logo
ಕನ್ನಡ ಸುದ್ದಿ  /  ಕರ್ನಾಟಕ  /  Sumalatha Ambareesh: ಬಿಜೆಪಿ ಸೇರ್ಪಡೆಗೆ ಸಂಸದೆ ಸುಮಲತಾ ಸಮ್ಮತಿ?: ಕಮಲ ಪಾಳೆಯದಿಂದ ಅಭಿಷೇಕ್‌ ರಾಜಕೀಯ ಭವಿಷ್ಯದ ವಾಗ್ದಾನ?

Sumalatha Ambareesh: ಬಿಜೆಪಿ ಸೇರ್ಪಡೆಗೆ ಸಂಸದೆ ಸುಮಲತಾ ಸಮ್ಮತಿ?: ಕಮಲ ಪಾಳೆಯದಿಂದ ಅಭಿಷೇಕ್‌ ರಾಜಕೀಯ ಭವಿಷ್ಯದ ವಾಗ್ದಾನ?

HT Kannada Desk HT Kannada

Jan 28, 2023 07:55 AM IST

ಸುಮಲತಾ ಅಂಬರೀಷ್‌ (ಸಂಗ್ರಹ ಚಿತ್ರ)

    • ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್‌ ಅವರು ಬಿಜೆಪಿ ಸೇರಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಘೋಷಣೆ ಪ್ರಕಟಿಸಲಿದ್ದಾರೆ ಎಂಬ ಮಾತುಗಳು ಮಂಡ್ಯದ ರಾಜಕೀಯ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ. ಸುಮಲತಾ ಪುತ್ರ ಅಭಿಷೇಕ್‌ ಅಂಬರೀಷ್‌ ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಬಿಜೆಪಿಯು ಸುಮಲತಾ ಅವರಿಗೆ ವಾಗ್ದಾನ ನೀಡಿದೆ ಎನ್ನಲಾಗಿದೆ.
ಸುಮಲತಾ ಅಂಬರೀಷ್‌ (ಸಂಗ್ರಹ ಚಿತ್ರ)
ಸುಮಲತಾ ಅಂಬರೀಷ್‌ (ಸಂಗ್ರಹ ಚಿತ್ರ) (HT)

ಮಂಡ್ಯ: ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್‌ ಅವರು ಬಿಜೆಪಿ ಸೇರಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಘೋಷಣೆ ಪ್ರಕಟಿಸಲಿದ್ದಾರೆ ಎಂಬ ಮಾತುಗಳು ಮಂಡ್ಯದ ರಾಜಕೀಯ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ರಸ್ತೆಗಳಲ್ಲಿ ಮರ ಬೀಳುವ ಸನ್ನಿವೇಶವಿದೆಯಾ, ಈ ನಂಬರ್‌ಗಳಿಗೆ ಕರೆ ಮಾಡಿ

Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್‌ ದಾಖಲು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಮಂಡ್ಯದ ನೂತನ ಜಿಲ್ಲಾ ಉಸ್ತುವಾರಿ ಸಚಿವ ಆರ್.‌ ಅಶೋಕ್‌ ಅವರು, ಸುಮಲತಾ ಅಂಬರೀಷ್‌ ಅವರೊಂದಿಗೆ ಮಾತುಕತೆ ನಡೆಸಿದ್ದು,ಮಂಡ್ಯ ಸಂಸದೆಯ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಸುಮಲತಾ ಪುತ್ರ ಅಭಿಷೇಕ್‌ ಅಂಬರೀಷ್‌ ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಬಿಜೆಪಿಯು ಸುಮಲತಾ ಅವರಿಗೆ ವಾಗ್ದಾನ ನೀಡಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

‘‘ಸುಮಲತಾ ಅವರು ಬಿಜೆಪಿಗೆ ಸೇರಲು ಆಸಕ್ತರಾಗಿದ್ದು,ಪಕ್ಷದ ವರಿಷ್ಠರ ಸಮ್ಮತಿಗಾಗಿ ಕಾಯುತ್ತಿದ್ದಾರೆ. ಸುಮಲತಾ ಪಕ್ಷ ಸೇರ್ಪಡೆಯಿಂದ ಹಳೇ ಮೈಸೂರು ಭಾಗದಲ್ಲಿ ಸಂಘಟನಾತ್ಮಕ ದೃಷ್ಟಿಯಿಂದ ಅನುಕೂಲವಾಗಲಿದೆ. ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಗೆ ದಿವಂಗತ ಅಂಬರೀಷ್‌ ಅವರ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದು ಅಂಬರೀಷ್‌ ಕುಟುಂಬವನ್ನು ಪಕ್ಷಕ್ಕೆ ಸೆಳೆಯುವ ತಂತ್ರದ ಭಾಗ ಎಂದು ಹೇಳಲಾಗುತ್ತಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್‌, ಜೆಡಿಎಸ್-ಕಾಂಗ್ರೆಸ್‌ ಜಂಟಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ತೀವ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ಘೋಷಿಸಿತ್ತು. ಹಾಗೆಯೇ ಜೆಡಿಎಸ್‌ ವಿರೋಧಿ ಕಾಂಗ್ರೆಸ್‌ನ ಒಂದು ಗುಂಪು ಪರೋಕ್ಷವಾಗಿ ಸುಮಲತಾ ಅವರ ಗೆಲುವಿಗೆ ಸಹಾಯ ಮಾಡಿತ್ತು. ಅಂಬರೀಷ್‌ ಅವರ ಜನಪ್ರಿಯತೆ ಕೂಡ ಸುಮಲತಾ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತ್ತು.

ಚುನಾವಣಾ ಗೆಲುವಿನ ಬಳಿಕ ಸುಮಲತಾ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ ಜೊತೆ ಸಮಾನ ಅಂತರ ಕಾಯ್ದುಕೊಂಡು ಬಂದಿದ್ದರು. ಆದರೆ ಬಿಜೆಪಿ ಮಾತ್ರ ಅವರೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಸಮೀಸುತ್ತಿರುವುದರಿಂದ, ಬಿಜೆಪಿ ಸೇರ್ಪಡೆ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಅನುಕೂಲ ಎಂದು ಸುಮಲತಾ ಭಾವಿಸಿದ್ದಾರೆ ಎಂದು ಹೇಳಲಾಗಿದೆ.

ಸುಮಲತಾ ರಾಜ್ಯ ರಾಜಕಾರಣದಲ್ಲಿ ಮಿಂಚುವ ಇರಾದೆ ಹೊಂದಿದ್ದು, ಇದಕ್ಕೆ ಬಿಜೆಪಿ ಪೂರಕವಾಗಿ ಸ್ಪಂದಿಸಿದೆ ಎಂದು ಮೂಲಗಳು ಖಚಿತಪಡಿಸಿವೆ. ಕಾಂಗ್ರೆಸ್‌ ಕೂಡ ಸುಮಲತಾ ಅವರನ್ನು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದೆಯಾದರೂ, ಅಂತಿಮವಾಗಿ ಸುಮಲತಾ ಬಿಜೆಪಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ಮಂಡ್ಯ ರಾಜಕಾರಣವನ್ನು ಬಲ್ಲ ರಾಜಕೀಯ ತಜ್ಞರ ಅಂಬೋಣ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಷ್ಟ್ರೀಯ ಪಕ್ಷವೊಂದರ ಸಖ್ಯ ಬೆಳೆಸುವುದು ಸುಮಲತಾ ಅಂಬರೀಷ್‌ ಅವರಿಗೆ ಅನಿವಾರ್ಯ. ಹಾಗೆಯೇ ಮಂಡ್ಯದಲ್ಲಿ ತನ್ನ ಬೇರು ಗಟ್ಟಿಗೊಳಿಸಲು, ಬಿಜೆಪಿಗೆ ಜನಪ್ರಿಯ ಮುಖವೊಂದರ ಅವಶ್ಯಕತೆ ಇದೆ. ಹೀಗಾಗಿ ಸುಮಲತಾ ಅಂಬರೀಷ್‌ ಅವರ ಬಿಜೆಪಿ ಸೇರ್ಪಡೆ ಇಬ್ಬರಿಗೂ ಅನುಕೂಲ ಕಲ್ಪಿಸಲಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಅಂಬರೀಷ್‌ ಕುಟುಂಬವನ್ನು ಸಕ್ರಿಯವಾಗಿ ತೊಡಗಿಸುವುದು ಬಿಜೆಪಿಯ ಉದ್ದೇಶವೆಂದು ಹೇಳಲಾಗುತ್ತಿದೆ. ಹೀಗಾಗಿ ನಟ ಅಭಿಷೇಕ್‌ ಅಂಬರೀಷ್‌ ಅವರನ್ನೂ ಪಕ್ಷಕ್ಕೆ ಬರಮಾಡಿಕೊಳ್ಳಲು ಬಿಜೆಪಿ ಸಿದ್ಧವಾಗಿದೆ. ಮಂಡ್ಯ ನೂತನ ಜಿಲ್ಲಾ ಉಸ್ತುವಾರಿ ಸಚಿವ ಆರ್‌ ಅಶೋಕ್‌ ಈ ವಿಚಾರವಾಗಿ ಸುಲಮತಾ ಅವರೊಂದಿಗೆ ಮಾತನಾಡಿದ್ದು, ಸುಮಲತಾ ಅಂಬರೀಷ್‌ ಅವರ ಬಿಜೆಪಿ ಸೇರ್ಪಡೆ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಸುಮಲತಾ ಅವರ ರಾಜಕೀಯ ನಿರ್ಧಾರ ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಗಾಢ ಪ್ರಭಾವ ಬೀರಲಿದ್ದು, ಒಂದು ವೇಳೆ ಅವರು ಬಿಜೆಪಿಗೆ ಸೇರುವುದು ಖಚಿತವಾದರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿಯ ಬದಲಾವಣೆಗಳಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ