Dubbing Artist Passed away: ಅರ್ಜುನ್ ಸರ್ಜಾ, ಸೂರ್ಯ ಸೇರಿದಂತೆ ಅನೇಕ ನಟರಿಗೆ ಧ್ವನಿ ನೀಡಿದ್ದ ಖ್ಯಾತ ಡಬ್ಬಿಂಗ್ ಆರ್ಟಿಸ್ಟ್ ಇನ್ನಿಲ್ಲ
Jan 27, 2023 12:43 PM IST
ಖ್ಯಾತ ಡಬ್ಬಿಂಗ್ ಆರ್ಟಿಸ್ಟ್ ಶ್ರೀನಿವಾಸ ಮೂರ್ತಿ
- ಡಬ್ಬಿಂಗ್ ಕಲಾವಿದರು ಸಿನಿಮಾದ ಪ್ರಮುಖ ಭಾಗವಾಗಿದ್ದರೂ ಕೂಡಾ ಅವರು ಸಿನಿಮಾ ನೋಡುವವರಿಗೆ ಕಾಣುವುದಿಲ್ಲ. ಯಾವಾಗಲೂ ಎಲೆ ಮರೆ ಕಾಯಿಯಂತೆ ಇರುತ್ತಾರೆ. ಶ್ರೀನಿವಾಸ ಮೂರ್ತಿ ಅವರು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದಾರೆ.
ಹಿರಿಯ ನಟಿ ಜಮುನಾ ನಿಧನದ ಸುದ್ದಿ ಒಂದೆಡೆಯಾದರೆ ಟಾಲಿವುಡ್‌ನಲ್ಲಿ ಮತ್ತೊಂದು ವಿಷಾದನೀಯ ಘಟನೆ ನಡೆದಿದೆ. ಅನೇಕ ಸ್ಟಾರ್ ನಟರಿಗೆ ಧ್ವನಿ ನೀಡಿದ್ದ ಡಬ್ಬಿಂಗ್ ಆರ್ಟಿಸ್ಟ್ ಶ್ರೀನಿವಾಸ್ ಮೂರ್ತಿ ನಿಧನರಾಗಿದ್ದಾರೆ. ಸೂರ್ಯ, ಅರ್ಜುನ್ ಸರ್ಜಾ, ವಿಕ್ರಮ್ ಸೇರಿದಂತೆ ಅನೇಕ ನಟರಿಗೆ ಶ್ರೀನಿವಾಸ್ ಮೂರ್ತಿ ತೆಲುಗಿನಲ್ಲಿ ಧ್ವನಿ ನೀಡಿದ್ದರು. ಶ್ರೀನಿವಾಸ್ ನಿಧನದ ಸುದ್ದಿ ತಿಳಿದು ಚಿತ್ರರಂಗ ಕಂಬನಿ ಮಿಡಿದಿದೆ.
ಶ್ರೀನಿವಾಸ ಮೂರ್ತಿ ಶುಕ್ರವಾರ ಬೆಳಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೂರ್ಯ, ಅಜಿತ್, ವಿಕ್ರಮ್, ಮೋಹನ್ ಲಾಲ್, ರಾಜಶೇಖರ್, ಅರ್ಜುನ್ ಸರ್ಜಾ, ಮೋಹನ್ ಲಾಲ್, ಉಪೇಂದ್ರ ಹಾಗೂ ಮುಂತಾದ ದಕ್ಷಿಣ ಭಾರತದ ಖ್ಯಾತ ನಟರಿಗೆ ಶ್ರೀನಿವಾಸ್ ಮೂರ್ತಿ ಧ್ವನಿ ನೀಡಿದ್ದಾರೆ. ಈ ನಟರ ಯಾವುದೇ ಸಿನಿಮಾ ತೆಲುಗು ಭಾಷೆಗೆ ಡಬ್ ಆದಲ್ಲಿ ಅಲ್ಲಿ ಶ್ರೀನಿವಾಸ್ ಅವರ ಧ್ವನಿ ಇರುತ್ತಿತ್ತು. ಬೇಸ್ ವಾಯ್ಸ್‌ನಲ್ಲಿ ಅವರ ಡೈಲಾಗ್‌ಗಳು ನಾಯಕರಿಗೆ ಬಹಳ ಚೆನ್ನಾಗಿ ಹೊಂದುತ್ತಿತ್ತು. ನೀವು ತೆಲುಗಿನ 'ಸಿಂಗಂ' ಸಿನಿಮಾ ನೋಡಿದ್ದರೆ ಶ್ರೀನಿವಾಸ್ ಮೂರ್ತಿ ಅವರ ಧ್ವನಿಯನ್ನು ಕೇಳಬಹುದು. ಸೂರ್ಯ ನಟನೆಯ ಸಂಪೂರ್ಣ 'ಸಿಂಗಂ' ಸೀರೀಸ್ ನಾಯಕನ ಪಾತ್ರಕ್ಕೆ ಶ್ರೀನಿವಾಸ ಮೂರ್ತಿ ಧ್ವನಿ ನೀಡಿದ್ದಾರೆ. ಅವರು ಡಬ್ಬಿಂಗ್ ಮಾಡಿದ ಸಿನಿಮಾಗಳನ್ನು ನೋಡಿದ ನಂತರ, ತಮ್ಮ ಪಾತ್ರಕ್ಕೆ ಬೇರೆ ಡಬ್ಬಿಂಗ್ ಆರ್ಟಿಸ್ಟ್‌ಗಳು ಡಬ್ ಮಾಡುತ್ತಾರೆ ಎಂದರೆ ನಟ ಸೂರ್ಯ ಒಪ್ಪುತ್ತಿರಲಿಲ್ಲವಂತೆ. ಯಾವುದೇ ನಟ ಆದರೂ ಅವರ ಬಾಡಿ, ಮ್ಯಾನರಿಸಂ ಹಾಗೂ ಹಾವ ಭಾವಕ್ಕೆ ತಕ್ಕಂತೆ ಶ್ರೀನಿವಾಸ್ ಮೂರ್ತಿ ಧ್ವನಿ ಹೊಂದಿಸುತ್ತಿದ್ದರು.
ಡಬ್ಬಿಂಗ್ ಕಲಾವಿದರು ಸಿನಿಮಾದ ಪ್ರಮುಖ ಭಾಗವಾಗಿದ್ದರೂ ಕೂಡಾ ಅವರು ಸಿನಿಮಾ ನೋಡುವವರಿಗೆ ಕಾಣುವುದಿಲ್ಲ. ಯಾವಾಗಲೂ ಎಲೆ ಮರೆ ಕಾಯಿಯಂತೆ ಇರುತ್ತಾರೆ. ಶ್ರೀನಿವಾಸ ಮೂರ್ತಿ ಅವರು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಹಾಲಿವುಡ್, ಬಾಲಿವುಡ್ , ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಯಾವುದೇ ಸಿನಿಮಾಗಳು ತೆಲುಗಿಗೆ ಡಬ್ ಆದರೂ ಅಲ್ಲಿ ಶ್ರೀನಿವಾಸ್ ಅವರೇ ಧ್ವನಿಯೇ ಹೆಚ್ಚು ಕೇಳಿ ಬರುತ್ತಿತ್ತು. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಂತ ಸೂಪರ್ ಸ್ಟಾರ್‌ಗಳಿಗೂ ಶ್ರೀನಿವಾಸ್ ಮೂರ್ತಿ ಕಂಠ ದಾನ ಮಾಡಿದ್ದಾರೆ. 1998 ರಲ್ಲಿ 'ಶಿವಯ್ಯ' ಎಂಬ ತೆಲುಗು ಸಿನಿಮಾಗೆ ಕಂಠ ದಾನ ಮಾಡಿದ್ದಕ್ಕಾಗಿ ಬೆಸ್ಟ್ ಡಬ್ಬಿಂಗ್ ಆರ್ಟಿಸ್ಟ್ ನಂದಿ ಪ್ರಶಸ್ತಿ ಪಡೆದಿದ್ದರು. ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾಗುತ್ತಿದ್ದಂತೆ ಇತ್ತೀಚೆಗಷ್ಟೇ ಶ್ರೀನಿವಾಸ್ ಮೂರ್ತಿಯನ್ನು ಜನರು ಗುರುತು ಹಚ್ಚಲು ಆರಂಭಿಸಿದ್ದರು.
ಶ್ರೀನಿವಾಸ್ ಮೂರ್ತಿ ನಿಧನಕ್ಕೆ ಹಿರಿಯ ನಟ ಚಿರಂಜೀವಿ, ಬಾಲಕೃಷ್ಣ, ಜ್ಯೂನಿಯರ್ ಎನ್‌ಟಿಆರ್, ಸೂರ್ಯ, ಅಜಿತ್ ಹಾಗೂ ಇನ್ನಿತರರು ಸಂತಾಪ ಸೂಚಿಸಿದ್ದಾರೆ. ಚೆನ್ನೈನ ನಿವಾಸಕ್ಕೆ ತೆರಳಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅತ್ಯದ್ಭುತ ಕಂಠದಾನ ಕಲಾವಿದನನ್ನು ಕಳೆದುಕೊಂಡು ತೆಲುಗು ಚಿತ್ರರಂಗ ಅನಾಥವಾಗಿರುವುದಂತೂ ನಿಜ.