಸುತ್ತಾರೆ. ಇದರ ಪರಿಣಾಮವಾಗಿ 1971ರಲ್ಲಿ ಬಾಂಗ್ಲಾದೇಶದ ಹುಟ್ಟಿಗೂ ಇವರು ಕಾರಣರಾಗುತ್ತಾರೆ. ಈ ಏರಿಳಿತ ಹಾದಿಯಲ್ಲಿ ಯುದ್ಧದ ಜತೆಗೆ ರಾಜಕಾರಣವೂ ಸಿನಿಮಾದಲ್ಲಿ ಬೆಸೆದುಕೊಂಡಿದೆ. ಸ್ವಾತಂತ್ರಪೂರ್ವದ ಜತೆಗೆ ಸ್ವಾತ್ರಂತ್ರ್ಯಾನಂತರದ ಘಟನೆಗಳನ್ನೂ ಸದ್ಯ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ತುಂಬಿಸಿದ್ದಾರೆ ನಿರ್ದೇಶಕರು.
ಗನ್ ಸದ್ದಿನ ಜತೆಗೆ ಅಲ್ಲಲ್ಲಿ ಪ್ರೀತಿಯನ್ನೂ ಅರಳಿಸಿದ್ದಾರೆ. 1970ರ ಕಾಲಘಟ್ಟ ಕಣ್ಣಮುಂದೆ ಬಂದತೆ ಅಷ್ಟೇ ರೋಚಕವಾಗಿ ಪ್ರತಿ ದೃಶ್ಯಗಳನ್ನು ನೋಡುಗನ ಮುಂದಿಟ್ಟಿದ್ದಾರೆ. ಸ್ಯಾಮ್ ಮಾನೆಕ್ ಷಾ ಅವರನ್ನೇ ಆವಾಹಿಸಿಕೊಂಡಂತೆ, ವಿಕ್ಕಿ ಕೌಶಾಲ್ ಕಡೆಯಿಂದ ನಟನೆ ಸಂದಾಯವಾಗಿದೆ. ಮಾತನಾಡುವ ಶೈಲಿ, ಅವರ ಬಾಡಿ ಲ್ಯಾಂಗ್ವೇಜ್ ಎಲ್ಲವೂ ಹದವಾಗಿ ಬೆರೆತಿದೆ. ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಫಾತಿಮಾ ಸನಾ ಶೇಖ್, ವಿಕ್ಕಿಗೆ ಜೋಡಿಯಾಗಿ ಸಾನ್ಯಾ ಮಲ್ಹೋತ್ರಾ ಸೇರಿ ಇನ್ನೂ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಈ ಮೂಲಕ ಉರಿ ಸಿನಿಮಾ ಬಳಿಕ ಮತ್ತೊಂದು ದೇಶ ಪ್ರೇಮದ ಕಿಚ್ಚು ಹಚ್ಚಲು ಆಗಮಿಸುತ್ತಿದ್ದಾರೆ ವಿಕ್ಕಿ.