Ponniyin Selvan: ರಿಲೀಸ್ಗೂ ಮುನ್ನ ವಿವಾದ...ನಿರ್ದೇಶಕ ಮಣಿರತ್ನಂ, ನಟ ವಿಕ್ರಮ್ಗೆ ಕೋರ್ಟಿನಿಂದ ಸಮನ್ಸ್
Jul 19, 2022 01:06 PM IST
ವಿಕ್ರಮ್ ಹಾಗೂ ಮಣಿರತ್ನಂಗೆ ಸಮನ್ಸ್
- ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಬಹು ನಿರೀಕ್ಷಿತ ಸಿನಿಮಾ ಪೊನ್ನಿಯಿನ್ ಸೆಲ್ವನ್ 1 ಟೀಸರ್ ಇತ್ತೀಚೆಗೆ ತೆರೆ ಕಂಡಿದೆ. ಟೀಸರ್ ನೋಡಿ ಜನ ಸಾಮಾನ್ಯರು , ಸಿನಿ ಸೆಲಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟ ನಟಿಯರ ದಂಡೇ ಚಿತ್ರದಲ್ಲಿದ್ದು ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ ಇದೀಗ ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೆ ಸಿಲುಕಿದೆ.
ಚೆನ್ನೈ ಮೂಲದ ಸೆಲ್ವಂ ಎಂಬ ವಕೀಲರು ನಿರ್ದೇಶಕ ಮಣಿರತ್ನಂ ಹಾಗೂ ನಟ ವಿಕ್ರಮ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆ ನ್ಯಾಯಾಲಯವು ಇಬ್ಬರಿಗೂ ಸಮನ್ಸ್ ಜಾರಿ ಮಾಡಿದೆ. ಚೋಳರು ತಮ್ಮ ಹಣೆಗೆ ತಿಲಕ ಇಡುತ್ತಿರಲಿಲ್ಲ. ಅದರೆ ಪೊನ್ನಿಯಿನ್ ಸೆಲ್ವನ್ ಚಿತ್ರದ ಪೋಸ್ಟರ್ನಲ್ಲಿ ಆದಿತ್ಯ ಕರಿಕಾಲನ್
ಪಾತ್ರ ಮಾಡುತ್ತಿರುವ ನಟ ವಿಕ್ರಮ್ ಹಣೆಗೆ ತಿಲಕ ಹಚ್ಚಿಕೊಂಡಿದ್ದಾರೆ. ಚೋಳರ ಸಂಸ್ಕೃತಿಯನ್ನು ಈ ಚಿತ್ರದಲ್ಲಿ ತಪ್ಪಾಗಿ ಬಿಂಬಿಸಿರುವ ಸಾಧ್ಯತೆ ಇದೆ ಆದ್ದರಿಂದ ಸಿನಿಮಾ ಬಿಡುಗಡೆಗೂ ಮುನ್ನವೇ ವಿಶೇಷ ಪ್ರದರ್ಶನವಾಗಬೇಕು. ಇದರಿಂದ ಚಿತ್ರದಲ್ಲಿ ನಿರ್ದೇಶಕರು ಇತಿಹಾಸವನ್ನು ತಿರುಚಿದ್ದಾರೆಯೇ ಇಲ್ಲವೇ ಎಂಬುದು ತಿಳಿಯುತ್ತದೆ ಎಂದು ವಕೀಲ ಸೆಲ್ವಂ ಒತ್ತಾಯಿಸಿದ್ದಾರೆ. ಆದ್ದರಿಂದ ನ್ಯಾಯಾಲಯವು ನಿರ್ದೇಶಕ ಮಣಿರತ್ನಂ ಹಾಗೂ ನಟ ವಿಕ್ರಮ್ಗೆ ಸಮನ್ಸ್ ಜಾರಿ ಮಾಡಿದೆ. ಆದರೆ ಇದುವರೆಗೂ ವಿಕ್ರಮ್ ಆಗಲೀ, ಮಣಿರತ್ನಂ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪೊನ್ನಿಯನ್ ಸೆಲ್ವನ್ 500 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾ. ಸ್ಟಾರ್ ನಟರ ದಂಡೇ ಈ ಚಿತ್ರದಲ್ಲಿದೆ. ಚಿತ್ರವನ್ನು ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಿರ್ಮಿಸುತ್ತಿವೆ. ಖ್ಯಾತ ನಿರ್ದೇಶಕ ಮಣಿರತ್ನಂ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಜಯಂ ರವಿ, ಶರತ್ ಕುಮಾರ್, ಕಾರ್ತಿ, ತ್ರಿಷಾ, ವಿಕ್ರಮ್ ಪ್ರಭು, ಪ್ರಕಾಶ್ ರಾಜ್, ಶೋಭಿತಾ ಧುಲಿಪಾಲ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ 2 ಭಾಗಗಗಳಲ್ಲಿ ತಯಾರಾಗುತ್ತಿದೆ.
2020 ರಲ್ಲಿ ತೆರೆ ಕಂಡ ಪುತ್ತಂ ಪುದು ಕಾಲೈ ಸಿನಿಮಾ ನಂತರ ಮಣಿರತ್ನಂ ನಿರ್ದೇಶನದ ಯಾವುದೇ ಹೊಸ ಸಿನಿಮಾ ತೆರೆ ಕಂಡಿರಲಿಲ್ಲ. ಅವರ ಹೊಸ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ಮಣಿರತ್ನಂ ಕೂಡಾ ಒಬ್ಬರು. ಮಣಿರತ್ನಂ ನಿರ್ದೇಶನ ಆರಂಭಿಸಿದ್ದೇ 1983 ರಲ್ಲಿ ತೆರೆ ಕಂಡ ಪಲ್ಲವಿ ಅನುಪಲ್ಲವಿ ಕನ್ನಡ ಸಿನಿಮಾ ಮೂಲಕ. ಆ ಸಿನಿಮಾ ನಂತರ ಅವರು ತಮಿಳು ಹಾಗು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾದರು. ಮೌನರಾಗಂ, ಗೀತಾಂಜಲಿ, ಅಂಜಲಿ, ರೋಜಾ, ತಿರುಡಾ ತಿರುಡಾ, ಬಾಂಬೆ, ದಿಲ್ ಸೇ, ಸಾಥಿಯಾ, ರಾವಣ್, ಕಾದಲ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಮಣಿರತ್ನಂ ನೀಡಿದ್ದಾರೆ.
ಈ ನಡುವೆ ಮಣಿರತ್ನಂಗೆ ಕೊರೊನಾ ದೃಢವಾಗಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಆರಂಭಿಕ ಹಂತಗಳಲ್ಲಿ ಸುಹಾಸಿನಿ ಮಣಿರತ್ನಂ ಪುತ್ರ ವಿದೇಶದಿಂದ ಬಂದ ಕಾರಣ ಆತನನ್ನು ಹೋಂ ಐಸೋಲೇಷನ್ನಲ್ಲಿ ಇರಿಸಲಾಗಿತ್ತು. ಈ ವಿಡಿಯೋವನ್ನು ಸುಹಾಸಿನಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.