Raghavendra Rajkumar: ನೈಜ ಘಟನೆ ಆಧರಿತ '13' ಚಿತ್ರದಲ್ಲಿ ರಾಘಣ್ಣ; ತಂಡದ ಸಮಾಜ ಸೇವೆಯೇ ಈ ಚಿತ್ರಕ್ಕೆ ಪ್ರಚಾರ
Mar 03, 2023 12:09 PM IST
ನೈಜ ಘಟನೆ ಆಧರಿತ '13' ಚಿತ್ರದಲ್ಲಿ ರಾಘಣ್ಣ; ತಂಡದ ಸಮಾಜ ಸೇವೆಯೇ ಈ ಚಿತ್ರಕ್ಕೆ ಪ್ರಚಾರ
- ದಕ್ಷಿಣ ಕನ್ನಡ ಭಾಗದಲ್ಲಿ ನಡೆದ ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕ ನರೇಂದ್ರಬಾಬು ಈ ಚಿತ್ರಕಥೆಯನ್ನು ಹೆಣೆದಿದ್ದಾರೆ.
Raghavendra Rajkumar: ಕೆ.ನರೇಂದ್ರಬಾಬು ಅವರ ನಿರ್ದೇಶನದ '13' ಚಿತ್ರದ ಟೀಸರ್ ರಾಜ್ಯದ 32 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ಅಲ್ಲದೆ ದುಬೈ, ಸಿಂಗಪೂರ್ ಸೇರಿದಂತೆ ಅನೇಕ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿಶೇಷವಾಗಿ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಅಪ್ಪು ಅಭಿಮಾನಿಗಳೇ ಸೇರಿ '13' ಚಿತ್ರದ ಟೀಸರ್ ರಿಲೀಸ್ ಮಾಡಿದರು.
ರಾಘವೇಂದ್ರ ರಾಜ್‌ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘13’ ಚಿತ್ರವನ್ನು ಯುವಿ ಪ್ರೊಡಕ್ಷನ್ ಅಡಿಯಲ್ಲಿ ಕೆ. ಸಂಪತ್ ಕುಮಾರ್, ಹೆಚ್.ಎಸ್. ಮಂಜುನಾಥ್, ಮಂಜುನಾಥಗೌಡ ಹಾಗೂ ಸಿ.ಕೇಶವಮೂರ್ತಿ ಸೇರಿ ನಿರ್ಮಿಸುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಮತ್ತು ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕರು ಈ ಚಿತ್ರಕಥೆಯನ್ನು ಹೆಣೆದಿದ್ದಾರೆ.
ಸಿನಿಮಾ ಜತೆಗೆ ಸಮಾಜ ಸೇವೆ
ನಿರ್ದೇಶಕ ನರೇಂದ್ರಬಾಬು ಮಾತನಾಡುತ್ತ '13' ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುವಾಗ ತುಂಬಾ ಕಹಿಘಟನೆಗಳು ನಡೆದಿವೆ. ಆದರೂ ಎಲ್ಲವನ್ನೂ ಮರೆತು ಯಶಸ್ಸು ಕಂಡಿದ್ದೇವೆ. ನನ್ನ ಒಂಭತ್ತನೆಯ ಚಿತ್ರದಲ್ಲಿ ರಾಘಣ್ಣ ಅಭಿನಯಿಸಿರುವ ಖುಷಿಯಿದೆ. ಇದೇ ಖುಷಿಯಲ್ಲಿ '13' ಚಿತ್ರದ ಹಬ್ಬವನ್ನು 6 ದಿನಗಳ ಕಾಲ ಆಚರಿಸುತ್ತಿದ್ದೇವೆ. ಮೂರು ಹಿಂದುಳಿದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ರಿನೋವೇಶನ್ ಮಾಡಿಸುತ್ತಿದ್ದೇವೆ. ಹಾವೇರಿ ಜಿಲ್ಲೆಯ ಶಾಲೆಯೊಂದರಿಂದ ಈ ಕೆಲಸ ಪ್ರಾರಂಭವಾಗಲಿದೆ. ಬಡ ಮಕ್ಕಳಿಗೆ ಬ್ಯಾಗ್, ಪುಸ್ತಕಗಳನ್ನು ವಿತರಿಸುತ್ತಿದ್ದೇವೆ. ಈ ಕೆಲಸಕ್ಕೆ ನಮ್ಮ ಜೊತೆ ಸಮಾಜ ಸೇವಕ ಅನಿಲ್ ಕುಮಾರ್ ಅವರು ಕೈಜೋಡಿಸಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳ ರೂವಾರಿ ರಾಘಣ್ಣ ಎಂದು ಹೇಳಿದರು.
ಅಪ್ಪು ಹೆಸರಲ್ಲಿ ರಾಘಣ್ಣನ ಸೇವೆ
ನಂತರ ನಟ ರಾಘಣ್ಣ ಮಾತನಾಡುತ್ತ, "ನಾನು ಕೂಡ ಅಪ್ಪು ಥರ ಬದುಕಬೇಕೆಂಬ ಸಂಕಲ್ಪ ಮಾಡಿಕೊಂಡಿದ್ದೇನೆ. ಎರಡು ಧರ್ಮಗಳ ಆತ್ಮ ಸೇರಿದರೆ ಅವರು ಹೇಗೆ ಬೆರೆತುಕೊಂಡು ಬರ್ತಾರೆ ಅನ್ನೋದನ್ನ ಚಿತ್ರದಲ್ಲಿ ತೋರಿಸಿದ್ದಾರೆ. ನಾನು ಮಾತಾಡ್ತಾ ಮಾತಾಡ್ತಾ ಅಲ್ಲಾ ಅಂದರೆ ಅವರು ರಾಮಾ ಅಂತಿದ್ದರು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ಜೊತೆ ಸಮಾಜ ಸೇವೆಯನ್ನೂ ಇವರು ಮಾಡಿಕೊಂಡು ಬರುತ್ತಿದ್ದಾರೆ. ಈಗ ಹಳ್ಳಿಯ ಬಡ ಮಕ್ಕಳಿಗೆ ಬ್ಯಾಗ್ ಕ್ಯಾರಿಯರ್ ಕೊಟ್ಟು ಬರುತ್ತಿದ್ದೇವೆ. ಅಪ್ಪು ಹೆಸರಲ್ಲಿ ಇದನ್ನು ನಾನೂ ಮುಂದುವರೆಸುತ್ತೇನೆ ಎಂದು ಹೇಳಿದರು.
ಅಂತರ್ಜಾತೀಯ ಪ್ರೇಮ ಕಥೆ ಇದಾಗಿದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವ ರೀತಿ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆ ಇದರಲ್ಲಿದೆ.
ನಿರ್ಮಾಪಕ ಕೆ. ಸಂಪತ್‍ಕುಮಾರ್ ಮಾತನಾಡಿ, ನಿರ್ದೇಶಕರ ಮೇಲೆ ನಂಬಿಕೆಯಿದೆ. ಅವರ ಜೊತೆ ಇದು ಎರಡನೇ ಸಿನಿಮಾ. ಡೇ ಒನ್‌ನಿಂದಲೂ ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆಯಿದೆ. ಗೋವಿಂದ ಗೋಪಾಲ, ಸಾಫ್ಟ್‌ವೇರ್ ಗಂಡ ಸೇರಿ ನನ್ನ ನಿರ್ಮಾಣದ 5ನೇ ಚಿತ್ರವಿದು. ಅಮೃತವಾಹಿನಿ ನಂತರ ಬಾಬು ಜೊತೆ ಎರಡನೇ ಚಿತ್ರ. ಮುಂದಿನ ದಿನಗಳಲ್ಲಿ ಪ್ರೊಮೋಷನ್ ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್‍ಗೌಡ, ಕೇಶವಮೂರ್ತಿ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು.
ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಮಂಜುನಾಥ್ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.